Asianet Suvarna News Asianet Suvarna News

Dakshina Kannada: 14 ಕಡೆಗಳಲ್ಲಿ ‘ನಮ್ಮ ಕ್ಲಿನಿಕ್‌’ ಅಕ್ಟೋಬರ್‌ ಅಂತ್ಯಕ್ಕೆ ಕಾರ್ಯಾರಂಭ

  • ದ.ಕ.: 14 ಕಡೆಗಳಲ್ಲಿ ‘ನಮ್ಮ ಕ್ಲಿನಿಕ್‌’ ಅಕ್ಟೋಬರ್‌ ಅಂತ್ಯಕ್ಕೆ ಕಾರ್ಯಾರಂಭ
  • ಉಚಿತ ಔಷಧ, ತಪಾಸಣೆಗೆ ಎಲ್ಲರಿಗೆ ಮುಕ್ತ ಅವಕಾಶ, ಬೆಳಗ್ಗೆ 9ರಿಂದ ಸಂಜೆ 4.30ರ ವರೆಗೆ ಕ್ಲಿನಿಕ್‌ ಓಪನ್‌
Namma Clinic in 14 locations will be operational by the end of October dakshina kannada rav
Author
First Published Sep 24, 2022, 2:14 PM IST

ಮಂಗಳೂರು (ಸೆ.24) : ನಗರದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆರೋಗ್ಯ ಸೇವೆಗೆ ಸರ್ಕಾರ ಅಕ್ಟೋಬರ್‌ ಅಂತ್ಯಕ್ಕೆ ಆರಂಭಿಸಲಿರುವ ಮಹತ್ವಾಕಾಂಕ್ಷೆಯ ‘ನಮ್ಮ ಕ್ಲಿನಿಕ್‌’ ಸ್ಥಾಪನೆಗೆ ದ.ಕ.ದಲ್ಲಿ ಸಿದ್ಧತೆ ನಡೆಯುತ್ತಿದೆ. ಸುಮಾರು 14 ಕಡೆಗಳಲ್ಲಿ ನಮ್ಮ ಕ್ಲಿನಿಕ್‌ ಸ್ಥಾಪನೆಗೆ ಜಿಲ್ಲಾ ಆರೋಗ್ಯ ಇಲಾಖೆ ರೂಪುರೇಷೆ ಸಿದ್ಧಪಡಿಸಿದೆ. ಎರಡು ಕಡೆ ಹೊರತುಪಡಿಸಿ ಬೇರೆ ಕಡೆಗಳಲ್ಲಿ ಬಾಡಿಗೆ ಕಟ್ಟಡಗಳಲ್ಲಿ ನಮ್ಮ ಕ್ಲಿನಿಕ್‌ ಕಾರ್ಯನಿರ್ವಹಿಸಲಿದೆ. ನಮ್ಮ ಕ್ಲಿನಿಕ್‌ನಲ್ಲಿ ತಲಾ ಒಬ್ಬರು ವೈದ್ಯಾಧಿಕಾರಿ, ಶುಶ್ರೂಷಕಿ, ಪ್ರಯೋಗಶಾಲಾ ತಂತ್ರಜ್ಞರು ಹಾಗೂ ಗ್ರೂಪ್‌ ಡಿ ಸೇರಿ ನಾಲ್ಕು ಮಂದಿ ಇರುತ್ತಾರೆ.

ಅಕ್ಟೋಬರ್ ಅಂತ್ಯಕ್ಕೆ ರಾಜ್ಯದಲ್ಲಿ 438 ‘ನಮ್ಮ ಕ್ಲಿನಿಕ್‌’ ಪ್ರಾರಂಭ: ಸಚಿವ ಸುಧಾಕರ್‌

ಸುಳ್ಯದ ದುಗ್ಗಲಡ್ಕ, ಪುತ್ತೂರಿನ ಬನ್ನೂರು, ಕಡಬದ ಕೋಡಿಂಬಾಳ, ಬಂಟ್ವಾಳದ ಪಾಣೆಮಂಗಳೂರು, ಮೂಲ್ಕಿಯ ಲಿಂಗಪ್ಪಯ್ಯ ಕಾಡು, ಮೂಡುಬಿದಿರೆಯ ಗಂಟಾಲಕಟ್ಟೆ, ಉಳ್ಳಾಲದ ಕೆರೆಬೈಲು ಹಾಗೂ ಮಂಗಳೂರಿನ ಏಳು ಕಡೆಗಳಲ್ಲಿ ನಮ್ಮ ಕ್ಲಿನಿಕ್‌ ತಲೆ ಎತ್ತಲಿದೆ. ಮಂಗಳೂರು ತಾಲೂಕಿನ ಕುಂಜತ್ತಬೈಲ್‌ ಉತ್ತರ, ದೇರೇಬೈಲ್‌ ಉತ್ತರ, ಬೋಳೂರು, ಹೊಯ್ಗೆ ಬಜಾರ್‌, ಸೂಟರ್‌ಪೇಟೆ, ಪಚ್ಚನಾಡಿ ಹಾಗೂ ಮೀನಕಳಿಯ-1ರಲ್ಲಿ ನಮ್ಮ ಕ್ಲಿನಿಕ್‌ ತೆರೆಯಲು ಜಾಗ ನಿಗದಿಪಡಿಸಲಾಗಿದೆ.

ಕ್ಲಿನಿಕ್‌ ಸಂಜೆ ವರೆಗೆ ಮಾತ್ರ:

ನಮ್ಮ ಕ್ಲಿನಿಕ್‌ ಬೆಳಗ್ಗೆ 9ರಿಂದ ಸಂಜೆ 4.30ರ ವರೆಗೆ ಕಾರ್ಯನಿರ್ವಹಿಸಲಿದೆ. ಭಾನುವಾರ ಸೇರಿದಂತೆ ಸರ್ಕಾರಿ ರಜಾ ದಿನಗಳಲ್ಲಿ ನಮ್ಮ ಕ್ಲಿನಿಕ್‌ ಬಂದ್‌ ಆಗಿರುತ್ತದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಮಿಷನ್‌ನಡಿ ಸಿಗುವ ಎಲ್ಲ ಯೋಜನೆಗಳೂ ಇಲ್ಲಿ ಲಭ್ಯವಿರಲಿದೆ. ಮಲೇರಿಯಾ ಮತ್ತಿತರ ರೋಗಗಳ ರಕ್ತತಪಾಸಣೆ, ತಾಯಿ ಮತ್ತು ಮಗುವಿನ ಆರೈಕೆ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಗುವ ಎಲ್ಲ ರೀತಿಯ ಸೌಲಭ್ಯಗಳೂ ಇಲ್ಲಿ ಸಿಗಲಿದೆ. ಇಲ್ಲಿ ತಪಾಸಣೆ ನಡೆಸಿದ ಬಳಿಕ ಇತರೆ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಅಥವಾ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಇವರು ಶಿಫಾರಸು ಮಾಡಬಹುದಾಗಿದೆ. ಹಾಗೆಂದು ಇಲ್ಲಿರುವ ಸಿಬ್ಬಂದಿ ಶುಶ್ರೂಷೆಗೆ ಮನೆ ಮನೆಗೆ ಭೇಟಿ ನೀಡುವಂತಿಲ್ಲ. ಉಚಿತ ಔಷಧ ನೀಡಲಿದ್ದು, ಬಿಪಿಎಲ್‌ ಕಾರ್ಡ್‌ದಾರರು ಮಾತ್ರವಲ್ಲ ಯಾರು ಬೇಕಾದರೂ ನಮ್ಮ ಕ್ಲಿನಿಕ್‌ಗೆ ಭೇಟಿ ನೀಡಿ ಪ್ರಯೋಜನ ಪಡೆದುಕೊಳ್ಳಬಹುದು.

ಬೆಂಗಳೂರು: ‘ನಮ್ಮ ಕ್ಲಿನಿಕ್‌’ಗೆ ವೈದ್ಯರು, ಜಾಗವೇ ಸಿಗುತ್ತಿಲ್ಲ..!

ಕೋವಿಡ್‌ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗೆ ಆದ್ಯತೆ:

ನಮ್ಮ ಕ್ಲಿನಿಕ್‌ಗಳಿಗೆ ವೈದ್ಯಾಧಿಕಾರಿ, ಶುಶ್ರೂಷಕಿ, ಪ್ರಯೋಗಶಾಲಾ ತಂತ್ರಜ್ಞ ಹಾಗೂ ಡಿ ಗ್ರೂಪ್‌ ಸಿಬ್ಬಂದಿ ನೇಮಕಕ್ಕೆ ಜಿಲ್ಲಾ ಆರೋಗ್ಯ ಇಲಾಖೆಗೆ ಅರ್ಜಿ ಸಲ್ಲಿಕೆಯಾಗಿದೆ. ಆಯ್ಕೆ ಪ್ರಕ್ರಿಯೆ ಇನ್ನು 15 ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಕೋವಿಡ್‌ ವೇಳೆ ಕರ್ತವ್ಯ ನಿರ್ವಹಿಸಿ ಮಾ.31ರಂದು ಸೇವೆಯಿಂದ ಬಿಡುಗಡೆಗೊಂಡ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಪ್ರಥಮ ಆದ್ಯತೆ ನೀಡಲಾಗುತ್ತದೆ.

ನಮ್ಮ ಕ್ಲಿನಿಕ್‌ಗೆ ಬೇಕಾಗುವ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ವೈದ್ಯರು ಮತ್ತು ಸಿಬ್ಬಂದಿ ನೇಮಕ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಅಲೆಮಾರಿ ಹಾಗೂ ಕಾಲನಿಗಳೇ ಮುಂತಾದವುಗಳನ್ನು ದೃಷ್ಟಿಯಲ್ಲಿರಿಸಿಕೊಂಡು ನಮ್ಮ ಕ್ಲಿನಿಕ್‌ ಸ್ಥಾಪನೆಯ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಅಕ್ಟೋಬರ್‌ ಅಂತ್ಯಕ್ಕೆ ಎಲ್ಲವೂ ಸಿದ್ಧಗೊಂಡು ನಮ್ಮ ಕ್ಲಿನಿಕ್‌ ಕಾರ್ಯಾರಂಭಿಸುವ ಗುರಿ ಹೊಂದಲಾಗಿದೆ.

-ಡಾ.ಕಿಶೋರ್‌ ಕುಮಾರ್‌, ಜಿಲ್ಲಾ ಆರೋಗ್ಯಾಧಿಕಾರಿ, ದ.ಕ.

Follow Us:
Download App:
  • android
  • ios