Monkeypox Update: ಮಂಕಿಪಾಕ್ಸ್ ಎಚ್ಚರಿಕೆಯ ಗಂಟೆ, ಸಾಂಕ್ರಾಮಿಕವಾಗಿ ಹರಡುವ ಭೀತಿ; WHO ವಿಜ್ಞಾನಿ
Monkeypox update: ಪ್ರಪಂಚಾದ್ಯಂತ ಮಂಕಿಪಾಕ್ಸ್ ದಿನೇ ದಿನೇ ಹೆಚ್ಚುತ್ತಿದೆ. ಆಘಾತಕಾರಿ ಎನ್ನುವಷ್ಟು ಪ್ರಕರಣಗಳು ದಾಖಲಾಗದಿದ್ದರೂ, ಈಗಲೇ ಎಚ್ಚರದಿಂದಿರಬೇಕು, ಯಾವ ಸಮಯದಲ್ಲಿ ಬೇಕಾದರೂ ಸ್ಫೋಟಗೊಳ್ಳಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿ: ಮಂಕಿಪಾಕ್ಸ್ ಪ್ರಪಂಚಾದ್ಯಂತ ದಿನೇ ದಿನೇ ಹೆಚ್ಚುತ್ತಿರುವ ಈ ಸಮಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಎಚ್ಚರಿಕೆ ನೀಡಿದ್ದಾರೆ. ಕೊರೋನಾ ಹೇಗೆ ಸ್ಫೋಟವಾಯಿತೋ ಅದೇ ಮಾದರಿಯಲ್ಲಿ ಮಂಕಿಪಾಕ್ಸ್ ಕೂಡ ಸ್ಫೋಟಗೊಳ್ಳುವ ಭೀತಿಯಿದೆ. ಅದಕ್ಕಾಗಿ ನಾವೆಲ್ಲರೂ ಎಚ್ಚರಿಕೆಯಿಂದಿರಬೇಕು. ಪ್ರಕರಣಗಳು ಕಡಿಮೆ ಇವೆ ಎಂಬ ಕಾರಣದಿಂದ ಎಚ್ಚರ ತಪ್ಪಬಾರದು ಎಂದು ಅವರು ಕರೆ ಕೊಟ್ಟಿದ್ದಾರೆ. 1980ರಿಂದ ಸ್ಮಾಲ್‌ಪಾಕ್ಸ್ ವ್ಯಾಕ್ಸಿನೇಷನ್ ನಿಲ್ಲಿಸಲಾಗಿದೆ. ಸ್ವಾಮಿನಾಥನ್ ಅವರ ಪ್ರಕಾರ ಸ್ಮಾಲ್‌ಪಾಕ್ಸ್ ಲಸಿಕೆಯನ್ನು ಮಂಕಿಪಾಕ್ಸ್‌ಗೆ ಬಳಸಬಹುದಾಗಿದೆ, ಆದರೆ ಈ ಬಗ್ಗೆ ಇನ್ನೂ ಅಧಿಕ ಮಾಹಿತಿಗಳು ಲ್ಯಾಬ್‌ಗಳಿಂದ ಲಭ್ಯವಾಗಬೇಕು ಎಂದಿದ್ದಾರೆ.
ಸೌಮ್ಯಾ ಸ್ವಾಮಿನಾಥನ್ ಅವರ ಪ್ರಕಾರ ಸ್ಮಾಲ್‌ಪಾಕ್ಸ್‌ಗೆ ನಮ್ಮ ಬಳಿ ಲಸಿಕೆಯಿದೆ. ಅದು ಎರಡನೇ ಮತ್ತು ಮೂರನೇ ಜನರೇಷನ್‌ನ ಲಸಿಕೆಗಳಾಗಿವೆ. ಹಲವಾರು ದೇಶಗಳು ಸ್ಮಾಲ್‌ಪಾಕ್ಸ್ ಲಸಿಕೆಗಳನ್ನು ಶೇಖರಿಸಿಡುತ್ತಿವೆ. ಒಂದು ವೇಳೆ ಮತ್ತು ಸ್ಮಾಲ್‌ಪಾಕ್ಸ್ ಪ್ರಕರಣ ಹೆಚ್ಚಳವಾದರೆ ಎಂಬ ಕಾರಣಕ್ಕೆ ಶೇಖರಿಸಿಡಲಾಗುತ್ತಿದೆ. ಆದರೆ ಶೇಖರಿಸಿಟ್ಟಿರುವ ಲಸಿಕೆಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿಲ್ಲ, ಎಂದು ಸ್ವಾಮಿನಾಥನ್ ತಿಳಿಸಿದ್ದಾರೆ.
ಸ್ಮಾಲ್‌ಪಾಕ್ಸ್ ಲಸಿಕೆಯನ್ನು ತಯಾರಿಸುವ, ಮಾರುಕಟ್ಟೆಗೆ ರವಾನಿಸುವ ಕೆಲಸದಲ್ಲಿ ಭಾರತದ ಸೆರಮ್ ಇನ್ಸ್ಟಿಟ್ಯೂಟ್ ಪಾತ್ರವೂ ಇರಲಿದೆ ಎಂದು ಅವರು ತಿಳಿಸಿದ್ದಾರೆ. "ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಬಗ್ಗೆ ರೂಪುರೇಷೆಗಳನ್ನು ಕಂಡುಕೊಳ್ಳುವ ಕುರಿತು ಚರ್ಚೆ ನಡೆಯುತ್ತಲೇ ಇವೆ. ಆದರೆ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸುವುದು ಹೇಗೆ ಎಂಬ ಬಗ್ಗೆ ಮುಂದಾಲೋಚನೆಯ ಅಗತ್ಯವಿದೆ. ಭಾರತ ಲಸಿಕೆ ಉತ್ಪಾದನೆಯಲ್ಲಿ ಮುಖ್ಯ ಕಾರ್ಯ ನಿರ್ವಹಿಸಲಿದೆ, ಯಾಕೆಂದರೆ ಭಾರತದ ಉತ್ಪಾದನಾ ಸಾಮರ್ಥ್ಯ ಬೇರೆ ದೇಶಗಳಿಗಿಂತ ಉತ್ತಮವಾಗಿದೆ," ಎಂದು ಸೌಮ್ಯಾ ಸ್ವಾಮಿನಾಥನ್ ಅಭಿಪ್ರಾಯಪಟ್ಟಿದ್ದಾರೆ.
ಕೊರೋನಾವೈರಸ್‌ನ ನೂತನ ವೇರಿಯಂಟ್‌ಗಿಂತ ಮಂಕಿಪಾಕ್ಸ್ ಡೇಂಜರಸ್ ಆಗಿರಲಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಸೌಮ್ಯಾ ಸ್ವಾಮಿನಾಥನ್, "ಎರಡೂ ವಿವಿಧ ಬಗೆಯ ವೈರಸ್ ಆಗಿವೆ. ಆದರೆ ಸದ್ಯ ಸಿಕ್ಕಿರುವ ಡೇಟಾಗಳ ಪ್ರಕಾರ ಕೊರೋನಾವೈರಸ್ ಅಷ್ಟು ಶೀಘ್ರವಾಗಿ ಮಂಕಿಪಾಕ್ಸ್ ಮ್ಯುಟೇಟ್ ಆಗುವುದಿಲ್ಲ. ಮಂಕಿಪಾಕ್ಸ್ ಹೊಸ ವೇರಿಯಂಟ್ ಆಗಿ ಪರಿವರ್ತನೆಗೊಳ್ಳಲು ಸ್ವಲ್ಪ ಕಾಲಾವಧಿ ಬೇಕಾಗಬಹುದು," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮುಂದುವರೆದ ಅವರು, "ಮಂಕಿಪಾಕ್ಸ್ ಇರುವಿಕೆಯನ್ನು ನಾವು ಬಲುಬೇಗ ಕಂಡುಹಿಡಿದಿದ್ದೇವೆ. ಜಾಗತಿಕವಾಗಿ ಎಲ್ಲ ದೇಶಗಳು ಆಯಾ ದೇಶದಲ್ಲಿ ಕೇಳಿಬರುತ್ತಿರುವ ಮಂಕಿಪಾಕ್ಸ್ ಪ್ರಕರಣಗಳ ಕುರಿತು ಮಾಹಿತಿ ಹಂಚಿಕೊಳ್ಳಬೇಕು. ಕೊರೋನಾವೈರಸ್ ರೋಗದ ಕುರಿತು ಹೇಗೆ ಅಧ್ಯಯನ ನಡೆಯಿತೋ ಅದೇ ರೀತಿಯಲ್ಲಿ ಮತ್ತೆ ಅಧ್ಯಯನ ನಡೆಯಬೇಕಿದೆ," ಎಂದರು.
ಮಂಕಿಪಾಕ್ಸ್ ರೋಗ ಲಕ್ಷಣಗಳು:
ಮೈಕೈನೋವು
ದದ್ದುಗಳು
ವಿಪರೀತ ಜ್ವರ
ಬಹಳಷ್ಟು ಲಿಂಫಾಡೆನೋಪತಿಗಳು
ದೊಡ್ಡ ದುಗ್ಧರಸ ಗ್ರಂಥಿಗಳು
ಮಂಕಿಪಾಕ್ಸ್ ಪ್ರಕರಣಗಳನ್ನು ಸುಲಭವಾಗಿ ತಡೆಗಟ್ಟಲು ದೇಶಗಳು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ತಮ್ಮ ಲಸಿಕೆ ದಾಸ್ತಾನುಗಳ ಬಗ್ಗೆ ಡೇಟಾವನ್ನು ಹಂಚಿಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿ ಹೇಳಿದ್ದಾರೆ. ರೋಗದ ವ್ಯಾಪ್ತಿಯು ನಮಗೆ ತಿಳಿದಿಲ್ಲ. ಆದರೆ ಎಲ್ಲರೂ ಹೆಚ್ಚು ಜಾಗರೂಕರಾಗಿರಬೇಕು. ಇದೀಗಷ್ಟೇ ಸೋಂಕು ಹರಡಲು ಆರಂಭವಾಗಿರುವುದರಿಂದ ನಮಗೆ ಪ್ರಸರಣವನ್ನು ನಿಲ್ಲಿಸಲುಉತ್ತಮ ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮಕ್ಕಳಿಗೆ ಮಂಕಿಪಾಕ್ಸ್ ಸೋಂಕು ಹರಡದಂತೆ ಎಚ್ಚರಿಕೆ ವಹಿಸುವುದು ಹೇಗೆ ?
21 ದೇಶಗಳಲ್ಲಿ 700ಕ್ಕೂ ಹೆಚ್ಚು ಪ್ರಕರಣಗಳು ದಾಖಲು
ಇಲ್ಲಿಯವರೆಗೆ, 21 ದೇಶಗಳಿಂದ 700 ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಸುಮಾರು 100 ಶಂಕಿತ ರೋಗಿಗಳು ಮಂಕಿಪಾಕ್ಸ್ ಸಾಮಾನ್ಯವಾಗಿ ಕಂಡುಬರದ ದೇಶಗಳಿಂದ ವರದಿಯಾಗಿವೆ ಎಂದು ಹೇಳಿದೆ.
ಸಲಿಂಗಕಾಮಿ ಪುರುಷರಿಗೆ ಮಂಕಿಪಾಕ್ಸ್ ಅಪಾಯ ಹೆಚ್ಚು:
ಸಲಿಂಗಕಾಮಿಗಳು, ಸಲಿಂಗಕಾಮಿ ಪುರುಷರಿಗೆ ಎಚ್ಚರಿಕೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆ,ಸಲಿಂಗಕಾಮಿ ಪುರುಷರಲ್ಲಿ ವೇಗವಾಗಿ ಹರಡುತ್ತಿರುವ ಸೋಂಕನ್ನು ಗಮನದಲ್ಲಿಟ್ಟುಕೊಂಡು, ಡಬ್ಲ್ಯುಎಚ್ಒ ಎಚ್ಚರಿಕೆ ನೀಡಿದೆ. ಒಬ್ಬ ವ್ಯಕ್ತಿಯು ಮಂಕಿಪಾಕ್ಸ್ನ ರೋಗಲಕ್ಷಣಗಳನ್ನು ತೋರಿಸಿದರೆ, ಚರ್ಮದಿಂದ ಚರ್ಮಕ್ಕೆ, ಮುಖಾಮುಖೀ ಮತ್ತು ಅವನೊಂದಿಗೆ ಲೈಂಗಿಕ ಸಂಪರ್ಕವನ್ನು ಮಾಡಬೇಡಿ ಎಂದು ಆರೋಗ್ಯ ಸಂಸ್ಥೆ ಹೇಳುತ್ತದೆ. ನೀವು ರೋಗಿಯ ಹತ್ತಿರ ಬಂದಾಗಲೆಲ್ಲಾ ಮಾಸ್ಕ್ ಧರಿಸಿ ಮತ್ತು ನಿಮ್ಮ ಕೈಗಳನ್ನು ತೊಳೆಯಿರಿ.
ಇದನ್ನೂ ಓದಿ: ಜಗತ್ತಿನಾದ್ಯಂತ ಹಬ್ಬುತ್ತಿದೆ ಮಹಾಮಾರಿ ಮಂಕಿಪಾಕ್ಸ್, ಭಾರತವೂ ಆತಂಕ ಪಡುವ ಅಗತ್ಯವಿದ್ಯಾ ?
ರೋಗ ಹರಡದಂತೆ ಹೇಗೆ ಮುನ್ನೆಚ್ಚರಿಕೆ ವಹಿಸಬೇಕು:
ಕಾಯಿಲೆಗೆ ಸಂಬಂಧಿಸಿರದ ದದ್ದುಗಳನ್ನು ಹೊಂದಿರುವ ಜನರನ್ನು ಮೇಲ್ವಿಚಾರಣೆ ಮಾಡಬೇಕು ಮತ್ತು ಪ್ರತ್ಯೇಕವಾಗಿರಲು ಹೇಳಬೇಕು. ಇತ್ತೀಚೆಗೆ ಮಂಕಿಪಾಕ್ಸ್ ಪಾಕ್ಸ್ ಪ್ರಕರಣಗಳು ವರದಿಯಾದ ಅಥವಾ ಮಂಕಿಪಾಕ್ಸ್ ರೋಗಿಯ ಸಂಪರ್ಕಕ್ಕೆ ಬಂದ ದೇಶಕ್ಕೆ ಪ್ರಯಾಣಿಸಿದವರ ಮೇಲೆ ಹೆಚ್ಚು ಗಮನ ಹರಿಸಲಾಗುವುದು.