Asianet Suvarna News Asianet Suvarna News

ಹಾರ್ಟ್‌ ಚೆಕಪ್‌ಗೆ ಮುಗಿಬಿದ್ದ ಜನ! ಹೇಗೆ ಕಾಳಜಿ ಮಾಡಬೇಕು -ಇಲ್ಲಿದೆ ವೈದ್ಯರ ಸೂಕ್ತ ಸಲಹೆ

  • ‘ಪವರ್‌ ಸ್ಟಾರ್‌’ ಪುನೀತ್‌ ರಾಜ್‌ಕುಮಾರ್‌ ಅವರು ಹೃದಯ ಸ್ತಂಭನದಿಂದ ಮೃತಪಟ್ಟಬೆನ್ನಲ್ಲೇ ಸಾರ್ವಜನಿಕರಲ್ಲಿ ಹೃದಯದ ಆರೋಗ್ಯದ ಬಗ್ಗೆ ಕಾಳಜಿ 
  • ಬೆಂಗಳೂರು, ಮಂಡ್ಯ, ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಯುವಕರು, ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಹೃದಯದ ಪರೀಕ್ಷೆಗೆ ಮುಂದಾಗಿದ್ದಾರೆ
People rush to hospital For heart checkup snr
Author
Bengaluru, First Published Nov 2, 2021, 7:35 AM IST

 ಬೆಂಗಳೂರು (ನ.02):  ‘ಪವರ್‌ ಸ್ಟಾರ್‌’ ಪುನೀತ್‌ ರಾಜ್‌ಕುಮಾರ್‌ (Puneeth Rajkumat) ಅವರು ಹೃದಯ ಸ್ತಂಭನದಿಂದ ಮೃತಪಟ್ಟಬೆನ್ನಲ್ಲೇ ಸಾರ್ವಜನಿಕರಲ್ಲಿ ಹೃದಯದ ಆರೋಗ್ಯದ (Health) ಬಗ್ಗೆ ಕಾಳಜಿ ಹೆಚ್ಚಾಗಿದ್ದು, ರಾಜ್ಯಾದ್ಯಂತ ಹೃದಯ (Heart) ಪರೀಕ್ಷೆಗಾಗಿ ಜನರು ಆಸ್ಪತ್ರೆಗಳಿಗೆ (Hospital) ಮುಗಿಬೀಳುತ್ತಿದ್ದಾರೆ.

ಬೆಂಗಳೂರು (Bengaluru), ಮಂಡ್ಯ, ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಯುವಕರು, ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಹೃದಯದ ಪರೀಕ್ಷೆಗೆ ಮುಂದಾಗಿದ್ದಾರೆ. ಅದರಲ್ಲೂ ಜಿಮ್‌ಗಳಲ್ಲಿ ಬೆವರು ಹರಿಸುವವರು ಆತಂಕದಿಂದ ತಮ್ಮ ಹೃದಯದ ಪರೀಕ್ಷೆ ಮಾಡಿಸಿಕೊಳ್ಳತೊಡಗಿದ್ದಾರೆ.

ಆತಂಕದಿಂದ ಆಸ್ಪತ್ರೆಗಳತ್ತ:

ಬೆಂಗಳೂರು ಜಯದೇವದಲ್ಲಿ (Jayadeva Hospital Bengaluru) ನಿತ್ಯ ಸರಾಸರಿ 1,200 ಮಂದಿ ಓಪಿಡಿಯಲ್ಲಿ (OPD) ಪರೀಕ್ಷೆಗೆ ಆಗಮಿಸುತ್ತಾರೆ. ಭಾನುವಾರದ ರಜೆ ದಿನ ತುರ್ತು ಚಿಕಿತ್ಸೆ ಮಾತ್ರ ಇದ್ದು, ಓಪಿಡಿ ಸೇವೆ ಇರುವುದಿಲ್ಲ. ಹೀಗಿದ್ದರೂ ಭಾನುವಾರ ಜಯದೇವ ಆಸ್ಪತ್ರೆಗೆ 550 ಮಂದಿ ಹಾಗೂ ಸೋಮವಾರ ಮಧ್ಯಾಹ್ನ 1 ಗಂಟೆ ವೇಳೆಗೆ 1,500 ಮಂದಿ ಆಗಮಿಸಿದ್ದಾರೆ.

ನಿರ್ಲಕ್ಷ್ಯ ಬೇಡ: ಯುವಕರೇ ಹೃದಯದ ಕಡೆ ಗಮನ ಹರಿಸಿ..!

ಮೈಸೂರಲ್ಲಿ 900 ತಪಾಸಣೆ:

ಮೈಸೂರಿನ (Mysuru) ಜಯದೇವ ಹೃದ್ರೋಗ ಆಸ್ಪತ್ರೆಗೆ ತಪಾಸಣೆಗೆ ಬರುತ್ತಿರುವವರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿದೆ. ಸಾಮಾನ್ಯವಾಗಿ ವಾರದ ದಿನಗಳಲ್ಲಿ 450 ರಿಂದ 500 ಮಂದಿ ಬರುತ್ತಾರೆ. ಆದರೆ ಸೋಮವಾರ 900 ಮಂದಿ ಬಂದಿದ್ದರು. ತಪಾಸಣೆಗೆ ಬರುತ್ತಿರುವವರಲ್ಲಿ ಯುವಕರೇ ಹೆಚ್ಚಾಗಿದ್ದಾರೆ.

ಮಂಡ್ಯದಲ್ಲೂ ಏರಿಕೆ:

ಮಂಡ್ಯ (mandya) ನಗರದಲ್ಲಿರುವ ಪ್ರಿಯದರ್ಶಿನಿ ಹಾರ್ಟ್‌ಕೇರ್‌ ಸೆಂಟರ್‌ಗೆ ಈ ಹಿಂದೆ ಪ್ರತಿನಿತ್ಯ 40 ಮಂದಿ ಮಾತ್ರ ತಪಾಸಣೆಗೆ ಬರುತ್ತಿದ್ದರು. 2 ದಿನಗಳಿಂದ ಈ ಸಂಖ್ಯೆಯಲ್ಲಿ 3 ಪಟ್ಟು ಹೆಚ್ಚಳವಾಗಿದೆ. ಮಹಿಳೆಯರೂ ಸೇರಿದಂತೆ ಆರೋಗ್ಯವಾಗಿರುವವರೇ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಹೆಚ್ಚಿನವರು ಜಿಮ್‌ಗಳಿಂದ ವಿಮುಖರಾಗುವ ಮಾತುಗಳನ್ನಾಡುತ್ತಿದ್ದಾರೆ.

ಪತ್ನಿಯರದ್ದೇ ಒತ್ತಾಯ:

ಮಂಗಳೂರು ನಗರದ ಆಸ್ಪತ್ರೆ, ಖಾಸಗಿ ಕ್ಲಿನಿಕ್‌ಗಳಲ್ಲೂ ಹೃದಯ ಆರೋಗ್ಯ ತಪಾಸಣೆ ಮಾಡುತ್ತಿರುವವರ ಸಂಖ್ಯೆಯಲ್ಲಿ ಶೇ.50ರಷ್ಟುಏರಿಕೆಯಾಗಿದೆ. ಹೆಚ್ಚಿನವರು 40ರಿಂದ 50 ವರ್ಷ ವಯಸ್ಸಿನವರು. 10ರಲ್ಲಿ ಏಳೆಂಟು ಮಂದಿಯನ್ನು ಅವರ ಪತ್ನಿಯರೇ ಕರೆದುಕೊಂಡು ಬರುತ್ತಿದ್ದಾರೆ.

ಅಗತ್ಯವಿಲ್ಲದಿದ್ದರೂ ಇಸಿಜಿ:

ಪುನೀತ್‌ ನಿಧನದ ನಂತರ ಚಿತ್ರದುರ್ಗದಲ್ಲೂ ಯುವಕರು ಹಾಗೂ ಮಧ್ಯ ವಯಸ್ಕರು ಹೃದಯ ತಪಾಸಣೆಗೆ ಆಸ್ಪತ್ರೆ ಎಡತಾಕುತ್ತಿದ್ದಾರೆ. ಈ ಮೊದಲು ಎದೆನೋವು ಬಂದರೆ ಗ್ಯಾಸ್ಟ್ರಿಕ್‌ ಆಗಿರಬೇಕು ಎಂದು ಆಸ್ಪತ್ರೆಗೆ ಬಂದು ಮಾತ್ರೆ ಬರೆಯಿಸಿಕೊಂಡು ಹೋಗುತ್ತಿದ್ದವರೂ ಇದೀಗ ವೈದ್ಯರಿಗೆ ದುಂಬಾಲು ಬಿದ್ದು ಇಸಿಜಿ ಮಾಡಿಸಿಕೊಳ್ಳುತ್ತಿದ್ದಾರೆ.

ವಾರ್ಷಿಕ ಆಚರಣೆಯಾಗಬೇಕು:

ಜನರ ಈ ದಿಢೀರ್‌ ಕಾಳಜಿ ಬಗ್ಗೆ ಪ್ರತಿಕ್ರಿಯಿಸಿರುವ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌ (Dr CM Manjunath) ‘ಈ ಹೃದಯದ ಬಗೆಗಿನ ಕಾಳಜಿ ಒಳ್ಳೆಯದಾದರೂ ಒಂದು ದಿನಕ್ಕೆ ಸೀಮಿತವಾಗಬಾರದು. ದೇಶದಲ್ಲಿ ಉಂಟಾಗುತ್ತಿರುವ ಶೇ.25ರಷ್ಟುಸಾವಿಗೆ ಹೃದಯಾಘಾತವೇ ಕಾರಣ. ಹೀಗಾಗಿ ಪ್ರತಿ ವರ್ಷ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಂತೆ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ವರ್ಷಾಚರಣೆ ಆಗಬೇಕು. ಹೃದಯಾಘಾತದ ಬಗ್ಗೆ ಎಚ್ಚರ ವಹಿಸಲು ಉತ್ತಮ ಆಹಾರ ಪದ್ಧತಿ, ವ್ಯಾಯಾಮ, ಒತ್ತಡದಿಂದ ಹೊರಬರುವುದು ಹಾಗೂ ಕಾಲಕಾಲಕ್ಕೆ ಪರೀಕ್ಷೆ ಮಾಡಿಸಿಕೊಳ್ಳುವುದು ತುಂಬಾ ಮುಖ್ಯ. 35 ವರ್ಷ ದಾಟಿದ ಮಹಿಳೆಯರು ಹಾಗೂ 40 ವರ್ಷ ದಾಟಿದ ಪುರುಷರು ಪ್ರತಿ ವರ್ಷ ಹೃದ್ರೋಗ ಪರೀಕ್ಷೆ ಮಾಡಿಸಿಕೊಳ್ಳಬೇಕು. ರಕ್ತದಲ್ಲಿನ ಸಕ್ಕರೆ ಅಂಶ, ಕೊಬ್ಬಿನಾಂಶ, ಇಸಿಜಿ, ಟ್ರೆಡ್‌ಮೆಲ್‌ ಇಸಿಜಿ ಮಾಡಿಸಬೇಕು’ ಎಂದು ಹೇಳಿದರು.

2030ಕ್ಕೆ ಹೃದ್ರೋಗದಲ್ಲಿ ಭಾರತವೇ ನಂಬರ್‌ 1: ತಜ್ಞರ ಶಾಕಿಂಗ್ ಮಾಹಿತಿ

ವಿಪರೀತ ಜಿಮ್‌ ಬೇಡ:

ಯಾವುದೇ ವ್ಯಾಯಾಮ ಅತಿ ಎನ್ನುವಷ್ಟು ಮಾಡಬಾರದು. ವಾಕಿಂಗ್‌, ಸೈಕ್ಲಿಂಗ್‌, ಸ್ವಿಮ್ಮಿಂಗ್‌, ಜಿಮ್‌ ಯಾವುದೇ ಆದರೂ ನಿಯಮಿತ ಪ್ರಮಾಣದಲ್ಲೇ ಮಾಡಬೇಕು. ಜಿಮ್‌ನಲ್ಲಿ ವ್ಯಾಯಾಮ ಮಾಡುವ ಕ್ರಮಗಳು ಅವರವರ ಶರೀರ ಹಾಗೂ ವಯಸ್ಸಿಗೆ ತಕ್ಕಂತೆ ಇರಬೇಕು ಎಂದರು.

ಹೊಟ್ಟೆಬೆಳೆಸಿಕೊಳ್ಳಬೇಡಿ:

ಬರೀ ಹೊಟ್ಟೆ ಬೆಳೆಸಿಕೊಳ್ಳುವುದು ಮಧುಮೇಹ (Diabites) ಹಾಗೂ ಹೃದಯ ಎರಡಕ್ಕೂ ಅಪಾಯ. ಇನ್ನು ಪ್ರೊಟೀನ್‌ ಡಯೆಟ್‌ಗಳಂತಹ ಕೃತಕ ಡಯೆಟ್‌ಗಳಿಗೆ ಹೋಗದೆ ಸ್ವಾಭಾವಿಕವಾಗಿರುವ ಮೊಟ್ಟೆ, ಮೊಳಕೆ ಕಾಳಿನಲ್ಲಿರುವ ಪ್ರೊಟೀನ್‌ ಸೇವಿಸಬೇಕು. ಇತಿಮಿತಿಯಲ್ಲಿ ಕಡ್ಡಾಯ ವ್ಯಾಯಾಮ ಮಾಡಬೇಕು ಎಂದು ಸಲಹೆ ನೀಡಿದರು.

ಯಾವಾಗ ಪರೀಕ್ಷೆ ಮಾಡಬೇಕು?

ಅತಿಯಾದ ಒತ್ತಡದ ಅನುಭವ, ಸತತವಾಗಿ ಎಡ ಭಾಗದ ಕತ್ತು, ಭುಜ, ಕೈ ನೋವು, ಎದೆ ಭಾಗದಲ್ಲಿ ವಿಪರೀತ ನೋವು, ಬೆವರುವುದು ಹಾಗೂ ಬೆನ್ನು ನೋವು ಕಾಣಿಸಿಕೊಂಡರೆ ಕೂಡಲೇ ಪರೀಕ್ಷೆಗೆ ಒಳಪಡಬೇಡಿ. ಈ ಲಕ್ಷಣಗಳು ಬೇರೆ ಕಾಯಿಲೆಗೂ ಗೋಚರಿಸಬಹುದು. ಆದರೆ, ವೈದ್ಯರ ಸಂಪರ್ಕಿಸಿ ಪರೀಕ್ಷೆಗೆ ಒಳಪಡುವುದು ಅಗತ್ಯ.

ಹೃದಯದ ಆರೋಗ್ಯಕ್ಕೆ ಟಿಫ್ಸ್‌

ಮಿತ ಆಹಾರ ಸೇವನೆ, ಮಾಂಸ ಸೇವನೆ ನಿಯಂತ್ರಣದಲ್ಲಿಡಿ. ಮಾಂಸಾಹಾರಿಗಳಾಗಿದ್ದರೆ ಮೀನು ಸೇವನೆಗೆ ಆದ್ಯತೆ ನೀಡಿ. ನಿತ್ಯ ಸೇವಿಸುವ ಉಪ್ಪು, ಸಕ್ಕರೆ, ಬೆಣ್ಣೆ, ಮೈದಾ, ಹಾಲು, ಪನ್ನೀರ್‌ ನಿಯಂತ್ರಣದಲ್ಲಿಡಿ. ಪ್ರೊಟೀನ್‌ಯುಕ್ತ ಆಹಾರ ಸೇವನೆಗೆ ಆದ್ಯತೆ ನೀಡಿ, ಕಾರ್ಬೊ ಹೈಡ್ರೇಟ್‌ ಹಾಗೂ ಕೊಬ್ಬಿನ ಅಂಶ ಕಡಿಮೆ ಇರುವ ಆಹಾರ ಇರಲಿ. ದಿನಕ್ಕೆ 6 ರಿಂದ 8 ಗ್ಲಾಸ್‌ ನೀರು ಕುಡಿಯಬೇಕು. ವಾರದಲ್ಲಿ 5 ದಿನವಾದರೂ ಕನಿಷ್ಠ 40 ನಿಮಿಷ ನಿಯಮಿತ ವ್ಯಾಯಾಮ ಅಥವಾ ನಡಿಗೆ, ನಿತ್ಯದ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಬೇಕು. ಹಾಡು ಕೇಳುವುದು, ಆಟ ಆಡುವುದು, ಧ್ಯಾನ, ಓಡಾಟ, ಯೋಗಾಭ್ಯಾಸದಂತಹ ಹವ್ಯಾಸಗಳಿಂದ ಒತ್ತಡಕ್ಕೆ ಮುಕ್ತಿ ನೀಡಬೇಕು.

ಹೃದಯ ಬಗ್ಗೆ ಕಾಳಜಿ ಯಾವಾಗಲೂ ಇರಲಿ

ಯಾವುದೇ ವ್ಯಾಯಾಮ ಅತಿ ಎನಿಸುವಷ್ಟುಮಾಡಬಾರದು. ನಿಯಮಿತ ಪ್ರಮಾಣದಲ್ಲೇ ಇರಬೇಕು. ಹೃದಯದ ಬಗೆಗಿನ ಕಾಳಜಿ ಒಂದು ದಿನಕ್ಕೆ ಸೀಮಿತವಾಗಬಾರದು. 35 ವರ್ಷ ದಾಟಿದ ಮಹಿಳೆಯರು, 40 ವರ್ಷ ಮೇಲ್ಪಟ್ಟಪುರುಷರು ಪ್ರತಿ ವರ್ಷ ಹೃದ್ರೋಗ ಪರೀಕ್ಷೆ ಮಾಡಿಸಿಕೊಳ್ಳಬೇಕು.

- ಡಾ.ಸಿ.ಎನ್‌. ಮಂಜುನಾಥ್‌ ಹೃದ್ರೋಗ ತಜ್ಞ   

Follow Us:
Download App:
  • android
  • ios