ಎದ್ದಾಗ ಮೈ ಕೈ ನೋವು ಕಾಣಿಸುವುದೇಕೆ? ಕಾರಣ ಇದಿರಬಹುದು!
ಬೆಳಗ್ಗೆ ಏಳುವಾಗ ಹಲವರಿಗೆ ಇಡೀ ದೇಹ ಹಿಂಡಿದಂತೆ ನೋವಾಗುತ್ತದೆ. ಮಂಡಿ, ಕೀಲುಗಳಲ್ಲಿ ನೋವು ಸಾಮಾನ್ಯವಾಗಿರುತ್ತದೆ. ಚಳಿಗಾಲದಲ್ಲಿ ಈ ನೋವು ಇನ್ನೂ ಅಸಾಧ್ಯ. ಆದರೆ, ಇದು ತೀರ ಸಮಸ್ಯೆದಾಯಕ ನೋವಲ್ಲ. ದೇಹ ನಿಶ್ಚಲವಾದಾಗ ಮಾಂಸಖಂಡಗಳ ಬಿಗಿತದಿಂದ ಉಂಟಾಗುವಂಥದ್ದು. ಆದರೆ, ದಿನವೂ ಬೆಳಗ್ಗೆ ಒಂದು ಗಂಟೆಗಿಂತ ಹೆಚ್ಚು ಕಾಲ ನೋವಿದ್ದರೆ ವೈದ್ಯರ ಬಳಿ ಹೋಗುವುದು ಉಚಿತ.
“ಬೆಳಗ್ಗೆ ಏಳುವಾಗ ಅತಿಯಾದ ಮೈ ಕೈ ನೋವು ಹಿಂಡಿಹಾಕುತ್ತೆ, ಸ್ವಲ್ಪ ಸಮಯ ಕಳೆದ ಬಳಿಕ ಪರವಾಗಿಲ್ಲ, ದಿನವೂ ಹೀಗಾದರೆ ಏನ್ಮಾಡಲಿ?ʼ ಎಂದು ಹಲವರು ಅಲವತ್ತುಕೊಳ್ಳುತ್ತಾರೆ. ವಯಸ್ಸಾದವರಲ್ಲಿ ಮೈಕೈ ನೋವು ಅತಿ ಸಾಮಾನ್ಯ. ಆದರೆ, ಮಧ್ಯವಯಸ್ಸಿನವರಲ್ಲೂ ನೋವು ಕಾಡುವಾಗ ಹೀಗೆಕೆ ಎನಿಸುತ್ತದೆ. ತಜ್ಞರ ಪ್ರಕಾರ, ಇದಕ್ಕೆ ವಿವಿಧ ರೀತಿಯ ಕೊರತೆಗಳು, ಅನಿಯಂತ್ರಿತ ಮಧುಮೇಹ, ಡಿಹೈಡ್ರೇಷನ್, ಪದೇ ಪದೆ ನಿದ್ರಾಭಂಗವಾಗುವುದು ಸೇರಿದಂತೆ ಹಲವು ಕಾರಣಗಳಿರಬಹುದು. ಜತೆಗೆ, ನಾವು ಮಲಗುವ ಶೈಲಿ, ಹಾಸಿಗೆ ಸೇರಿದಂತೆ ಹಲವು ಅಂಶಗಳು ದೇಹದ ನೋವಿಗೆ ಕಾರಣವಾಗಬಲ್ಲವು. ಆದರೆ, ಇವ್ಯಾವುದರ ಅಂಶವೂ ಇಲ್ಲದೆ ದೇಹದಲ್ಲಿ ನೋವು ಕಂಡುಬಂದರೆ ಅದು ಚಳಿಗಾಲವೂ ಇರಬಹುದು! ಹೌದು, ಚಳಿಗಾಲದಲ್ಲಿ ದೇಹದಲ್ಲಿ ನೋವಿನ ಅನುಭವ ಹೆಚ್ಚು. ದೇಹದ ತೂಕ ಅಧಿಕವಾಗಿದ್ದರೆ ಉಸಿರಾಟದ ಮೇಲೆ ಅದರ ಪ್ರಭಾವ ಉಂಟಾಗುತ್ತದೆ. ಉಸಿರಾಟದಲ್ಲಿ ಹಿತವಿಲ್ಲದೆ ಇರುವಾಗ ಆಳವಾದ ನಿದ್ರೆ ಬರುವುದಿಲ್ಲ. ಆಗಲೂ ಮಾರನೆಯ ದಿನ ಬೆಳಗ್ಗೆ ದೇಹದಲ್ಲಿ ನೋವು ಉಂಟಾಗಬಹುದು. ದೇಹದಲ್ಲಿ ಉಂಟಾಗುವ ಬಿಗಿತದಿಂದಾಗಿ ನೋವು ಸಹಜ. ಅಲ್ಲದೆ, ರುಮಟೈಡ್ ಆರ್ಥರೈಟಿಸ್ ಇರುವಾಗಲೂ ನೋವು ಸಾಮಾನ್ಯ.
ಒಂದೊಮ್ಮೆ ದೇಹದಲ್ಲಿ ನೋವಿದೆಯೆಂದು (Body Pain) ಸ್ವಲ್ಪ ರೆಸ್ಟ್ ಮಾಡೋಣ ಎಂದುಕೊಂಡಿರೋ ಮುಗಿಯಿತು, ಆ ನೋವು ವಾಸಿಯಾಗುವುದಿಲ್ಲ. ಏಕೆಂದರೆ, ದೇಹ ಚಟುವಟಿಕೆಯಿಲ್ಲದೆ (Inactivity) ಬಿಗಿದುಕೊಂಡಿರುವ (Stiff) ಸಮಯದಲ್ಲಿ ಅದಕ್ಕೆ ಬೇಕಾಗಿರುವುದೇ ಚಟುವಟಿಕೆ (Activity), ಲಘು ವ್ಯಾಯಾಮ. ಹೀಗಾಗಿ, ದೇಹದಲ್ಲಿ ನೋವು ಕಂಡಾಕ್ಷಣ ಗಾಬರಿಯಾಗುವ ಅಗತ್ಯವಿಲ್ಲ ಎನ್ನುತ್ತಾರೆ ತಜ್ಞರು. ಸಾಮಾನ್ಯವಾಗಿ ಈ ನೋವು ಯಾವುದೇ ದೊಡ್ಡ ರೋಗವನ್ನು ತೋರ್ಪಡಿಸುವುದಿಲ್ಲ. ಅಧಿಕ ವ್ಯಾಯಾಮ (Exercise) ಮಾಡುವುದು, ಭಾರ ಎತ್ತುವುದು ಸೇರಿದಂತೆ ಹಲವು ರೀತಿಯ ಕೆಲಸಗಳನ್ನು ನಿಭಾಯಿಸುವವರ ಮಾಂಸಖಂಡಗಳು (Muscles) ಬೆಳಗ್ಗೆ ಏಳುವ ಸಮಯದಲ್ಲಿ ಬಿಗಿತಕ್ಕೆ ಒಳಗಾಗಿರುತ್ತವೆ. ದೀರ್ಘ ಸಮಯ ಕುಳಿತುಕೊಂಡ ಬಳಿಕ ಎದ್ದಾಗಲೂ ಈ ಸ್ಟಿಫ್ ನೆಸ್ ಕಂಡುಬರುತ್ತದೆ. ಚಟುವಟಿಕೆ ಆಧಾರಿತ ನೋವು ಉಂಟಾದಾಗ ಊತ (Swelling) ಉಂಟಾಗುವುದು ಸಹ ಸಾಮಾನ್ಯ.
ಕೆಲವು ಜನರಿಗೆ ಮತ್ತೆ ಮತ್ತೆ ಯಾಕೆ ನೆಗಡಿ ಆಗುತ್ತೆ ಗೊತ್ತಾ?
ಚಳಿಗಾಲದಲ್ಲಿ (Winter) ನೋವು ಹೆಚ್ಚು
ಚಳಿಯ ಸಮಯದಲ್ಲಿ ದೇಹದ ನೋವು ಹೆಚ್ಚಾಗುತ್ತದೆ. ಈ ಸಮಯದಲ್ಲಿ ಆವರಿಸುವ ಸೋಮಾರಿತನದಿಂದ ದೈಹಿಕ (Physical) ಚಟುವಟಿಕೆಯಿಂದ ದೂರವುಳಿಯುವ ಜನರೇ ಹೆಚ್ಚು. ಈ ಸಮಯದಲ್ಲಿ ನೋವು ಸಹ ಅಧಿಕವಾಗುತ್ತದೆ. ಸಾಕಷ್ಟು ಜನರಿಗೆ ತಲೆನೋವು (Headache) ಸಹ ಬಾಧಿಸಬಹುದು. ವಿಟಮಿನ್ ಡಿ (Vitamin D) ಕೊರತೆ ಉಂಟಾದಾಗ, ನಮ್ಮ ದೇಹದ ಮೂಳೆಗಳು (Bones) ಸಮಸ್ಯೆಗೆ ತುತ್ತಾಗುತ್ತವೆ. ದೇಹ ಸರಿಯಾದ ಪ್ರಮಾಣದಲ್ಲಿ ಕ್ಯಾಲ್ಸಿಯಂ (Calcium) ಮತ್ತು ಫಾಸ್ಪರಸ್ ಅಂಶವನ್ನು ಹೀರಿಕೊಳ್ಳಲು ವಿಫಲವಾಗುತ್ತದೆ, ಪರಿಣಾಮವಾಗಿ, ಮಾಂಸಖಂಡಗಳು ದುರ್ಬಲವಾಗುತ್ತವೆ. ಹೀಗಾಗಿ, ಚಳಿಗಾಲದಲ್ಲಿ ಸೂರ್ಯನ ಬೆಳಕಿನಲ್ಲಿ ಸ್ವಲ್ಪ ಸಮಯವಾದರೂ ಇರುವುದು ಸೂಕ್ತ. ಸಾಮಾನ್ಯವಾಗಿ ದೇಹದ ನೋವು 30 ನಿಮಿಷದಿಂದ ಒಂದು ಗಂಟೆಯವರೆಗೆ ಇರುತ್ತದೆ. ಅದಕ್ಕೂ ಮಿಕ್ಕಿ ಕಂಡುಬಂದರೆ ಸೂಕ್ತ ತಪಾಸಣೆಗೆ ಒಳಗಾಗಬೇಕು.
Health Tips: ಬೆಳಗ್ಗೆ ಕಾಣಿಸಿಕೊಳ್ಳೋ ಕಾಲುನೋವು, ಕಾರಣವೇನು ತಿಳ್ಕೊಳ್ಳಿ
ನೋವಿಗೆ ಪರಿಹಾರವೇನು (Remedy)?
• ದಿನವೂ ಬೆಳಗ್ಗೆ ಹಾಸಿಗೆಯಲ್ಲಿ (Bed) ಇರುವಾಗಲೇ ಕೈಕಾಲುಗಳನ್ನು ಎತ್ತಿ, ಅಲ್ಲೇ ಸರಳವಾಗಿ ಮೈ ಬಿಗಿತ ಕಡಿಮೆ ಮಾಡಿಕೊಳ್ಳಲು ಯತ್ನಿಸಬೇಕು. ದೇಹ ಹಿಗ್ಗಿಸುವ (Stretch) ಚಲನೆಗಳನ್ನು (Movement) ಮಾಡಿದರೆ ನೋವು ಕಡಿಮೆ ಆಗುತ್ತದೆ.
• ತೀವ್ರ ಚಳಿಯಲ್ಲಿ (Cold) ಮಲಗಬಾರದು, ಬೆಚ್ಚಗಿರುವಂತೆ ನೋಡಿಕೊಂಡರೆ ನೋವಿನ ಬಾಧೆ ಕಡಿಮೆ ಆಗುತ್ತದೆ.
• ರೂಮ್ ಹೀಟರ್ (Room Heater) ಅಳವಡಿಸಿಕೊಳ್ಳುವುದು ಉತ್ತಮ ಐಡಿಯಾ.
• ಯಾವ ಕಾರಣಕ್ಕೂ ವ್ಯಾಯಾಮ, ವಾಕಿಂಗ್ (Walking) ತಪ್ಪಿಸಬಾರದು.
• ಹಾಸಿಗೆ ಕಂಫರ್ಟ್ (Comfort) ಆಗಿರಲಿ, ದಿಂಬು ಸಹ ಸೂಕ್ತವಾಗಿರಲಿ. ಕಾಲುಗಳ ಕೆಳಗೆ ದಿಂಬನ್ನು ಇರಿಸಿಕೊಳ್ಳಬಹುದು. ಒಂದು ಪಕ್ಕ ಅಥವಾ ಬೆನ್ನಿನ ಮೇಲೆ ಮಲಗಲು ಯತ್ನಿಸಬೇಕು.
• ಬಿಸಿ ನೀರಿನಲ್ಲಿ (Warm Water) ಸ್ನಾನ ಮಾಡಬಹುದು.
• ಆರೋಗ್ಯಕರ ಜೀವನಶೈಲಿ (Healty Lifestyle) ಇರಲಿ. ಕರಿದ ಪದಾರ್ಥಗಳು, ಸಿಹಿ ತಿನಿಸುಗಳ ಸೇವನೆಯಿಂದ ದೇಹದ ನೋವು ಹೆಚ್ಚುತ್ತದೆ.