ವಾರ್ಷಿಕ 40 ಲಕ್ಷ ರೂ. ಸಂಬಳ ಪಡೆಯುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರ್, ಐಟಿ ಲೇ-ಆಫ್‌ನಿಂದಾಗಿ ಕೆಲಸ ಕಳೆದುಕೊಂಡಿದ್ದಾರೆ. ತಮ್ಮ 1.4 ಕೋಟಿ ರೂ. ಬೆಲೆಯ ಫ್ಲಾಟ್‌ನ 95,000 ರೂ. ಇಎಂಐ ಪಾವತಿಸಲು, ಅವರು ಈಗ ರಾಪಿಡೋ ಬೈಕ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. 

ನವದೆಹಲಿ (ಏ.11): ಒಂದು ಕಾಲದಲ್ಲಿ ಕೈತುಂಬಾ ಸಂಬಳ, ವಾರ್ಷಿಕ 40 ಲಕ್ಷ ರೂಪಾಯಿಯ ಪ್ಯಾಕೇಜ್, ಐಷಾರಾಮಿ ಜೀವನ.. ಇದೆಲ್ಲವೂ ಆ ಸಾಫ್ಟ್‌ವೇರ್ ಇಂಜಿನಿಯರ್ ಪಾಲಿಗೆ ಕನಸಿನಂತಿತ್ತು. ಆದರೆ, ವಿಧಿಯಾಟ ಮತ್ತು ಐಟಿ ವಲಯದ ಲೇ-ಆಫ್ (ಉದ್ಯೋಗ ಕಡಿತ) ಆತನ ಬದುಕನ್ನೇ ತಲೆಕೆಳಗಾಗಿಸಿದೆ. ಅಂದು ಹೆಮ್ಮೆಯಿಂದ ಖರೀದಿಸಿದ್ದ ಕೋಟಿ ಬೆಲೆಯ ಫ್ಲಾಟ್, ಇಂದು ಆತನ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2024ರಲ್ಲಿ ತನ್ನ ವೃತ್ತಿಜೀವನದ ಉತ್ತುಂಗದಲ್ಲಿದ್ದ ಈ ಟೆಕ್ಕಿ, ದೆಹಲಿ ಸಮೀಪದ NCR ವ್ಯಾಪ್ತಿಯ 'ಪ್ರತೀಕ್ ಗ್ರ್ಯಾಂಡ್ ಸಿಟಿ'ಯಲ್ಲಿ 1.4 ಕೋಟಿ ರೂಪಾಯಿ ಬೆಲೆಯ 3BHK ಫ್ಲಾಟ್ ಖರೀದಿಸಿದ್ದರು. ಆಗ ತಿಂಗಳಿಗೆ ಬರುತ್ತಿದ್ದ ಲಕ್ಷಾಂತರ ರೂಪಾಯಿ ಸಂಬಳದ ಮುಂದೆ 95,000 ರೂಪಾಯಿ ಇಎಂಐ (EMI) ದೊಡ್ಡದಾಗಿ ಕಂಡಿರಲಿಲ್ಲ. ಆದರೆ, ಹಠಾತ್ತಾಗಿ ಕೆಲಸ ಕಳೆದುಕೊಂಡ ಮೇಲೆ ಕಳೆದ ಮೂರು ತಿಂಗಳಿನಿಂದ ಅವರ ಬದುಕು ಬೀದಿಗೆ ಬಂದಿದೆ. ಸಂಬಳ ನಿಂತರೂ ಬ್ಯಾಂಕ್‌ನ ಸಾಲದ ಕಂತು ಮಾತ್ರ ನಿಲ್ಲುತ್ತಿಲ್ಲ.

ಐಟಿ ಕಚೇರಿಯಿಂದ ರಾಪಿಡೋ ಬೈಕ್‌ವರೆಗೆ..

ಮನೆ ಹರಾಜಾಗುವುದನ್ನು ತಪ್ಪಿಸಲು ಮತ್ತು ಸಾಲದ ಕಂತು ಪಾವತಿಸಲು ಬೇರೆ ದಾರಿ ಕಾಣದ ಈ ಮಾಜಿ ಟೆಕ್ಕಿ, ಈಗ ಅನಿವಾರ್ಯವಾಗಿ 'ರಾಪಿಡೋ' (Rapido) ಬೈಕ್ ಟ್ಯಾಕ್ಸಿ ಚಾಲಕನಾಗಿ ರಸ್ತೆಗಿಳಿದಿದ್ದಾರೆ. ಎಸಿ ಆಫೀಸ್‌ನಲ್ಲಿ ಕುಳಿತು ಕೋಡಿಂಗ್ ಮಾಡುತ್ತಿದ್ದ ಕೈಗಳು ಈಗ ಟ್ರಾಫಿಕ್ ನಡುವೆ ಬೈಕ್ ಹ್ಯಾಂಡಲ್ ಹಿಡಿದಿವೆ. ಪ್ರತಿ ಟ್ರಿಪ್‌ನಿಂದ ಬರುವ ಹತ್ತು-ಇಪ್ಪತ್ತು ರೂಪಾಯಿಗಳನ್ನು ಒಟ್ಟುಗೂಡಿಸಿ ಮಾಸಿಕ 95 ಸಾವಿರದ ಕಂತು ಕಟ್ಟಲು ಅವರು ಹರಸಾಹಸ ಪಡುತ್ತಿದ್ದಾರೆ.

"ಒಂದು ಕಾಲದಲ್ಲಿ ಆ ಫ್ಲಾಟ್ ಖರೀದಿಸಿದಾಗ ಅವರು ಬಹಳ ಉತ್ಸಾಹದಲ್ಲಿದ್ದರು. ಆದರೆ ಈಗ ಅದೇ ಮನೆ ಅವರನ್ನು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುವಂತೆ ಮಾಡಿದೆ," ಎಂದು ಅವರ ಸ್ನೇಹಿತರೊಬ್ಬರು ನೋವಿನಿಂದ ಹೇಳಿಕೊಂಡಿದ್ದಾರೆ. ಕೆಲಸ ಹುಡುಕುವ ಅನಿಶ್ಚಿತತೆ ಮತ್ತು ಬೆಟ್ಟದಂತಿರುವ ಸಾಲದ ನಡುವೆ ಸಿಲುಕಿರುವ ಅವರ ಮಾನಸಿಕ ಸ್ಥಿತಿ ಈಗ ಹದಗೆಟ್ಟಿದೆ.

ಐಟಿ ವಲಯದ ಕಟು ವಾಸ್ತವ

ಈ ಘಟನೆಯು ಐಟಿ ವಲಯದಲ್ಲಿ ಸಿಗುವ ಭಾರಿ ಸಂಬಳದ ಪ್ಯಾಕೇಜ್‌ಗಳು ನೀಡುವ 'ಸುಳ್ಳು ಭದ್ರತೆ'ಯನ್ನು ಎತ್ತಿ ತೋರಿಸುತ್ತಿದೆ. ವಾರ್ಷಿಕ ಲಕ್ಷಾಂತರ ರೂಪಾಯಿ ಗಳಿಸಿದರೂ, ಒಂದು ತಿಂಗಳ ಆದಾಯ ನಿಂತರೆ ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಸ್ಥಿತಿ ಹೇಗೆ ಕುಸಿಯಬಹುದು ಎಂಬುದಕ್ಕೆ ಈ ಟೆಕ್ಕಿಯ ಕಥೆಯೇ ಸಾಕ್ಷಿ. ದೀರ್ಘಕಾಲದ ಸಾಲಗಳನ್ನು ಮಾಡುವಾಗ ಭವಿಷ್ಯದ ಅನಿಶ್ಚಿತತೆಯನ್ನು ಗಮನದಲ್ಲಿಟ್ಟುಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಈ ಘಟನೆ ನಮಗೆ ಮನವರಿಕೆ ಮಾಡಿಕೊಡುತ್ತಿದೆ.

Scroll to load tweet…