ಕೊಡಗಿಗೂ Monkeypox ಆತಂಕ: ಗಡಿ ಕಟ್ಟೆಚ್ಚರ
ಕೇರಳ ರಾಜ್ಯದಲ್ಲಿ ಮಂಕಿಪಾಕ್ಸ್‌ನಿಂದ ಯವಕನೊಬ್ಬ ಮೃತಪಟ್ಟಿದ್ದು, ಇದೀಗ ಕೊಡಗು ಜಿಲ್ಲೆಗೂ ತೀವ್ರ ಆತಂಕ ಹೆಚ್ಚಿಸಿದೆ. ಕೊಡಗು, ಕೇರಳದ ಗಡಿ ಜಿಲ್ಲೆಯಾಗಿರುವುದರಿಂದ ಮಂಕಿಪಾಕ್ಸ್ ಹರಡುವ ಭೀತಿ ಎದುರಾಗಿದ್ದು ಗಡಿಭಾಗದಲ್ಲಿ ತಪಾಸಣೆ ಹೆಚ್ಚಿಸಲಾಗಿದೆ.
ಮಡಿಕೇರಿ (ಆ.2) : ಕೇರಳ ರಾಜ್ಯದಲ್ಲಿ ಮಂಕಿಪಾಕ್ಸ್‌ನಿಂದ ಯವಕನೊಬ್ಬ ಮೃತಪಟ್ಟಿದ್ದು, ಇದೀಗ ಕೊಡಗು ಜಿಲ್ಲೆಗೂ ತೀವ್ರ ಆತಂಕ ಹೆಚ್ಚಿಸಿದೆ. ಕೊಡಗು, ಕೇರಳದ ಗಡಿ ಜಿಲ್ಲೆಯಾಗಿರುವುದರಿಂದ ಮಂಕಿಪಾಕ್ಸ್(Monkeypox) ಹರಡುವ ಭೀತಿ ಎದುರಾಗಿದ್ದು, ಜಿಲ್ಲೆಯ ಗಡಿ ಭಾಗಗಳಲ್ಲಿ ಅಲರ್ಟ್ ಘೋಷಿಸಲಾಗಿದೆ. ಕರಿಕೆ, ಕುಟ್ಟ, ಮಾಕುಟ್ಟಮೂರು ಗಡಿ ಪ್ರದೇಶಗಳನ್ನು ಕೇರಳ ರಾಜ್ಯದೊಂದಿಗೆ ಕೊಡಗು ಬೆಸದುಕೊಂಡಿದೆ. ಈ ಮೂರೂ ಚೆಕ್ ಪೋಸ್ಟ್(Checkpost)ಗಳಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್‌ಗಳಿಗೆ ತಲಾ ಇಬ್ಬರು ಆರೋಗ್ಯ ಇಲಾಖೆಯ ಸಿಬ್ಬಂದಿ ನಿಯೋಜಿಸಲಾಗಿದ್ದು, ಕೇರಳದಿಂದ ಆಗಮಿಸುವವರನ್ನು ಸಿಬ್ಬಂದಿ ತಪಾಸಣೆಗೆ ಒಳಪಡಿಸುತ್ತಿದ್ದಾರೆ.
ದೇಹದ ಸಣ್ಣ ಗಾಯವೂ ಮಂಕಿಪಾಕ್ಸ್ ಲಕ್ಷಣವಾಗಿರಬಹುದು, ಎಚ್ಚರ !
ವಿಶ್ವ ಆರೋಗ್ಯ ಸಂಸ್ಥೆ(WHO)ಯ ಹೇಳಿಕೆಯನುಸಾರ ರಾಜ್ಯಗಳು ಕೂಡ ಅಲಲರ್ಟ್(Alerts) ಆಗಿದ್ದು ಆಯಾ ಗಡಿ ಜಿಲ್ಲೆಯ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಆದರೆ ಕೊಡಗು, ಮೈಸೂರು(Mysuru), ಚಾಮರಾಜನಗರ(ChamarajaNagar) ದಕ್ಷಿಣಕನ್ನಡ (Dakshina Kannada) ಜಿಲ್ಲೆಗಳಲ್ಲಿ ತೀವ್ರ ತಪಾಸಣೆಗೊಳಿಸದೆ ನಿರ್ಲಕ್ಷ್ಯ ಧೋರಣೆ ತೋರಿದ್ದು ಹೆಚ್ಚಿನ ತಪಾಸಣೆ ಮಾಡುತ್ತಿಲ್ಲ, ಅಧಿಕಾರಿಗಳು ಈ ಬಗ್ಗೆ ಶೀಘ್ರ ಕ್ರಮ ವಹಿಸದಿದ್ದಲ್ಲಿ ನಮ್ಮ ಜಿಲ್ಲೆಗಳಿಗೂ ಅಪಾಯ ಕಾದಿದೆ ಎಂದು ಕೆಲ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಕೇರಳದಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿರುವುದರಿಂದ ನೆರೆ ಜಿಲ್ಲೆ ಕೊಡಗಿನಲ್ಲಿ ಜನ ಭಯ ಪಡುವಂತಾಗಿದೆ. ಆರೋಗ್ಯ ಇಲಾಖೆಗಳಿಂದ ಸಿಬ್ಬಂದಿಯನ್ನು ಸ್ಥಳಕ್ಕೆ ನೇಮಿಸಿದ್ದರೂ ರೋಗ ಲಕ್ಷಣಗಳ ಬಗ್ಗೆ ಹೆಚ್ಚು ಮಹತ್ವ ನೀಡಿದಂತೆ ಕಾಣುತ್ತಿಲ್ಲ. ಕೇರಳದಿಂದ ಪ್ರತಿದಿನ ನೂರಾರು ಸರಕು ವಾಹನಗಳು ಕರ್ನಾಟಕ ಮತ್ತು ಕೇರಳ ರಾಜ್ಯಗಳಿಗೆ ಓಡಾಡುತ್ತಿರುತ್ತವೆ. ಪ್ರಕರಣಗಳು ಜಾಸ್ತಿಯಾಗದಂತೆ ತಡೆದಲ್ಲಿ ಮಾತ್ರ ವ್ಯಾಪಾರಿಗಳು ಮತ್ತು ರೈತರಿಗೆ ಸರಕು ಸಾಗಿಸಲು ಅನುಕೂಲವಾಗಲಿದೆ. ನಿರ್ಲಕ್ಷ್ಯ ತೋರಿ ಮಂಕಿಪಾಕ್ಸ್ ಹೆಚ್ಚಾದಲ್ಲಿ ಕೇರಳ-ಕರ್ನಾಟಕ ಗಡಿ ಬಂದಾಗುವ ಸಾಧ್ಯತೆಯಿದೆ.
ಮಂಕಿಪಾಕ್ಸ್ ಪತ್ತೆಗಾಗಿ ಆರ್‌ಟಿಪಿಸಿಆರ್ ಕಿಟ್; 50 ನಿಮಿಷದಲ್ಲೇ ನಿಖರ ಫಲಿತಾಂಶ
ಕೊಡಗು ಹಾಗೂ ಕೇರಳ ಗಡಿ ಚೆಕ್ ಪೋಸ್ಟ್‌ಗಳಲ್ಲಿ ಇಲಾಖೆಯ ಸಿಬ್ಬಂದಿ ಮಂಕಿಪಾಕ್ಸ್ ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಕಾಸರಗೋಡು ಹಾಗೂ ವಯನಾಡು ಜಿಲ್ಲೆಗಳ ಗಡಿ ಚೆಕ್ ಪೋಸ್ಟ್‌ಗಳಾದ ಕರಿಕೆ ಹಾಗೂ ಮೂಲೆಹೊಳೆ ಚೆಕ್ ಪೋಸ್ಟ್‌ಗಳಲ್ಲೂ ನಿಗಾ ವಹಿಸಲಾಗಿದೆ, ಕೇರಳ ಸರ್ಕಾರ ಮತ್ತು ಸಂಭಂದಪಟ್ಟಜಿಲ್ಲಾಡಳಿತ ಅಲರ್ಚ್ ಆಗಿದೆ. ಯಾರು ಇದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಕಣ್ಣೂರು ಜಿಲ್ಲಾ ವೈದ್ಯಾಧಿಕಾರಿ ಹೇಳುತ್ತಾರೆ.
ಮಂಕಿಪಾಕ್ಸ್ ಲಕ್ಷಣಗಳೇನು?
ಮಂಕಿಪಾಕ್ಸ್ ರೋಗ ಲಕ್ಷಣಗಳು ಸಿಡುಬು ರೋಗದಂತೆಯೇ ಇರಲಿದೆ. ಆರಂಭದಲ್ಲಿ ಜ್ವರ, ತಲೆ ನೋವು, ಮೈ-ಕೈ ನೋವು, ಬೆನ್ನು ನೋವು ಇರಲಿದೆ. ಶಕ್ತಿ ಹೀನತೆಯೂ ಕಾಡಲಿದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದಲ್ಲಿ ಅವರನ್ನು ಬೇಗ ಆವರಿಸಿಕೊಳ್ಳುತ್ತದೆ. ಇಂತಹ ರೋಗಲಕ್ಷಣಗಳೇನಾದರೂ ಕಂಡರೆ ನಿರ್ಲಕ್ಷ್ಯ ಮಾಡದೆ ತಕ್ಷಣ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸುವುದು ಉತ್ತಮ.
-ಕೇರಳದಲ್ಲಿ ಮಂಕಿಪಾಕ್ಸ್ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಗಡಿ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೇರಳ ರಾಜ್ಯದಿಂದ ನಮ್ಮ ಜಿಲ್ಲೆ ಮೂಲಕ ರಾಜ್ಯಕ್ಕೆ ಆಗಮಿಸುವವರನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಅವರಿಗೆ ಜ್ವರ ಮತ್ತು ಕೈ, ಮತ್ತು ದೇಹದಲ್ಲಿ ಅಲರ್ಜಿಯಂಥ ಸಮಸ್ಯೆಗಳಿವೆಯೇ ಎಂದು ಪರಿಶೀಲನೆ ಮಾಡಲಾಗುತ್ತಿದ್ದು ಇಲ್ಲಿಯವರೆಗೆ ರೋಗ ಲಕ್ಷಣವಿರುವ ಪ್ರಕರಣಗಳು ಪತ್ತೆಯಾಗಿಲ್ಲ. ಆದರೂ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ.
-ಡಾ ವೆಂಕಟೇಶ್, ಜಿಲ್ಲಾ ವೈದ್ಯಾಧಿಕಾರಿ, ಕೊಡಗು.