ಹಲ್ಲುಗಳು ಹಾಗೂ ವಸಡಿನ ಆರೋಗ್ಯ ಕಾಪಾಡುವುದು ಅಂಥ ದೊಡ್ಡ ವಿಷಯವೇನೆನಿಸುವುದಿಲ್ಲ. ದಿನಕ್ಕೆರಡು ಬಾರಿ ಬ್ರಶ್ ಮಾಡುವುದು, ಆಗಾಗ ಬಾಯಿ ಮುಕ್ಕಳಿಸುವುದು, ವರ್ಷಕ್ಕೆರಡು ಬಾರಿ ಡೆಂಟಿಸ್ಟ್ ಬಳಿ ಹೋಗುವುದು- ಇಷ್ಟು ಮಾಡಿದರೆ ಸಾಕು ಎಂಬುದು ಹಲವರ ನಂಬಿಕೆ. ಆದರೆ ಇಷ್ಟೇ ಸಾಲುವುದಿಲ್ಲ. ಕೆಲವೊಂದು ನೀವು ಆರೋಗ್ಯಕರ ಅಭ್ಯಾಸ ಎಂದುಕೊಂಡದ್ದೇ ಹಲ್ಲುಗಳ ಮೇಲೆ ಉಲ್ಟಾ ಪರಿಣಾಮ ಬೀರಬಹುದು. ಓರಲ್ ಹೆಲ್ತ್ ವಿಷಯದಲ್ಲಿ ನೀವು ಈ ತಪ್ಪುಗಳನ್ನು ಮಾಡುತ್ತಿರಬಹುದು. ಚೆಕ್ ಮಾಡಿಕೊಳ್ಳಿ. 

ಬ್ರಶ್ ಸ್ವಚ್ಛತೆ
ಬ್ರಶ್‌ಗಳನ್ನು ಬಾಳಿಕೆ ಬರುವವರೆಗೂ ಬಳಸುವ ಅಭ್ಯಾಸ ಹಲವರದು. ಆದರೆ, ಪ್ರತಿ ಮೂರು ತಿಂಗಳಿಗೊಮ್ಮೆ ಬ್ರಶ್ ಬದಲಿಸುವುದು ಸರಿಯಾದ ಅಭ್ಯಾಸ. ಅಷ್ಟೇ ಅಲ್ಲ, ಯಾವುದೇ ಕಾಯಿಲೆಯಿಂದ ಚೇತರಿಸಿಕೊಂಡ ಬಳಿಕವೂ ಹೊಸ ಬ್ರಶ್ ಬಳಸಬೇಕು. ಅಷ್ಟೇ ಅಲ್ಲ, ಬಳಸುವ ಬ್ರಶ್ಶನ್ನು ಬಹಳ ಸ್ವಚ್ಛವಾಗಿ ತೊಳೆಯಬೇಕು. ವಾರಕ್ಕೊಮ್ಮೆ ಮೌತ್‌ವಾಶ್‌ನಲ್ಲಿ ಬ್ರಶ್‌ನ ತಲೆಯನ್ನು ಹತ್ತು ನಿಮಿಷಗಳ ಕಾಲ ನೆನೆಸಿಡಬೇಕು. ಇಲ್ಲದಿದ್ದಲ್ಲಿ, ನಿಮ್ಮ ಬ್ರಶ್‌ನ ಕೆಳಭಾಗದಲ್ಲಿ ಶೇಖರವಾಗುವ ಕೊಳಕೇ ಸಾಕು, ದೇಹಕ್ಕೆ ಇದ್ದಬದ್ದ ಬ್ಯಾಕ್ಟೀರಿಯಾವನ್ನೆಲ್ಲ ಸೇರಿಸಲು. 

ಇಮ್ಯೂನಿಟಿ ಹೆಚ್ಚಿಸಲು ಹಸಿ ಅರಿಶಿನ; ನೀವು ತಿಳಿದುಕೊಳ್ಳಲೇ ಬೇಕು!

ಫ್ರೆಶ್ ಜ್ಯೂಸ್
ತಾಜಾ ಹಣ್ಣಿನ ಜ್ಯೂಸ್ ಎಂದರೆ ಅದು ಆರೋಗ್ಯಕಾರಿಯೇ ಆಗಿರಬೇಕು ಎಂದುಕೊಳ್ಳುತ್ತೇವೆ. ಈ ರಂಗುರಂಗಿನ ರುಚಿಯಾದ ಜ್ಯೂಸ್ ಹೊಟ್ಟೆಗೆ, ದೇಹಕ್ಕೆ ಎಲ್ಲಕ್ಕೂ ಆರೋಗ್ಯಕಾರಿಯೇ. ಆದರೆ ಹಲ್ಲುಗಳಿಗಲ್ಲ. ಕಲರ್‌ಫುಲ್ ಆಹಾರ ಸೇವನೆ ಹಾಗೂ ತಾಜಾ ಜ್ಯೂಸ್ ಸೇವನೆಯ ಟ್ರೆಂಡ್ ಎಲ್ಲೆಡೆ ಇದೆ. ಆದರೆ, ಈ ಬಣ್ಣಗಳು ನ್ಯಾಚುರಲ್ ಆದರೂ ಹಲ್ಲುಗಳ ಆರೋಗ್ಯ ಕೆಡಿಸುತ್ತವೆ. ಹಾಗಾಗಿ, ಕಾಫಿ, ಜ್ಯೂಸ್ ಮುಂತಾದವನ್ನು ಸೇವಿಸುವಾಗ ಸ್ಟ್ರಾ ಬಳಸುವ ಅಭ್ಯಾಸ ಮಾಡಿಕೊಂಡರೆ ಹಲ್ಲುಗಳು ಅವುಗಳೊಂದಿಗೆ ಹೆಚ್ಚಿಗೆ ಸಂಪರ್ಕಕ್ಕೆ ಬರುವುದಿಲ್ಲ. ಬೆಳಗ್ಗೆ ನಿಂಬೆರಸವನ್ನು ಬಿಸಿನೀರಿಗೆ ಹಾಕಿಕೊಂಡು ಕುಡಿವ ಅಭ್ಯಾಸ ನಿಮಗಿರಬಹುದು. ಆದರೆ, ಇದು ಬಾಯಿಯೊಳಗೆ ಅಸಿಡಿಕ್ ವಾತಾವರಣ ಸೃಷ್ಟಿಸಿ, ಎನಾಮಲ್ ಸವಕಳಿಗೆ ಕಾರಣವಾಗುತ್ತದೆ. 

ಅಪರೂಪಕ್ಕೆ ರಾತ್ರಿ ಹಲ್ಲುಜ್ಜುವುದು ತಪ್ಪಿಸುವುದು
ಕೆಲವೊಮ್ಮೆ ನಿದ್ದೆ ಒತ್ತಿಕೊಂಡು ಬರುತ್ತಿದೆ ಎಂದೋ, ಮನೆಗೆ ಹೋಗುವುದು ತಡವಾಯಿತು ಎಂದೋ ರಾತ್ರಿ ಮಲಗುವ ಮುನ್ನ ಬ್ರಶ್ ಮಾಡುವುದನ್ನು ತಪ್ಪಿಸುವುದನ್ನು ಬಹುತೇಕ ಎಲ್ಲರೂ ಮಾಡುತ್ತೇವೆ. ಆದರೆ, ಇದು ಬಹಳ ಕೆಟ್ಟ ಅಭ್ಯಾಸ. ಬರಬರುತ್ತಾ ಇದು ಸಾಮಾನ್ಯ ದಿನಚರಿಯೂ ಆಗಬಹುದು. ಬೆಳಗ್ಗೆಯಿಂದ ತಿಂದದ್ದೆಲ್ಲ ಸೇರಿ ಬಾಯಿಯು ಗಬ್ಬೆದ್ದು ಹೋಗಿರುತ್ತದೆ. ಹೆಚ್ಚು ಅಸಿಡಿಕ್ ಆಗಿರುತ್ತದೆ. ಆಹಾರಗಳು ಹಲ್ಲಿನ ಸಂದುಗೊಂದಿಯಲ್ಲಿ ಚೂರುಪಾರು ಉಳಿದುಕೊಂಡಿರುತ್ತವೆ. ಇವೆಲ್ಲವೂ ಸೇರಿ ಹಲ್ಲಿನ ಮೇಲೆ ಪಾಚಿ ಸೃಷ್ಟಿಸುವ ಜೊತೆಗೆ, ಬ್ಯಾಕ್ಟೀರಿಯಾಗಳನ್ನೂ ಆಕರ್ಷಿಸುತ್ತವೆ. ಇದರಿಂದ ಹುಳುಕು ಹಲ್ಲು, ಹಲ್ಲುನೋವು, ವಸಡಿನ ತೊಂದರೆಗಳು ಕಾಣಿಸಿಕೊಳ್ಳುತ್ತವೆ. 

ಡೆಂಟಿಸ್ಟ್ ಭೇಟಿ ಮುಂದೂಡುವುದು
ಸಾಮಾನ್ಯ ಚೆಕಪ್‌ಗಾಗಿಯೋ, ಸಣ್ಣಪುಟ್ಟ ಹಲ್ಲಿನ ಸಮಸ್ಯೆಗಾಗಿಯೋ ಡೆಂಟಿಸ್ಟ್ ಹತ್ತಿರ ಹೋಗಬೇಕೆಂದರೆ ಅದನ್ನು ಸಾಧ್ಯವಾದಷ್ಟು ಮುಂದೂಡುವವರೇ ಹೆಚ್ಚು. ಆದರೆ, ಸಮಸ್ಯೆಗಳನ್ನು ಬಂದ ಮೇಲೆ ಎದುರಿಸುವುದಕ್ಕಿಂತಲೂ ಬರದಂತೆ ನೋಡಿಕೊಳ್ಳುವುದು ಜಾಣತನ. ಹಾಗಾಗಿ, ಯಾವುದೇ ಕಾರಣಕ್ಕೂ ಡೆಂಟಿಸ್ಟ್ ಹತ್ತಿರ ಹೋಗುವುದನ್ನು ತಪ್ಪಿಸಬೇಡಿ. ಪ್ರತಿ ಆರು ತಿಂಗಳಿಗೊಮ್ಮೆ ರೆಗುಲರ್ ಚೆಕಪ್ ಮಾಡಿಸಿ. 

ಕಾಫಿ ಕುಡಿದ ಬಳಿಕ ಬ್ರಶ್ ಮಾಡುವುದು
ಕಾಫಿ ಹಲ್ಲುಗಳಿಗೆ ಅಷ್ಟೇನು ಒಳ್ಳೆಯದಲ್ಲವೆಂಬುದು ಹೆಚ್ಚಿನವರಿಗೆ ಗೊತ್ತು. ಆದರೆ, ಹಾಗಂಥ ಕಾಫಿಯನ್ನು ತ್ಯಜಿಸಲಾರೆವು. ಬದಲಿಗೆ ಕಾಫಿ ಕುಡಿದ ಬಳಿಕ ಬ್ರಶ್ ಮಾಡಿದರೆ ಎಲ್ಲ ಸರಿಯಾಗುತ್ತದೆ ಎಂದುಕೊಳ್ಳುತ್ತೇವೆ. ಆದರೆ, ಇದು ಬಹಳ ತಪ್ಪಾದ ಅಭ್ಯಾಸ. ಕಾಫಿ ಸಿಕ್ಕಾಪಟ್ಟೆ ಅಸಿಡಿಕ್ ಆಗಿದ್ದು, ಮೇಲಿಂದ ಪೇಸ್ಟ್ ಹಾಕಿ ಬ್ರಶ್ ಮಾಡಿದರೆ ಬಾಯಿಯೊಳಗೆ ಮತ್ತಷ್ಟು ಅಸಿಡಿಕ್ ವಾತಾವರಣ ಸೃಷ್ಟಿಯಾಗುತ್ತದೆ. ಇದರಿಂದ ಎನಾಮಲ್ ಸವೆಯುತ್ತದೆ. ಹಾಗಾಗಿ, ಕಾಫಿ ಕುಡಿದ ಮೇಲೆ ಕನಿಷ್ಠ 30 ನಿಮಿಷವಾಗುವವರೆಗೆ ಬ್ರಶ್ ಮಾಡಬೇಡಿ. ಕಾಫಿ ಕುಡಿದ ಬಳಿಕ ಕೇವಲ ನೀರಿನಿಂದ ಬಾಯಿ ಮುಕ್ಕಳಿಸುವುದು ಉತ್ತಮ. 

ಸ್ಪೋರ್ಟ್ಸ್ ಡ್ರಿಂಕ್ಸ್
ಕ್ರೀಡಾಪಟುಗಳು, ಜಿಮ್‌ಗೆ ಹೋಗುವವರು ಹೆಚ್ಚಾಗಿ ಸ್ಪೋರ್ಟ್ಸ್ ಡ್ರಿಂಕ್ಸ್ ಸೇವಿಸುತ್ತಾರೆ. ಆದರೆ, ಸಕ್ಕರೆಯು ಅತಿಯಾಗಿರುವ ಈ ಡ್ರಿಂಕ್‌ಗಳು ಹಲ್ಲಿನ ಮೇಲೆ ಕತ್ತಿಯುದ್ಧವನ್ನೇ ಮಾಡಬಲ್ಲವು. ಅವು ಸಾಫ್ಟ್ ಡ್ರಿಂಕ್ಸ್‌ಗಿಂತ ಕೆಟ್ಟ ಪರಿಣಾಮ ಬೀರಬಲ್ಲವು. 

ಎಲ್ಲ ಇದ್ದೂ ನಾವೇಕೆ ಖುಷಿಯಾಗಿಲ್ಲ?

ಇಡೀ ದಿನ ತಿನ್ನುತ್ತಿರುವುದು
ನೀವು ಊಟ ಹೆಚ್ಚೇನು ಮಾಡದಿರಬಹುದು. ಆದರೆ ಇಡೀ ದಿನ ಒಂದಿಲ್ಲೊಂದು ಆಹಾರವನ್ನು ತಿನ್ನುತ್ತಿರುವ ಅಭ್ಯಾಸ ನಿಮಗಿರಬಹುದು. ಇದು ಹಲ್ಲುಗಳ ಆರೋಗ್ಯಕ್ಕೆ ಮಾರಕ ಅಭ್ಯಾಸ. ಇದರಿಂದ ಹಲ್ಲುಗಳ ಮೇಲೆ ಪದೇ ಪದೆ ಶುಗರ್ ಕೋಟ್ ಮಾಡಿದಂತಾಗುತ್ತದೆ. ಆಗಾಗ ಚೂರು ಚೂರೇ ಸಿಹಿ ತಿನ್ನುವ ಬದಲು ಮನಸ್ಸಿಗೆ ತೃಪ್ತಿಯಾಗುವಷ್ಟನ್ನು ಒಮ್ಮೆಗೇ ಸೇವಿಸಿ ಬಾಯಿ ಮುಕ್ಕಳಿಸಿ. 

ವೈನ್ ಸೇವನೆ
ವೈನ್ ಸೇವಿಸುವಾಗ ರುಚಿಯಲ್ಲಿ ನಿಮಗೆ ಸಿಹಿ ತಿಳಿಯದಿರಬಹುದು. ಆದರೆ, ವೈನ್‌ ತುಂಬಾ ಶುಗರ್ ತುಂಬಿರುತ್ತದೆ. ಹಾಗಾಗಿ ಅವು ಹಲ್ಲು ಹುಳುಕು ಹಿಡಿಸುವಲ್ಲಿ ಸದಾ ಮುಂದೆ. 

ಹಳದಿ ಹಲ್ಲಿಗೆ ನೀಡಿ ಮುಕ್ತಿ


ಬ್ರಶ್ ಶೇರ್ ಮಾಡುವುದು
ಹೆಚ್ಚಿನವರು ಈ ಅಭ್ಯಾಸದಿಂದ ದೂರವಿರುತ್ತಾರೆ. ಆದರೂ ಕೆಲವರಿಗೆ ತನ್ನ ಪತಿ ಅಥವಾ ಪತ್ನಿಯ ಬ್ರಶ್ ಬಳಸುವುದರಲ್ಲಿ ಯಾವ ತಪ್ಪೂ ಕಾಣಿಸದು. ಬಾಯಿಯೇ ದೇಹಾರೋಗ್ಯದ ಹೆಬ್ಬಾಗಿಲು ಎಂಬುದನ್ನು ನೆನಪಿಡಿ. ಮತ್ತೊಬ್ಬರ ಬ್ರಶ್ ಬಳಕೆಯಿಂದ ಅವರಿಗಿರುವ ಓರಲ್ ಇನ್ಫೆಕ್ಷನ್, ಪೆರಿಯೋಡೋಟೈಟಿಸ್ ಸೇರಿದಂತೆ ಹಲವು ಅಗೋಚರ ಕಾಯಿಲೆಗಳನ್ನು, ಕಾಯಿಲೆ ಹರಡುವ ಕೀಟಾಣುಗಳನ್ನು ನಿಮ್ಮ ದೇಹಕ್ಕೂ ಆಹ್ವಾನಿಸಿಕೊಳ್ಳುತ್ತೀರಿ. 

ಒತ್ತಿ ಬ್ರಶ್ ಮಾಡುವುದು
ಬಾಯಿಯನ್ನು ಸಿಕ್ಕಾಪಟ್ಟೆ ಸ್ವಚ್ಛಗೊಳಿಸುವ ಯೋಚನೆಯಲ್ಲಿ ಬ್ರಶ್ಶನ್ನು ಬಹಳ ಒತ್ತಿ ಬಳಸುತ್ತಿದ್ದೀರಾದರೆ ಇದರಿಂದ ಹಲ್ಲಿನ ಎನಾಮಲ್ ಸವೆಯುತ್ತದೆ. ಹಲ್ಲುಗಳು ಸಡಿಲಾಗುತ್ತವೆ, ನೋವು ಕಾಣಿಸಿಕೊಳ್ಳುತ್ತದೆ, ವಸಡಿನ ಸಮಸ್ಯೆಗಳೂ ಶುರುವಾಗುತ್ತವೆ. ನಿಮ್ಮ ಬ್ರಶ್‌ನ ಮುಖವೆಲ್ಲ ಜಜ್ಜಿಟ್ಟಂತೆ ಬ್ರಶ್ ಮಾಡಬೇಡಿ. ಅಷ್ಟೇ ಅಲ್ಲ, ದಿನಕ್ಕೆ ಎರಡು ಬಾರಿಗಿಂತ ಹೆಚ್ಚು ಬ್ರಶ್ ಮಾಡಿದರೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. 

ಎಕ್ಸ್ಟ್ರಾ ಹಲ್ಲುಗಳನ್ನು ತೆಗೆಯದಿರುವುದು
ಬಾಯಿಯಲ್ಲಿ ಎಕ್ಸ್ಟ್ರಾ ಹಲ್ಲುಗಳು ಹುಟ್ಟಿದ್ದರೆ ಹಲವರು ಅದು ಸೌಂದರ್ಯವೆಂದುಕೊಂಡರೆ, ಮತ್ತೆ ಕೆಲವರು ಅದರಿಂದ ಸೌಂದರ್ಯಕ್ಕಷ್ಟೇ ಕುಂದು ಎಂದುಕೊಳ್ಳುತ್ತಾರೆ. ಆದರೆ, ಹೀಗೆ ಬಾಯಿ ತುಂಬಾ ಹಲ್ಲುಗಳಿದ್ದಾಗ ಅದು ಓರಲ್ ಹೆಲ್ತ್ ಮೇಲೆಯೂ ದುಷ್ಪರಿಣಾಮ ಬೀರುತ್ತದೆ. ಹಲ್ಲುಗಳು ಒಂದು ಸಾಲಿನಲ್ಲಿಲ್ಲದಿದ್ದರೆ ಬೇಗ ಉದುರಲು ಆರಂಭವಾಗುತ್ತದೆ.