ಮೆಡಿಕೋ ಲೀಗಲ್ ಕೇಸ್ (MLC) ಮತ್ತು ಮರಣೋತ್ತರ ಪರೀಕ್ಷೆಯ ಮಾಹಿತಿಯನ್ನು ಈಗ ಮೆಡ್ಲಿ.ಈಪಿಆರ್ ಪೋರ್ಟಲ್‌ನಲ್ಲಿ ದಾಖಲಿಸಲಾಗುತ್ತದೆ. ಈ ಪೋರ್ಟಲ್ ವೈದ್ಯರಿಗೆ ಚಿತ್ರಗಳೊಂದಿಗೆ ಗಾಯಗಳ ವಿವರಗಳನ್ನು ಅಪ್‌ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ ಮತ್ತು ನ್ಯಾಯಾಲಯಗಳಿಗೆ ರಿಯಲ್-ಟೈಮ್ ಮಾಹಿತಿಯನ್ನು ಒದಗಿಸುತ್ತದೆ.

ಮೆಡಿಕೋ ಲೀಗಲ್ ಕೇಸ್ (MLC) ಹಾಗೂ ಮರಣೋತ್ತರ ಪರೀಕ್ಷೆಯ (ಪೋಸ್ಟ್ ಮಾರ್ಟಮ್) ಮಾಹಿತಿಯನ್ನು ಇನ್ನು ಮೆಡ್ಲಿ.ಈಪಿಆರ್ (MedL.EaPR – Medico Legal Examination & Postmortem Report system) ಪೋರ್ಟಲ್‌ನಲ್ಲಿ ದಾಖಲಿಸಲಾಗುವುದು. ಈ ಪೋರ್ಟಲ್ ಅನ್ನು ನ್ಯಾಷನಲ್ ಇನ್ಫರ್ಮೇಟಿಕ್ಸ್ ಸೆಂಟರ್ (NIC) ಅಭಿವೃದ್ಧಿಪಡಿಸಿದೆ. ಈ ಹಿನ್ನೆಲೆಯಲ್ಲಿ ವೈದ್ಯರು ಕೈಯಲ್ಲಿ ಬರೆದು ಫೈಲ್ ಮಾಡಿ ಇಟ್ಟ ಮಾಹಿತಿಯನ್ನೆಲ್ಲಾ ಈಗದಿಂದ ಆನ್‌ಲೈನ್‌ನಲ್ಲಿ ಪೋರ್ಟಲ್‌ನಲ್ಲಿ ಲಭ್ಯವಿರುತ್ತದೆ. ದೇಹದ ಯಾವ ಭಾಗದಲ್ಲಿ ಗಾಯವಾಗಿದೆ ಎಂಬುದನ್ನು ಆಪ್‌ನಲ್ಲೇ ಮಾರ್ಕ್ ಮಾಡಿ, ಚಿತ್ರಗಳೊಂದಿಗೆ ಪೋರ್ಟಲ್‌ಗೆ ಅಪ್ಲೋಡ್ ಮಾಡಲು ಅವಕಾಶವಿದೆ. ಗಾಯಗಳ ವಿವರಗಳನ್ನು ಚಿತ್ರ ಹಾಗೂ ಡ್ರಾಯಿಂಗ್ ರೂಪದಲ್ಲೂ ದಾಖಲಿಸಬಹುದಾಗಿದೆ.

ಇದರಿಂದ ರಿಯಲ್-ಟೈಮ್‌ನಲ್ಲಿ ಪೊಲೀಸರಿಗೆ ಮತ್ತು ಕೋರ್ಟ್‌ಗೆ ಅಗತ್ಯ ಮಾಹಿತಿ ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಪೊಲೀಸ್ ಅಧಿಕಾರಿಗಳು ಪೋಸ್ಟ್ ಮಾರ್ಟಮ್ ಸಂಬಂಧಿತ ದಾಖಲೆಗಳಿಗಾಗಿ ಆಸ್ಪತ್ರೆಗಳ ನಡುವೆ ಅಲೆದಾಡಬೇಕಾದ ಅವಶ್ಯಕತೆ ಕಡಿಮೆಯಾಗಲಿದೆ. ಪೋಸ್ಟ್ ಮಾರ್ಟಮ್ ನಡೆಸಿದ ವೈದ್ಯರ ವಿವರ, ನಡೆಸಿದ ಆಸ್ಪತ್ರೆ, ಸಮಯ ಮತ್ತು ಸಂಬಂಧಿತ ವ್ಯಕ್ತಿಯ ಮಾಹಿತಿ ಸಹ ಆಪ್‌ನಲ್ಲಿ ಲಭ್ಯವಿರುತ್ತದೆ. ಮೆಡಿಕೋ ಲೀಗಲ್ ಕೇಸ್‌ನಲ್ಲಿ ಗಾಯಗೊಂಡ ವ್ಯಕ್ತಿಯ ಹೇಳಿಕೆ ಪಡೆಯುವ ವ್ಯವಸ್ಥೆ ಸಹ ಕಲ್ಪಿಸಲಾಗಿದೆ.

ಮರಣೋತ್ತರ ಪರೀಕ್ಷೆ ನಡೆದ 24 ಗಂಟೆಗಳ ಒಳಗಡೆ ಸಂಪೂರ್ಣ ಮಾಹಿತಿ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಬೇಕು. ವಿಷ ಸೇವನೆ (ಪಾಯಿಸನಿಂಗ್) ಮುಂತಾದ ವಿಶೇಷ ಪ್ರಕರಣಗಳಲ್ಲಾದರೆ, ಪೋಸ್ಟ್ ಮಾರ್ಟಮ್ ವರದಿಯನ್ನು ಏಳು ದಿನಗಳ ಒಳಗೆ ಪೋರ್ಟಲ್‌ಗೆ ಅಪ್ಲೋಡ್ ಮಾಡುವುದು ಕಡ್ಡಾಯ. ಯಾವುದೇ ಕಾರಣಕ್ಕೂ ಈ ವರದಿಯನ್ನು ಲಿಖಿತ ರೂಪದಲ್ಲಿ (ಹಾರ್ಡ್ ಕಾಪಿ) ನೀಡಲು ಅನುಮತಿ ಇಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಎಲ್ಲಾ ಆಸ್ಪತ್ರೆಗಳಿಗೂ ಈ ವ್ಯವಸ್ಥೆ ಅನ್ವಯಿಸುತ್ತದೆ. ನಿಯಮ ಪಾಲಿಸುವಂತೆ ಇಲಾಖೆಯಿಂದ ದೃಢ ಸೂಚನೆ ನೀಡಲಾಗಿದೆ. ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ವಿಭಾಗದಿಂದ ಈ ಸಂಬಂಧ ಮಾಹಿತಿ ಹೊರಡಿಸಲಾಗಿದೆ.