Mental Health : ನಿಮ್ಮ ಮನಸ್ಸಿಗೆ ಈ ಸಂದರ್ಭದಲ್ಲಿ ಬೇಕು ವಿಶ್ರಾಂತಿ
ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಯನ್ನು ಗಂಭೀರವಾಗಿ ಪಡೆದಾಗ ಮಾನಸಿಕ ಆರೋಗ್ಯ ಹದಗೆಡುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಮಾನಸಿಕ ಆರೋಗ್ಯದ ಬಗ್ಗೆ ಜ್ಞಾನ ಹೊಂದಿರಬೇಕು. ಯಾವುದು ಮಾನಸಿಕ ಸ್ಥಿತಿಯನ್ನು ಹಾಳು ಮಾಡ್ತಿದೆ ಎಂಬುದು ತಿಳಿದಾಗ ಚೇತರಿಕೆ ಸುಲಭ.
ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಕೂಡ ಬಹಳ ಮುಖ್ಯ. ನಿಮ್ಮ ದೈಹಿಕ ಆರೋಗ್ಯ ಹದಗೆಟ್ಟಾಗ ನಿಮ್ಮ ಮನಸ್ಸು ಗಟ್ಟಿಯಾಗಿದ್ದರೆ ಎಷ್ಟೇ ನೋವು ಬಂದ್ರೂ ಅದನ್ನು ಸಹಿಸಬಹುದು. ಅದೇ ನಿಮ್ಮ ಮಾನಸಿಕ ಆರೋಗ್ಯ ಕೈಕೊಟ್ಟರೆ ಸಣ್ಣ ಮುಳ್ಳು ಕೂಡ ನಿಮ್ಮನ್ನು ಸಾವಿನ ಕೂಪಕ್ಕೆ ತಳ್ಳಬಹುದು. ನಿಮ್ಮ ಮಾನಸಿಕ ಸ್ಥಿತಿ ದುರ್ಬಲವಾಗಿದ್ದರೆ ಅದು ದೈಹಿಕ ಆರೋಗ್ಯದ ಮೇಲೂ ಕಾಣಿಸಿಕೊಳ್ಳುತ್ತದೆ.
ಈಗಿನ ದಿನಗಳಲ್ಲಿ ಒತ್ತಡ (Stress) ದ ಜೀವನ ಸಾಮಾನ್ಯ ಎನ್ನುವಂತಾಗಿದೆ. ಮನೆ ಕೆಲಸವಿರಲಿ, ಕಚೇರಿ ಕೆಲಸವಿರಲಿ, ಕೃಷಿ ಇರಲಿ ಇಲ್ಲ ವಿದ್ಯಾಭ್ಯಾಸವಿರಲಿ ಎಲ್ಲದರಲ್ಲೂ ಒತ್ತಡ ಕಾಡ್ತಿರುತ್ತದೆ. ಈ ಒತ್ತಡ ನಮ್ಮ ಮಾನಸಿಕ ಆರೋಗ್ಯ (Health) ವನ್ನು ನಮಗೆ ತಿಳಿಯದೆ ನುಂಗಿರುತ್ತದೆ. ಮೊದಲನೇಯದಾಗಿ ಜನರು ಮಾನಸಿಕ ಅನಾರೋಗ್ಯದ ಲಕ್ಷಣ ತಿಳಿಯಬೇಕು. ಹಾಗೆಯೇ ಸಮಸ್ಯೆಯನ್ನು ಮುಚ್ಚಿಡದೆ ತಕ್ಷಣ ವೈದ್ಯ (Doctor) ರನ್ನು ಭೇಟಿಯಾಗಿ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಮಾನಸಿಕ ಆರೋಗ್ಯ ಹದಗೆಟ್ಟಿದೆ ಎಂಬ ಸೂಚನೆ ಸಿಗ್ತಿದ್ದಂತೆ ನೀವು ಕೆಲ ಕಾಲ ವಿಶ್ರಾಂತಿ (Rest) ಪಡೆಯುವುದು ಮುಖ್ಯವಾಗುತ್ತದೆ. ನಾವಿಂದು ನಿಮ್ಮ ಮನಸ್ಥಿತಿ ಹಾಳಾಗಿದೆ ಎಂಬುದನ್ನು ಪತ್ತೆಹಚ್ಚೋದು ಹೇಗೆ ಎಂಬುದನ್ನು ನಿಮಗೆ ಹೇಳ್ತೇವೆ.
ಪುರುಷರಿಗೇಕೆ ಬೇಗ ಬಾಲ್ಡ್ ಆಗುತ್ತೆ? ಏನಾದ್ರೂ ಪರಿಹಾರವಿದ್ಯಾ?
ಕೆಟ್ಟ ಮಾನಸಿಕ ಆರೋಗ್ಯ ಪತ್ತೆ ಮಾಡೋದು ಹೇಗೆ? :
ಸದಾ ಸುಸ್ತು : ಯಾವುದೇ ದೊಡ್ಡ ಕೆಲಸ ಮಾಡದೆ ಹೋದ್ರೂ ನಿಮಗೆ ದಣಿವಾಗ್ತಿದೆ ಎಂದಾಗ ಅಂಥವಾ ಒಂದಲ್ಲ ಒಂದು ಚಿಂತೆ ನಿಮ್ಮನ್ನು ಆವರಿಸಿ ನಿಮ್ಮನ್ನು ಸುಸ್ತು ಮಾಡ್ತಿದೆ ಎಂದಾಗ ನೀವು ವಿಶ್ರಾಂತಿ ಪಡೆಯುವ ಅಗತ್ಯವಿರುತ್ತದೆ. ಸುಸ್ತು ನಿಮ್ಮ ಕೆಲಸದ ಗುಣಮಟ್ಟವನ್ನು ಹಾಳು ಮಾಡುತ್ತದೆ.
ಕಿರಿಕಿರಿ, ಅಚಾನಕ್ ಬದಲಾಗುವ ಮೂಡ್ : ಮನಸ್ಥಿತಿಯಲ್ಲಿ ಆಗಾಗ್ಗೆ ಬದಲಾವಣೆಗಳನ್ನು ನೀವು ನೋಡುತ್ತಿದ್ದರೆ ಅಥವಾ ಆಗಾಗ್ಗೆ ಕಿರಿಕಿರಿಯನ್ನು ಅನುಭವಿಸುತ್ತಿದ್ದರೆ ಅದು ನಿಮ್ಮ ಮಾನಸಿಕ ಆರೋಗ್ಯ ಕಳಪೆಯಾಗಿದೆ ಎಂಬುದನ್ನು ತೋರಿಸುತ್ತದೆ. ನೀವು ತೀವ್ರ ಒತ್ತಡದಲ್ಲಿದ್ದೀರಿ ಎಂಬುದರ ಸಂಕೇತವಾಗಿದೆ. ಪದೇ ಪದೇ ಮೂಡ್ ಬದಲಾಗ್ತಿದೆ, ಸಣ್ಣ ವಿಷ್ಯಕ್ಕೂ ಕಿರಿಕಿರಿ ಅನುಭವಿಸುತ್ತಿದ್ದೀರಿ ಎಂದಾದ್ರೆ ತಕ್ಷಣವೇ ಮಾನಸಿಕ ಆರೋಗ್ಯ ಸುಧಾರಿಸಲು ಗಮನ ನೀಡಿ. ನೀವು ಇದೇ ಸ್ಥಿತಿಯಲ್ಲಿ ಮುಂದುವರೆದ್ರೆ ನಿಮ್ಮ ಮಾನಸಿಕ ಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಇದು ನಿಮ್ಮ ಸಂಬಂಧಗಳನ್ನು ಹಾಳು ಮಾಡಬಹುದು.
World Health Day : ಭಾರತದ ಮಹಿಳೆಯರಲ್ಲಿ ಹೆಚ್ಚಾಗ್ತಿದೆ ಈ ಸಮಸ್ಯೆ
ಅನಾರೋಗ್ಯದ ಭಾವನೆ : ಮೊದಲೇ ಹೇಳಿದಂತೆ ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯದ ಜೊತೆ ಗಾಢ ಸಂಬಂಧ ಹೊಂದಿದೆ. ನೀವು ಮಾನಸಿಕವಾಗಿ ಸ್ವಲ್ಪ ಅಸ್ವಸ್ಥರಾದ್ರೂ ನಿಮ್ಮ ದೇಹ ಅನಾರೋಗ್ಯಕ್ಕೆ ಒಳಗಾಗುತ್ತದೆ. ತಲೆನೋವು, ಸ್ನಾಯು ಸೆಳೆತ ಮತ್ತು ಜೀರ್ಣಕಾರಿ ಸಮಸ್ಯೆಗಳು ನಿಮ್ಮನ್ನು ಕಾಡಲು ಶುರುವಾಗುತ್ತದೆ. ನಿಮಗೂ ಇದೆಲ್ಲ ಆಗ್ತಿದೆ ಎಂದಾದ್ರೆ ಮನಸ್ಸಿಗೆ ವಿಶ್ರಾಂತಿ ನೀಡುವ ಕೆಲಸ ಮಾಡಿ.
ಹಾಸಿಗೆಯಲ್ಲಿ ಹೊರಳಾಟ : ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ರೆ ಎನ್ನುವ ಮಾತಿದೆ. ಚಿಂತೆ ಕಾಡಿದ್ರೆ ಎಂಥ ಶಾಂತ ಪರಿಸರದಲ್ಲೂ ನಿದ್ರೆ ಬರೋದಿಲ್ಲ. ದಿನವಿಡೀ ದಣಿದಿದ್ದರೆ ನಿಮಗೆ ನಿದ್ರೆ ಬರ್ತಿಲ್ಲ ಎಂದಾದ್ರೆ ನಿಮ್ಮ ಮಾನಸಿಕ ಸ್ಥಿತಿ ಹದಗೆಡುತ್ತಿದೆ ಎಂದೇ ಅರ್ಥ. ಈಗ ಮನಸ್ಸಿಗೆ ನೆಮ್ಮದಿ ನೀಡುವ ಕೆಲಸವಾಗಬೇಕಾಗುತ್ತದೆ.
ಇಷ್ಟದ ಕೆಲಸದಲ್ಲೂ ಕಡಿಮೆಯಾಗುವ ಆಸಕ್ತಿ : ಹಿಂದೆ ತುಂಬಾ ಇಷ್ಟಪಟ್ಟು ಮಾಡ್ತಿದ್ದ ಕೆಲಸ ಅಥವಾ ಆಹಾರ ಈಗ ಕಷ್ಟವಾಗ್ತಿದ್ದರೆ, ಅದು ನಿಷ್ಪ್ರಯೋಜಕ ಎಂದು ನಿಮಗೆ ಅನ್ನಿಸಿದ್ರೆ, ಅದ್ರಿಂದ ನಿಮಗೆ ಒಂದು ಸ್ವಲ್ಪವೂ ಸಂತೋಷ ಸಿಗ್ತಿಲ್ಲ ಎಂದಾದ್ರೆ ತಕ್ಷಣವೇ ವಿರಾಮ ತೆಗೆದುಕೊಳ್ಳಿ. ಒಬ್ಬ ವ್ಯಕ್ತಿ ಮಾನಸಿಕ ಆರೋಗ್ಯ ಹದಗೆಟ್ಟಾಗ ಮಾತ್ರ ತನ್ನ ನೆಚ್ಚಿನ ಕೆಲಸವನ್ನು ನಿರ್ಲಕ್ಷಿಸುತ್ತಾನೆ.