Asianet Suvarna News Asianet Suvarna News

ಸಂತಾನಹರಣ ಶಸ್ತ್ರಚಿಕಿತ್ಸೆಗೆ ಪುರುಷರ ಹಿಂದೇಟು: ಹೆಂಡತಿಯರಿಂದಲೇ ವಿರೋಧ..!

*   ವಾರ್ಷಿಕ 2.5 ಲಕ್ಷ ಮಹಿಳೆಯರಿಗೆ ಸಂತಾನಹರಣ ಚಿಕಿತ್ಸೆ
*   ಪುರುಷರ ಸಂಖ್ಯೆ 1 ಸಾವಿರಕ್ಕಿಂತ ಕಮ್ಮಿ
*   ಇಂದು ವಿಶ್ವ ಜನಸಂಖ್ಯಾ ದಿನಾಚರಣೆ
 

Male Reluctance to Vasectomy Surgery in Karnataka grg
Author
Bengaluru, First Published Jul 11, 2022, 5:37 AM IST

ಜಯಪ್ರಕಾಶ್‌ ಬಿರಾದಾರ್‌

ಬೆಂಗಳೂರು(ಜು.11): ಜನಸಂಖ್ಯಾ ಸ್ಫೋಟ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸುವ ಸಂತಾನಹರಣ ಶಸ್ತ್ರಚಿಕಿತ್ಸೆ ಎಂದರೆ ಪುರುಷರು ಹಿಂಜರಿದರೆ, ಮಹಿಳೆಯರು ಮಾತ್ರ ಈ ವಿಚಾರದಲ್ಲಿ ಮುಂದಿದ್ದಾರೆ! ರಾಜ್ಯದಲ್ಲಿ ವಾರ್ಷಿಕ 2.5 ಲಕ್ಷಕ್ಕೂ ಅಧಿಕ ಮಹಿಳೆಯರು ಸಂತಾನಹರಣ (ಟ್ಯುಬೆಕ್ಟಮಿ) ಶಸ್ತ್ರಚಿಕಿತ್ಸೆಗೊಳಗಾಗುತ್ತಿದ್ದರೆ, ಪುರುಷರ ಸಂತಾನಹರಣ ಚಿಕಿತ್ಸೆ (ವ್ಯಾಸೆಕ್ಟಮಿ) ಮಾತ್ರ 1 ಸಾವಿರವನ್ನೂ ದಾಟುತ್ತಿಲ್ಲ!

ಜನಸಂಖ್ಯಾ ನಿಯಂತ್ರಣದ ಪ್ರಮುಖ ಕಾರ್ಯಕ್ರಮವಾದ ಸಂತಾನಹರಣ ಶಸ್ತ್ರಚಿಕಿತ್ಸೆಯಿಂದ ಪುರುಷರು ಸಂಪೂರ್ಣವಾಗಿ ಹಿಂದುಳಿಯುತ್ತಿದ್ದಾರೆ. ರಾಜ್ಯದಲ್ಲಿ ಕಳೆದ 5 ವರ್ಷಗಳಿಂದ ವಾರ್ಷಿಕ 600-700 ಮಂದಿ ಮಾತ್ರವೇ ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆ ಕುರಿತು ಜನರು ಹೊಂದಿರುವ ತಪ್ಪುಕಲ್ಪನೆಗಳು, ಜಾಗೃತಿ ಕೊರತೆ, ಪುರುಷ ಪ್ರಧಾನ ಸಮಾಜದ ಮನಸ್ಥಿತಿ ಕಾರಣ ಎನ್ನಲಾಗುತ್ತಿದೆ.

Organ Donation: ಎರಡೂವರೆ ವರ್ಷದ ಕಂದನಿಂದ 7 ಜನರಿಗೆ ಅಂಗ ದಾನ: ಹಳೇ ಕಾರ್ಯ ಈಗ ವೈರಲ್

ಪುರುಷರಿಗೆ ನಡೆಸುವ ವ್ಯಾಸೆಕ್ಟಮಿ ಶಸ್ತ್ರ ಚಿಕಿತ್ಸೆ ಅತ್ಯಂತ ಸರಳ ಮತ್ತು ಸುರಕ್ಷಿತವಾಗಿದೆ. ಗಾಯ ಮಾಡುವ ಅಥವಾ ಹೊಲಿಗೆ ಹಾಕುವ ಪ್ರಮೇಯವೇ ಇಲ್ಲ. ಈ ಶಸ್ತ್ರ ಚಿಕಿತ್ಸೆಯನ್ನು 5ರಿಂದ 10 ನಿಮಿಷದಲ್ಲಿ ಮಾಡಬಹುದು. ಶಸ್ತ್ರಚಿಕಿತ್ಸೆ ನಂತರ 1 ಗಂಟೆಯಲ್ಲಿ ಮನೆಗೆ ತೆರಳಬಹುದು. ಇದರಿಂದಾಗಿ ಲೈಂಗಿಕ ನಿಶ್ಯಕ್ತಿ ಬರುವುದಿಲ್ಲ, ಲೈಂಗಿಕ ಜೀವನಕ್ಕೆ ಸಮಸ್ಯೆಯಾಗುವುದಿಲ್ಲ. ಇತರೆ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ. ಜತೆಗೆ ಈ ಶಸ್ತ್ರಚಿಕಿತ್ಸೆಗೊಳಗಾಗುವ ಪುರುಷರಿಗೆ ಸರ್ಕಾರದ ವತಿಯಿಂದ 1,100 ರು. ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. ಆದರೂ, ಮಕ್ಕಳಾದ ಬಳಿಕ ಪುರುಷರು ಹಿಂದೇಟು ಹಾಕುತ್ತಾರೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ಆರೋಗ್ಯ ಇಲಾಖೆಯಿಂದ ಜಿಲ್ಲೆಗಳಿಗೆ ಟಾರ್ಗೆಟ್‌:

ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ಜನಸಂಖ್ಯೆ ಆಧರಿಸಿ ಜಿಲ್ಲಾವಾರು ಇಂತಿಷ್ಟುಶಸ್ತ್ರಚಿಕಿತ್ಸೆಯನ್ನು ನಡೆಸಬೇಕು ಎಂದು ಗುರಿ ನೀಡಿದೆ. ಶಸ್ತ್ರಚಿಕಿತ್ಸೆ ಕುರಿತ ತಪ್ಪುಕಲ್ಪನೆ ದೂರಾಗಿಸಲು ಕಾರ್ಖಾನೆಗಳು, ಜನದಟ್ಟಣೆ ಪ್ರದೇಶಗಳಲ್ಲಿ ಮಾಹಿತಿ ನೀಡಿ ಪುರುಷರ ಮನವೊಲಿಸಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲೆಯ ಸಂಬಂಧಪಟ್ಟಅಧಿಕಾರಿಗಳಿಗೆ ತಿಳಿಸಲಾಗಿದೆ. 2022-23ನೇ ಸಾಲಿನಲ್ಲಿ ಕನಿಷ್ಠ 10 ಸಾವಿರ ಶಸ್ತ್ರಚಿಕಿತ್ಸೆಗಳನ್ನು ನಡೆಸುವ ಗುರಿ ಹೊಂದಲಾಗಿದೆ.

ಏನಿದು ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆ?

ವ್ಯಾಸೆಕ್ಟಮಿ ಪುರುಷರ ಪ್ರಮುಖ ಸಂತಾನಹರಣ ಶಸ್ತ್ರಚಿಕಿತ್ಸೆಯಾಗಿದ್ದು, ವೃಷಣದಿಂದ ಶಿಶ್ನಕ್ಕೆ ವೀರ್ಯವನ್ನು ಸಾಗಿಸುವ ನಾಳವನ್ನು ಕತ್ತರಿಸಲಾಗುತ್ತದೆ. ಈ ಪ್ರಕ್ರಿಯೆಯ ನಂತರ ಲೈಂಗಿಕತೆಯ ಮೇಲೆ ಪರಿಣಾಮ ಬೀರುವುದಿಲ್ಲ. ಈ ಕ್ರಮವು ಶಾಶ್ವತವಾಗಿರುತ್ತದೆ. 10 ನಿಮಿಷದಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ. ತಾಲೂಕು, ಜಿಲ್ಲಾಸ್ಪತ್ರೆಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಈ ಶಸ್ತ್ರಚಿಕಿತ್ಸೆ ಲಭ್ಯವಿದೆ.

ಕೊರೋನಾದಿಂದ 25% ತಗ್ಗಿದ ಮಹಿಳೆಯರ ಟ್ಯುಬೆಕ್ಟಮಿ

ರಾಜ್ಯದಲ್ಲಿ 2016ರಿಂದ 2019ವರೆಗೂ ವಾರ್ಷಿಕ 3 ಲಕ್ಷ ಮಹಿಳೆಯರು ಸಂತಾನಹರಣ ಶಸ್ತ್ರಚಿಕಿತ್ಸೆಗೆ (ಟ್ಯುಬೆಕ್ಟಮಿಗೆ) ಒಳಗಾಗುತ್ತಿದ್ದರು. ಆದರೆ, ಕೊರೋನಾ ಕಾಣಿಸಿಕೊಂಡ ಬಳಿಕ ಸೋಂಕು ತಗಲುವ ಭಯದಿಂದ ಆಸ್ಪತ್ರೆಗಳಿಗೆ ದಾಖಲಾಗಿ ಶಸ್ತ್ರಚಿಕಿತ್ಸೆಗೊಳಗಾಗಲು ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ವಾರ್ಷಿಕ 2.2 ಲಕ್ಷ ಶಸ್ತ್ರಚಿಕಿತ್ಸೆಗಳು ನಡೆಸಿದ್ದು, ಶೇ.25 ರಷ್ಟು ತಗ್ಗಿವೆ.

ಪುರುಷರಿಗೇ ಪ್ರತ್ಯೇಕ ವೈದ್ಯಕೀಯ ಸೇವೆ: ಮಲ್ಲೇಶ್ವರಂ, ರಾಮನಗರದಲ್ಲಿ ಪ್ರಾಯೋಗಿಕ ಚಾಲನೆ

ಹೆಂಡತಿಯರಿಂದಲೇ ವಿರೋಧ!

ಗ್ರಾಮೀಣ ಭಾಗದಲ್ಲಿ ಕೆಲ ಪುರುಷರು ಈ ಶಸ್ತ್ರಚಿಕಿತ್ಸೆ ಮಾಡಿಸಲು ಮುಂದೆ ಬಂದರೂ ಅವರ ಹೆಂಡತಿಯರು ವಿರೋಧ ಮಾಡುತ್ತಾರೆ. ದುಡಿಯುವ, ಮನೆಗೆ ಆಧಾರವಾದ ಪುರುಷರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಆರೋಗ್ಯ ಸಮಸ್ಯೆ ಎದುರಾದರೆ ಮುಂದೆ ತೊಂದರೆಯಾಗುತ್ತದೆ ಎಂಬ ಭಯ ಹೆಂಡತಿಯರಿಗೆ ಹೆಚ್ಚಿದೆ.

ಕಳೆದ 5 ವರ್ಷದಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ

ವರ್ಷ ಮಹಿಳೆಯರು ಪುರುಷರು

2017-18 3.1 ಲಕ್ಷ 917
2018-19 2.81 ಲಕ್ಷ 751
2019-20 2.9 ಲಕ್ಷ 802
2020-21 2.2 ಲಕ್ಷ 603
2021-22 2.3 ಲಕ್ಷ 643

ವ್ಯಾಸೆಕ್ಟಮಿ ಪರಿಚಯವಾಗಿ ಹಲವು ವರ್ಷಗಳೇ ಆಗಿದ್ದು, ಸುರಕ್ಷಿತ, ಸರಳ ಎಂದರೂ ಪುರುಷರು ಹಿಂದೇಟು ಹಾಕುತ್ತಿದ್ದಾರೆ. ಸಂತಾನಹರಣ ಶಸ್ತ್ರಚಿಕಿತ್ಸೆಗಳು ಮಹಿಳೆಯರಿಗೆ ಸೀಮಿತ ಎಂಬ ಮನೋಭಾವ ಹೆಚ್ಚಿದೆ. ಕೊರೋನಾ ಸಂದರ್ಭದಲ್ಲಿ ಮಹಿಳೆಯರ ಸಂತಾನಹರಣ ಶಸ್ತ್ರಚಿಕಿತ್ಸೆಗಳು ತಗ್ಗಿದ್ದವು. ವ್ಯಾಸೆಕ್ಟಮಿ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಗಳಿಗೆ ಗುರಿ ನೀಡಲಾಗಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ಉಪನಿರ್ದೇಶಕಿ ಡಾ.ಚಂದ್ರಿಕಾ ತಿಳಿಸಿದ್ದಾರೆ.  
 

Follow Us:
Download App:
  • android
  • ios