Asianet Suvarna News Asianet Suvarna News

ಬೇರೆ ಯಾರಿಗೂ ಆಗದ ಚಳಿ ನಿಮಗಾಗುತ್ತಾ? ಕಾರಣಗಳು ಇದಿರಬಹುದು!

ಎಲ್ಲರಿಗಿಂತ ನಿಮಗೆ ಚಳಿ ಎನಿಸುತ್ತದೆಯೇ? ಎಲ್ಲರೂ ಆರಾಮಾಗಿರುವಾಗ ನಿಮ್ಮ ಕೈಕಾಳುಗಳು ಚಳಿಯಿಂದ ಶೀತವಾಗುವ ಹಾಗೆ, ಮರಗಟ್ಟಿದ ಹಾಗೆ ಭಾಸವಾಗುತ್ತದೆಯೇ? ಇದು ಕೇವಲ ದೇಹಪ್ರಕೃತಿಯಲ್ಲ. ಯಾವುದೋ ಪೌಷ್ಟಿಕಾಂಶದ ಕೊರತೆಯಿಂದ ದೇಹಕ್ಕೆ ಚಳಿಯ ಅನುಭವ ಹೆಚ್ಚಾಗುತ್ತದೆ. 
 

These people feels over cold than others reason may be shortage of nutrients
Author
First Published Jan 7, 2023, 5:27 PM IST

ಚಳಿಯಲ್ಲಿ ಎಲ್ಲರೂ ನಡುಗುತ್ತಿದ್ದರೆ ಕೆಲವರು ಶರ್ಟ್‌ ಬಿಚ್ಚಿ ಓಡಾಡುತ್ತಿರುತ್ತಾರೆ. ಅವರಿಗೆ ಚಳಿ ಎನ್ನುವುದು ಸೋಕುವುದೇ ಇಲ್ಲ. ಚಳಿಗಾಲದಲ್ಲೂ ಅವರಿಗೆ ಮಲಗಲು ಹೆಚ್ಚು ಹೊದಿಕೆಗಳು, ರಗ್ಗುಗಳು, ಕಂಬಳಿಗಳು ಯಾವುದೂ ಬೇಕಾಗುವುದಿಲ್ಲ. ಆದರೆ, ಕೆಲವರು ಇದಕ್ಕೆ ತದ್ವಿರುದ್ಧ. ಹೆಚ್ಚು ಚಳಿ ಇರದ ವಾತಾವರಣದಲ್ಲೂ ಅವರಿಗೆ ಚಳಿಯ ಭಾವನೆ ಉಂಟಾಗುತ್ತದೆ. ಸಾಮಾನ್ಯ ವಾತಾವರಣದಲ್ಲೂ ಶೀತವಾಗುತ್ತದೆ. ಚಳಿಗಾಲದಲ್ಲಿ ಕೈಕಾಲುಗಳು ಮರಗಟ್ಟಿದಂತಾಗುವುದು ಸಹಜ. ಆದರೆ, ಸಹವ ಹವಾಮಾನದಲ್ಲೂ ಚಳಿ ಹೆಚ್ಚು ಎನ್ನುವವರ ಕೈಕಾಲುಗಳು ಶೀತದಿಂದ ಹೆಪ್ಪುಗಟ್ಟಿದಂತಾಗುತ್ತವೆ. ಬೇರೆಯವರಿಗೆ ಹೋಲಿಕೆ ಮಾಡಿದರೆ ಇವರಿಗೆ ಹೆಚ್ಚು ಚಳಿಯಾಗುತ್ತದೆ. “ಅವರ ದೇಹಪ್ರಕೃತಿಯೇ ಹಾಗೆʼ ಎಂದು ಸಾಮಾನ್ಯವಾಗಿ ಅಂದುಕೊಂಡು ಸುಮ್ಮನಾಗುತ್ತೇವೆ. ಹೀಗಾಗಲು ಮೇಲ್ನೋಟಕ್ಕೆ ಯಾವುದೇ ಕಾರಣವಿಲ್ಲ ಎನ್ನಿಸಬಹುದು. ಇದಕ್ಕೆ ಹಲವು ಕಾರಣಗಳನ್ನು ಗುರುತಿಸಲಾಗಿದೆ. ಡಿಹೈಡ್ರೇಷನ್‌ ಹಾಗೂ ಆತಂಕದ ಸಮಸ್ಯೆಯಿಂದ ದೇಹಕ್ಕೆ ಹೆಚ್ಚು ಚಳಿಯಾಗಬಹುದು. ನೀರಿನ ಕೊರತೆಯಿಂದ ದೇಹದ ಮೆಟಬಾಲಿಕ್‌ ಕ್ರಿಯೆ ನಿಧಾನವಾದಾಗ ಶೀತದ ಭಾವನೆ ಹೆಚ್ಚುತ್ತದೆ. ಜತೆಗೆ, ದೇಹದಲ್ಲಿ ಉಂಟಾಗುವ ಕೆಲವು ಪೌಷ್ಟಿಕಾಂಶಗಳ ಕೊರತೆಯಿಂದಾಗಿ ಇವರಿಗೆ ಎಲ್ಲರಿಗಿಂತ ಹೆಚ್ಚು ಚಳಿ ಎನಿಸಬಹುದು. ಜತೆಗೆ, ಅಂತಹ ಕೊರತೆಗಳು ಯಾವುವು ಎಂದು ನೋಡಿಕೊಳ್ಳಿ. ನಿಮಗೂ ಅಗತ್ಯಕ್ಕಿಂತ ಹೆಚ್ಚು ಚಳಿ ಎನಿಸಿದರೆ ಎಚ್ಚರಿಕೆ ವಹಿಸಿ.

•    ಕಬ್ಬಿಣಾಂಶದ ಕೊರತೆ (Iron Shortage)
ಕಬ್ಬಿಣಾಂಶ ರಕ್ತದ (Blood) ಮಹತ್ವದ ಭಾಗ. ಕೆಂಪು ರಕ್ತದ ಕಣಗಳು ದೇಹದ ತುಂಬೆಲ್ಲ ಆಮ್ಲಜನಕ (Oxigen) ಸಾಗಿಸಲು ಕಬ್ಬಿಣಾಂಶ ಅಗತ್ಯ. ದೇಹದಲ್ಲಿ ಒಂದೊಮ್ಮೆ ಕಬ್ಬಿಣಾಂಶದ ಕೊರತೆ ಉಂಟಾದರೆ ದೇಹದ ಎಲ್ಲ ಭಾಗಗಳಿಗೆ ಸೂಕ್ತ ಪ್ರಮಾಣದಲ್ಲಿ ಆಮ್ಲಜನಕದ ಪೂರೈಕೆ ಆಗುವುದಿಲ್ಲ. ಹೀಗಾಗಿ, ದೇಹದಲ್ಲಿ ಕಬ್ಬಿಣಾಂಶದ ಕೊರತೆ ಉಂಟಾದಾಗ ವ್ಯಕ್ತಿಗೆ ಹೆಚ್ಚು ಚಳಿ ಎನಿಸುತ್ತದೆ. ಈ ಕೊರತೆ ಮುಖ್ಯವಾಗಿ ಎರಡು ರೀತಿಯಲ್ಲಿ ಪ್ರಭಾವ ಬೀರುತ್ತದೆ. ಒಂದು, ಥೈರಾಯ್ಡ್‌ ಮೇಲೆ ಪರಿಣಾಮ ಉಂಟಾಗುತ್ತದೆ. ಇದರಿಂದ ದೇಹದಲ್ಲಿ ಸೂಕ್ತ ಪ್ರಮಾಣದ ಉಷ್ಣತೆ (Heat) ಸೃಷ್ಟಿಯಾಗುವುದಿಲ್ಲ. ಎರಡನೆಯದಾಗಿ, ರಕ್ತ ಸಂಚಾರದ (Blood Flow) ಮೇಲೆ ಪರಿಣಾಮ ಬೀರುತ್ತದೆ. 

ಚಳಿಗಾಲದಲ್ಲೂ ನಿದ್ರೆ ಬರ್ತಿಲ್ವಾ? ಈ ವ್ಯಾಯಾಮ ಬೆಸ್ಟ್ ಮದ್ದು!

•    ವಿಟಮಿನ್‌ ಬಿ12 (Vitamin B12) ಕೊರತೆ
ಈ ವಿಟಮಿನ್‌ ಕೊರತೆಯಿಂದ ಕೆಂಪುರಕ್ತಕಣ (Red Blood Cells) ನಿರ್ಮಾಣದ ಹಿನ್ನಡೆ ಉಂಟಾಗುತ್ತದೆ. ಆಗ ಸಹಜವಾಗಿ ದೇಹಕ್ಕೆ ಚಳಿ ಎನಿಸುವುದು ಹೆಚ್ಚು.

•    ರಕ್ತದ ಹರಿವಿಗೆ ಧಕ್ಕೆ
ರಕ್ತಸಂಚಾರದಲ್ಲಿ ಸಮಸ್ಯೆ ಇರುವಾಗ ಶೀತದ (Cold) ಅನುಭವ ಉಂಟಾಗುತ್ತದೆ. ಕಾಲು ಮತ್ತು ಕೈಗಳು ಯಾವಾಗಲೂ ಮರಗಟ್ಟಿದಂತೆ ಆಗುತ್ತಿದ್ದರೆ ರಕ್ತದ ಹರಿವಿನಲ್ಲಿ ಸಮಸ್ಯೆ ಇದ್ದರೂ ಇರಬಹುದು. ಇದರಿಂದ ರಕ್ತನಾಳಗಳು (Vessels) ಸಂಕುಚಿತಗೊಂಡು, ಅಂಗಾಂಗಗಳಿಗೆ ರಕ್ತದ ಪೂರೈಕೆ ಕಡಿಮೆ ಆಗುತ್ತದೆ. 

•    ನಿದ್ರಾಹೀನತೆ (Sleep Disorder)
ಅಚ್ಚರಿಯಾಗಬಹುದು, ನಿದ್ರಾಹೀನತೆಯಿಂದಲೂ ದೇಹಕ್ಕೆ ಹೆಚ್ಚು ಶೀತವಾಗುತ್ತದೆ. ಸರಿಯಾಗಿ ನಿದ್ರೆ ಮಾಡದವರ ದೇಹದ ತಾಪಮಾನ (Temperature) ಕಡಿಮೆ ಇರುತ್ತದೆ. ನಿದ್ರಾಹೀನತೆಯಿಂದ ನರಮಂಡಲ (Nerve System) ಹಾಗೂ ಮಸ್ತಿಷ್ಕದ ನಿಯಂತ್ರಣ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವುದೇ ಇದಕ್ಕೆ ಕಾರಣ.

ಎದ್ದಾಗ ಮೈ ಕೈ ನೋವು ಕಾಣಿಸುವುದೇಕೆ? ಕಾರಣ ಇದಿರಬಹುದು!

•    ಅಗತ್ಯಕ್ಕಿಂತ ಕಡಿಮೆ ತೂಕ (Weight)
ಯಾರ ದೇಹದ ಬಿಎಂಐ 18.5ಕ್ಕಿಂತ ಕಡಿಮೆ ಇದೆಯೋ ಅವರಿಗೆ ಚಳಿಯಾಗುವುದು ಅಧಿಕ. ಕಡಿಮೆ ತೂಕದ ಜನರಲ್ಲಿ ಮಾಂಸಖಂಡಗಳ (Muscles) ಸಾಂದ್ರತೆ ಕಡಿಮೆ ಪ್ರಮಾಣದಲ್ಲಿರುವುದು ಸಹಜ. ದೇಹದ ತಾಪಮಾನ ನಿಯಂತ್ರಿಸಲು, ದೇಹದಲ್ಲಿ ಉಷ್ಣತೆ ಉಂಟುಮಾಡಲು ಶೇ.25ರಷ್ಟು ಬಿಎಂಐ ಅತ್ಯಂತ ಅಗತ್ಯ. ಅದಕ್ಕಿಂತ ಹೆಚ್ಚಾಗಿದ್ದರೆ ಚಳಿಯಾಗುವ ಪ್ರಮಾಣ ಕಡಿಮೆಯಾಗುತ್ತದೆ. ಹೀಗಾಗಿಯೇ ಬೊಜ್ಜು ದೇಹಿಗಳಿಗೆ ಚಳಿ ಎನಿಸುವುದಿಲ್ಲ.

•    ಗರ್ಭಾವಸ್ಥೆ (Pregnancy)
ಕೆಲವು ಮಹಿಳೆಯರು ಗರ್ಭಾವಸ್ಥೆಯಲ್ಲಿ ಅನೀಮಿಯಾ ಹಾಗೂ ರಕ್ತಸಂಚಾರದ ಸಮಸ್ಯೆ ಎದುರಿಸುತ್ತಾರೆ. ಅಂಥವರಿಗೆ ಚಳಿಯಾಗುವುದು ಹೆಚ್ಚು.

•    ಮಹಿಳೆಯರಿಗೆ (Women) ಚಳಿ ಹೆಚ್ಚು
ಇದೊಂದು ಸಾಮಾನ್ಯ ನಂಬುಗೆಯಲ್ಲ, ವೈಜ್ಞಾನಿಕವಾಗಿ ಸತ್ಯ. ಮಹಿಳೆಯರಿಗೆ ಚಳಿ ಹೆಚ್ಚುವಲ್ಲಿ ಈಸ್ಟ್ರೋಜೆನ್‌ ಹಾರ್ಮೋನ್‌ ಕಾರಣವಾಗುತ್ತದೆ. ಈಸ್ಟ್ರೋಜೆನ್‌ ಹಾರ್ಮೋನ್‌ (Hormone) ರಕ್ತಸಂಚಾರವನ್ನು ನಿಧಾನಗೊಳಿಸುತ್ತದೆ. ಅಧ್ಯಯನಗಳ ಪ್ರಕಾರ, ಮಹಿಳೆಯರಿಗೆ ತಮ್ಮ ಪೀರಿಯೆಡ್ಸ್‌ ಸಮಯದಲ್ಲಿ ಚಳಿಯಾಗುವುದು ಹೆಚ್ಚು.
 

Follow Us:
Download App:
  • android
  • ios