ಗಂಗಾ ಸ್ನಾನದಿಂದ ಕ್ಯಾನ್ಸರ್ ಗುಣವಾಗುತ್ತೆ ಎಂದು 5 ವರ್ಷದ ಹುಡುಗನನ್ನು ನೀರಿನಲ್ಲಿ ಮುಳುಗಿಸಿದ ಪೋಷಕರು! ಬಾಲಕ ಮೃತ
ಬ್ಲಡ್ ಕ್ಯಾನ್ಸರನ್ನು ಗಂಗೆ ಗುಣಪಡಿಸುತ್ತಾಳೆ ಎಂದು 5 ವರ್ಷದ ಬಾಲಕನನ್ನು ಪೋಷಕರೇ ಗಂಗೆಯಲ್ಲಿ ಮುಳುಗಿಸಿದ್ದಾರೆ. ಪರಿಣಾಮ, ಬಾಲಕ ಅಸು ನೀಗಿದ್ದಾನೆ. ಈ ಘಟನೆಯ ವಿಡಿಯೋ ಹೃದಯ ವಿದ್ರಾವಕವಾಗಿದೆ.
![Boy 5 Drowns As Family Forces Him To Take Ganga Dip To Cure Blood Cancer skr Boy 5 Drowns As Family Forces Him To Take Ganga Dip To Cure Blood Cancer skr](https://static-gi.asianetnews.com/images/01hmzn6m548hqdhtxy2972t9bx/boy--5--drowns-as-family-forces-him-to-take-ganga-dip-to-cure-blood-cancer_363x203xt.jpg)
ಈ ದಂಪತಿಯ ಮೂಢನಂಬಿಕೆ ಅವರ ಕಂದನ ಪ್ರಾಣವನ್ನೇ ಕಸಿದಿದೆ. ಹೃದಯ ವಿದ್ರಾವಕ ಘಟನೆಯೊಂದರಲ್ಲಿ 5 ವರ್ಷದ ಮಗ ಅನಾರೋಗ್ಯದಿಂದ ಚೇತರಿಸಿಕೊಳ್ಳಲಿ ಎಂದು ಪೋಷಕರು ಹಾಗೂ ಚಿಕ್ಕಮ್ಮ ಆತನನ್ನು ಗಂಗೆಯಲ್ಲಿ ಮುಳುಗಿಸಿದ್ದಾರೆ. ಪರಿಣಾಮ ಬಾಲಕನ ಪ್ರಾಣಪಕ್ಷಿ ಹಾರಿ ಹೋಗಿದೆ.
ಬಾಲಕ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಗಂಗಾ ನದಿಯು ಅವನನ್ನು ಗುಣಪಡಿಸುತ್ತದೆ ಎಂದು ಅವನ ಹೆತ್ತವರು ನಂಬಿದ್ದರು ಎನ್ನಲಾಗಿದೆ. ಇದಕ್ಕಾಗಿ ದೆಹಲಿ ಮೂಲದ ಕುಟುಂಬವು ಜ.24, ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಹರಿದ್ವಾರಕ್ಕೆ ತೆರಳಿದೆ. ಬಳಿಕ ಅಲ್ಲಿ ಕೊರೆಯುತ್ತಿರುವ ಚಳಿಯಲ್ಲಿ, ಹರಿಯುತ್ತಿರುವ ನೀರಿನಲ್ಲಿ ಬಾಲಕನನ್ನು ಮುಳುಗಿಸಿರುವುದನ್ನು ಕಾಣಬಹುದು. ಇದರ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ವಿಡಿಯೋದಲ್ಲಿ ಬಾಲಕನ ಪೋಷಕರು ಪ್ರಾರ್ಥನೆಗಳನ್ನು ಪಠಿಸುತ್ತಿರುವಾಗ ಆತನ ಚಿಕ್ಕಮ್ಮ ಅವನನ್ನು ನೀರಿನ ಅಡಿಯಲ್ಲಿ ಮುಳುಗಿಸಿದ್ದಾರೆ. ತಕ್ಷಣ ಆತ ನೀರಿನಿಂದ ಹೊರಗೆ ಬರದಂತೆ ಒತ್ತಿ ಹಿಡಿದಿದ್ದಾರೆ.
ಸುತ್ತ ನೆರೆದ ಜನಗಳು ಅವನನ್ನು ಮೇಲೆತ್ತಲು ಹೇಳುತ್ತಿದ್ದರೂ ಯಾರೊಬ್ಬರೂ ಪ್ರತಿಕ್ರಿಯಿಸುವುದಿಲ್ಲ. ಕಡೆಗೆ ಜನರ ನಡುವೆಯಿಂದ ಬಂದ ಒಬ್ಬರು ಮಗುವನ್ನು ಬಲವಂತವಾಗಿ ಮೇಲೆತ್ತುತ್ತಾರೆ. ಆಗ ಹುಡುಗನ ಚಿಕ್ಕಮ್ಮ ಹಾಗೆ ಎತ್ತಿದವರಿಗೆ ಹೊಡೆಯುವುದನ್ನು ಕಾಣಬಹುದಾಗಿದೆ. ಮೇಲೆ ತಂದು ಮಗುವನ್ನು ಪರೀಕ್ಷಿಸುವಾಗಾಗಲೇ ಮಗು ಸಾವನ್ನಪ್ಪಿದೆ.
ಪತ್ನಿ ಡಿಯೋರ್ ಬ್ಯಾಗ್ ಗಿಫ್ಟ್ ಸ್ವೀಕರಿಸಿದ್ದಕ್ಕೆ ದಕ್ಷಿಣ ಕೊರಿಯಾ ಅಧ್ಯಕ್ಷರ ಗಾದಿಯೇ ಅಲ್ಲಾಡುತ್ತಿದೆ; ಏನೀ ಬ್ಯಾಗ್ ವಿಶೇಷತೆ?
ಈ ಕುಟುಂಬವನ್ನು ಹರಿದ್ವಾರಕ್ಕೆ ಕರೆದುಕೊಂಡು ಬಂದ ಕ್ಯಾಬ್ ಚಾಲಕ ಹೇಳುವ ಪ್ರಕಾರ, ಹುಡುಗನಿಗೆ ತುಂಬಾ ಅಸೌಖ್ಯವಿದೆ ಮತ್ತು ಅವನು ಕ್ಯಾನ್ಸರ್ ನಿಂದ ಬಳಲುತ್ತಿದ್ದಾನೆ. ದೆಹಲಿ ವೈದ್ಯರು ಭರವಸೆ ಕೈ ಬಿಟ್ಟಿದ್ದಾರೆ ಎಂದು ಕುಟುಂಬ ದಾರಿಯಲ್ಲಿ ತಿಳಿಸಿತ್ತು.
ಇನ್ನೊಂದು ವೀಡಿಯೋದಲ್ಲಿ ಬಾಲಕನ ಚಿಕ್ಕಮ್ಮ ಶವದ ಪಕ್ಕದಲ್ಲಿ ಕುಳಿತು ಮಗು ಮತ್ತೆ ಬದುಕುವುದು ಖಚಿತ ಎಂದು ಹೇಳುತ್ತಿರುವುದನ್ನು ಕಾಣಬಹುದು.
ದೆಹಲಿಯ ಉನ್ನತ ಆಸ್ಪತ್ರೆಯಲ್ಲಿ ಬಾಲಕ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದ ಎಂದು ಕುಟುಂಬದವರು ತಿಳಿಸಿರುವುದಾಗಿ ಹರಿದ್ವಾರ ನಗರ ಪೊಲೀಸ್ ಮುಖ್ಯಸ್ಥ ಸ್ವತಂತ್ರ ಕುಮಾರ್ ತಿಳಿಸಿದ್ದಾರೆ. ವಾದ್ಯರು ಮಗುವನ್ನು ಉಳಿಸಲು ಸಾಧ್ಯವಿಲ್ಲ ಎಂದಿದ್ದರಿಂದ ಗಂಗಾ ಸ್ನಾನವು ಅವನನ್ನು ಗುಣಪಡಿಸುತ್ತದೆ ಎಂದು ನಂಬಿ ಇಲ್ಲಿಗೆ ಕರೆತಂದಿದ್ದಾಗಿ ಕುಟುಂಬ ಹೇಳಿದೆ ಎಂದು ಅವರು ಹೇಳಿದ್ದಾರೆ.
ವೈಟ್ ಫೀಲ್ಡ್ ಬಾಲಕ ಮಿಸ್ಸಿಂಗ್ ಕೇಸ್ ಬೆನ್ನಲ್ಲೇ ಬಿಎಂಟಿಸಿ ಅಲರ್ಟ್: ಬಸ್ಸಲ್ಲಿ ಪ್ರಯಾಣಿಸುವ ಅಪ್ರಾಪ್ತರ ಮೇಲೆ ನಿಗಾ!
ಸಧ್ಯ ಬಾಲಕನ ಪೋಷಕರು ಮತ್ತು ಆತನ ಚಿಕ್ಕಮ್ಮನನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ತಾಯಿ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ವಿಡಿಯೋ ನೋಡಿದ ನೆಟ್ಟಿಗರು ಇದಂತೂ ಬಹಳ ಶಾಕಿಂಗ್ ಆಗಿದೆ ಎಂದಿದ್ದಾರೆ. ಹಲವರು ಮೂಢನಂಬಿಕೆಯನ್ನು ಜರಿದರೆ ಮತ್ತೆ ಕೆಲವರು ಪೋಷಕರ ಉದ್ದೇಶವನ್ನು ಅನುಮಾನಿಸಿದ್ದಾರೆ.