Asianet Suvarna News Asianet Suvarna News

16 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ, ಕಳೆದುಕೊಂಡ ಕೈಗಳನ್ನು ಮರಳಿ ಪಡೆದ ರಾಜಸ್ಥಾನದ ಯುವಕ!

 ಮುಂಬೈನ ಗ್ಲೋಬಲ್ ಅಸ್ಪತ್ರೆಯಲ್ಲಿ 33 ವರ್ಷದ ರಾಜಸ್ಥಾನದ ಅಜ್ಮೀರ್‌ನ ಯುವಕ ಪ್ರೇಮ್‌ಗೆ ಭುಜದ ಮಟ್ಟದಿಂದ ತೋಳು ಕಸಿ ಮಾಡಲಾಗಿದೆ. 16 ಗಂಟೆಗಳ ಸುದೀರ್ಘ ಶಸ್ತ್ರ ಚಿಕಿತ್ಸೆಯ ಮೂಲಕ ಕಳೆದುಕೊಂಡ ಕೈಗಳನ್ನು ಮರಳಿ ಪಡೆದಿದ್ದಾರೆ.

Rajasthan man becomes first Asian to undergo total arm transplant at Mumbai hospital gow
Author
First Published Mar 18, 2023, 5:10 PM IST

ರಾಜಸ್ಥಾನ (ಮಾ.18): ಆತ 33 ವರ್ಷದ ರಾಜಸ್ಥಾನದ ಅಜ್ಮೀರ್‌ನ ಯುವಕ. ಹೆಸರು ಪ್ರೇಮಾ ರಾಮ್, ಹತ್ತು ವರ್ಷಗಳ ಹಿಂದೆ ಹೊಲದಲ್ಲಿ ಕೆಲಸ ಮಾಡುವ ಸಮಯದಲ್ಲಿ ಅಕಸ್ಮಿಕವಾಗಿ ವಿದ್ಯುತ್ ಕಂಬ ತಗುಲಿ, ಅವರ ಕೈಗಳಿಗೆ ಹಲವು ಸುಟ್ಟ ಗಾಯಗಳಾದವು. ಅವರ ಜೀವ ಉಳಿಸಲು ವೈದ್ಯರು ಅವರ ಎರಡೂ ಕೈಗಳನ್ನು ಕತ್ತರಿಸುವುದು ಅನಿವಾರ್ಯವಾಯಿತು. ಮನೆಗೆ ಅಧಾರವಾಗಿದ್ದ ಯುವಕ ಅಸಹಾಯಕನಾದ. ಪೋಷಕರಿಗೆ ಸಹಾಯ ಮಾಡಬೇಕಾಗಿದ್ದವನಿಗೆ, ಪೋಷಕರ ನೆರವು ಅನಿವಾರ್ಯವಾಯಿತು. ದೈನಂದಿನ ಚಟುವಟಿಕೆಗಳಿಗಾಗಿ ಅವನು ಇತರರ ಮೇಲೆ ಹೆಚ್ಚು ಅವಲಂಬಿತನಾದನು. ಇದರಿಂದ ನೊಂದ ಪ್ರೇಮ್ ರಾಮ್ ಕುಟುಂಬವು ಕೃತಕ ಅಂಗಗಳನ್ನು ಪಡೆಯಲು ಪ್ರಯತ್ನಿಸಿದರು. ಅದರೆ ಆ ಸಾಧನಗಳು ಪ್ರೇಮ್ ರಾಮ್ ಅವರಿಗೆ ಹೆಚ್ಚು ಕ್ರಿಯಾತ್ಮಕ ಕೈಗಳನ್ನು ನೀಡಲು ಸಹಕಾರಿಯಾಗಲಿಲ್ಲ. ಏಕೆಂದರೆ ಪ್ರೇಮಾ ರಾಮ್ ಅವರ ಕೈಗಳನ್ನು ಭುಜದ ಮಟ್ಟದಲ್ಲಿ ಕತ್ತರಿಸಲಾಗಿತ್ತು. ಅದರೂ ಅತ್ಮವಿಶ್ವಾಸ ಕಳೆದುಕೊಳ್ಳದ ಪ್ರೇಮ್ ವರ್ಷಗಳಲ್ಲಿಯೇ ಕಾಲುಗಳಿಂದ ಪೆನ್ನು ಹಿಡಿದು ಬರೆಯುವುದನ್ನು ಕಲಿತರು.

ಜೀವನೋತ್ಸಹ ಇದ್ದ ಪ್ರೇಮ್ ರಾಮ್‌ಗೆ ಮಾರ್ಚ್ 18 ಬಹಳ ಪ್ರಮುಖವಾದ ದಿನ. ಬದುಕು ಅವರಿಗೆ ಮತ್ತೊಂದು ಚಿನ್ನದ ಅವಕಾಶ ನೀಡಿದೆ. ಮುಂಬೈನ ಗ್ಲೋಬಲ್ ಅಸ್ಪತ್ರೆಯಲ್ಲಿ ಪ್ರೇಮ್‌ಗೆ ಭುಜದ ಮಟ್ಟದಿಂದ ತೋಳು ಕಸಿ ಮಾಡಲಾಗಿದೆ. 16 ಗಂಟೆಗಳ ಸುದೀರ್ಘ ಶಸ್ತ್ರ  ಚಿಕಿತ್ಸೆಯ ಮೂಲಕ ಕಳೆದುಕೊಂಡ ಕೈಗಳನ್ನು ಮರಳಿ ಪಡೆದಿದ್ದಾರೆ. ಇದು ಭಾರತದ ವೈದ್ಯಕೀಯ ಕ್ಷೇತ್ರದಲ್ಲಿನ ಮೈಲಿಗಲ್ಲು. ಅಷ್ಟೆ ಅಲ್ಲದೇ ಈ ರೀತಿಯ ಒಟ್ಟು ತೋಳು ಕಸಿ ಮಾಡಿಸಿಕೊಂಡ ಏಷ್ಯದ ಮೊದಲ ವ್ಯಕ್ತಿ ಪ್ರೇಮ್ ರಾಮ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

 ಕಳೆದುಕೊಂಡನ್ನು ಮತ್ತೆ ಪಡೆದುಕೊಂಡಿರುವ ಕೆಲವೆ ಅದೃಷ್ಟವಂತರಲ್ಲಿ ಪ್ರೇಮ್ ರಾಮ್ ಒಬ್ಬರು. ಕರಹೀನರಾಗಿದ್ದಾಗ ಅವರು ಬಹಳ ಖಿನ್ನತೆಗೆ ಒಳಗಾಗಿದ್ದರು. ಜೀವನದಲ್ಲಿ ಬಹಳ ಜರ್ಜರಿತರಾಗಿದ್ದ ಅವರು ಅರಂಭದಲ್ಲಿ ಸಹಜ ಜೀವನ ಸವಾಲಾಗಿತ್ತು. ಪ್ರತಿದಿನ, ಪ್ರತಿಕ್ಷಣವೂ ಅವರು ತಮ್ಮ ಸಹೋದರರು ಮತ್ತು ಕುಟುಂಬ ಸದಸ್ಯರನ್ನು ಅವಲಂಬಿಸುತ್ತಿದ್ದರು. ಅದರೆ ತಮ್ಮನ್ನು ತಾವು ಸಮಾಧಾನ ಮಾಡಿಕೊಂಡು, ಮತ್ತೆ ಪುಟಿದೆದ್ದ ಚೆಂಡಿನಂತೆ ತಮ್ಮ ವಿನೂತನ ಪ್ರಯೋಗಕ್ಕೆ ಮುಂದಾದರು. ತಮ್ಮ ಕೈಯಲ್ಲಿ ಆಗದಿದ್ದರೇನು, ಕಾಲಲ್ಲಿ ಯತ್ನಿಸುವೆ ಎಂದು ಕಾಲಿನಿಂದಲೇ ಬರೆಯಲೂ ಕಲಿತರು. ಕಾಲುಗಳಿಂದಲೇ ಬೇರೆ ಕೆಲಸ ಕಾರ್ಯಗಳನ್ನೂ ಮಾಡಲು ಕಲಿತರು. ಕಾಲುಗಳಲ್ಲಿ ವಸ್ತುಗಳನ್ನು ಹಿಡಿದಿಟ್ಟುಕೊಳ್ಳುವುದು, ಬರೆಯುವುದನ್ನು ಕಲಿತರು. ಜೀವನ ಪ್ರೀತಿಯನ್ನು ಹೊಂದಿದ್ದ ಪ್ರೇಮ್ ಕಾಲುಗಳನ್ೇ ತಮ್ಮ ಬರವಣಿಗೆಯ ಅಸ್ತ್ರವಾಗಿಸಿಕೊಂಡು ಬಿ.ಎಡ್ ಪರೀಕ್ಷೆ ಪಾಸು ಮಾಡಿದ ರೋಚಕ ಕಥೆ ಹೇಳುವಾಗ ಎಂಥವರ ಕಣ್ಣಾಲಿಗಳೂ ತುಂಬಿ ಬರುವಂತಿತ್ತು. 

ಭುಜದಲ್ಲಿ ಕೈಕಸಿ ಮಾಡುವುದು ಬಹಳ ಕಷ್ಟ ಹಾಗೂ ಅಸಾಧ್ಯವೆಂದು ಪರಿಗಣಿಸಲಾಗಿತ್ತು. ಜೊತೆಗೆ ಇದಕ್ಕೆ ತಗಲುವ ವೆಚ್ಚ ಅಮೆರಿಕ ಅಥವಾ ಯುರೋಪಿನಲ್ಲಿ ತಗುಲುವ ವೆಚ್ಚಕ್ಕಿಂತಲೂ  8 ರಿಂದ 10 ಪಟ್ಟು ಜಾಸ್ತಿ (ಅಮೆರಿಕದಲ್ಲಿ ವೈದ್ಯಕೀಯ ಸೇವೆ ಬಹಳ ದುಬಾರಿ). ಅದರೂ ಇದನ್ನು ಸವಾಲಾಗಿ ಸ್ವೀಕರಿಸಿದ ಮುಂಬೈ ಗ್ಲೋಬಲ್ ಅಸ್ಪತ್ರೆಯ ವೈದ್ಯರ ತಂಡ ಕೊನೆಗೂ ಈ ಸುದೀರ್ಘ ಶಸ್ತ್ರ ಚಿಕಿತ್ಸೆಯಲ್ಲಿ ಯಶಸ್ವಿಯಾಗಿದೆ. ಪ್ಲಾಸ್ಟಿಕ್ ಕೈ ಮತ್ತು ಪುನನಿರ್ಮಾಣ ಮೈಕ್ರೊಸರ್ಜರಿ ಮತ್ತು ಟ್ರಾನ್ಸ್‌ಪ್ಲಾಂಟ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ನಿಲೇಶ್ ಜಿ ಸತ್ಭಾಯ್ ಈ ಶಸ್ತ್ರ ಚಿಕಿತ್ಸೆಯ ನೇತೃತ್ವ ವಹಿಸಿದ್ದರು.

Alcohol Addiction: ಮದ್ಯ ಕುಡಿಯೋರಿಗೆ ಕೋಪ ಮೂಗಿನ ತುದಿಯಲ್ಲಿರುತ್ತಾ?

ಇದುವರೆಗೂ ಯುರೋಪಿನಲ್ಲಿ ಎರಡೂ ಕೈಗಳ ತೋಳಿನ ಕಸಿ ಮಾಡಲಾಗಿತ್ತು. ಅದರೆ ಇದು ಏಷ್ಯಾದಲ್ಲಿಯೇ ಮೊಟ್ಟಮೊದಲ ಬಾರಿಗೆ ಮಾಡಿದ್ದ ಸರ್ಜರಿ. ಇದು ಸಮಯದ ವಿರುದ್ದದ ಓಟವಾಗಿತ್ತು. ಜೊತೆಗೆ ಇದರ ಕಾರ್ಯ ವಿಧಾನ, ಸಮಯ ಮತ್ತು ಸಮನ್ವಯವೂ ಮುಖ್ಯವಾಗಿತ್ತು. ಇಲ್ಲಿ ಅಂಗಗಳನ್ನು ದೇಹಕ್ಕೆ ಸಾಧ್ಯವಾದಷ್ಟು ಬೇಗ ಜೋಡಿಸಬೇಕು. ಇದರಿಂದ ಹೆಚ್ಚಿನ ಸಂಖ್ಯೆಯ ಸ್ನಾಯುಗಳು ವರ್ಗಾವಣೆಯಾಗುವುದರಿಂದ ರಕ್ತ ಪರಿಚಲನೆ ತಕ್ಷಣವೇ ಪ್ರಾರಂಭವಾಗುತ್ತದೆ. ಎರಡೂ ಬದಿಗಳಲ್ಲಿ ಒಂದೇ ರೀತಿಯ ಶಸ್ತ್ರ ಚಿಕಿತ್ಸೆ ಮಾಡುವುದೂ ಮತ್ತೊಂದು ದೊಡ್ಡ ಚಾಲೆಂಜ್. ಈ ಕಠಿಣ ಚಿಕಿತ್ಸೆಯನ್ನು ಸವಾಲಾಗಿ ಸ್ವೀಕರಿಸಿದ ವೈದ್ಯಕೀಯ ತಂಡ ಯಶಸ್ವಿಯಾಗುವ ಮೂಲಕ ನಮ್ಮ ಭಾರತದ ವೈದ್ಯಕೀಯ ಕ್ಷೇತ್ರದ ಸಾಧನೆಯ ಮುಕುಟಕ್ಕೆ ಮತ್ತೊಂದು ಗರಿ ಸೇರಿಸಿದೆ.

ಭಾರತೀಯರು ದುಪ್ಪಟ್ಟು ಉಪ್ಪು ತಿಂತಾರಂತೆ! ಯಾವ ಆಹಾರದಲ್ಲಿದೆ ಅಧಿಕ ಉಪ್ಪು?

ಇನ್ನು ಪ್ರೇಮ್ ರಾಮ್ ಅವರು ಸಮಾನ್ಯರಂತಾಗಲು ಪಿಸಿಯೋಥೆರಪಿಯ ಅವಶ್ಯಕತೆಯಿದೆ, ಇನ್ನು 15 ರಿಂದ 20 ಪಿಸಿಯೋಥೆರಪಿಗಳು ಬಾಕಿ ಇದೆ. ಹೊಸ ಹುರುಪು, ಹರುಷದಿಂದ ಜೀವನ ಮುಂದುವರಿಸಲು ಹೊರಟಿರುವ ಪ್ರೇಮ್ ಅವರು ತಮ್ಮ ಚಿಕಿತ್ಸೆ ಮೂಲಕ ಜೀವನಕ್ಕೆ ಒಂದು ಅವಕಾಶ ಮತ್ತು ಅರ್ಥ ನೀಡಿದ ಗ್ಲೊಬಲ್ ವೈದ್ಯಕೀಯ ತಂಡದ ಬಗ್ಗೆ ಭಾವಪೂರ್ಣ ಕೃತಘ್ನತೆ ಸಲ್ಲಿಸುತ್ತಾರೆ. ಮನಸ್ಸಿದ್ದರೆ ಮಾರ್ಗ ಎಂಬಂತೆ ಒಂದು ಜೀವಕ್ಕೆ ಬದುಕುವ ಭರವಸೆ ಇತ್ತ ವೈದ್ಯಕೀಯ ತಂಡಕ್ಕೆ ಅಭಿನಂದನೆಗಳು ಮತ್ತು ಪ್ರೇಮ್ ರಾಮ್‌ರಂತೆ ಇನ್ನು ಅನೇಕ ಜನರ ಜೀವನದಲ್ಲಿ ಆಶಾಕಿರವಾಗಲಿ ಮತ್ತು ಪ್ರೇಮ್ ರಾಮ್ ಅವರ ಜೀವನ ಸುಖಕರವಾಗಿರಲಿ.

Follow Us:
Download App:
  • android
  • ios