ಹಣ್ಣುಆರೋಗ್ಯಕ್ಕೆ ಒಳ್ಳೆಯದು ಎಂಬುದೇನೂ ನಿಜ.ಹಾಗಂತ ಎಲ್ಲ ಹಣ್ಣುಎಲ್ಲರ ಆರೋಗ್ಯಕ್ಕೂ ಒಳ್ಳೆಯದು ಎಂದು ನಿರ್ಧರಿಸೋದು ತಪ್ಪು.ಉದಾಹರಣೆಗೆ ಕೆಲವು ಹಣ್ಣುಗಳಲ್ಲಿ ಸಕ್ಕರೆಯಂಶ ಹೆಚ್ಚಿರುತ್ತೆ,ಇಂಥ ಹಣ್ಣುಗಳು ಮಧುಮೇಹಿಗಳಿಗೆ ಖಂಡಿತಾ ಒಳ್ಳೆಯದ್ದಲ್ಲ.ವೈದ್ಯರು ಕೂಡ ಕಾಯಿಲೆ ಆಧಾರದಲ್ಲಿ ಕೆಲವು ಹಣ್ಣುಗಳನ್ನು ತಿನ್ನದಂತೆ ಎಚ್ಚರಿಸುತ್ತಾರೆ ಕೂಡ.ಇಂಥ ಕೆಲವೇ ಕೆಲವು ವಿರಳ ಪ್ರಕರಣಗಳಲ್ಲಿ ಮಾತ್ರ ಹಣ್ಣು ಸೇವನೆ ನಿಷಿದ್ಧ ಎಂಬುದು ಬಿಟ್ಟರೆ ಪೌಷ್ಟಿಕ ಆಹಾರಗಳ ಸಾಲಿನಲ್ಲಿ ಹಣ್ಣುಗಳು ಅಂಗ್ರಪಂಕ್ತಿಯಲ್ಲಿ ಕಾಣಿಸುತ್ತವೆ.ಇನ್ನುಬೊಜ್ಜು ಕರಗಿಸಿಕೊಂಡು ತೂಕ ಇಳಿಸಿಕೊಳ್ಳಬೇಕೆಂದು ಡಯಟ್‌ ಮೊರೆ ಹೋಗುವವರಿಗೆ ಆರೋಗ್ಯ ತಜ್ಞರು ನೀಡೋ ಪ್ರೋಟೀನ್‌ ಹಾಗೂ ಫೈಬರ್‌ ಹೆಚ್ಚಿರೋ ಆಹಾರಗಳ ಪಟ್ಟಿಯಲ್ಲಿ ತಾಜಾ ಹಣ್ಣುಗಳು ಕೂಡ ಸೇರಿರುತ್ತವೆ.ಹಾಗಂತ ನೀವು ನಿಮ್ಮ ಡಯಟ್‌ನಲ್ಲಿ ನಿಮಗಿಷ್ಟ ಬಂದ ಹಣ್ಣುಗಳನ್ನು ಸೇರಿಸಿಕೊಂಡು ತಿಂದ್ರೆ ತೂಕ ಇಳಿಯೋದಕ್ಕಿಂತ ಜಾಸ್ತಿಯಾಗೋ ಸಾಧ್ಯತೆ ಅಧಿಕ.

ರಾತ್ರಿ ತಡವಾಗಿ ಊಟ ಮಾಡುತ್ತೀರಾ? ಹಾಗಾದ್ರೆ ಆರೋಗ್ಯ ಜೋಪಾನ

ಹೈ ಕ್ಯಾಲೋರಿ  ಹಣ್ಣುಗಳಿಂದ  ತೂಕ ಹೆಚ್ಚಳ
ಕಡಿಮೆ ಕ್ಯಾಲೋರಿ ಅಥವಾ ಕಾರ್ಬೋಹೈಡ್ರೇಟ್ ಆಹಾರ ಸೇವಿಸುವ ಅನಿವಾರ್ಯತೆಗೆ ಸಿಕ್ಕವರು ಕೆಲವು ಹಣ್ಣುಗಳ ಪಥ್ಯ ಮಾಡುವುದು ಅಗತ್ಯ. ಕೆಲವೊಂದು ಹಣ್ಣುಗಳಲ್ಲಿ ಸಕ್ಕರೆ, ಗ್ಲುಕೋಸ್‌ ಹಾಗೂ ಫ್ರುಕ್ಟೋಸ್‌ ಪ್ರಮಾಣ ಹೆಚ್ಚಿದ್ದು,ಇವು ತೂಕ ಇಳಿಸಿಕೊಳ್ಳಲು ಬಯಸುತ್ತಿರೋರಿಗೆ ಹಿತಕರವಲ್ಲ ಎಂಬುದು ತಜ್ಞರ ಅಭಿಪ್ರಾಯ.

ಈ ಹಣ್ಣುಗಳಿಗೆ ನೋ ಅನ್ನಿ
ನೀವು ತೂಕ ಇಳಿಸಿಕೊಳ್ಳೋ ಪಣ ತೊಟ್ಟಿದ್ರೆ,ಅಪ್ಪಿತಪ್ಪಿಯೂ ನಿಮ್ಮ ಡಯಟ್‌ ಪ್ಲ್ಯಾನ್‌ನಲ್ಲಿ ಈ ಕೆಳಗಿನ 5 ಹಣ್ಣುಗಳಿಗೆ ಸ್ಥಾನ ನೀಡಬೇಡಿ.
1.ಬೆಣ್ಣೆಹಣ್ಣು
ಕ್ಯಾಲೋರಿ ಹೆಚ್ಚಿರೋ ಹಣ್ಣುಗಳಲ್ಲಿ ಬೆಣ್ಣೆಹಣ್ಣು ಅಥವಾ ಅವಕಡೊ ಕೂಡ ಒಂದು. 100 ಗ್ರಾಂ ಅವಕಡೊ ಹಣ್ಣಿನಲ್ಲಿ ಸುಮಾರು 160 ಕ್ಯಾಲೋರಿಯಿದೆ ಎಂದು ಹೇಳಲಾಗುತ್ತೆ.ಬೆಣ್ಣೆಹಣ್ಣಿನಲ್ಲಿ ಆರೋಗ್ಯಕರ ಫ್ಯಾಟ್‌ ಇದ್ದು, ಇದ್ರಿಂದ ಆರೋಗ್ಯದ  ಮೇಲೆ ಯಾವುದೇ ಕೆಟ್ಟ ಪರಿಣಾಮವುಂಟಾಗೋದಿಲ್ಲ ಎಂಬುದೇನೋ ನಿಜ. ಆದ್ರೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಈ ಹಣ್ಣನ್ನು ಸೇವಿಸಿದ್ರೆ ನಿಮ್ಮ ತೂಕದಲ್ಲಿ ಏರಿಕೆ ಕಂಡುಬರೋ ಸಾಧ್ಯತೆಯಿದೆ. ಹಾಗಂತ ಬೆಣ್ಣೆಹಣ್ಣನ್ನು ತಿನ್ನಲೇಬೇಡಿ ಎಂದು ಹೇಳುತ್ತಿಲ್ಲ. ಆದ್ರೆ ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ರೆ ನಿತ್ಯದ ಆಹಾರದಲ್ಲಿ ಸ್ವಲ್ಪ ದಿನಗಳ ಕಾಲ ಈ ಹಣ್ಣಿಗೆ ಸ್ಥಾನ ನೀಡದಿರೋದು ಉತ್ತಮ.ಒಂದು ವೇಳೆ ನಿಮಗೆ ತಿನ್ನಲೇಬೇಕೆನಿಸಿದ್ರೆ  ಅಲ್ಪ ಪ್ರಮಾಣದಲ್ಲಿ ತಿನ್ನಿ.

ನೆನೆಸಿದ ಬಾದಾಮಿಯನ್ನು ಪ್ರತಿದಿನ ಸೇವಿಸಿ

2.ದ್ರಾಕ್ಷಿ
ದ್ರಾಕ್ಷಿ ಆರೋಗ್ಯಕರ ಹಣ್ಣು ಅನ್ನೋದ್ರಲ್ಲಿ ಸಂಶಯವಿಲ್ಲ,ಆದ್ರೆ ಇದ್ರಲ್ಲಿ ಸಕ್ಕರೆ ಹಾಗೂ ಫ್ಯಾಟ್‌ ಅಧಿಕ ಪ್ರಮಾಣದಲ್ಲಿದೆ. ಹಾಗಾಗಿ ನೀವು ತೂಕ ಇಳಿಕೆಗಾಗಿ ಡಯಟ್‌ ಮಾಡೋತ್ತಿದ್ರೆ ದ್ರಾಕ್ಷಿಯಿಂದ ದೂರವಿರೋದು ಒಳ್ಳೆಯದು.100ಗ್ರಾಂ ದ್ರಾಕ್ಷಿಯಲ್ಲಿ 67 ಕ್ಯಾಲೋರಿ ಹಾಗೂ 16ಗ್ರಾಂ ಸಕ್ಕರೆಯಿದೆ. ಹೀಗಾಗಿ ನಿತ್ಯ ದ್ರಾಕ್ಷಿ ಸೇವಿಸಿದ್ರೆ ನಿಮ್ಮ ತೂಕದಲ್ಲಿ ಏರಿಕೆಯಾಗಬಹುದು. 

3.ಒಣಹಣ್ಣುಗಳು
ಕೆಲವರು ಡಯಟ್‌ನಲ್ಲಿದ್ದೇವೆ ಅನ್ನೋದನ್ನೇ ನೆಪ ಮಾಡಿಕೊಂಡು ಒಣಹಣ್ಣುಗಳನ್ನು ಸಿಕ್ಕಾಪಟ್ಟೆ ತಿನ್ನುತ್ತಾರೆ. ಒಣಹಣ್ಣುಗಳು ಪೌಷ್ಟಿಕಾಂಶಗಳ ಆಗರವಾಗಿದ್ದರೂ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದ್ರೆ ತೂಕ ಇಳಿಯೋ ಬದಲು ಹೆಚ್ಚೋದು ಗ್ಯಾರಂಟಿ. ಒಣ ದ್ರಾಕ್ಷಿಯಲ್ಲಿ ಹಸಿ ದ್ರಾಕ್ಷಿಗಿಂತ ಹೆಚ್ಚು ಕ್ಯಾಲೋರಿಯಿದೆ ಎಂದು ಹೇಳಲಾಗಿದೆ. ಒಂದು ಕಪ್‌ ಒಣದ್ರಾಕ್ಷಿಯಲ್ಲಿ 500 ಕ್ಯಾಲೋರಿಯಿದೆ. ಅದೇರೀತಿ ಗೋಡಂಬಿಯನ್ನು ಅಗತ್ಯಕ್ಕಿಂತ ಹೆಚ್ಚು ಸೇವಿಸಿದ್ರೂ ತೂಕ ಹೆಚ್ಚುತ್ತೆ. ಹೀಗಾಗಿ ಬೊಜ್ಜು ಕರಗಿಸಿಕೊಳ್ಳೋ ಆಸೆಯಿದ್ರೆ ಒಣಹಣ್ಣುಗಳ ಮೇಲಿನ ವ್ಯಾಮೋಹವನ್ನು ತುಸು ತಗ್ಗಿಸಿಕೊಳ್ಳೋದು ಒಳ್ಳೆಯದು.

4.ಬಾಳೆಹಣ್ಣು
ಇದು ಸಾಮಾನ್ಯವಾಗಿ ಎಲ್ಲರೂ ಇಷ್ಪಪಡೋ ಹಣ್ಣು ಆರೋಗ್ಯಕ್ಕೂ ಒಳ್ಳೆಯದೇ,ಆದ್ರೆ ಅಗತ್ಯಕ್ಕಿಂತ ಹೆಚ್ಚು ಬಾಳೆಹಣ್ಣು ತಿಂದ್ರೆ ಕೆಲವೇ ದಿನಗಳಲ್ಲಿ ತೂಕ ಹೆಚ್ಚುತ್ತೆ.ಇದಕ್ಕೆ ಕಾರಣ ಬಾಳೆಹಣ್ಣಿನಲ್ಲಿ ಕ್ಯಾಲೋರಿ ಹಾಗೂ ಸಕ್ಕರೆ ಪ್ರಮಾಣ ಹೆಚ್ಚಿರೋದು. ಒಂದು ಬಾಳೆಹಣ್ಣಿನಲ್ಲಿ 150 ಕ್ಯಾಲೋರಿ ಹಾಗೂ 375ಗ್ರಾಂ ಕಾರ್ಬೋಹೈಡ್ರೇಟ್ಸ್‌ ಇದೆ. ನೀವು ನಿತ್ಯ 2-3 ಬಾಳೆಹಣ್ಣು ತಿಂದ್ರೆ ತೂಕ ಹೆಚ್ಚೋ ಎಲ್ಲ ಸಾಧ್ಯತೆಗಳಿವೆ. ಹೀಗಾಗಿ ನೀವು ಕದಳಿಪ್ರಿಯರಾಗಿದ್ದು,ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ರೆ ದಿನಕ್ಕೆ ಒಂದು ಬಾಳೆಹಣ್ಣು ತಿನ್ನಿ, ಸಾಕು. 

5.ಮಾವು
ಮಾವು ಎಲ್ಲ ಕಾಲದಲ್ಲೂ ಸಿಗದಿದ್ರೂ, ಸೀಸನ್‌ ಸಮಯದಲ್ಲಿ ಅಗತ್ಯಕ್ಕಿಂತ ಹೆಚ್ಚು ಸೇವಿಸಿದ್ರೆ ತೂಕ ತುಸು ಹೆಚ್ಚುತ್ತದೆ. ಹೀಗಾಗಿ ಕ್ಯಾಲೋರಿ ಹಾಗೂ ಸಕ್ಕರೆ ಪ್ರಮಾಣ ಹೆಚ್ಚಿರೋ ಹಣ್ಣುಗಳನ್ನು ಅಗತ್ಯಕ್ಕಿಂತ ಹೆಚ್ಚು ತಿಂದ್ರೆ ತೂಕ ಇಳಿಸಿಕೊಳ್ಳಲು ನೀವು ಮಾಡುತ್ತಿರೋ ಡಯಟ್‌ ಎಂಬ ಕಠಿಣ ವ್ರತಕ್ಕೆ ಹಿನ್ನಡೆಯಾಗೋ ಎಲ್ಲ ಸಾಧ್ಯತೆಯೂ ಇದೆ. 

ತೂಕ ಇಳಿಸಿಕೊಳ್ಳಬೇಕಾ? ಈ ಫುಡ್‌ ಕಾಂಬಿನೇಷನ್‌ ಟ್ರೈ ಮಾಡಿ !

ಹಣ್ಣಿನಲ್ಲಿರೋ ಪೋಷಕಾಂಶಗಳನ್ನು ಕಡೆಗಣಿಸುವಂತಿಲ್ಲ
ಕಾರ್ಬೋಹೈಡ್ರೇಟ್ ಕಡಿಮೆ ಪ್ರಮಾಣದಲ್ಲಿರೋ ಡಯಟ್ ಅನುಸರಿಸೋರು ಇಂಥ ಕೆಲವು ಹಣ್ಣುಗಳಿಂದ ದೂರ ಉಳಿಯೋದು ಉತ್ತಮ. ಅದೇನೇ ಇರಲಿ, ಹಣ್ಣುಗಳಲ್ಲಿ ಜೀವಸತ್ವಗಳು,ಲವಣಾಂಶಗಳು ಹಾಗೂ ನಾರಿನಾಂಶ ಅಧಿಕ ಪ್ರಮಾಣದಲ್ಲಿರುವುದಂತೂ ನಿಜ. ಕೆಲವರಿಗೆ ಹಣ್ಣಿಗಿಂತ ಹಣ್ಣಿನ ಜ್ಯೂಸ್  ಅಂದ್ರೆ ಇಷ್ಟ.ಇಂಥವರು ಗಮನಿಸಲೇಬೇಕಾದ ವಿಷಯವೇನೆಂದರೆ ಹಣ್ಣಿನ ಜ್ಯೂಸ್‍ನಲ್ಲಿ ನಾರಿನಾಂಶ ಇರುವುದಿಲ್ಲ,ಕೆಲವೊಂದು ಜೀವಸತ್ವಗಳು ಕೂಡ ನಾಶವಾಗಿರುತ್ತವೆ.ಆದಕಾರಣ ಹಣ್ಣಿನ ಜ್ಯೂಸ್ ಬದಲು ತಾಜಾ ಹಣ್ಣನ್ನು ಸೇವಿಸುವುದೇ ಉತ್ತಮ.ಕೆಲವೊಂದು ಹಣ್ಣುಗಳಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣ ತುಂಬಾ ಕಡಿಮೆಯಿದೆ. ಉದಾಹರಣೆಗೆ ಕಲ್ಲಂಗಡಿ ಹಣ್ಣು, ಸ್ಟ್ರಾಬೆರಿ. ಹೀಗಾಗಿ ಕಡಿಮೆ ಪ್ರಮಾಣದ ಕಾರ್ಬೋಹೈಡ್ರೇಟ್ ತಿನ್ನಬೇಕು ಎಂಬ ಅನಿವಾರ್ಯತೆ ಹೊಂದಿರೋರು ಈ ಹಣ್ಣುಗಳನ್ನು ಧಾರಾಳವಾಗಿ ತಿನ್ನಬಹುದು.