-ಡಾ. ಸುವರ್ಣಿನಿ ಕೊಣಲೆ

ಗ್ರೀಕ್‌ ಭಾಷೆಯಲ್ಲಿ ಕೊರೊನೆ ಎಂದರೆ ಹಾರ ಎಂದರ್ಥ. ಅಲ್ಲಿಂದ ಆ ಪದವನ್ನು ಎರವಲು ಪಡೆದದ್ದು ಲ್ಯಾಟಿನ್‌. ಕೊರೊನ ಎಂದದರ ರೂಪವಿಲ್ಲಿ. ಇಲ್ಲದಕ್ಕೆ ಹಾರವೆಂದೂ, ಕಿರೀಟವೆಂದೂ ಅರ್ಥವಿದೆ. ಸೂರ್ಯನ ಸುತ್ತಲೂ ಒಂದು ಪ್ರಭೆಯಿರುತ್ತದೆ. ಅದಕ್ಕೂ ಲ್ಯಾಟಿನ್ನಿನಲ್ಲಿ ಕೊರೊನ ಎಂದೇ ಹೆಸರು. ಈ ವೈರಾಣುವೂ ಅಂತಹದೇ ಹೊರಕವಚವನ್ನು ಹೊಂದಿದೆಯಾಗಿ ಅದಕ್ಕೆ ಈ ಹೆಸರು. ಅಂತಹ ಸೊಗಸಾದ ಹೆಸರನ್ನು ಹೊತ್ತಿರುವ ಜೀವಿ ಮಾತ್ರ ಮನುಕುಲವನ್ನು ತಲ್ಲಣಗೊಳಿಸಿದೆ. ಅಷ್ಟಷ್ಟುಕಾಲಕ್ಕೂ ಮನುಷ್ಯನನ್ನು ಹೆದರಿಸುತ್ತಲೇ ನಡೆದು ಬಂದಿದೆ ಅದು ಇತಿಹಾಸದಲ್ಲಿ. ಈಗ ಅದಿಟ್ಟಿರುವುದು ಮತ್ತೊಂದು ಹೆಜ್ಜೆ ಮಾತ್ರ. ಮುಂದೆ ಇನ್ನೊಂದು ಹೆಜ್ಜೆ ಇಡಲೂ ಬಹುದು.

ಕೊರೋನಾ ಡಿಪ್ರೆಶನ್‌ ನಿಮಗೂ ಬರಬಹುದು ಹುಷಾರು!

ಈ ಕೊರೊನ ಗುಂಪಿನ ವೈರಸ್ಸುಗಳು ಮಿಲಿಯಗಟ್ಟಲೆ ವರ್ಷದಿಂದ ಭೂಮಿಯಲ್ಲಿವೆ. ಅವು ಅಂದಿನಿಂದಲೂ ಕಾಲಕಾಲಕ್ಕೆ ರೂಪಾಂತರಗೊಳ್ಳುತ್ತಾ ಬೇರೆ ಬೇರೆ ಜೀವಿಗಳ ದೇಹ ಹೊಕ್ಕು ಹೊರಬರುತ್ತಿವೆ. ಹಂದಿ, ಕೋಳಿ, ಹಸು, ಬಾವಲಿ ಹೀಗೆ ಹಲವು ಪ್ರಾಣಿಗಳನ್ನು ಕಾಡುತ್ತವೆ ಇವು. ಮನುಷ್ಯರನ್ನು ಕಾಡುವ ವೈರಸ್ಸಿನ ರೂಪಾಂತರಕ್ಕೆ ಹ್ಯೂಮನ್‌ ಕೊರೊನಾವೈರಸ್‌ ಎಂಬ ಹಣೆಪಟ್ಟಿ. ನಮಗೆ ಅಚ್ಚರಿ ಎನಿಸುವ ವಿಚಾರವೆಂದರೆ ನಮಗೆ ಬರುವ ಸಾಮಾನ್ಯ ಶೀತಕ್ಕೂ ಕೊರೊನಾ ವೈರಸ್ಸೇ ಕಾರಣ! ಒಟ್ಟು ಏಳು ಹ್ಯೂಮನ್‌ ಕೊರೊನಾ ವೈರಸ್ಸುಗಳಿವೆ. ಅದರಲ್ಲಿ ನಾಲ್ಕು, ಅಂದರೆHuman coronavirus OC43, Human coronavirus KHU1, Human coronavirus NL63, Human coronavirus 229E ಇವುಗಳು ಸಾಮಾನ್ಯ ಶೀತಜ್ವರಕ್ಕೆ ಕಾರಣ.

ಇನ್ನು ಮೂರು, Middle East Respiratory Syndrome related coronavirus (MERS-CoV), Severe Acute Respiratory Syndrome coronavirus (SARS-Cov), Severe Acute Respiratory  syndrome cononavirus 2 (SARS-Cov2). ಇವುಗಳು ಅಪಾಯಕಾರಿ. ಈ ಕೊನೆಯ ವೈರಸ್ಸೇ ನಾವೀಗ ಇಟ್ಖಜಿಈ​19 ಎಂದು ಕರೆಯಲ್ಪಟ್ಟದ್ದು. ಕೈಕುಲುಕುವವರನ್ನು ಕೈಮುಗಿಯುವಂತೆ ಮಾಡಿದ್ದು.

ಈ ಎಲ್ಲ ಕೊರೊನಾ ವೈರಸ್ಸುಗಳೂ ಆಕ್ರಮಿಸುವುದು ನಮ್ಮ ಉಸಿರಾಟದ ವ್ಯವಸ್ಥೆಯನ್ನು. ಸಾಮಾನ್ಯ ಶೀತದ ವೈರಸ್ಸುಗಳು ಮೂಗು ಹಾಗೂ ಗಂಟಲನ್ನು ಮಾತ್ರ ಕಾಡುತ್ತವೆ. ಇದನ್ನು ಅನುಭವಿಸದವರೇ ಇಲ್ಲ. ಸಾರ್ಸ್‌ ಹಾಗೂ ಮರ್ಸ್‌ ಆಕ್ರಮಿಸುವುದು ಗಂಟಲು ಹಾಗೂ ಶ್ವಾಸಕೋಶಗಳನ್ನು. ಅದುವೇ ಆತಂಕಕ್ಕೆ ಕಾರಣ. ಉಸಿರಾಟವನ್ನೇ ಏರುಪೇರು ಮಾಡುವುದರಿಂದ ದೇಹದ ಪೂರ್ಣ ವ್ಯವಸ್ಥೆಯನ್ನು ಅಡಿಮೇಲು ಮಾಡುತ್ತವೆ ಇವು. ಇದಕ್ಕೆ ಈವರೆಗೆ ಯಾವುದೇ ಲಸಿಕೆ ಅಥವಾ ಮದ್ದು ಇಲ್ಲವಾದ್ದರಿಂದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಇವುಗಳನ್ನು ದೂರವಿಡುವುದೊಂದೇ ಉಳಿವಿನ ಮಾರ್ಗ.

ಯಾರನ್ನಾದರೂ ಭೇಟಿಯಾದಾಗ ಕೈಕುಲುಕುವುದು, ಕೆನ್ನೆಗೆ ಚುಂಬಿಸುವುದು ಇದೆರಡೂ ಆಧುನಿಕತೆ ಎನ್ನುವುದು ನಮ್ಮ ಅನಿಸಿಕೆ. ಆದರೇನು ಮಾಡೋಣ ಈ ವೈರಸ್ಸೂಆಧುನಿಕವೇ. ಹಾಗಾಗಿ ಅದಕ್ಕೆ ಇವೆಲ್ಲ ಬಲು ಪ್ರೀತಿ. ಏಷಿಯಾದ ಪ್ರಾಚೀನ ಪದ್ಧತಿ ಎದುರು ಸಿಕ್ಕವರಿಗೆ ತಲೆಬಾಗಿ ಗೌರವ ಸೂಚಿಸುವುದು. ಭಾರತೀಯರಾದ ನಮಗೆ ನಮಸ್ಕರಿಸುವುದು. ಅಬ್ಬ ಅದೆಷ್ಟುಖುಷಿ ಜಗತ್ತನ್ನಾಳಿದ, ಆಳುವ ದೊಡ್ಡ ರಾಷ್ಟ್ರಗಳ ದೊಡ್ಡವರೆಲ್ಲ ನಮಸ್ತೇ ಎಂದು ಕೈ ಜೋಡಿಸುವುದನ್ನು ನೋಡಿದಾಗ.

ಇಟೆಲಿಯಲ್ಲಿ ಹುಳಗಳಂತೆ ಜನ ಸತ್ತಿದ್ಯಾಕೆ? ಭಾರತದಲ್ಲೂ ಹಾಗಾಗುತ್ತಾ?

ಪರಸ್ಪರ ವ್ಯಕ್ತಿಗಳ ದೇಹದ ಸ್ಪರ್ಶವಾದಾಗ ಒಬ್ಬ ವ್ಯಕ್ತಿಯ ದೇಹದ ಬೆವರು, ಎಂಜಲಿನ ಕಣಗಳು ಅಥವಾ ಮೂಗಿನಿಂದ ಸುರಿಯುವ ಮ್ಯೂಕಸ್‌ಗಳು ಇನ್ನೊಬ್ಬ ವ್ಯಕ್ತಿಯ ದೇಹವನ್ನು ಸೇರುತ್ತವೆ. ನಮಗೆ ಬರಿಗಣ್ಣಿಗೆ ಅದು ಏನೂ ಅಲ್ಲವೇನೋ ಅನ್ನಿಸಿದರೂ ಆ ಕಣ್ಣಿಗೆ ಕಾಣದ ಕಣದಲ್ಲಿ ಕೋಟ್ಯಂತರ ಸೂಕ್ಷ್ಮಜೀವಿಗಳಿರುತ್ತವೆ. ಹೀಗೆ ಹಸ್ತಲಾಘವದ ಮೂಲಕ ಹಸ್ತಾಂತರಗೊಳ್ಳುವ ಈ ವೈರಸ್ಸುಗಳು ಹೊಸ ಶ್ವಾಸಕೋಶವನ್ನು ತಲುಪುವುದಕ್ಕೆ ಬೇಕಾಗುವುದು ಕೆಲವು ಕ್ಷಣ ಮಾತ್ರ. ಅಲ್ಲಿ ಮತ್ತೆ ತನ್ನ ವಂಶವನ್ನು ಬೆಳೆಸಿ, ಮತ್ತೆ ಒಂದಷ್ಟುಶ್ವಾಸಕೋಶಗಳ ಬೇಟೆಗೆ ಅದು ಸಿದ್ಧ. ಇಲ್ಲಿ ನಾವದನ್ನು ತಡೆದರೆ ಯುದ್ಧವನ್ನು ಅರ್ಧ ಗೆದ್ದಂತೆ.

ಇದರ ಜೊತೆಗೇ ನಾವು ನಮ್ಮ ಆಹಾರ-ವಿಹಾರಗಳ ಬಗ್ಗೆಯೂ ಗಮನಹರಿಸಬೇಕಾದ್ದು ಅತಿ ಅಗತ್ಯ. ಪೌಷ್ಟಿಕಾಂಶಯುಕ್ತ ಆಹಾರ, ನಿಯಮಿತ ವ್ಯಾಯಾಮ, ಉಸಿರಾಟದ ಕ್ರಮಗಳು, ಹಾಗೂ ಉತ್ತಮ ನಿದ್ರೆ ಅತ್ಯಗತ್ಯ. ಕುಡಿಯಲು ಕುದಿಸಿದ ನೀರು, ಮನೆಯಲ್ಲಿಯೇ ತಯಾರಿಸಿದ ಬಿಸಿ ಆಹಾರದ ಸೇವನೆ ಇಂದಿಗೆ ಮಾತ್ರವಲ್ಲ, ಎಂದಿಗೂ ಕ್ಷೇಮವೇ. ಸ್ವಚ್ಛತೆಯೂ ನಮ್ಮ ಆದ್ಯತೆಯಾಗಿರಲಿ. ಹೊರಗೆ ಹೋಗಿ ಬಂದ ಪಾದರಕ್ಷ ಅಥವಾ ಬಟ್ಟೆಯನ್ನು ದೂರ ಇಡುವುದು, ಕೈ-ಕಾಲು-ಮುಖ ತೊಳೆಯುವುದು, ಸ್ನಾನಾದಿಗಳು, ಕೈ ತೊಳೆದುಕೊಳ್ಳುವುದು, ಪರಸ್ಪರ ಮೈ ಮುಟ್ಟದೇ ಇನ್ನೊಬ್ಬರೊಂದಿಗೆ ವ್ಯವಹರಿಸುವುದು ಇದೆಲ್ಲವನ್ನೂ ನಮ್ಮಲ್ಲಿ ತಲೆತಲಾಂತರದಿಂದ ಆಚರಿಸಿಕೊಂಡು ಬಂದದ್ದೇ ಆಗಿದೆ. ಮರೆತದ್ದನ್ನು ಮತ್ತೆ ಪಾಲಿಸಬೇಕಿದೆ.

ಅಷ್ಟಾಗಿಯೂ ನಮಗೆ ಸೋಂಕು ತಗುಲಿತಾದರೆ, ಭಯ ಪಡುವ ಅಗತ್ಯ ಇಲ್ಲ. ವೈರಸ್ಸನ್ನು ಕೊಲ್ಲುವ ಮದ್ದು ಇಲ್ಲವಾದರೂ, ಸೋಂಕಿನ ಲಕ್ಷಣಗಳನ್ನು, ಅಪಾಯವನ್ನು ಕಡಿಮೆಗೊಳಿಸುವ ಚಿಕಿತ್ಸೆ ಲಭ್ಯವಿದೆ. ಸರ್ಕಾರದ ನಿಯಮಗಳನ್ನು, ವೈದ್ಯರ ಸಲಹೆಗಳನ್ನು ಚಾಚೂ ತಪ್ಪದೇ ಪಾಲಿಸುವುದು ಮಾತ್ರ ಮುಖ್ಯ.

ಹೀಗೆ ಮನುಕುಲವನ್ನು ಕಾಡುವ ಕೊರೊನಕ್ಕೆ ನಮ್ಮದೊಂದು ನಮಸ್ಕಾರ ಸಲ್ಲಿಸೋಣ!