Asianet Suvarna News Asianet Suvarna News

New Year 2023: ಹೊಸ ವರ್ಷಕ್ಕಿರಲಿ ಉತ್ತಮ ಆರೋಗ್ಯದ ಹರ್ಷ

ಹೊಸ ವರ್ಷ ಬಂದಾಗ ಅನೇಕರು ಹೊಸ ನಿರ್ಷಯಗಳನ್ನು ಕೈಗೊಳ್ಳುತ್ತಾರೆ. ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಇಂತಹ ಗುರಿ ಹಾಕಿಕೊಳ್ಳಬೇಕಾಗಿರುವುದು ಅಗತ್ಯವೂ ಹೌದು

New Year With Good Health grg
Author
First Published Jan 1, 2023, 11:39 AM IST

ಬೆಂಗಳೂರು(ಜ.01):  ಹೊಸ ವರ್ಷ ಬಂದಾಗ ಅನೇಕರು ಹೊಸ ನಿರ್ಷಯಗಳನ್ನು ಕೈಗೊಳ್ಳುತ್ತಾರೆ. ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಇಂತಹ ಗುರಿ ಹಾಕಿಕೊಳ್ಳಬೇಕಾಗಿರುವುದು ಅಗತ್ಯವೂ ಹೌದು. ಇಂತಹ ರೆಸಲ್ಯೂಶನ್‌ಗಳು ಎಲ್ಲಕ್ಕಿಂತ ಹೆಚ್ಚಾಗಿ ನನ್ನನ್ನು ಸೆಳೆಯುವುದು ಆರೋಗ್ಯ ಸಂಬಂಧಿತ ನಿರ್ಣಯಗಳಲ್ಲಿ. ಇಂದಿನಿಂದ ಯೋಗ, ವ್ಯಾಯಾಮ ಮಾಡಲು ಪ್ರಾರಂಭಿಸುತ್ತೇನೆ. ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಆದ್ಯತೆ ನೀಡುತ್ತೇನೆ. ಬೆಳಗ್ಗೆ ಬೇಗ ಏಳುತ್ತೇನೆ ಎಂಬ ನಿರ್ಣಯಗಳು ಹಾಗೂ ಅವು ಕೆಲವೇ ದಿನಗಳಲ್ಲಿ ಅಂತ್ಯ ಕಾಣುವುದು, ಸಾಮಾಜಿಕ ಜಾಲತಾಣಗಳಲ್ಲಿ ಅಂತ್ಯ ಕಾಣುವುದು ಹಾಸ್ಯದ ಸರಕುಗಳಾಗಿ ಶೇರ್‌ ಆಗುತ್ತವೆ.

ಆದರೆ ಈ ವಿಷಯದ ಬಗ್ಗೆ 2023ರಲ್ಲಿ ಗಂಭೀರವಾಗಿ ಆಲೋಚಿಸಬೇಕಾದ ಅಗತ್ಯವಿದೆ. ನಾವೆಲ್ಲರೂ ಕಂಡ ಕೋವಿಡ್‌ ಸಾಂಕ್ರಾಮಿಕ, ಆರ್ಥಿಕ ಹಿನ್ನಡೆ ಜೀವನದ ಎಳು-ಬೀಳುಗಳ ಹಿನ್ನೆಲೆಯಲ್ಲಿ ಇಂತಹ ನಿರ್ಣಯಗಳಿಗೆ ಈಗ ವಿಶೇಷ ಪ್ರಾಮುಖ್ಯತೆ ಲಭಿಸುತ್ತದೆ. ಕೋವಿಡ್‌ ಕೇವಲ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲ್ಲ. ಇದು ಆರ್ಥಿಕ ವ್ಯವಸ್ಥೆ, ಉದ್ಯೋಗ ಸ್ಥಿತಿ-ಗತಿ, ಸಾಮಾಜಿಕ ಹಾಗೂ ಮಾನಸಿಕ ಸಮತೋಲನದ ಮೇಲೆಯು ಪರಿಣಾಮ ಬೀರಿದೆ. ಇಂತಹ ಸ್ಥಿತಿಗತಿಗಳಿಂದ ಹೊರಬಂದು ಹೊಸ ಆರೋಗ್ಯಕರ ಬದುಕಿನತ್ತ ಸಾಗಲು ಈ ವರ್ಷ ಆರೋಗ್ಯಕ್ಕೆ ಸಂಬಂಧಿತ ನಿರ್ಣಯಗಳು ಮುಖ್ಯಪಾತ್ರವಹಿಸುತ್ತವೆ ಎಂಬುದು ನನ್ನ ಅಭಿಪ್ರಾಯ.

Covid Variant XBB.1.5 : ಅಮೇರಿಕಾದಲ್ಲಿ ಮತ್ತೆ ಕೋವಿಡ್‌ ಸ್ಫೋಟ, ಎಕ್ಸ್‌ಬಿಬಿ.1.5 ಆತಂಕ !

ಕೋವಿಡ್‌ ಪಾಠ

2020ರಲ್ಲಿ ಕೋವಿಡ್‌ ಬಂದಾಗ ಹೊಸ ರೋಗದ ಬಗ್ಗೆ ವೈದ್ಯರಿಗೂ ತಿಳಿದಿರಲಿಲ್ಲ. ಕ್ರಮೇಣವಾಗಿ ರೋಗ ನಿಯಂತ್ರಣದ ವಿಧಾನ ಎಲ್ಲರಿಗೂ ತಿಳಿಯಿತು. ಹಾಗೆ ಜನರು ಕೂಡ ಮಾಸ್‌್ಕ ಧರಿಸುವ, ಭೌತಿಕ ಅಂತರ ಕಾಯ್ದುಕೊಳ್ಳುವ, ಸ್ವಚ್ಛತೆ ಕಾಪಾಡುವ ವಿಧಾನಗಳನ್ನು ಕಲಿತರು. ಕೋವಿಡ್‌ ಈಗ ನಿಯಂತ್ರಣಕ್ಕೆ ಬಂದಿರುವುದಕ್ಕೆ, ಒಗ್ಗಟ್ಟಿನ ಪ್ರಯತ್ನವೇ ಕಾರಣ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದಿಂದಾಗಿ 200 ಕೋಟಿಗೂ ಅಧಿಕ ಡೋಸ್‌ ಲಸಿಕೆ ನೀಡಲು ಸಾಧ್ಯವಾಯಿತು ಹಾಗೂ ಇದಕ್ಕೆ ಜನರ ಸ್ಪಂದನೆ ಕಾರಣವಾಗಿದೆ. ಕೋವಿಡ್‌ ಸಾಂಕ್ರಾಮಿಕ ರೋಗದ ಸಮಯದಲ್ಲಿ ಅನೇಕರು ಜೀವ ಕಳೆದುಕೊಂಡಿದ್ದು ನಿಜಕ್ಕೂ ದುರದೃಷ್ಟಕರ. ಈ ಬಗ್ಗೆ ಏನೇ ವಿಮರ್ಶೆಷಗಳಿದ್ದರೂ, ಈ ಎಲ್ಲಾ ಹಂತಗಳಲ್ಲಿ ಒಂದು ಮಹಾ ಸಾಂಕ್ರಾಮಿಕವನ್ನು ಸಾಮೂಹಿಕ ಪ್ರಯತ್ನದಿಂದ ತಡೆಗಟ್ಟಬಹುದು ಎಂಬುದು ಅರಿವಾಗಿರುವುದಂತೂ ಸತ್ಯ. ಇದೇ ಸಂದರ್ಭದಲ್ಲಿ, 60 ವರ್ಷ ವಯಸ್ಸು ಮೇಲ್ಪಟ್ಟಮಾತ್ರವಲ್ಲದೇ 30-40 ವರ್ಷ ವಯಸ್ಕರಿಗೂ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಕಾಡಿದ್ದವು. ಇಂತಹ ಸಮಯದಲ್ಲಿ ಯೋಗಾಭ್ಯಾಸ, ಪ್ರಾಣಾಯಾಮದ ಮಹತ್ವ ಕೂಡ ಜನರಿಗೆ ಅರಿವಾಗಿದೆ. ಅಲ್ಲದೇ, ನಿಯಮಿತ ವ್ಯಾಯಾಮ, ಆಹಾರ ಶೈಲಿ ಹಾಗೂ ಜೀವನ ಶೈಲಿಯಲ್ಲಿ ಬದಲಾವಣೆಮಾಡಿಕೊಳ್ಳುವ ಅನಿವಾರ್ಯವೂ ಉಂಟಾಗಿತ್ತು. ಇಂತಹ ಜೀವನ ಶೈಲಿಯನ್ನು ಪ್ರತಿದಿನವೂ ಅಳವಡಿಸಿಕೊಂಡರೆ ಉತ್ತಮ ಆರೋಗ್ಯ ಪಡೆಯಲು ಸಾಧ್ಯ ಎಂಬುದನ್ನು ನಾವೆಲ್ಲರೂ ತಿಳಿದುಕೊಂಡಿದ್ದೇವೆ. ಕೋವಿಡ್‌ ಸಾಂಕ್ರಾಮಿಕ ಹೊಸ ರೂಪಾಂತರಿ ವೈರಸ್‌ಗಳಿಂದ ಮರಳಿ ಬರುವ ಅಪಾಯ ಇದೆ. ಇದೀಗ ಬಿಎಫ್‌.7 ವೈರಸ್‌ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟುಮುನ್ನೆಚ್ಚರಿಕೆಯಿಂದ ಹೆಜ್ಜೆ ಇರಿಸಬೇಕಿದೆ. ಲಸಿಕೆ ಪಡೆದು ರೋಗ ನಿರೋಧಕ ಶಕ್ತಿ ಹೊಂದಿದ್ದರೂ, ಉತ್ತಮ ಜೀವನ ಶೈಲಿಯಿಂದ ಇಂತಹ ಯಾವುದೇ ಸಾಂಕ್ರಾಮಿಕಗಳನ್ನು ಧೈರ್ಯದಿಂದ ಎದುರಿಸಬಹುದು ಎಂಬುದನ್ನು ಅರಿಯಬೇಕಿದೆ.

ಸಾಂಕ್ರಾಮಿಕವಲ್ಲದ ರೋಗದ ಕಡೆ ಗಮನ

ಮಧುಮೇಹ, ಬಿಪಿ, ಕ್ಯಾನ್ಸರ್‌ ಸೇರಿದಂತೆ ಸಾಂಕ್ರಾಮಿಕವಲ್ಲದ ರೋಗಗಳ ತಡೆಗೂ ಈ ಅವಧಿಯಲ್ಲಿ ನಮ್ಮ ಸರ್ಕಾರ ಒತ್ತು ನೀಡಿದೆ. ಈಗಾಗಲೇ ಆರಂಭವಾಗಿರುವ 114 ನಮ್ಮ ಕ್ಲಿನಿಕ್‌ಗಳು ಹಾಗೂ ಒಟ್ಟಿ438 ಕ್ಲಿನಿಕ್‌ಗಳಿಂದ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯಾಗಿದೆ. ಇಂತಹ ವಿನೂತನ ಕಾರ್ಯಕ್ರಮ ಮತ್ತು ಮಹಿಳೆಯರಿಗೆ ಮೀಸಲಾದ ಆಯುಷ್ಮತಿ ಕ್ಲಿನಿಕ್‌, ಅಸಾಂಕ್ರಾಮಿಕ ರೋಗಗಳ ತಡೆ ನಿಟ್ಟಿನಲ್ಲಿ ಸುಧಾರಣೆ ಹುಟ್ಟುಹಾಕಲಿದೆ. ಇದರ ಜೊತೆಗೆ 7 ಸಾವಿರಕ್ಕೂ ಅಧಿಕ ಆರೋಗ್ಯ ಮತ್ತು ಕ್ಷೇಮ ಅಭಿವೃದ್ಧಿ ಕೇಂದ್ರಗಳ ಮೂಲಕ ಅಸಾಂಕ್ರಾಮಿಕ ರೋಗಗಳನ್ನು ತಪಾಸಣೆ ಮಾಡುವ ಕ್ರಮಗಳಿಗೆ ಒತ್ತು ನೀಡಲಾಗಿದೆ. ಹೊಸ ವರ್ಷದಲ್ಲಿ ಅಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಆದ್ಯತೆ ನೀಡುವ ಮನೋಭಾವ ಎಲ್ಲರಲ್ಲೂ ಬರಬೇಕಿದೆ. ಜನರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ರೂಢಿ ಬೆಳೆಸಿಕೊಂಡರೆ ಸರ್ಕಾರದ ಕ್ರಮಗಳಿಗೆ ಇನ್ನಷ್ಟು ಮಹತ್ವ ದೊರಕಲಿದೆ.

ಪತ್ರಕರ್ತರ ಆರೋಗ್ಯಕ್ಕಾಗಿ 50 ಲಕ್ಷ ಮೀಸಲು

ಮಾನಸಿಕ ಆರೋಗ್ಯಕ್ಕೂ ಒತ್ತು

ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಈವರೆಗೆ ಮಾನಸಿಕ ಆರೋಗ್ಯ ಕಾಪಾಡುವುದಕ್ಕೆ ಮಹತ್ವ ಸಿಕ್ಕಿರಲಿಲ್ಲ. ಕೋವಿಡ್‌ ಸಮಯದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗಿ ಕಂಡುಬಂದಿತ್ತು. ಆರೋಗ್ಯ ಇಲಾಖೆಯ ಮಾನಸಿಕ ಆರೋಗ್ಯ ವಿಭಾಗದ ವತಿಯಿಂದ ಈ ಬಗ್ಗೆ ಕ್ರಮವಹಿಸಲಾಗಿದೆ. ಈವರೆಗೆ 28 ಲಕ್ಷಕ್ಕೂ ಅಧಿಕ ಆಪ್ತ ಸಮಾಲೋಚನೆ ನಡೆಸಲಾಗಿದೆ ಎಂಬುದು ಮಹತ್ವದ ಸಂಗತಿ. ಅಲ್ಲದೇ ನಿಮ್ಹಾನ್ಸ್‌ ಸಹಯೋಗದಲ್ಲಿ ಕೈಗೊಂಡ ಬ್ರೆನ್‌ ಹೆಲ್ತ್‌ ಕಾಪಾಡಿಕೊಳ್ಳುವುದು ಕೂಡ ಮಹತ್ವ. ಹಾಗೆಯೇ ಇ-ಮನಸ್‌ ಎಂಬ ಕಾರ್ಯಕ್ರಮ ಮಾದರಿಯಾಗಿದ್ದು, ಕೇಂದ್ರ ಸರ್ಕಾರ ಇದನ್ನು ಪ್ರೇರಣೆಯಾಗಿ ಪಡೆದು ಟಿ-ಮನಸ್‌ ಕಾರ್ಯಕ್ರಮ ಪ್ರಾರಂಭಿಸಿದೆ. ಇದರ ಮುಂದಿನ ಹೆಜ್ಜೆಯಾಗಿ ಈ ವರ್ಷ ಮಾನಸಿಕ ಆರೋಗ್ಯದ ಮಹತ್ವ ಸಾರಬೇಕಿದೆ.

ಅಂಗಾಂಗ ದಾನದಲ್ಲಿ ಕರ್ನಾಟಕ ದಾಖಲೆ

ಅಂಗಾಂಗ ದಾನ ಹಾಗೂ ನೇತ್ರ ದಾನಕ್ಕೆ 2022ರಲ್ಲಿ ಅತಿ ಹೆಚ್ಚು ಮಹತ್ವ ದೊರಕಿದೆ. ಈವರೆಗೆ ಅಂಗಾಂಗ ದಾನದ ಬಗ್ಗೆ ಜನರಲ್ಲಿ ಅನೇಕ ತಪ್ಪು ಕಲ್ಪನೆಗಳಿದ್ದವು. ಇದನ್ನು ನಿವಾರಿಸಿ ಉದಾರ ಮನಸ್ಸಿನೊಂದಿಗೆ ಮತ್ತೊಬ್ಬರ ಜೀವನಕ್ಕೆ ಸಂಜೀವಿನಿಯಾಗುವ ಮಹತ್ವವನ್ನು ಜನರು ಅರಿಯುತ್ತಿದ್ದಾರೆ ಎಂಬುದು ಶ್ಲಾಘನೀಯ ಸಂಗತಿ. ಕಳೆದ ವರ್ಷ ಈ ಸಂಖ್ಯೆ 70 ಆಗಿದ್ದ ಸಂಖ್ಯೆ ಈ ವರ್ಷ 143ಕ್ಕೆ ಏರಿದೆ. ಈ ವರ್ಷ ಅಂಗಾಂಗ ದಾನದಲ್ಲಿ ಕರ್ನಾಟಕ 143 ಅಂಗಗಳ ದಾನದ ಮೂಲಕ ದಕ್ಷಿಣ ಭಾರತದಲ್ಲಿ 2ನೇ ಸ್ಥಾನ ಪಡೆದು ಮೈಲಿಗಲ್ಲು ಸಾಧಿಸಿದೆ. ಇದರಿಂದಾಗಿ ಸುಮಾರು 397 ಜನರು ಮರು ಜನ್ಮ ಪಡೆದಂತಾಗಿದೆ.

ಹೊಸ ವರ್ಷ ಆರೋಗ್ಯಕರವಾಗಿರಲಿ. ಆರೋಗ್ಯ ಸುಧಾರಣೆಯಲ್ಲಿ ಸಾಧನೆಗಳಾಗಲಿ ಎಂದು ಆಶಿಸುತ್ತೇನೆ. ಹೊಸ ವರ್ಷದ ಶುಭಾಶಯಗಳು: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌

Follow Us:
Download App:
  • android
  • ios