ಬಿಜೆಪಿ ಒಳಗೇ ವಕ್ಫ್ ಸಮರ: ಯತ್ನಾಳ್ ಬಣದ ಬೀದರ್ ಹೋರಾಟದಲ್ಲಿ ಸಂಘರ್ಷ, ಉದ್ವಿಗ್ನ ಸ್ಥಿತಿ
ಬಿಜೆಪಿ ಕಾರ್ಯಕರ್ತರು ಯತ್ನಾಳ ಬಣದವರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಈ ಸಂದರ್ಭದಲ್ಲಿ ಎರಡೂ ಕಡೆಯವರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಮಾತಿನ ಚಕಮಕಿ ಪರಸ್ಪರ ಕೈ ಕೈ ಮಿಲಾಯಿಸುವ ಹಂತ ತಲುಪುವ ಹಂತದಲ್ಲೇ ಮುಖಂಡರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಬೀದರ್(ನ.26): ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ಬಿಜೆಪಿ ಬಣ ಸೋಮವಾರ ಬೀದರ್ ಮೂಲಕ ಆರಂಭಿಸಿದ ವಕ್ಫ್ ವಿರುದ್ಧದ ಹೋರಾಟಕ್ಕೆ ಜಿಲ್ಲಾ ಬಿಜೆಪಿ ಮುಖಂಡರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಪಕ್ಷದ ಸ್ಥಳೀಯ ಮುಖಂಡರಿಗೆ, ಜನಪ್ರತಿನಿಧಿಗಳಿಗೆ ಮಾಹಿತಿ ನೀಡದೆ ಏಕಪಕ್ಷೀಯವಾಗಿ ಈ ಹೋರಾಟ ನಡೆಸಲಾಗುತ್ತಿದೆ.
ಇದು ಸರಿಯಲ್ಲ ಎಂದು ಆರೋಪಿಸಿ ಕೆಲ ಗ್ರಾಮದ ಬಿಜೆಪಿ ಕಾರ್ಯಕರ್ತರು ಯತ್ನಾಳ ಬಣದವರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಈ ಸಂದರ್ಭದಲ್ಲಿ ಎರಡೂ ಕಡೆಯವರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಮಾತಿನ ಚಕಮಕಿ ಪರಸ್ಪರ ಕೈ ಕೈ ಮಿಲಾಯಿಸುವ ಹಂತ ತಲುಪುವ ಹಂತದಲ್ಲೇ ಮುಖಂಡರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಮಹಾತ್ಮ ಗಾಂಧಿ ಉಪವಾಸದಿಂದ ಸ್ವಾತಂತ್ರ್ಯ ಬಂದಿಲ್ಲ: ಯತ್ನಾಳ್ ವಿವಾದಾತ್ಮಾಕ ಹೇಳಿಕೆ
ಆರಂಭದಲ್ಲೇ ವಿರೋಧ:
ಜಿಲ್ಲೆಯ ಐತಿಹಾಸಿಕ ನರಸಿಂಹ ಝರಣಾದೇಗುಲ ಭೇಟಿ ಬಳಿಕಯತ್ನಾಳ್ ನೇತೃತ್ವದ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ ಮತ್ತಿತರರ ತಂಡ ಬೀದರ್ ದಕ್ಷಿಣ ಕ್ಷೇತ್ರದ ಧರ್ಮಾಪೂರ ಗ್ರಾಮಕ್ಕೆ ಭೇಟಿ ನೀಡಿತು. ವಕ್ಫ್ ವಿರುದ್ಧ ಜನಜಾಗೃತಿ ಅಭಿಯಾನ ನಡೆಸಲು ಮುಂದಾಯಿತು. ಆ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ವಕ್ಫ್ ಹೋರಾಟ ಕುರಿತು ಸ್ಥಳೀಯ ಶಾಸಕರಿಗೆ, ಸ್ಥಳೀಯ ಬಿಜೆಪಿ ಮುಖಂಡರಿಗೆ ಮಾಹಿತಿಯೇ ನೀಡಿಲ್ಲ. ಇದರಿಂದ ಗೊಂದಲ ಸೃಷ್ಟಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯತ್ನಾಳ್ ಅವರು ರಾಜ್ಯದ ಬಿಜೆಪಿ ಮುಖಂಡರನ್ನು, ಜಿಲ್ಲೆಯ ಮುಖಂಡರನ್ನು ಕಡೆಗಣಿಸಿದ್ದಾರೆ. ಬ್ಯಾನರ್‌ಗಳಲ್ಲಿ ಕೇವಲ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಭಾವಚಿತ್ರಗಳನ್ನು ಮಾತ್ರ ಹಾಕಿ ಬಿಜೆಪಿಯನ್ನು ಒಡೆಯುವ ಯತ್ನ ನಡೆಸಿದ್ದಾರೆಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಯತ್ನಾಳ್ ಬೆಂಬಲಿಗರು ಮತ್ತು ಗ್ರಾಮದ ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಒಂದು ಹಂತದಲ್ಲಿ ನೂಕಾಟ-ತಳ್ಳಾಟ ನಡೆದು ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ನಂತರ ಮುಖಂಡರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು. ನಂತರಪಕ್ಷದ ಸ್ಥಳೀಯಕಾರ್ಯಕರ್ತರ ಅಸಮಾಧ ನದ ನಡುವೆ ಹೋರಾಟ ಮುಂದುವರಿಯಿತು.
ಪ್ರಮುಖರ ಗೈರು:
ಯತ್ನಾಳ್ ಅವರ ಹೋರಾಟಕ್ಕೆ ಬಿಜೆಪಿ ವಿಭಾಗೀಯ ಮುಖಂಡ ಈಶ್ವರಸಿಂಗ್ ಠಾಕೂರ್, ಮಾಜಿ ಶಾಸಕ ಪ್ರಕಾಶ ಖಂಡ್ರೆ ಹೊರತು ಪಡಿಸಿ ಬಿಜೆಪಿ ಶಾಸಕರು ಸೇರಿ ಜಿಲ್ಲೆಯ ಪ್ರಮುಖ ನಾಯಕರೆಲ್ಲರೂ ಲ್ಲರೂ ದೂರವುಳಿದಿದ್ದರು. ಯತ್ನಾಳ್ ಅವರು ಬೀದರ್, ಕಲಬುರಗಿ, ಬೆಳಗಾವಿ ಸೇರಿ ಐದು ಜಿಲ್ಲೆಗಳಲ್ಲಿ ವಕ್‌ನಿಂದ ಸಂತ್ರಸ್ತರಾದ ರೈತರು, ಸಾರ್ವಜನಿಕರಿಂದ ಅಹವಾಲುಗಳನ್ನು ಗಳನ್ನು ಸ್ವೀಕರಿಸಿ. ನಂತರ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ಪ್ರಸ್ತಾಪ ಮಾಡಲು ನಿರ್ಧರಿಸಿದ್ದಾರೆ.
ಯತ್ನಾಳ್‌ಗೆ ಸಡ್ಡು: ಬಿಜೆಪಿ ಅಧಿಕೃತ ಪ್ರವಾಸ ಡಿ.4ರಿಂದ
ಬೆಂಗಳೂರು: ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ 3 ತಂಡಗಳು ಬರುವ ಡಿ.4ರಿಂದ 6 ರವರೆಗೆ 3 ದಿನಗಳ ಪ್ರವಾಸ ನಡೆಸಲಿವೆ. ಹಿರಿಯ ಶಾಸಕ ಬಸನ ಗೌಡ ಯತ್ನಾಳ್ ನೇತೃತ್ವದ ಅತೃಪ್ತ ಮುಖಂಡರ ತಂಡ ಸೋಮವಾರದಿಂದ ಪ್ರತ್ಯೇಕವಾಗಿ ಪ್ರವಾಸ ಆರಂಭಿಸಿದ ಬೆನ್ನಲ್ಲೇ ಬಿಜೆಪಿ ತನ್ನ ತಂಡಗಳ ಪ್ರವಾಸವನ್ನು ಅಧಿಕೃತವಾಗಿ ಪ್ರಕಟಿಸಿದೆ.
ಭಿನ್ನರಿಗೆ ವಿಜಯೇಂದ್ರ ಸಡ್ಡು: ವಕ್ಫ್ ಪ್ರವಾಸಕ್ಕೆ ಮೂರು ತಂಡ ರಚನೆ
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, 'ನಮ್ಮ ಭೂಮಿ ನಮ್ಮ ಹಕ್ಕು' ಎಂಬ ಹೋರಾಟದ ಅಡಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ 3 ತಂಡಗಳನ್ನು ರಚಿಸಲಾಗಿದೆ. ಈ ತಂಡಗಳಲ್ಲಿ ಪಕ್ಷದ ಎಲ್ಲ ಹಿರಿಯ ನಾಯಕರನ್ನು ಒಳಗೊಳ್ಳಲಾಗಿದೆ ಎಂದು ತಿಳಿಸಿದರು. ಬರುವ ಡಿ.9ರಂದು ಬೆಳಗಾವಿಯಲ್ಲಿ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಅಧಿವೇಶನ ಪ್ರಾರಂಭವಾಗಲಿದೆ. ಅಷ್ಟರೊಳಗೆ ಈ ತಂಡಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮುಗಿಸಲಿವೆ. ಬಳಿಕ ಅಧಿವೇಶನದಲ್ಲಿ ರೈತರ ಪರವಾಗಿ ಬಿಜೆಪಿ ತನ್ನ ಹೋರಾಟವನ್ನು ಉಗ್ರವಾಗಿ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ವಕ್ಫ್ ವಿವಾದ ಭುಗಿಲೆದ್ದಿತ್ತು. ಬಿಜೆಪಿ ವತಿಯಿಂದ ಅದನ್ನು ಸಮರ್ಥವಾಗಿ ಎದುರಿಸಿ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಆಡಳಿತ ತುಷ್ಟಿಕರಣದ ಪರಾಕಾಷ್ಠೆ ಯಾವ ರೀತಿ ಮುಟ್ಟುತ್ತಿದೆ, ತುಷ್ಟಿಕರಣದ ನೀತಿಯ ಮೂಲಕ ಅಮಾಯಕ ರೈತರನ್ನು ಕೂಡ ಯಾವ ರೀತಿ ಬಲಿ ಕೊಡುತ್ತಿದೆ ಎಂಬ ಬಗ್ಗೆ ರಾಜ್ಯಾದ್ಯಂತ ಯಶಸ್ವಿ ಹೋರಾಟ ಕೈಗೊಂಡಿದ್ದೇವೆ. ನಮ್ಮ ಹೋರಾಟದ ಫಲವಾಗಿ ರೈತರು, ಕಾಂಗ್ರೆಸ್ಸಿನ ಈ ನೀತಿಯನ್ನು ಅತ್ಯುಗ್ರವಾಗಿ ಖಂಡಿಸುತ್ತಿದ್ದಾರೆ ಎಂದು ಹೇಳಿದರು.