ಹೃದಯದ ಆರೋಗ್ಯಕ್ಕೆ ಪೂರಕ ಆಸನಗಳಿವು
ಯೋಗಕ್ಕೆ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ದೊರಕಿದಂದಿನಿಂದ ವಿಶ್ವ ಯೋಗದಿನವನ್ನು ಪ್ರತಿ ವರ್ಷದ ಜೂ. 21 ರಂದು ಅಭಿವೃದ್ಧಿಗಾಗಿ ಯೋಗ, ಶಾಂತಿಗಾಗಿ ಯೋಗ ಹೀಗೆ ಒಂದೊಂದು ಘೋಷವಾಕ್ಯದಡಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯ ವಿಶ್ವಯೋಗ ದಿನದ ಘೋಷವಾಕ್ಯ ‘ಹೃದಯಕ್ಕಾಗಿ ಯೋಗ’ ಎಂಬುದಾಗಿದ್ದು, ಈ ಹಿನ್ನೆಲೆಯಲ್ಲಿ ಹೃದಯ ಹಾಗೂ ಯೋಗಕ್ಕೆ ಇರುವ ಸಂಬಂಧ ಏನು? ಹೃದಯದ ಆರೋಗ್ಯವನ್ನು ಯೋಗ ಹೇಗೆ ಕಾಪಾಡಬಲ್ಲದು ಎಂಬ ಮಾಹಿತಿ ಇಲ್ಲಿದೆ.
ಈ ‘ಬಾರಿ ಹೃದಯಕ್ಕಾಗಿ ಯೋಗ’ ಎಂಬ ಘೋಷವಾಕ್ಯದಡಿ ವಿಶ್ವಯೋಗದಿನವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಹೃದಯಕ್ಕೆ ಸಹಕಾರಿಯಾಗಿರುವ ಕೆಲವು ಆಸನಗಳು, ಅವುಗಳ ಉಪಯೋಗಗಳು ಇಲ್ಲಿವೆ.
ಶವಾಸನ
ಬೆನ್ನು ಕೆಳಗೆ ಮಾಡಿಕೊಂಡು ಅಂಗಾತ ಮಲಗಿಕೊಳ್ಳುವುದೇ ಶವಾಸನ. ಅಂದರೆ ಇಲ್ಲಿ ಒಂದು ಮೃತ ಶರೀರ ಮಲಗಿದಂತೆ ಜೀವಂತ ಶರೀರವೂ ಮಲಗಿಕೊಂಡಿರುತ್ತದೆ. ಈ ಆಸನದಿಂದ ಆಲಸ್ಯ ದೂರವಾಗಿ ಮನಸ್ಸು ಹಗುರವಾಗುತ್ತದೆ. ರಕ್ತಪರಿಚಲನೆ ಸುಧಾರಣೆಗೊಂಡು ನರಗಳು ಚುರುಕಾಗುತ್ತವೆ. ರಕ್ತದೊತ್ತಡ, ಮಾನಸಿಕ ಒತ್ತಡಗಳು ದೂರವಾಗಿ ಹೃದಯದಲ್ಲಿನ ರಕ್ತಸಂಚಾರ ಸುಸೂತ್ರವಾಗಿ ಆಗುತ್ತದೆ.
ಸರ್ವಾಂಗಾಸನ
ಅಂಗಾತವಾಗಿ ಮಲಗಿ ಎರಡೂ ಕಾಲುಗಳನ್ನು ಮೇಲಕ್ಕೆತ್ತಿ, ಭುಜದ ಮೇಲೆ ನಿಲ್ಲಿಸುವ ಆಸನ. ಈ ಆಸನವನ್ನು ಎಲ್ಲ ಆಸನಗಳ ತಾಯಿ ಎನ್ನುತ್ತಾರೆ. ಈ ಆಸನದ ಅಭ್ಯಾಸದಿಂದ ರಕ್ತಪರಿಚನೆ ಚೆನ್ನಾಗಿ ಉಂಟಾಗಿ, ಎಲ್ಲ
ಅಂಗಗಳಲ್ಲೂ ಹುರುಪು ಉಂಟಾಗುತ್ತದೆ. ಈ ಆಸನದಿಂದ ತೋಳುಗಳ ಮಾಂಸಖಂಡಗಳು ಬಲಿಷ್ಠಗೊಳ್ಳುತ್ತವೆ. ಇದೆಲ್ಲದರೊಂದಿಗೆ ಹೃದಯದ ದೌರ್ಬಲ್ಯವೂ ದೂರವಾಗಿ ಮನುಷ್ಯ ಉಲ್ಲಾಸಿತನಾಗುತ್ತಾನೆ.
ಮಕರಾಸನ
ಮಕರ ಎಂದರೆ ಮೊಸಳೆ. ಬೋರಲಾಗಿ ಮಲಗಿರುವ ಸ್ಥಿತಿ. ಹೀಗೆ ಕಣ್ಣುಗಳನ್ನು ಮುಚ್ಚಿಕೊಂಡು ಸುಮಾರು ಎರಡು ನಿಮಿಷಗಳ ಉಸಿರಾಡಬೇಕು. ತೊಡೆಗಳು, ಕಾಲುಗಳು, ಮುಖ, ತಲೆ, ಎದೆ, ಹೊಟ್ಟೆಗಳು ನೆಲಕ್ಕೆ ಅಂಟಿಕೊಂಡಿರುವುದರಿಂದ ದೇಹವು ಗುರುತ್ವಾಕರ್ಷಣೆಯಿಂದಾಗಿ ಬಳಲಿಕೆಯಿಂದ ದೂರವಾಗುತ್ತದೆ. ಕೆಮ್ಮು, ರಕ್ತದೊತ್ತಡ ಸೇರಿದಂತೆ ಹಲವು ರೋಗಗಳು ದೂರವಾಗಲು ಇದು ಸಹಕಾರಿ.
ಶೀರ್ಷಾಸನ
ತಲೆಯ ಮಧ್ಯಭಾಗವನ್ನು ಕೆಳಗೆ ತಾಗಿಸಿ, ನಂತರ ಮೊಣಕಾಲುಗಳನ್ನು ನೇರ ಮಾಡಿ ದೇಹದ ಪೂರ್ಣ ಭಾರವನ್ನು ತಲೆಯ ಮಧ್ಯದಲ್ಲಿ ಇರಿಸಬೇಕು. ಶೀರ್ಷಾಸನದಲ್ಲಿ ದೇಹದ ಹೆಚ್ಚು ಭಾಗವು ಹೃದಯಕ್ಕಿಂತ ಮೇಲೆ ಇರುವುದರಿಂದ ಹೃದಯವು ಹೆಚ್ಚು ರಭಸವಾಗಿ ಕೆಲಸ ಮಾಡುತ್ತದೆ. ಹೃದಯದ ಕೆಳಭಾಗಕ್ಕೆ ಹೆಚ್ಚು ರಕ್ತಸಂಚಲನವಾಗಿ ಹೃದಯ ಗುರುತ್ವಾಕರ್ಷಣೆಯ ವಿರುದ್ಧ ಕೆಲಸ ಮಾಡುವುದರಿಂದ ಹೃದಯದ ಶಕ್ತಿ ಹೆಚ್ಚುತ್ತದೆ. ಈ ಆಸನದಲ್ಲಿ ಹೃದಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಸಂಚಾರವಾಗುವುದರಿಂದ ಅಲ್ಲಿನ ಮಾಂಸ ಖಂಡಗಳು ಹಿಗ್ಗುತ್ತವೆ.
ಚಕ್ರಾಸನ
ಪಾದಗಳು ಮತ್ತು ಕೈಗಳ ನಡುವೆ ಸುಮಾರು ಒಂದು ಅಡಿ ಅಂತರ ಇರಿಸಿ ದೇಹವನ್ನು ಚಕ್ರಾಕಾರವಾಗಿ ಬಾಗಿಸುವುದೇ ಚಕ್ರಾಸನ. ಇಡೀ ದೇಹವು ಅರ್ಧವೃತ್ತಾಕಾರದಲ್ಲಿ ಬಾಗಿರುತ್ತದೆ. ಈ ಆಸನದಲ್ಲಿ ಮೊಣಕಾಲಿನ ಮೇಲ್ಭಾಗ, ಮೊಣಕೈ ಹಾಗೂ ಭುಜಗಳಿಗೆ ಹೆಚ್ಚು ವ್ಯಾಯಾಮ ದೊರಕುವುದು. ಚಕ್ರಾಸನವನ್ನು ಅಭ್ಯಾಸ ಮಾಡಿದರೆ ದೇಹಲ ಎಲ್ಲಾ ಭಾಗಗಳಲ್ಲೂ ರಕ್ತಸಂಚಾರ ಸುಲಲಿತವಾಗಿ ಉಂಟಾಗುವುದರೊಂದಿಗೆ ಹೃದಯರೋಗ ದೂರಾಗುತ್ತವೆ.