ಹೊಟ್ಟೆಯ ಅಜೀರ್ಣ ಸಮಸ್ಯೆಗಳಿಗೆ ಮನೆಯಲ್ಲೇ ಇದೆ ಮದ್ದು
ಹೊಟ್ಟೆ ಇದ್ದವರಿಗೆಲ್ಲರಿಗೂ ಅಜೀರ್ಣ, ಗ್ಯಾಸ್, ಹೊಟ್ಟೆ ಉಬ್ಬರಿಸುವಿಕೆ, ನೋವು, ಉರಿ ಮುಂತಾದ ಸಮಸ್ಯೆಗಳು ಕಾಡಿಯೇ ತೀರುತ್ತವೆ. ಹಾಗಂಥ ಎಲ್ಲದಕ್ಕೂ ಮಾತ್ರೆಯೇ ಪರಿಹಾರವಲ್ಲ. ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ತೀರಾ ಅನಿವಾರ್ಯವಲ್ಲದೆ ಹೊರಗೆ ಓಡಾಡುವುದು ಸರಿಯೂ ಅಲ್ಲ. ಹಾಗಾಗಿ, ಇಂಥ ಸಣ್ಣಪುಟ್ಟ ಸಮಸ್ಯೆಗಳಿಗೆ ಮನೆಯಲ್ಲೇ ಪರಿಹಾರ ಕಂಡುಕೊಳ್ಳಬಹುದು.
ಹೊಟ್ಟೆಯ ಸಮಸ್ಯೆಗಳು ಯಾರನ್ನು ತಾನೇ ಬಿಟ್ಟಾವು? ಆಗಾಗ ಹೊಟ್ಟೆನೋವು, ಅಜೀರ್ಣ, ವಾಂತಿ, ಹೊಟ್ಟೆಉರಿ, ಗ್ಯಾಸ್, ಎದೆಯುರಿ ಮುಂತಾದ ಸಮಸ್ಯೆಗಳು ಬಹುತೇಕ ಎಲ್ಲರನ್ನೂ ಬಿಟ್ಟೂ ಬಿಡದೆ ಕಾಡುತ್ತವೆ. ಯಾವುದೋ ಆಹಾರ ಇಷ್ಟವೆಂದು ಸಿಕ್ಕಾಪಟ್ಟೆ ತಿಂದರೂ ಸಮಸ್ಯೆ, ಕಡಿಮೆ ತಿಂದರೂ ಸಮಸ್ಯೆ, ತಿನ್ನದಿದ್ದರೂ ಸಮಸ್ಯೆ, ಕೆಲವೊಂದು ತಿಂದರೆ ಗ್ಯಾಸ್- ಹೀಗೆ ಆಹಾರ ಸಂಬಂಧಿ ಹೊಟ್ಟೆಯ ಸಮಸ್ಯೆಗಳು ಬಹಳ ಸಾಮಾನ್ಯ. ಇದಕ್ಕೆಲ್ಲ ಮೆಡಿಕಲ್ ಸ್ಟೋರ್‌ಗೆ ಓಡುವ ಬದಲು ಮನೆಯಲ್ಲೇ ಹತ್ತು ಹಲವು ಸುಲಭದ ಔಷಧಿ ಮಾಡಿಕೊಳ್ಳಬಹುದು.
ಶುಂಠಿ
ಶುಂಠಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರುತ್ತದೆ. ಹಾಗಾಗಿ, ಹೊಟ್ಟೆ ಕೆಟ್ಟಾಗ ಮೊದಲು ನೀವು ತಿರುಗಬೇಕಾದುದೇ ಇದರತ್ತ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಸ್ ಹಾಗೂ ಜಿಂಜೆರಾಲ್ಸ್ ಅಜೀರ್ಣ ಹಾಗೂ ಸಂಕಟಕ್ಕೆ ಸುಲಭ ಪರಿಹಾರ ಒದಗಿಸುತ್ತವೆ. ಗ್ಯಾಸ್ಟ್ರಿಕ್ ತಗ್ಗಿಸಲು ಕೂಡಾ ಇದರಲ್ಲಿರುವ ಫಿನೋಲಿಕ್ ಕಾಂಪೌಂಡ್ಸ್ ಸಹಾಯ ಮಾಡುತ್ತವೆ. ಹೊಟ್ಟೆ ಕೆಟ್ಟಾಗ ಶುಂಠಿಯ ಕಷಾಯ ಇಲ್ಲವೇ ಜಿಂಜರ್ ಟೀ ಮಾಡಿ ಸೇವಿಸಿ. ಶುಂಠಿ ತಂಬುಳಿ ಕೂಡಾ ಒಳ್ಳೆಯದು.
ದಿನಾ ಶುಂಠಿ ನೀರು ಕುಡಿದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ?
ಆ್ಯಪಲ್ ಸೈಡರ್ ವಿನೆಗರ್
ಅಜೀರ್ಣಕ್ಕೆ ಆ್ಯಪಲ್ ಸೈಡರ್ ವಿನೆಗರ್ ಬಹಳ ಪರಿಣಾಮಕಾರಿ. ಇದರಲ್ಲಿರುವ ಮೆಗ್ನೀಶಿಯಂ, ಫಾಸ್ಫರಸ್, ಪೊಟ್ಯಾಶಿಯಂ, ಕ್ಯಾಲ್ಶಿಯಂ ಹಾಗೂ ಇತರೆ ಮಿನರಲ್‌ಗಳು ಆಹಾರ ಚೆನ್ನಾಗಿ ಜೀರ್ಣವಾಗಲು ಸಹಕಾರಿ. ವಿನೆಗರ್ ಅಸಿಡಿಕ್ ಆಗಿರುವ ಕಾರಣ ಇದು ಫ್ಯಾಟ್ಸ್ ಬ್ರೇಕ್ ಮಾಡಿ ಆ್ಯಸಿಡ್ ರಿಫ್ಲಕ್ಸ್ ಆಗದಂತೆ ನೋಡಿಕೊಳ್ಳುತ್ತದೆ. ಇದರಲ್ಲಿರುವ ಅಸಿಟಿಕ್ ಆ್ಯಸಿಡ್ ತನ್ನ ಆಲ್ಕಲಿನ್ ಗುಣದಿಂದಾಗಿ ಕೆಟ್ಟ ಹೊಟ್ಟೆಯನ್ನು ಸರಿಪಡಿಸುತ್ತದೆ.
ಬೇಕಿಂಗ್ ಸೋಡಾ
ಅಜೀರ್ಣಕ್ಕೆ ಅತಿಯಾದ ಆ್ಯಸಿಡ್ ಮಟ್ಟ ಕಾರಣವಾದಾಗ ಬೇಕಿಂಗ್ ಸೋಡಾ ಸಹಾಯಕ್ಕೆ ಬರುತ್ತದೆ. ಬೀನ್ಸ್, ಕೋಸು, ಹಾಲಿನ ಪದಾರ್ಥಗಳು ಹಾಗೂ ಈರುಳ್ಳಿ ಸಾಮಾನ್ಯವಾಗಿ ಅಜೀರ್ಣಕ್ಕೆ ಕಾರಣವಾಗುತ್ತವೆ. ಇಂಥ ಸಂದರ್ಭದಲ್ಲಿ ಹೊಟ್ಟೆಯಲ್ಲಿ ಹೈಡ್ರೋಕ್ಲೋರಿಕ್ ಆ್ಯಸಿಡ್‌ನಿಂದಾಗಿ ಉಂಟಾಗುವ ಉಂಟಾಗುವ ಆ್ಯಸಿಡ್ ಪರಿಣಾಮವನ್ನು ತಗ್ಗಿಸಲು ಬೇಕಿಂಗ್ ಸೋಡಾದಲ್ಲಿರುವ ಸೋಡಿಯಂ ಬೈಕಾರ್ಬೋನೇಟ್ ಸಹಾಯಕ್ಕೆ ಬರುತ್ತದೆ. ಇದು ತಕ್ಷಣವೇ ಹೊಟ್ಟೆಯ ಆ್ಯಸಿಡ್ ನ್ಯೂಟ್ರಲೈಸ್ ಮಾಡಿ ಗ್ಯಾಸ್‌ನಿಂದ ಶಮನ ಮಾಡುತ್ತದೆ.
ಅಜ್ವಾನ್
ಓಮಿನ ಕಾಳೆಂದು ಕರೆಸಿಕೊಳ್ಳುವ ಅಜ್ವಾನ್ ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಪದಾರ್ಥ. ಆಯುರ್ವೇದದಲ್ಲಿ ಔಷಧವಾಗಿ ಬಳಕೆಯಾಗುವ ಅಜ್ವಾನ್ ಹಲವಾರು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ. ಇದರಲ್ಲಿರುವ ಆ್ಯಕ್ಟಿವ್ ಎಂಜೈಮ್‌ಗಳು ಆರೋಗ್ಯಕರ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಮಲಬದ್ಧತೆ, ಗ್ಯಾಸ್ ನಿಯಂತ್ರಿಸುತ್ತದೆ.
ತೂಕ ಕಡಿಮೆ ಮಾಡುತ್ತೆ ಓಮಿನ ಕಾಳಿನ ನೀರು
ನೆಲ್ಲಿಕಾಯಿ
ನೆಲ್ಲಿಕಾಯಿಯಲ್ಲಿ ಫೈಬರ್ ಅಧಿಕ. ಹಾಗಾಗಿ ಇದು ಜೀರ್ಣಕ್ರಿಯೆ ಸರಾಗವಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಇದರ ಹಲವಾರು ಆರೋಗ್ಯ ಲಾಭಗಳಲ್ಲಿ ಮಲಬದ್ಧತೆ ನೀಗಿಸಿ ಗ್ಯಾಸ್ಟ್ರಿಕ್ ಜ್ಯೂಸ್‌ಗಳು ಚೆನ್ನಾಗಿ ಬಿಡುಗಡೆಯಾಗುವಂತೆ ನೋಡಿಕೊಳ್ಳುವುದೂ ಒಂದು. ಇದಕ್ಕೆ ಅಫ್ರೋಡಿಸಿಯಾಕ್, ಡೈಯುರೆಟಿಕ್, ಲ್ಯಾಕ್ಸೇಟಿವ್, ಕಾರ್ಮಿನೇಟಿವ್, ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ಇನ್ಫ್ಲಮೇಟರಿ ಹಾಗೂ ಆ್ಯಂಟಿವೈರಸ್ ಗುಣಗಳಿದ್ದು ಇವೆಲ್ಲವೂ ದೇಹ ಹೆಚ್ಚು ನ್ಯೂಟ್ರಿಯೆಂಟ್‌ಗಳನ್ನು ತೆಗೆದುಕೊಳ್ಳುವಂತೆ ಮಾಡುತ್ತವೆ.
ಮೆಂತ್ಯ
ಹೊಟ್ಟೆ ಕೆಟ್ಟ ಸೂಚನೆ ಸಿಕ್ಕ ಕೂಡಲೆ ಸ್ವಲ್ಪ ಮೆಂತ್ಯೆಯನ್ನು ನೀರಿನಲ್ಲಿ ಹಾಕಿ 10 ನಿಮಿಷ ಕುದಿಸಿ ಬಳಿಕ ಕುಡಿಯಿರಿ. ಮೆಂತ್ಯೆ ಟೀ ಮಾಡಿಕೊಂಡು ಕೂಡಾ ಕುಡಿಯಬಹುದು. ಇದು ಅಜೀರ್ಣಕ್ಕೆ ರಾಮಬಾಣ.
ಮೆಂತೆ ನಾಲಿಗೆಗೆ ಕಹಿಯಾದರೂ ಆರೋಗ್ಯಕ್ಕೆ ಸಿಹಿ
ನಿಂಬೆನೀರು
ನಿಂಬೆನೀರಿನ ಅಲ್ಕಲೈನ್ ಪರಿಣಾಮದಿಂದಾಗಿ ಹೊಟ್ಟೆಯ ಆ್ಯಸಿಡ್ ನ್ಯೂಟ್ರಲೈಸ್ ಆಗಿ ಜೀರ್ಣಕ್ರಿಯೆ ಸರಾಗಗೊಳ್ಳುತ್ತದೆ. ನಿಂಬೆರಸವನ್ನು ಬಿಸಿನೀರಿನಲ್ಲಿ ಬೆರೆಸಿ ಕುಡಿಯುವುದು ಉತ್ತಮ.
"