Asianet Suvarna News Asianet Suvarna News

ಮಗನನ್ನೇ ಕೊಂದ ಲೇಡಿ ಸಿಇಒ; ತಾಯಿಯರೇಕೆ ಮಕ್ಕಳನ್ನು ಕೊಲ್ಲುತ್ತಾರೆ?

ಬೆಂಗಳೂರಿನ ಎಐ ಸ್ಟಾರ್ಟಪ್ ಕಂಪನಿಯೊಂದರ ಸಿಇಒ ಒಬ್ಬಾಕೆ ನಾಲ್ಕು ವರ್ಷದ ತನ್ನ ಮಗುವನ್ನೇ ಕೊಂದಿದ್ದಾಳೆ. ತಾಯಂದಿರು ಮಕ್ಕಳನ್ನು ಕೊಲ್ಲುವುದು ಹೊಸತಲ್ಲ. ಆದರೆ ತಾಯಿಯರೇಕೆ ಮಕ್ಕಳನ್ನು ಕೊಲ್ಲುತ್ತಾರೆ?

 

start up seo kills four year child at apartment in goa why mothers kill their children
Author
First Published Jan 10, 2024, 12:57 PM IST | Last Updated Jan 10, 2024, 12:57 PM IST

ಬೆಂಗಳೂರಿನಲ್ಲಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟ್ ಅಪ್ ಮೈಂಡ್‌ಫುಲ್ ಎಐ ಲ್ಯಾಬ್‌ನ ಸಿಇಒ ಸುಚನಾ ಸೇಠ್ ಎಂಬಾಕೆ ತನ್ನ ಮಗನನ್ನೇ ಗೋವಾದಲ್ಲಿ ಕೊಂದು, ಬ್ಯಾಗ್‌ನಲ್ಲಿ ಶವವನ್ನು ಹಾಕಿಕೊಂಡು ಬರುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ವಿಚಾರಿಸಿದಾಗ ಸತ್ಯ ಹೊರಬಿದ್ದಿದೆ. ತನ್ನ ಹಿಂದಿನ ಗಂಡನ ಮೇಲಿದ್ದ ಸಿಟ್ಟು ಆಕ್ರೋಶಗಳೇ ಈ ಕೊಲೆಗೆ ಕಾರಣ ಎಂದು ಗೊತ್ತಾಗಿದೆ. ಆಕೆಗೆ ಈಗ ಬೇರೊಬ್ಬ ಗಂಡನಿದ್ದಾನೆ. ಎರಡನೇ ಮದುವೆಯಲ್ಲಿ ಇನ್ನೊಂದು ಮಗುವಿದೆ.ಈಗ ಕೊಂದಿರುವುದು ಮೊದಲ ಮದುವೆಯಲ್ಲಿ ಹುಟ್ಟಿದ ಮಗನನ್ನು. ಆತನನ್ನು ಕೊಲ್ಲುವ ಮೂಲಕ ಮಾಜಿ ಗಂಡನ ಮೇಲೆ ಸೇಡು ತೀರಿಸಿಕೊಂಡಿದ್ದೇನೆ ಎಂದು ಆಕೆ ಭಾವಿಸಿಕೊಂಡಿದ್ದಾಳೆ. 

ತಾಯಿಯರು ಮಕ್ಕಳನ್ನು ಕೊಲ್ಲುವುದು ಹೊಸತಲ್ಲ. ಇತಿಹಾಸದುದ್ದಕ್ಕೂ ಇಂಥ ಘಟನೆಗಳು ನಡೆದಿವೆ. ತಂದೆಯರೂ ಮಕ್ಕಳನ್ನು ಕೊಲ್ಲುವುದುಂಟು. ಇದಕ್ಕೆ ನಾನಾ ಕಾರಣಗಳು. ಮನೋವೈದ್ಯಕೀಯ ಭಾಷೆಯಲ್ಲಿ ಇದನ್ನು 'ಫಿಲಿಸೈಡ್' (filicide) ಎಂದು ಕರೆಯುತ್ತಾರೆ. ತಾಯಿಯರು ಮಾಡುವ ಕೊಲೆ ಮ್ಯಾಟರ್ನಲ್ ಫಿಲಿಸೈಡ್. ಹೌದು, ಹೀಗೆ ಕೊಲೆ ಮಾಡುವ ತಾಯಿಯರ ಮನದಲ್ಲಿ ಯಾವ ಪಶ್ಚಾತ್ತಾಪವೂ ಇರುವುದಿಲ್ಲವೇ? ''ಕೆಟ್ಟ ಮಗ ಹುಟ್ಟಬಹುದು, ಆದರೆ ಕೆಟ್ಟ ತಾಯಿ ಹುಟ್ಟಲಾರಳು'' ಶಂಕರಾಚಾರ್ಯರು ಹೇಳಿದ್ದು ಸುಳ್ಳಾಗಿಹೋಯಿತೇ?

ಫಿಲಿಸೈಡ್ ಕುರಿತಾಗಿ ವಿಶ್ವದ ಮನೋವೈದ್ಯಕೀಯ ತಜ್ಞರು ಹಲವಾರು ಕಾರಣಗಳನ್ನು ಗುರುತಿಸುತ್ತಾರೆ. ಈ ಕೊಲೆಗಾತಿ ತಾಯಂದಿರು ಖಿನ್ನತೆ, ಮನೋರೋಗ ಹಿನ್ನೆಲೆ ಹೊಂದಿದವರು. ಆತ್ಮಹತ್ಯೆಯ ಆಲೋಚನೆಗಳನ್ನು ಹೊಂದಿರುತ್ತಾರೆ. ಈ ದುಷ್ಕರ್ಮಿಗಳು ಐದು ಪ್ರಮುಖ ಉದ್ದೇಶಗಳನ್ನು ಹೊಂದಿರುತ್ತಾರೆ: 

1) ತಾಯಿ ತನ್ನ ಮಗುವನ್ನು ಪ್ರೀತಿಯಿಂದಲೇ ಕೊಲ್ಲುತ್ತಾಳೆ. ಯಾಕೆಂದರೆ ಮರಣದಿಂದಲೇ ಈ ಮಗುವಿನ ಹಿತ ಎಂದು ಆಕೆ ಗಾಢವಾಗಿ ನಂಬುತ್ತಾಳೆ. ಉದಾಹರಣೆಗೆ, ಆತ್ಮಹತ್ಯೆ ಮಾಡಿಕೊಳ್ಳುವ ತಾಯಿ ತನ್ನ ಮಗು ಅನಾಥವಾಗಿ  ಅಸಹನೀಯ ಜಗತ್ತನ್ನು ಎದುರಿಸುವುದು ಬೇಡ ಎಂದು ಬಯಸಿ ಮೊದಲು ಮಗುವನ್ನು ಸಾಯಿಸುತ್ತಾಳೆ. 

2) ತೀವ್ರವಾದ ಮನೋವಿಕೃತ ಫಿಲಿಸೈಡ್‌ನಲ್ಲಿ, ಮನೋವಿಕೃತ ಅಥವಾ ಭ್ರಮೆಯ ತಾಯಿಯು ತನ್ನ ಮಗುವನ್ನು ಯಾವುದೇ ಗ್ರಹಿಸಬಹುದಾದ ಉದ್ದೇಶವಿಲ್ಲದೆ ಕೊಲ್ಲುತ್ತಾಳೆ. ಉದಾಹರಣೆಗೆ, ಚಿತ್ತವಿಕಲತೆಯ ಹಂತದಲ್ಲಿ ಅಪ್ರಜ್ಞೆಯ ಭ್ರಮೆಗಳನ್ನು ಅನುಸರಿಸಿ ಮಗುವನ್ನು ಕೊಲ್ಲಬಹುದು.

3) ಮಗುವನ್ನು ತೀವ್ರ ಹಿಂಸೆಗೆ ಒಳಪಡಿಸಿದಾಗ, ಅಬ್ಯೂಸ್ ಮಾಡಿದಾಗ, ಕೊಲ್ಲುವ ಉದ್ದೇಶವಿಲ್ಲದೇ ಇದ್ದರೂ ಸಾವು ಸಂಭವಿಸಬಹುದು. ಇದು ಕುಡುಕ ತಾಯಂದಿರಲ್ಲಿ, ಕೌಟುಂಬಿಕ ದೌರ್ಜನ್ಯ ಎದುರಿಸುತ್ತಿರುವ ತಾಯಂದಿರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. 

4) ಅನಪೇಕ್ಷಿತವಾಗಿ ಮಗು ಜನಿಸಿದರೆ, ಇದು ತನ್ನ ಜೀವನಕ್ಕೆ ಅಡ್ಡಿ ಎನಿಸಿದರೆ ತಾಯಿ ಅಂತ ಮಗುವನ್ನು ಸಾಯಿಸಬಹುದು. ಅಥವಾ ಸಾಯುವಂಥ ಪರಿಸ್ಥಿತಿಯಲ್ಲಿ ಬಿಟ್ಟುಹೋಗಬಹುದು. ಆಗಷ್ಟೆ ಜನಿಸಿದ ಮಗುವನ್ನು ತಿಪ್ಪೆಗೆಸೆದು ಹೋಗುವ ತಾಯಂದಿರಲ್ಲಿ ಈ ಗುಣವನ್ನು ಕಾಣಬಹುದು. 

ಗೋವಾದಲ್ಲಿ ಮಗು ಕೊಂದ ಬೆಂಗಳೂರು ಸ್ಟಾರ್ಟಪ್‌ ಸಂಸ್ಥಾಪಕಿ ಅರೆಸ್ಟ್: ಶವದ ಸಮೇತ ಕರ್ನಾಟಕದಲ್ಲಿ ಸಿಕ್ಕಿಬಿದ್ದ ಪಾತಕಿ!

5) ಅತ್ಯಂತ ಅಪರೂಪದಲ್ಲಿ, ಸಂಗಾತಿಯ ಸೇಡು ತೀರಿಸಿಕೊಳ್ಳಲು ಮಗುವನ್ನು ತಾಯಿಯು ಕೊಲ್ಲಬಹುದು. ಇದು ಆ ಮಗುವಿನ ತಂದೆಗೆ ಭಾವನಾತ್ಮಕವಾಗಿ ಹಾನಿ ಮಾಡಲು ಮಾಡುವ ಕೃತ್ಯ. ಸದ್ಯ ಕಿಲ್ಲರ್ ಸಿಇಒ ವಿಚಾರದಲ್ಲಿ ಆಗಿರುವುದು ಅದೇ. ತನ್ನ ಮಾಜಿ ಗಂಡನ ಮೇಲೆ ಯಾವುದೋ ಕಾರಣಕ್ಕಾಗಿ ಸೇಡು ತೀರಿಸಿಕೊಳ್ಳಲು ಬಯಸಿದ್ದ ಆಕೆ ಮಗುವನ್ನು ಸಾಯಿಸಿದ್ದಾಳೆ. 

ಅಮೆರಿಕದಲ್ಲಿ ನಡೆದ ಒಂದು ರಿಸರ್ಚ್ ಪ್ರಕಾರ ಅಲ್ಲಿ ಪ್ರತಿವರ್ಷ ಸುಮಾರು 3000 ಮಕ್ಕಳನ್ನು ಹೀಗೆ ಹೆತ್ತವರು ಸಾಯಿಸುತ್ತಾರಂತೆ. ಇದರಲ್ಲಿ ತಂದೆಯರ ಪಾತ್ರ ದೊಡ್ಡದು. ಹೆಚ್ಚಿನ ತಂದೆಯರು ಮಲಮಕ್ಕಳನ್ನು, ಅದರಲ್ಲೂ ಗಂಡಮಕ್ಕಳನ್ನು ಹೆಚ್ಚಾಗಿ ಸಾಯಿಸುತ್ತಾರಂತೆ. ತಾಯಿಯರು ಹೆಣ್ಣುಮಕ್ಕಳನ್ನು ಕೊಲ್ಲುವುದು ಹೆಚ್ಚಂತೆ. ಅಂತೂ ಮುಂದುವರಿದ ದೇಶಗಳನ್ನೂ ಈ ಕ್ರೌರ್ಯ ಬಿಟ್ಟಿಲ್ಲ ಎಂದಾಯಿತು. ಭಾರತದಲ್ಲಿ ಈ ಬಗ್ಗೆ ಯಾವುದೇ ಸಮೀಕ್ಷೆ ನಡೆದಿಲ್ಲ. ನಡೆದರೆ ಇಲ್ಲೂ ಗಾಬರಿಗೊಳಿಸುವ ಅಂಕಿಸಂಕಿಗಳು ಬಯಲಾಗುವುದು ಖಂಡಿತಾ. 

73ರ ಮಹಿಳೆ ಗರ್ಭದಲ್ಲಿ 35 ವರ್ಷದ 'ಮಗು'! ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದಾಗ ಬಯಲಾದ ರಹಸ್ಯ
 

Latest Videos
Follow Us:
Download App:
  • android
  • ios