ಗಾಯ ಅಥವಾ ಮೊಡವೆ ತುರಿಸಿಕೊಳ್ಳುವುದು ಹಾನಿಕಾರಕವಲ್ಲ ಎಂದು ಸಂಶೋಧಕರು ಹೇಳಿದ್ದಾರೆ. ಇಲಿಗಳ ಮೇಲೆ ನಡೆಸಿದ ಅಧ್ಯಯನದ ಪ್ರಕಾರ, ತುರಿಸುವುದರಿಂದ ಹಾನಿಕಾರಕ ಬ್ಯಾಕ್ಟೀರಿಯಾ ಕಡಿಮೆಯಾಗುತ್ತದೆ. ತುರಿಕೆ ನೋವು ಕಡಿಮೆ ಮಾಡಿ, ಖುಷಿಯ ಹಾರ್ಮೋನ್ ಸಿರೋಟೋನಿನ್ ಬಿಡುಗಡೆ ಮಾಡುತ್ತದೆ. ಮಾಸ್ಟ್ ಕೋಶಗಳು ಬ್ಯಾಕ್ಟೀರಿಯಾದಿಂದ ರಕ್ಷಿಸುತ್ತವೆ. ಆದರೆ, ಅತಿಯಾದ ತುರಿಕೆ ಒಳ್ಳೆಯದಲ್ಲ. ಇದು ಸಂಶೋಧನೆಯ ಹಂತದಲ್ಲಿದ್ದು, ಮನುಷ್ಯರ ಮೇಲೆ ಪ್ರಯೋಗದ ನಂತರವಷ್ಟೇ ಖಚಿತವಾಗಿ ಹೇಳಲು ಸಾಧ್ಯ.

ಹಾರ್ಟ್ ಅಂತಾರಲ್ಲ ಅದಕ್ಕೆ ಕೈ ಹಾಕಿ, ಪರ ಪರ ಅಂತ ಕೆರ್ಕೊಂಡು ಬಿಟ್ಟೆ ಕಣ್ರಿ ಅಂತ ಮುಂಗಾರು ಮಳೆ (Mungaru Male) ಯಲ್ಲಿ ನಟ ಗಣೇಶ್ ಹೇಳಿದ್ದ ಡೈಲಾಗ್ ಈಗ್ಲೂ ಫೇಮಸ್. ಅದು ಸಿನಿಮಾ ಡೈಲಾಗ್. ರಿಯಲ್ ನಲ್ಲಿ ಹಾರ್ಟ್ ಇರಲಿ ಸಣ್ಣ ಗಾಯ (injury) ಕೆರ್ಕೊಂಡ್ರೂ ಹುಣ್ಣಾಗುತ್ತೆ ಅನ್ನೋದು ನಮ್ಮೆಲ್ಲರ ನಂಬಿಕೆ. ಸೊಳ್ಳೆ ಕಚ್ಚಿದಾಗ ಇಲ್ಲವೆ ಮೊಡವೆಯಾದಾಗ ಅದನ್ನು ತುರಿಸಿಕೊಳ್ಬೇಕು ಅನ್ನಿಸೋದು ಸಹಜ. ದೇಹದ ಯಾವುದೋ ಭಾಗದಲ್ಲಿ ತುರಿಕೆ (scratching) ಆದಾಗ ಅದನ್ನು ತಡೆಯೋದು ಕಷ್ಟ. ಬೇಡ ಅಂದ್ರೂ ಕೈ ಅಲ್ಲಿಗೆ ಹೋಗುತ್ತೆ. ಅದನ್ನು ಕೆರ್ದುಕೊಳ್ತೇವೆ. ಹೀಗೆ ಮಾಡಿದಾಗ ನೋವು ಕಡಿಮೆ ಆದಂತೆ ಭಾಸವಾಗುತ್ತೆ. ಆದ್ರೆ ಉರುಗು ಟಚ್ ಆಗಿ ಗಾಯ ದೊಡ್ಡದಾಗುತ್ತೆ.

ಮಕ್ಕಳು ಸಣ್ಣ ಗಾಯವನ್ನು ತುರಿಸ್ಕೊಂಡು ದೊಡ್ಡದು ಮಾಡ್ಕೊಳ್ಳೋದು ಹೆಚ್ಚು. ಇನ್ನೇನು ಗಾಯ ಬಾಡ್ತಿದೆ ಅನ್ನೋ ಟೈಂನಲ್ಲಿ ತುರಿಸ್ಕೊಂಡು ಮತ್ತೆ ಹಸಿ ಮಾಡ್ಕೊಳ್ತಾರೆ. ರಕ್ತ ಬರೋದು ಇದೆ. ಗಾಯ ದೊಡ್ಡದಾದಾಗ ಮಕ್ಕಳಿಗೆ ನಾವು ಹಾಗೆ ಮಾಡ್ಬೇಡಿ ಅಂತ ಬೈತೇವೆ. ಆದ್ರೀಗ ಸಂಶೋಧಕರು (researcher), ಮೊಡವೆ (acne) ಅಥವಾ ಗಾಯವನ್ನು ಕರೆದುಕೊಂಡ್ರೆ ತಪ್ಪೇನಿಲ್ಲ ಎನ್ನುತ್ತಿದ್ದಾರೆ. ಮೊಡವೆ, ಗಾಯವನ್ನು ತುರಿಸಿಕೊಳ್ಳೋದ್ರಿಂದ್ಲೂ ಲಾಭವಿದೆ ಅನ್ನೋದು ಅವ್ರ ವಾದ. ಸಂಶೋಧಕರು ಇಲಿಗಳ ಮೇಲೆ ಪ್ರಯೋಗ ನಡೆಸಿದ್ದಾರೆ. ಅವ್ರ ಪ್ರಕಾರ, ಗಾಯದ ಮೇಲೆ ತುರಿಸಿಕೊಂಡಾಗ ಹಾನಿಕಾರಕ ಬ್ಯಾಕ್ಟೀರಿಯಾ ಕಡಿಮೆಯಾಗುತ್ತದೆ. ಗಾಯವಾದಾಗ ತುರಿಸಿಕೊಳ್ಳಲು ಎಲ್ಲೂ ಇಷ್ಟಪಡ್ತಾರೆ. ನೀವು ಗಾಯವನ್ನು ತುರಿಸಿಕೊಂಡಾಗ ನೋವಾಗುತ್ತದೆ. ಈ ನೋವು, ತುರಿಕೆಯನ್ನು ಕಡಿಮೆ ಮಾಡುತ್ತದೆ. ತಜ್ಞರ ಪ್ರಕಾರ ನೋವು ಖುಷಿಯ ಹಾರ್ಮೋನ್ ಸಿರೋಟೋನಿನ್ ಬಿಡುಗಡೆ ಮಾಡುತ್ತದೆ. 

ರಾತ್ರಿ 8.30ರ ಮುನ್ನ ಈ ಕೆಲಸ ಮಾಡ್ಬೇಡಿ… ಹೃದಯದ ಸಮಸ್ಯೆ ಹೆಚ್ಚುತ್ತೆ!

ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದ ಚರ್ಮ ವಿಜ್ಞಾನ ಮತ್ತು ರೋಗನಿರೋಧಕ ಶಕ್ತಿಯ ಪ್ರಾಧ್ಯಾಪಕ ಮತ್ತು ಹಿರಿಯ ಲೇಖಕ ಡೇನಿಯಲ್ ಕಪ್ಲಾನ್ ಅವರ ಸಂಶೋಧನಾ ಪ್ರಬಂಧವು ಇತ್ತೀಚೆಗೆ ಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಇಲಿಗಳ ಮೇಲೆ ನಡೆಸಿದ ಅಧ್ಯಯನವು ಹಲವು ವಿಷಯಗಳನ್ನು ಬಹಿರಂಗಪಡಿಸಿದೆ. ತುರಿಕೆಯಿಂದ ನೋವನ್ನು ಗ್ರಹಿಸುವ ನರಕೋಶಗಳು ಮಾಸ್ಟ್ ಕೋಶಗಳನ್ನು ಸಕ್ರಿಯಗೊಳಿಸುವ P ಎಂಬ ರಾಸಾಯನಿಕವನ್ನು ಬಿಡುಗಡೆ ಮಾಡುತ್ತವೆ. ಮಾಸ್ಟ್ ಕೋಶಗಳು ಪ್ರತಿರಕ್ಷಣಾ ಕೋಶಗಳಾಗಿವೆ. ಅವು ಅಲರ್ಜಿ ವಿರುದ್ಧ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತವೆ. ರಾಸಾಯನಿಕಗಳಲ್ಲಿ ಹಿಸ್ಟಮೈನ್ ಸೇರಿದೆ. ಇದು ಅಲರ್ಜಿ ಸ್ಥಳದಲ್ಲಿ ಊತ ಮತ್ತು ಕೆಂಪು ಬಣ್ಣವನ್ನುಂಟು ಮಾಡುತ್ತದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ. 

ಪುರುಷರೇ ದೌರ್ಬಲ್ಯ ನಿವಾರಣೆಗಾಗಿ ವಿಳ್ಯದೆಲೆಯಲ್ಲಿ ಈ 4 ಪದಾರ್ಥ ಸೇರಿಸಿ ತಿನ್ನಿ

ತುರಿಕೆಯಿಂದ ಇತರ ಲಾಭ : ಮಾಸ್ಟ್ ಕೋಶಗಳು ಬ್ಯಾಕ್ಟೀರಿಯಾ ಮತ್ತು ಇತರ ರೋಗಕಾರಕಗಳಿಂದ ರಕ್ಷಿಸುತ್ತವೆ. ಚರ್ಮವನ್ನು ತುರಿಸಿಕೊಳ್ಳೋದ್ರಿಂದ ಸ್ಟ್ಯಾಫಿಲೋಕೊಕಸ್ ಔರಿಯಸ್ ಪ್ರಮಾಣ ಕಡಿಮೆಯಾಗುತ್ತದೆ. ಸ್ಟ್ಯಾಫ್ ಎಂದೂ ಕರೆಯಲ್ಪಡುವ ಈ ಬ್ಯಾಕ್ಟೀರಿಯಾವು ಚರ್ಮದ ಸೋಂಕುಗಳಿಗೆ ಸಾಮಾನ್ಯ ಕಾರಣವಾಗಿರುತ್ತವೆ. ನ್ಯುಮೋನಿಯಾ ಮತ್ತು ಮೂಳೆ ಸೋಂಕುಗಳಿಗೆ ಇವು ಕಾರಣವಾಗುತ್ತವೆ. ಅಧ್ಯಯನದ ಪ್ರಕಾರ, ಸ್ಟ್ಯಾಫಿಲೋಕೊಕಸ್ ಔರೆಸ್‌ನಿಂದ ರಕ್ಷಿಸಲು ತುರಿಕೆ ಸಹಾಯ ಮಾಡುತ್ತದೆ ಎಂದು ಸಂಶೋಧನೆ ಹೇಳಿದೆ. ಆದ್ರೆ ತುರಿಕೆ ದೀರ್ಘಕಾಲ ಕಾಡಿದ್ರೆ ಸಮಸ್ಯೆ ಹೆಚ್ಚಾಗುತ್ತದೆ. ಅದು ಅಪಾಯಕಾರಿಯೂ ಹೌದು. ತುರಿಕೆ ಒಳ್ಳೆಯದು ಅಂತ ಕಂಡ ಕಂಡಲ್ಲಿ ತುರಿಸಿಕೊಳ್ಳೋಕೆ ಹೋಗ್ಬೇಡಿ. ಇದಿನ್ನೂ ಸಂಶೋಧನೆ ಹಂತದಲ್ಲಿದೆ. ಮನುಷ್ಯನ ಮೇಲೆ ಪ್ರಯೋಗ ನಡೆದು ಯಶಸ್ವಿಯಾದ್ರೆ ನಂತ್ರ ಧೈರ್ಯವಾಗಿ ಗಾಯವನ್ನು ತುರಿಸ್ಕೊಳ್ಳಿ.