ಕೆಲವರಿಗೆ ಈ ವಿಷಯ ಅರ್ಥವಾಗುವ ಹೊತ್ತಿಗೆ ಸಮಯ ಮೀರಿರುತ್ತದೆ. ಸಾಮಾನ್ಯವಾಗಿ ಜ್ವರ ಬಂದರೆ, ಸೋಂಕು ಇದ್ದರೆ, ಕೆಮ್ಮು ಬಂದರೆ ವೈದ್ಯರ ಬಳಿ ಹೋಗುತ್ತೇವೆ. ಆದರೆ, ಹಾರ್ಮೋನಲ್ ಇಂಬ್ಯಾಲೆನ್ಸ್‌ನಿಂದಾಗಿ ಸಮಸ್ಯೆಗಳಾಗುತ್ತಿದ್ದರೆ ಮಾತ್ರ ಅದನ್ನು ಆರಂಭದಲ್ಲೇ ಗುರುತಿಸುವಲ್ಲಿ ವಿಫಲರಾಗುತ್ತೇವೆ. ತನ್ನೊಳಗೆ ಯಾವುದೇ ರೀತಿಯ ಏರುಪೇರಾದರೂ ಅದನ್ನು ದೇಹ ಹೇಳುತ್ತಲೇ ಇರುತ್ತದೆ. ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ನಮ್ಮದಾಗಿರಬೇಕಷ್ಟೇ. 

ಸಾಮಾನ್ಯವಾಗಿ ಸಮಸ್ಯೆಗಳಾದಾಗ ದೇಹವು ಮೊದಲಿಗೆ ತಾನೇ ಅದಕ್ಕೆ ಪರಿಹಾರ ಕಂಡುಕೊಳ್ಳಲು ನೋಡುತ್ತದೆ. ಅದು ಸಾಧ್ಯವಾಗದಾದಾಗ ನಮಗೆ ಇರೆಗುಲರ್ ಪೀರಿಯಡ್ಸ್, ಹೊಟ್ಟೆ ನೋವು, ಮೂಡ್ ಸ್ವಿಂಗ್ಸ್ ಇತ್ಯಾದಿ ರೂಪದಲ್ಲಿ ಎಚ್ಚರಿಕೆ ನೀಡುತ್ತದೆ. ಅದಕ್ಕೆ ಕೂಡಾ ನಾವು ಗಮನ ಹರಿಸದಿದ್ದಲ್ಲಿ ಕಣ್ಣಿಗೆ ಗೋಚರವಾಗುವಂತೆ ದೇಹದ ಮೇಲ್ಭಾಗದಲ್ಲಿ ಕೆಲ ಎಚ್ಚರಿಕೆ ಸೂಚನೆಗಳನ್ನು ನೀಡುತ್ತದೆ. ಅವನ್ನು ಗಮನಿಸಿದಾಗ ದೇಹದಲ್ಲಿ ಏನೋ ಸರಿಯಿಲ್ಲ ಎಂಬುದು ತಿಳಿಯುತ್ತದೆ. ಇದಕ್ಕೆ ಹಾರ್ಮೋನಲ್ ಇಂಬ್ಯಾಲೆನ್ಸ್ ಕೂಡಾ ಹೊರತಲ್ಲ. 

ಒತ್ತಡಕ್ಕೆ ಗೋಲಿ ಹೊಡೆಯಲು ಮೂಗಿಗೆ ಕೆಲಸ ಕೊಡಿ

ಹಾರ್ಮೋನ್ ಏರುಪೇರಿನ ದೈಹಿಕ ಸೂಚನೆಗಳು
ಕೂದಲುದುರುವುದು

ಇವೆಲ್ಲ ತಲೆಯಿಂದ ಶುರುವಾಗಿ ಕಾಲ್ಬೆರಳವರೆಗೆ ಸೂಚನೆ ತೋರಿಸುತ್ತವೆ. ಮೆದುಳು ಮೊದಲು ತನಗೆ ಹತ್ತಿರವಿರುವ ಭಾಗದಿಂದ ಸಿಗ್ನಲ್ ಕೊಡಲು ನೋಡುತ್ತದೆ- ಅದೇ ಕೂದಲು. ಸಾಮಾನ್ಯವಾಗಿ ಕೂದಲುದುರುವಂತಲ್ಲದೆ ಮುದ್ದೆ ಮುದ್ದೆಯಾಗಿ ಕೂದಲುದುರಲು ಆರಂಭವಾಗುತ್ತದೆ. ಅಷ್ಟೇ ಅಲ್ಲ, ಇರುವ ಕೂದಲೆಳೆಗಳೂ ತೆಳುವಾಗತೊಡಗುತ್ತವೆ. ತಲೆಯ ಕೆಲ ಭಾಗಗಳು ಕೂದಲಿನ ಕೊರತೆಯಿಂದ ಹೊರಗಿಣುಕತೊಡಗುತ್ತವೆ. 

ಆತಂಕ
ನಂತರದಲ್ಲಿ ಬರುವುದು ಮನಸ್ಸು. ನೀವೇನು ಖಿನ್ನತೆಯಲ್ಲಿ ಬಳಲುತ್ತಿರಬೇಕಿಲ್ಲ. ಆದರೆ, ಯಾವಾಗಲೂ ಅದೇನೋ ಒಂದು ಕೊರೆತ ಮನಸ್ಸನ್ನು ಹಾಳು ಮಾಡಿ ಬೇಸರ ತಂದೊಡ್ಡುತ್ತದೆ. ದೇಹವು ಹಾರ್ಮೋನ್‌ಗಳ ವಿಷಯದಲ್ಲಿ ಎಂದಿನಂತಿಲ್ಲದಾಗ ಆತಂಕ ಹಾಗೂ ಖಿನ್ನತೆಯ ಲಕ್ಷಣಗಳು ಪದೇ ಪದೆ ಕಾಣಿಸತೊಡಗುತ್ತವೆ. 

ಕಪ್ಪು ವೃತ್ತಗಳು
ಸಾಮಾನ್ಯವಾಗಿ ನಿದ್ರೆಯ ಕೊರತೆಯಾದಾಗ, ಒತ್ತಡ, ಸುಸ್ತು ಹೆಚ್ಚಿದಾಗ ಕಣ್ಣಿನ ಸುತ್ತ ಗ್ರಹಣದಂತೆ ಕಪ್ಪು ವೃತ್ತವೊಂದು ಬಂದು ಕುಳಿತುಕೊಳ್ಳುತ್ತದೆ. ಜೀವನಶೈಲಿ ಬದಲಾಯಿಸುವ ಮೂಲಕ ಇದನ್ನು ಸರಿಪಡಿಸಿಕೊಳ್ಳಲು ನೋಡುತ್ತೀರಿ. ಆದರೆ, ದೇಹದಲ್ಲಿ ಟೆಸ್ಟೆೊಸ್ಟೆರೋನ್  ಅಥವಾ ಪ್ರೊಜೆಸ್ಟೆರೋನ್ ಹಾರ್ಮೋನ್‌ಗಳ ಕೊರತೆಯಾದಾಗ ನಿದ್ರೆಯ ಸಮಸ್ಯೆಗಳು ಶುರುವಾಗುತ್ತವೆ. 

ಮೊಡವೆ
ಆಹಾರದ ಅಲರ್ಜಿಯಿಂದ, ಹವಾಮಾನ ಬದಲಾವಣೆಯಿಂದ ಮುಖದ ಚರ್ಮದ ಮೇಲೆ ಗುಳ್ಳೆಗಳಾಗುತ್ತವೆ ಎಂಬುದು ನಮಗೆ ಗೊತ್ತು. ಅದೇನು ಇಲ್ಲದೆಯೂ ಹಾರ್ಮೋನ್‌ಗಳ ಏರುಪೇರಾದಾಗ ಮೊಡವೆಯಾಗುತ್ತದೆ ಹಾಗೂ ಅದು ಸುಲಭವಾಗಿ ಹೋಗಲೊಪ್ಪುವುದಿಲ್ಲ. 

ಎದೆಯಲ್ಲಿ ಬದಲಾವಣೆ
ಹಾರ್ಮೋನ್‌ಗಳ ಏರುಪೇರಾದಾಗ ಎದೆಯ ಸ್ಕಿನ್ ಟಿಶ್ಯೂಸ್‌ನಲ್ಲಿ ಬದಲಾವಣೆ ಕಂಡುಬರುತ್ತದೆ. ಸಣ್ಣದಾಗಿ ಎದೆನೋವು ಕಾಣಿಸಬಹುದು. ಗಂಟು ಕಾಣಿಸಿಕೊಂಡರೆ ಅದು ಕ್ಯಾನ್ಸರ್‌ನ ಎಚ್ಚರಿಕೆ ಇರಬಹುದು. ತಕ್ಷಣ ವೈದ್ಯರ ಬಳಿ ಹೋಗಬೇಕು. ಅದಿಲ್ಲದೆಯೂ ಎದೆಯ ಆಕಾರ, ಗಾತ್ರ ಬದಲಾವಣೆಯಾಗಿದ್ದು, ಗಂಟು ಇತ್ಯಾದಿ ಕಂಡುಬಂದರೆ ದೇಹದಲ್ಲಿ ಈಸ್ಟ್ರೋಜನ್ ಮಟ್ಟ ಏರುಪೇರಾಗಿರಬಹುದು. 

ಬೆವರು
ನಾವೆಲ್ಲರೂ ಬೆವರುತ್ತೇವೆ. ಆದರೆ, ಕೆಲವರು ಮಾತ್ರ ವಿಪರೀತ ಎಂಬಷ್ಟು ಬೆವರುತ್ತಾರೆ. ಹೆಚ್ಚು ಪರಿಶ್ರಮ ಪಡದಿದ್ದಾಗಲೂ, ಬಿಸಿಲಿಲ್ಲದೆಯೂ ಸಿಕ್ಕಾಪಟ್ಟೆ ಬೆವರುತ್ತಿದ್ದರೆ, ಭಯ ಆವರಿಸುತ್ತಿದ್ದರೆ ಹಾಗೂ ಅದು ಬಹಳ ವಾಸನೆ ಇದ್ದರೆ ಹಾರ್ಮೋನ್‌ ಸಮಸ್ಯೆಯನ್ನು ಹೇಳುತ್ತಿದೆ ಎಂದು ಭಾವಿಸಬೇಕು. 

ತೂಕ ಹೆಚ್ಚಳ
ನೀವು ಬಹಳ ತಿನ್ನದೆಯೂ, ವ್ಯಾಯಾಮಗಳನ್ನು ನಿಯಮಿತವಾಗಿ ಮಾಡುತ್ತಿದ್ದರೂ ಲೆಕ್ಕಕ್ಕೆ ಸಿಗದಂತೆ ತೂಕ ಏರುತ್ತಾ ಹೋಗುತ್ತಿದೆ, ತಿಂಗಳೊಂದರಲ್ಲಿ ಆರೇಳು ಕೆಜಿ ಹೆಚ್ಚಾಗಿದ್ದೀರಿ ಎಂದಿದ್ದರೆ ಮೊದಲು ವೈದ್ಯರ ಬಳಿ ಹೋಗಿ ಚೆಕಪ್ ಮಾಡಿಸಿ. 

ಹೊಟ್ಟೆ ಕ್ಯಾನ್ಸರ್ ಲಕ್ಷಣಗಳಿವು, ಕಡೆಗಣಿಸಿದ್ರೆ ಕಡೆಗಾಲ ಬಂದಂತೆ!

ಸುಸ್ತು
ಚೆನ್ನಾಗಿ ನಿದ್ರಿಸಿದ ಬಳಿಕ ಅಥವಾ ದೈಹಿಕ ಚಟುವಟಿಕೆಯ ಬಳಿಕವೂ ಸುಸ್ತು ಎನಿಸುತ್ತದೆಯೇ? ಹಾಗಿದ್ದರೆ ದೇಹದಲ್ಲಿ ಪ್ರೊಜೆಸ್ಟೆರೋನ್ ಮಟ್ಟ ಏರುಪೇರಾಗಿರಬೇಕು. ಮೊದಲು ವೈದ್ಯರ ಬಳಿ ತೆರಳಿ ಬ್ಲಡ್ ಟೆಸ್ಟ್ ಮಾಡಿಸಿಕೊಳ್ಳಿ.