ಯೋಗ ಸಹಸ್ರಾರು ಮಂದಿಯ ಜೀವನವನ್ನು ಬದಲಿಸಿದೆ. ಸೋತು ಕುಗ್ಗಿ ಹೋದವರು ಯೋಗದ ಮೊರೆ ಹೋಗಿ ಬದಲಾದ ಅನೇಕ ನಿದರ್ಶನಗಳಿವೆ. ನಾಳೆ ವಿಶ್ವ ಯೋಗ ದಿನ. ಈ ಸಂದರ್ಭದಲ್ಲಿ ಯೋಗ ಕುರಿತ ವಿಶೇಷ ಲೇಖನ.

ಅದು ಎಂಭತ್ತರ ದಶಕವಿದ್ದಿರಬಹುದು. ದೆಹಲಿಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ಸಮ್ಮೇಳನ ನಡೆದಿತ್ತು. ದೇಶ ವಿದೇಶಗಳ ಯೋಗಿಗಳು, ಯೋಗ ತಜ್ಞರು, ಸಾಧು
ಸಂತರು, ವೈದ್ಯರು, ಮನೋವೈದ್ಯರು, ವಿಜ್ಞಾನಿಗಳು, ಮನೋವಿಜ್ಞಾನಿಗಳು ಭಾಗವಹಿಸಿದ್ದರು.

ತಪ್ಪದೇ ಯೋಗಾಭ್ಯಾಸ ಮಾಡ್ತಾರೆ ಬಾಲಿವುಡ್‌ನ ಈ ಸಪ್ತ ಬೆಡಗಿಯರು!

ಯೋಗ ಮತ್ತು ಅದರ ಮಹತ್ವ ಕುರಿತು ಮೂರು ದಿನ ಗೋಷ್ಠಿಗಳು, ಸಂವಾದಗಳು, ಸಂಭಾಷಣೆಗಳು ನಡೆದವು. ಯೋಗವು ವಿಜ್ಞಾನವೇ, ಕಲೆಯೇ, ಅತೀಂದ್ರೀಯ ವಿದ್ಯೆಯೇ ಎಂಬ ಜಿಜ್ಞಾಸೆ ಮೂಡಿತು. ಅದರ ಮೇಲೆ ದೀರ್ಘ ಚರ್ಚೆಯಾಯಿತು. ಯೋಗವು ವಿಜ್ಞಾನವಲ್ಲ ಎಂದು ಯೋಗಿಗಳು ಮತ್ತು ವಿಜ್ಞಾನವೆಂದು ವಿಜ್ಞಾನಿಗಳು ವಾದಿಸಿದರು.

ಕುಂಡಲಿನಿಯನ್ನು ಜಾಗೃತಗೊಳಿಸುವುದೇ ಯೋಗದ ಮುಖ್ಯ ಉದ್ದೇಶ ಎಂದು ಯೋಗಿಗಳು ಹೇಳಿದರೆ, ಕುಂಡಲಿನಿ ನಾಭಿ(ಹೊಕ್ಕಳ) ಕೆಳಗಿರುವ ಒಂದು ಶಕ್ತಿ ಕೇಂದ್ರವಷ್ಟೇ ಎಂದು ವಿಜ್ಞಾನಿಗಳು ಮತ್ತು ವೈದ್ಯ ವಿಜ್ಞಾನಿಗಳು ಹೇಳಿದರು. ಯೋಗ ತಜ್ಞರು ಮತ್ತು ಯೋಗ ಗುರುಗಳು ‘ಯೋಗ ಒಂದು ಕಲೆ’ ಎಂದರು.

ಮನಸ್ಸಿನ ಏಕಾಗ್ರತೆಗೆ ಯೋಗ ಅನಿವಾರ್ಯವಲ್ಲ ಎಂದು ವಾದಿಸಿದ ವಿಜ್ಞಾನಿಗಳು ಆಸನ, ಪ್ರಾಣಾಯಾಮ ಮಾಡದೆ ಅಗಾಧ ಏಕಾಗ್ರತೆಯನ್ನು ಮತ್ತು ನೆನಪಿನ ಶಕ್ತಿಯನ್ನು ಹೊಂದಿದ್ದ ನ್ಯೂಟನ್ ಮತ್ತು ಎಡಿಸನ್‌ರಂಥ ವಿಶ್ವವಿಖ್ಯಾತ ವಿಜ್ಞಾನಿಗಳು ಗುರುತ್ವಾಕರ್ಷಣೆ ಮತ್ತು ವಿದ್ಯುತ್ ಬಲ್ಬ್‌ನಂಥ ಆವಿಷ್ಕಾರ ಮಾಡಿರುವುದನ್ನು ಉಲ್ಲೇಖಿಸಿದರು. ಯೋಗದ ಉದ್ದೇಶ ಜೀವನ್ಮುಕ್ತಿ ಅರ್ಥಾತ್ ಮುಕ್ತಿ ಸಾಧನೆಯಾದರೂ, ಆರೋಗ್ಯಪೂರ್ಣ ಮತ್ತು ಅರ್ಥಪೂರ್ಣ ಜೀವನಕ್ಕೆ ಯೋಗ ಅಗತ್ಯವಾದರೂ ಅನಿವಾರ್ಯವಲ್ಲ ಎಂಬ ನಿರ್ಣಯದೊಂದಿಗೆ ಸಮ್ಮೇಳನ ಮುಕ್ತಾಯಗೊಂಡಿತ್ತು.

ಹೃದಯದ ಆರೋಗ್ಯಕ್ಕೆ ಪೂರಕ ಆಸನಗಳಿವು

ಯೋಗದ ಶಾಬ್ದಿಕ ಅರ್ಥ ಕೊಡುವುದು, ಸೇರುವುದು ಸಂಯೋಜನೆಗೊಳ್ಳುವುದು ಎಂದಾಗುತ್ತದೆ. ಯೋಗವು ಮುಖ್ಯವಾಗಿ ವ್ಯಕ್ತಿಯನ್ನು ಶಾರೀರಿಕ ಮತ್ತು ಮಾನಸಿಕ ಬಿಗುವಿನಿಂದ, ಒತ್ತಡದಿಂದ ಮುಕ್ತಗೊಳಿಸುತ್ತದೆ. ಒತ್ತಡಮುಕ್ತ ಶರೀರ ಮತ್ತು ಮನಸ್ಸು ವ್ಯಕ್ತಿತ್ವ ವಿಕಾಸ ಪ್ರಕ್ರಿಯೆಯಲ್ಲಿ ಉನ್ನತಿಗೇರುತ್ತವೆ.

ಶಾರೀರಿಕ ಮತ್ತು ಮಾನಸಿಕ ಕ್ರಿಯೆಯಾದ ಯೋಗ ಶರೀರ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಹೊಂದುವುದನ್ನು, ಆ ಮೂಲಕ ಪ್ರಕೃತಿಯ ಚೈತನ್ಯದ ಭಾಗವಾಗುವುದನ್ನು ಕಲಿಸಿಕೊಡುತ್ತದೆ. ಇಂದ್ರಿಯಗಳನ್ನು ಹತೋಟಿಯಲ್ಲಿಡಲು ಉಸಿರಾಟವನ್ನು ನಿಯಂತ್ರಿಸಿ ಶರೀರವನ್ನು ಮನಸ್ಸಿಗೆ, ಮನಸ್ಸನ್ನು ಆತ್ಮಕ್ಕೆ ಆಪ್ತಗೊಳಿಸುತ್ತದೆ ಎಂದು ಯೋಗ ತತ್ವ ಶಾಸ್ತ್ರದಲ್ಲಿ ಹೇಳಲಾಗಿದೆ. 

ಋಗ್ವೇದದ ಒಂದು ಸ್ತೋತ್ರ (೫.೮೧.೧)ದಲ್ಲಿ ಯೋಗ ಶಬ್ದದ ವ್ಯತ್ಪತ್ತಿಯಾಗಿದ್ದು ಅದು ಉದಯಿಸುವ ಸೂರ್ಯದೇವನಿಗೆ ಸಮರ್ಪಣೆಯಾಗಿದೆ. ಅಥರ್ವ ವೇದದಲ್ಲಿ ವಿವಿಧ ಶಾರೀರಿಕ ಭಂಗಿಗಳು ಯೋಗಾಸನಗಳಾಗಿ ವಿಕಾಸಗೊಂಡ ಬಗೆಯಿದೆ.

ಬ್ರಹ್ಮದಾರಣ್ಯಕ ಉಪನಿಷತ್ತಿನಲ್ಲಿ ಪ್ರಾಣಾಯಾಮದ ಉಲ್ಲೇಖವಿದ್ದರೆ ಛಂದೋಗ್ಯ ಉಪನಿಷತ್ತಿನಲ್ಲಿ ಪ್ರತ್ಯಾಹಾರ ಅಂದರೆ ಇಂದ್ರಿಯಗಳ ನಿಯಂತ್ರಣದ ಉಲ್ಲೇಖವಿದೆ. ಋಗ್ವೇದದ ಪ್ರಕಾರ ಯೋಗವು ವೇದಗಳಿಗಿಂತ ಮುಂಚಿನ ಕಾಲದಷ್ಟು ಪ್ರಾಚೀನದಾಗಿದೆ. ವಿಕಾಸಗೊಂಡಿದ್ದು ಕ್ರಿ.ಪೂ.5 ನೇ ಮತ್ತು 6 ನೇ ಶತಮಾನಗಳಲ್ಲಿ.

ಅದಕ್ಕಿಂತ ಮುಂಚೆ ೩ನೇ ಶತಮಾನದಲ್ಲಿ ಯೋಗಭ್ಯಾಸ ಕ್ರಿಯೆಗಳು ಆಚರಣೆಯಲ್ಲಿದ್ದವು ಎಂದು ಬೌದ್ಧ ಧರ್ಮದ ಪಾಲಿ ಭಾಷೆಯ ಗ್ರಂಥಗಳಲ್ಲಿ ಬರೆಯಲಾಗಿದೆ. ಕ್ರಿ.ಪೂ. ಮೊದಲನೇ ಸಹಸ್ರಮಾನದ ಪೂರ್ವಾರ್ಧ ಕಾಲವೇ ಯೋಗ ಪಿತಾಮಹ ಪತಂಜಲಿಯ ಕಾಲವಾಗಿತ್ತು. ಕ್ರಿ.ಪೂ. 3300-1900 ಅವಧಿಯ ಸಿಂಧೂ ಕಣಿವೆ ನಾಗರಿಕತೆಯಲ್ಲಿ ಯೋಗ ವಿಕಾಸಗೊಂಡಿತು ಎಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.

ಯೋಗ ಪಶ್ಚಿಮ ದೇಶಗಳಿಗೆ ಪರಿಚಯವಾಗಿದ್ದುದು 20 ನೇ ಶತಮಾನದಲ್ಲಿ. ಯೋಗ ಗುರುಗಳು ಯೋಗವನ್ನು ಸಾಗರದಾಚೆಗೂ ಕೊಂಡೊಯ್ದರು. 20 ನೇ ಶತಮಾನದ ಉತ್ತರಾರ್ಧದಲ್ಲಿ ಯೋಗವು ಯುರೋಪಿನ ದೇಶಗಳಲ್ಲಿ ಹೆಚ್ಚು
ಪ್ರಚಾರಗೊಂಡು ಜನಪ್ರಿಯವಾಗಲಾರಂಭಿಸಿತು. ಫ್ರಾನ್ಸ್, ಜರ್ಮನಿ, ಇಟಲಿಯಂಥ ಪ್ರಮುಖ ದೇಶಗಳಲ್ಲಿ ಭಾರತದ ಯೋಗ ಗುರುಗಳು ಯೋಗ ಕೇಂದ್ರಗಳನ್ನು ಆರಂಭಿಸಿದರು.

ದೇಶ ವಿದೇಶಗಳಲ್ಲಿ ಯೋಗ ಗುರುವೆಂದೇ ಖ್ಯಾತರಾಗಿದ್ದ ಬಿ.ಕೆ.ಎಸ್. ಅಯ್ಯಂಗಾರ್ ಪ್ಯಾರಿಸ್‌ನಲ್ಲಿ ಐಫೆಲ್ ಗೋಪುರಕ್ಕೆ ಸಮಾನಾಂತರವಾಗಿ ಕಾಣುವಂತೆ ಪದ್ಮಾಸನ ಭಂಗಿಯಲ್ಲಿ ಕುಳಿತ ಭಾವಚಿತ್ರ ಗಮನಾರ್ಹವಾಗಿದೆ.

ಯೋಗದಲ್ಲಿ ಆಸನಗಳು ಇರುವಂತೆ ಮುದ್ರೆಗಳಿವೆ

ಯೋಗದ ಮೂಲ ನೆಲೆ ನಮ್ಮ ದೇಶವೇ. ಹಿಮಾಲಯದಲ್ಲಿ ಯೋಗದ ಆವಿಷ್ಕಾರವಾಗಿರಬಹುದು. ಪತಂಜಲಿಯ ಯೋಗ ಸೂತ್ರ(ಯೋಗಶ್ಚಿತ್ತವೃತ್ತಿ ನಿರೋಧ)ದಂತೆ ಇಂದ್ರಿಯಗಳನ್ನು ಮತ್ತು ಮನಸ್ಸನ್ನು ನಿಯಂತ್ರಿಸುವ ಸೂತ್ರ
ಭಗವದ್ಗೀತೆಯಲ್ಲೂ ಇದೆ. ‘ಶರೀರಕ್ಕಿಂತ ಇಂದ್ರಿಯಗಳು ಪ್ರಬಲ, ಇಂದ್ರಿಯಗಳಿಗಿಂತ ಮನಸ್ಸು ಪ್ರಬಲ, ಮನಸ್ಸಿಗಿಂತ ಆತ್ಮ ಪ್ರಬಲ’ ಎಂದು ಶ್ರೀಕೃಷ್ಣನು ಅರ್ಜುನನಿಗೆ ಹೇಳುತ್ತಾನೆ. ಯೋಗ
ಕ್ರಿಯೆ ಶರೀರದೊಳಗೆ ನಡೆಯುತ್ತದೆ.

ಆ ಕ್ರಿಯೆಯಲ್ಲಿ ಶರೀರ, ಮನಸ್ಸು ಮತ್ತು ಆತ್ಮ ಸಂಯೋಜನೆಗೊಳ್ಳುತ್ತವೆ. ಶರೀರದಿಂದ ಮನಸ್ಸಿನೆಡೆಗೆ, ಮನಸ್ಸಿನಿಂದ ಆತ್ಮದೆಡೆಗೆ- ಹೀಗೆ ನಡೆಯುತ್ತದೆ ಯೋಗ ಯಾತ್ರೆ.

ಯೋಗವೆಂದರೆ...

- ಯೋಗ ಹನ್ನೊಂದು ಹಿಂದೂ ತತ್ವಶಾಸ್ತ್ರಗಳಲ್ಲಿ ಒಂದು
- ಯೋಗದ ಶಬ್ದಾರ್ಥ ಕೂಡುವುದು, ಸೇರುವುದು , ಸಂಯೋಜನೆ

- ಯೋಗ ಉದಯಿಸುವ ಸೂರ್ಯನಿಗೆ ಅರ್ಪಣೆಗೊಳ್ಳುವ ಶಾರೀರಿಕ ಭಂಗಿ
- ಯೋಗವು ಆಸನ, ಪ್ರಾಣಾಯಾಮ, ಮುದ್ರೆಗಳ ಒಳಗೊಂಡಿದೆ
- ಯೋಗವೆಂದರೆ ಕೇವಲ ವ್ಯಾಯಾಮವಲ್ಲ ಇದು ಶರೀರದೊಳಗಿನ ಕ್ರಿಯೆ

- ಇಲ್ಲಿದೆ ನಿರ್ದಿಷ್ಟ ಅಂಗಗಳ ಸ್ವಾ ಸ್ಥ್ಯಕ್ಕೆ ನಿರ್ದಿಷ್ಟ ಆಸನ
- ಯೋಗವು ಅನುಭವ ಶಾಸ್ತ್ರ, ಜೀವನ ಕ್ರಿಯೆ

ಯೋಗದಲ್ಲಿ ಆಸನಗಳು ಇರುವಂತೆ ಮುದ್ರೆಗಳಿವೆ.

ಸುಖಾಸನ ಅಥವಾ ಪದ್ಮಾಸನದ ಭಂಗಿಯನ್ನು ಗಮನಿಸರೆ ಸಾಧಕರ ಎರಡೂ ಕೈಗಳ ತೋರು ಬೆರಳುಗಳು ಹೆಬ್ಬೆರಳಿಗೆ ಸ್ಪರ್ಶಿಸಿರುತ್ತವೆ. ಅದು ಸರ್ವ ಶ್ರೇಷ್ಠ ಮುದ್ರೆ. ಅದರಿಂದ ಶರೀರ ಮತ್ತು ಮನಸ್ಸಿನ ನಡುವೆ ಸಂಪರ್ಕ ಉಂಟಾಗುತ್ತದೆ, ಹೀಗೆ ಕೈಗಳ ಉಳಿದ ಬೆರಳುಗಳು ಹೆಬ್ಬೆರಳಿಗೆ ಸ್ಪರ್ಶಿಸುವ ಮುದ್ರೆಗಳೂ ಇವೆ. ಈ ಮುದ್ರೆಗಳ ಮಹತ್ವವನ್ನು ಅರಿತುಕೊಂಡಿರುವ ಇರಾಣದ ಚಲನಚಿತ್ರ ನಿರ್ದೇಶಕ ಮಜೀದ್ ಮಜೀದಿ ‘ನಾನು ಕೈಯ ಬೆರಳುಗಳ ತುದಿಯಲ್ಲಿ ದೇವರೊಂದಿಗೆ ಸಂಭಾಷಣೆ ನಡೆಸುತ್ತೇನೆ’ ಎಂದು ಹೇಳುತ್ತಾನೆ.

ಅವನ ನಿರ್ದೇಶನದ ‘ಡ್ರೀಮ್ಸ್ ಆಫ್ ಪ್ಯಾರಡೈಸ್’ ಮತ್ತು ‘ಫಾದರ್’ ಚಲನಚಿತ್ರಗಳು ದುರಂತಕ್ಕೀಡಾಗುವ ಪಾತ್ರಗಳ ಕೈ ಬೆರಳುಗಳ ತುದಿಯಲ್ಲಿ ದೈವಿಕತೆ ಸಂಚಲನಗೊಳ್ಳುವ ಸೂಕ್ಷ್ಮ ಸನ್ನಿವೇಶದೊಂದಿಗೆ ಮುಕ್ತಾಯವಾಗುತ್ತವೆ.

- ಮಾಣಿಕರಾವ ಪಸಾರ