Clean Hand: ತರಾತುರಿಯಲ್ಲಿ ಕೈ ತೊಳೆಯೋವಾಗ ಮಕ್ಕಳು ಮಾಡ್ತಾರೆ ಈ ತಪ್ಪು
ಪದೇ ಪದೇ ಮಕ್ಕಳು ಖಾಯಿಲೆ ಬೀಳ್ತಿದ್ದಾರೆಂದ್ರೆ ಅದಕ್ಕೆ ಅವರ ಕೈ ಕೂಡ ಕಾರಣವಾಗಿರಬಹುದು. ಕೈಗಳ ಮೂಲಕ ಬ್ಯಾಕ್ಟೀರಿಯಾ ದೇಹವನ್ನು ಸೇರುತ್ತದೆ. ಹಾಗಾಗಿ ನಿಧಾನವಾಗಿ, ಸೂಕ್ತ ಕ್ರಮದಲ್ಲಿ ಮಕ್ಕಳಿಗೆ ಹ್ಯಾಂಡ್ ವಾಶ್ ಹೇಳಿಕೊಳ್ಳುವುದು ಒಳ್ಳೆಯದು.
ಕೊರೊನಾ (Corona ) ನಂತ್ರ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸೋದು ನೂರು ಪಟ್ಟು ಹೆಚ್ಚಾಗಿದೆ ಅಂದ್ರೆ ತಪ್ಪಾಗೋದಿಲ್ಲ. ಕೈ (Hand) ತೊಳೆಯುವುದು ಕೂಡ ಈಗ ಮಹತ್ವ ಪಡೆದಿದೆ. ಮನೆಯಿಂದ ಹೊರಗೆ ಹೋಗಿ ಬಂದ ತಕ್ಷಣ ಕೈ ತೊಳೆಯೋದು ಅತ್ಯಗತ್ಯವಾಗಿದೆ. ದೊಡ್ಡವರು ಸ್ಯಾನಿಟೈಸರ್ (Sanitizer) ಅಥವಾ ಸೋಪ್ (Soap) ಬಳಸಿ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ತಾರೆ. ಆದ್ರೆ ಮಕ್ಕಳ ವಿಷ್ಯಕ್ಕೆ ಬಂದಾಗ ಸ್ವಚ್ಛತೆ ಸ್ವಲ್ಪ ದೂರದ ಮಾತು. ಮಕ್ಕಳಿಗೆ ಸ್ವಚ್ಛತೆ (Cleanl) ಬಗ್ಗೆ ಹೆಚ್ಚು ಜ್ಞಾನವಿರೋದಿಲ್ಲ. ಕೈಗಳನ್ನು ಸರಿಯಾಗಿ ತೊಳೆಯದ ಕಾರಣ ಅನೇಕ ಸಮಸ್ಯೆಗಳನ್ನು ಮಕ್ಕಳು ಎದುರಿಸುತ್ತಾರೆ. ಮಳೆಗಾಲದಲ್ಲಿ ಮಕ್ಕಳು ಮಣ್ಣಿನಲ್ಲಿ ಆಡೋದು ಹೆಚ್ಚು. ಹಾಗೆ ಎಲ್ಲೆಂದರಲ್ಲಿ ಮುಟ್ಟಿ ಬರುವ ಸ್ವಭಾವ ಮಕ್ಕಳದ್ದು. ಮನೆಗೆ ಬಂದ್ಮೇಲೆ ಪಾಲಕರ ಭಯಕ್ಕೆ ಕೈ ವಾಶ್ ಮಾಡ್ತಾರೆ ನಿಜ. ಆದ್ರೆ ಸರಿಯಾಗಿ ಕೊಳಕು ಹೋಗಿರೋದಿಲ್ಲ. ಇದ್ರಿಂದ ಬ್ಯಾಕ್ಟೀರಿಯಾ ಹೊಟ್ಟೆ ಸೇರುತ್ತದೆ. ಜ್ವರ, ಹೊಟ್ಟೆ ನೋವು ಸೇರಿದಂತೆ ಅನೇಕ ಸಮಸ್ಯೆ ಕಾಡಲು ಶುರುವಾಗುತ್ತದೆ. ಮಕ್ಕಳು ಕೈ ತೊಳೆಯುವಾಗ ಪಾಲಕರು ಗಮನಿಸಬೇಕು. ಇಲ್ಲವೆ ಮಕ್ಕಳಿಗೆ ಹೇಗೆ ಕೈತೊಳೆಯಬೇಕೆಂದು ತಿಳಿ ಹೇಳಬೇಕು. ಇಂದು ನಾವು ಮಕ್ಕಳು ಕೈ ತೊಳೆಯುವಾಗ ಮಾಡುವ ತಪ್ಪುಗಳು ಏನು ಎಂಬುದನ್ನು ಹೇಳ್ತೆವೆ.
ಸೋಪ್ ಬಳಕೆ : ಮಕ್ಕಳು ತುಂಟರಾಗಿರ್ತಾರೆ. ಹಾಗೆ ಅವರಿಗೆ ಆತುರ ಹೆಚ್ಚು. ಅವಸರದಲ್ಲಿ ಎಲ್ಲವನ್ನೂ ನೀಟಾಗಿ ಮಾಡೋದಿಲ್ಲ. ಕೈತೊಳೆದುಕೊಳ್ಳುವಂತೆ ಹೇಳಿದಾಗ ಸಾಬೂನು ಕೂಡ ಬಳಸದೆ ಸಾಮಾನ್ಯ ನೀರಿನಿಂದ ಕೈತೊಳೆದುಕೊಳ್ಳುತ್ತಾರೆ. ನೀರಿನಿಂದ ಕೈಗಳನ್ನು ಸ್ವಚ್ಛಗೊಳಿಸಿದ ಕೈ ಕೊಳಕು ಹೋಗುತ್ತದೆ. ಆದ್ರೆ ಬ್ಯಾಕ್ಟೀರಿಯಾಗಳು ಕೈಯಲ್ಲಿ ಉಳಿಯುತ್ತವೆ. ಆದ್ರೆ ಸೋಪ್ ಹಚ್ಚಿ ಕೈ ತೊಳೆದಾಗ ಬ್ಯಾಕ್ಟೀರಿಯಾಗಳು ಸಾಯುತ್ತವೆ. ಇದನ್ನು ಮಕ್ಕಳಿಗೆ ಪಾಲಕರು ಹೇಳಬೇಕಾಗುತ್ತದೆ.
ಆತುರಾತುರದಲ್ಲಿ ಕೈ ವಾಶ್ : ಬೇಗ ಬೇಗ ಕೈತೊಳೆದು ಬರಬೇಕೆಂಬ ಆತುರ ಮಕ್ಕಳಲ್ಲಿರುತ್ತದೆ. ಹಾಗಾಗಿ ಬೇಗ ಬೇಗ ಕೈ ವಾಶ್ ಮಾಡ್ತಾರೆ. ಸೋಫ್ ಬಳಸದಿರುವುದು ಒಂದಾದ್ರೆ ಕೈಗಳನ್ನು ಸ್ವಚ್ಛಗೊಳಿಸುವಾಗ ಬೆರಳು ಸಂದಿಗಳಿಗೆ ಮಹತ್ವ ನೀಡೋದಿಲ್ಲ. ಆತುರದಲ್ಲಿ ಮೇಲಿಂದ ಮೇಲೆ ಕೈ ವಾಶ್ ಮಾಡಿರ್ತಾರೆ. ಪಾಲಕರಾದವರು ಮಕ್ಕಳ್ಳು ಕೈ ತೊಳೆಯುವಾಗ ನೋಡಬೇಕು. ಸಾಧ್ಯವಾದ್ರೆ ಪಾಲಕರೇ ಮಕ್ಕಳಿಗೆ ಹ್ಯಾಂಡ್ ವಾಶ್ ಮಾಡ್ಬೇಕು. ಪ್ರತಿ 30 ನಿಮಿಷಕ್ಕೊಮ್ಮೆಯಾದ್ರೂ ಕೈ ತೊಳೆಯುವಂತೆ ಮಕ್ಕಳಿಗೆ ಹೇಳ್ಬೇಕು.
ಇದನ್ನೂ ಓದಿ: ಶಾಲೆ ಶುರು, ಮುಗಿಯದ ಜ್ವರ; ಮಕ್ಕಳಲ್ಲೂ ದೀರ್ಘಾವಧಿಯ ಕೋವಿಡ್ !
ಕೊಳಕು ಸ್ಥಳದ ಸ್ಪರ್ಶ : ಮಕ್ಕಳು ತಮ್ಮ ಕೈಗಳನ್ನು ತೊಳೆದ ನಂತರ ಕೊಳಕು ಸ್ಥಳಗಳನ್ನು ಸ್ಪರ್ಶಿಸುತ್ತಾರೆ. ಇದರಿಂದಾಗಿ ಬ್ಯಾಕ್ಟೀರಿಯಾವು ಅವರ ಕೈಗಳಿಗೆ ಮತ್ತೆ ಬರುತ್ತದೆ. ಮಳೆಗಾಲದಲ್ಲಿ ಬ್ಯಾಕ್ಟೀರಿಯಾ ಹರಡುವುದು ಹೆಚ್ಚು. ಆದ್ದರಿಂದ ಈ ಋತುವಿನಲ್ಲಿ ಮಕ್ಕಳು ಹೆಚ್ಚು ಸೋಂಕುಗಳಿಗೆ ಒಳಗಾಗಬಹುದು. ಒದ್ದೆಯಾದ ಕೈಗಳು ಬ್ಯಾಕ್ಟೀರಿಯಾ (Bacteria)ವನ್ನು ಸಹ ಆಶ್ರಯಿಸಬಹುದು. ಮಗುವಿನ ಕೈಗಳನ್ನು ತೊಳೆದ ನಂತರ ಅವುಗಳನ್ನು ಟವೆಲ್ ನಿಂದ ಚೆನ್ನಾಗಿ ಒರೆಸಿ.
ಈ ರೀತಿ ಕೈ ತೊಳೆಯುವುದನ್ನು ಮಕ್ಕಳಿಗೆ ಕಲಿಸಿ :
1. ಕೈ ತೊಳೆಯುವ ಮುನ್ನ ಸ್ವಲ್ಪ ಕೈಗೆ ನೀರ (Water) ನ್ನು ಹಾಕಿ ನಂತ್ರ ಸೋಫ್ ಬಳಸುವಂತೆ ಸಲಹೆ ನೀಡಿ. ಸೋಫ್ ಬಳಸದೆ ಕೈ ತೊಳೆದ್ರೆ ಪ್ರಯೋಜನವಿಲ್ಲ ಎಂಬುದನ್ನು ಹೇಳಿ.
2. ಕೈಗೆ ಸೋಪು ಹಚ್ಚಿದ ಹೆಬ್ಬೆರಳು ಮತ್ತು ಮಣಿಕಟ್ಟನ್ನು ಚೆನ್ನಾಗಿ ಸ್ವಚ್ಛಗೊಳಿಸುವಂತೆ ಮಕ್ಕಳಿಗೆ ಹೇಳಿ.
3. ಹೀಗೆ ಕೈ ತೊಳೆಯುವುದರಿಂದ ಮಕ್ಕಳಿಗೆ ಯಾವುದೇ ರೀತಿಯ ಕಾಯಿಲೆ ಬರುವುದಿಲ್ಲ.
ಇದನ್ನೂ ಓದಿ: ಒಂದು ವರ್ಷದ ಮಗುವಿಗೆ ಶಿಸ್ತನ್ನು ಕಲಿಸೋದು ಹೇಗೆ?
ಮಕ್ಕಳು ಕೈಗಳನ್ನು ಸರಿಯಾಗಿ ತೊಳೆಯದಿದ್ದರೆ ಟೈಫಾಯಿಡ್, ಹೊಟ್ಟೆ, ಚರ್ಮದ ಸಮಸ್ಯೆಗಳು ಮತ್ತು ಕಣ್ಣಿನ ಸೋಂಕುಗಳಂತಹ ಕಾಯಿಲೆಗಳಿಗೆ ಮಕ್ಕಳು ಬಲಿಯಾಗ್ತಾರೆ.