Lungs Cancer: ಸ್ಮೋಕ್ ಮಾಡದ ಭಾರತೀಯರಿಗೂ ಕಾಡುತ್ತಿದೆ ಈ ಅನಾರೋಗ್ಯ!
ದೇಶದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ತೀವ್ರವಾಗಿ ಏರಿಕೆಯಾಗಿವೆ. ಮಹಿಳೆಯರಲ್ಲೂ ಶ್ವಾಸಕೋಶದ ಕ್ಯಾನ್ಸರ್ ಹೆಚ್ಚುತ್ತಿದೆ. ಧೂಮಪಾನಿಗಳಲ್ಲದವರೂ ಸಹ ಇದಕ್ಕೆ ತುತ್ತಾಗುತ್ತಿದ್ದಾರೆ ಎನ್ನುವುದು ಎಚ್ಚರಿಕೆಯ ವಿಚಾರ.
ಕ್ಯಾನ್ಸರ್ ಇತ್ತೀಚೆಗೆ ಮನೆಮನೆಗಳಲ್ಲಿ ಕಂಡುಬರುತ್ತಿರುವ ಆರೋಗ್ಯ ಸಮಸ್ಯೆ. ಮಹಿಳೆಯರು, ಪುರುಷರು ಎನ್ನುವ ಭೇದವಿಲ್ಲದೆ ಕ್ಯಾನ್ಸರ್ ಹಲವು ಕುಟುಂಬಗಳನ್ನು ಬಾಧಿಸುತ್ತಿದೆ. ಇತ್ತೀಚೆಗೆ ನಡೆದ ಒಂದು ಅಧ್ಯಯನದ ಪ್ರಕಾರ, ಭಾರತ ಸೇರಿದಂತೆ ಜಗತ್ತಿನ ಎಲ್ಲ ದೇಶಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ತೀವ್ರವಾಗಿ ಹೆಚ್ಚುತ್ತಿದೆ. ಇದರಿಂದ ಸಾವಿಗೀಡಾಗುತ್ತಿರುವ ರೋಗಿಗಳ ಸಂಖ್ಯೆ ಅಧಿಕವಾಗಿದೆ. ಇತರೆ ಬೇರೆ ಬೇರೆ ಕ್ಯಾನ್ಸರ್ ಗಳಿಗೆ ಹೋಲಿಕೆ ಮಾಡಿದರೆ ಶ್ವಾಸಕೋಶದ ಕ್ಯಾನ್ಸರ್ ನಿಂದ ಸಾವಿನ ಪ್ರಮಾಣ ಹೆಚ್ಚು ಎನ್ನುವುದು ಸಾಬೀತಾಗಿದೆ. ಅಷ್ಟೇ ಅಲ್ಲ, ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ಸಹ ತೀವ್ರವಾಗಿ ಏರುತ್ತಿರುವುದು ಕಂಡುಬಂದಿದೆ. ಕಳೆದ ಹಲವು ವರ್ಷಗಳಿಂದ ಕ್ಯಾನ್ಸರ್ ಗೆ ಲಭ್ಯವಾಗಿರುವ ವಿವಿಧ ಔಷಧಗಳ ಪರಿಣಾಮವಾಗಿ ಸಾವಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಇಂದು ಹಲವು ರೀತಿಯ ಪ್ರಗತಿಯಾಗಿದೆ. ಪರಿಣಾಮಕಾರಿ ಔಷಧಗಳು ಹಾಗೂ ಶಸ್ತ್ರಕ್ರಿಯೆ, ಕಿಮೋಗಳ ಸಹಕಾರದಿಂದ ಸಾಕಷ್ಟು ಕ್ಯಾನ್ಸರ್ ರೋಗಿಗಳು ಚೇತರಿಸಿಕೊಳ್ಳುತ್ತಿದ್ದಾರೆ. ಆದರೂ, ಹಲವರು ಸಾವಿಗೆ ತುತ್ತಾಗುತ್ತಿದ್ದಾರೆ. ಇವರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಗೆ ತುತ್ತಾದವರೇ ಹೆಚ್ಚು ಎಂದು ಗ್ಲೋಬಲ್ ಕ್ಯಾನ್ಸರ್ ಆಬ್ಸರ್ವೇಟರಿ ಗುರುತಿಸಿದೆ.
ದೆಹಲಿಯ (Delhi) ಗುರುಗ್ರಾಮ್ ನಲ್ಲಿರುವ ಆಸ್ಪತ್ರೆಯೊಂದರ ತಜ್ಞರಾಗಿರುವ ಡಾ. ಅರವಿಂದ್ ಕುಮಾರ್ ಅವರ ನೇತೃತ್ವದಲ್ಲಿ ಒಂದು ದಶಕಗಳ ಕಾಲ ಶ್ವಾಸಕೋಶ ಕ್ಯಾನ್ಸರ್ (Lungs Cancer) ರೋಗಿಗಳ (Patients) ಮೇಲೆ ಅಧ್ಯಯನ ನಡೆಸಲಾಗಿತ್ತು. ಇತ್ತೀಚೆಗೆ ಈ ಅಧ್ಯಯನ (Study) ವರದಿಯನ್ನು ಬಹಿರಂಗಪಡಿಸಲಾಗಿದೆ. ಇದರಲ್ಲಿನ ಅಂಶಗಳು ಭಾರೀ ವಿಚಿತ್ರ ಹಾಗೂ ಕುತೂಹಲ ಮೂಡಿಸುವಂತಿದೆ. ಇದರ ಪ್ರಕಾರ, ಹೊರರೋಗಿ ವಿಭಾಗದಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಇವರಲ್ಲಿ ಕಡಿಮೆ ವಯೋಮಾನದವರೇ ಹೆಚ್ಚಿದ್ದಾರೆ ಹಾಗೂ ಇವರಲ್ಲಿ ಅತಿ ವಿರಳ ಮಂದಿ ಮಾತ್ರ ಧೂಮಪಾನಿಗಳಾಗಿದ್ದಾರೆ, ಉಳಿದವರು ಧೂಮಪಾನಿಗಳಲ್ಲ. ಆದರೂ ಇವರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಕಂಡುಬಂದಿದೆ. ಈ ಅಧ್ಯಯನಕ್ಕಾಗಿ 2012ರಿಂದ 2022ರವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರೋಗಿಗಳ ತುಲನಾತ್ಮಕವಾಗಿ ವಿಶ್ಲೇಷಿಸಲಾಗಿದೆ. ರೋಗಿಗಳ ಜೀವನಶೈಲಿ (Lifestyle), ಆಹಾರ-ವಿಹಾರಗಳನ್ನು ಪರಿಗಣಿಸಲಾಗಿತ್ತು. 304 ರೋಗಿಗಳನ್ನು ಇದರಲ್ಲಿ ಒಳಗೊಳ್ಳಲಾಗಿದ್ದು, ವಯಸ್ಸು (Age), ಲಿಂಗ, ಧೂಮಪಾನ (Smokers), ರೋಗ ಆರಂಭವಾದ ಸಮಯ ಇತ್ಯಾದಿ ಅಂಶಗಳನ್ನು ಸಹ ಪರಿಗಣಿಸಲಾಗಿತ್ತು.
ಓರಲ್ ಸೆಕ್ಸ್ ಗಂಟಲಿನ ಕ್ಯಾನ್ಸರ್ ತರೋ ಚಾನ್ಸ್ ಇದೆಯಾ?
ಗಮನಾರ್ಹ ಏರಿಕೆ
ಇದರಲ್ಲಿ ಸ್ಪಷ್ಟವಾಗಿ ಕಂಡುಬಂದ ಅಂಶವೆಂದರೆ, ಶ್ವಾಸಕೋಶದ ಒಟ್ಟಾರೆ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಪುರುಷರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಮೊದಲೇ ಅಧಿಕವಾಗಿತ್ತು. ಮಹಿಳೆಯರಲ್ಲೂ ಸಹ ಕಳೆದ ಎಂಟು ವರ್ಷಗಳಿಂದ ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಾಗಿದೆ. 2012ರಲ್ಲಿ 7ನೇ ಸ್ಥಾನದಲ್ಲಿದ್ದ ಶ್ವಾಸಕೋಶದ ಕ್ಯಾನ್ಸರ್ ಈಗ 3ನೇ ಸ್ಥಾನಕ್ಕೆ ಏರಿಕೆಯಾಗಿದೆ. ಶೇ.20ರಷ್ಟು ರೋಗಿಗಳು 50 ಕ್ಕಿಂತ ಕಡಿಮೆ ಹಾಗೂ ಶೇ.10ರಷ್ಟು ರೋಗಿಗಳು 40ಕ್ಕಿಂತ ಕಡಿಮೆ ವಯೋಮಾನದವರಾಗಿದ್ದಾರೆ.
ಧೂಮಪಾನಿಗಳಲ್ಲದವರಲ್ಲೂ ಕ್ಯಾನ್ಸರ್
ಹೆಚ್ಚು ಚಿಂತೆ ಮಾಡಬೇಕಾದ ವಿಚಾರವೆಂದರೆ, ಶೇ.50ರಷ್ಟು ರೋಗಿಗಳು ಧೂಮಪಾನಿಗಳಲ್ಲ ಎನ್ನುವುದು. 30ಕ್ಕಿಂತ ಕಡಿಮೆ ವಯೋಮಾನದವರಲ್ಲಿ ಸಹ ಶ್ವಾಸಕೋಶದ ಕ್ಯಾನ್ಸರ್ ಕಂಡುಬಂದಿದ್ದು, ಇವರ್ಯಾರೂ ಸಹ ಧೂಮಪಾನಿಗಳಾಗಿರಲಿಲ್ಲ. ಹಾಗೆಯೇ ಮಹಿಳೆಯರು ಶ್ವಾಸಕೋಶದ ಕ್ಯಾನ್ಸರ್ ಗೆ ತುತ್ತಾಗುವುದು ಸಹ ಹೆಚ್ಚಾಗಿದೆ. ಕ್ಯಾನ್ಸರ್ ಪ್ರಕರಣಗಳ ಪೈಕಿ ಶೇ.30ರಷ್ಟು ಶ್ವಾಸಕೋಶದ ಕ್ಯಾನ್ಸರ್ ಗಳಾಗಿದ್ದು, ಇವರೆಲ್ಲರೂ ನಾನ್ ಸ್ಮೋಕರ್ಸ್ (Non Smokers) ಆಗಿದ್ದರು. ದುರಂತವೆಂದರೆ, ಶೇ.80ರಷ್ಟು ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ಅಡ್ವಾನ್ಸ್ (Advance) ಹಂತದಲ್ಲಿರುವಾಗ ಅಂದರೆ ಚಿಕಿತ್ಸೆಗೆ ಸ್ಪಂದಿಸದಿರುವ ಹಂತದಲ್ಲಿ ಬೆಳಕಿಗೆ ಬಂದಿವೆ. ಜತೆಗೆ, ಸೂಕ್ತ ಚಿಕಿತ್ಸೆ ದೊರಕದೇ ಸಾವಿಗೀಡಾದವರ (Death) ಸಂಖ್ಯೆಯೂ ಅಧಿಕವಾಗಿದೆ.
Health Problem : ಕ್ಯಾನ್ಸರ್ ನಂತಹ ಗಂಭೀರ ಸಮಸ್ಯೆಗೆ ಇಮ್ಯುನೊಥೆರಪಿ
ಶ್ವಾಸಕೋಶದ ಕ್ಯಾನ್ಸರ್ ಬೇರೆ ಕ್ಯಾನ್ಸರ್ ಗಳಂತಲ್ಲ. ಸರ್ಜರಿ ವಿಭಿನ್ನವಾಗಿರುತ್ತದೆ. ಕೀ ಹೋಲ್ ಸರ್ಜರಿ (ವೈಟ್ ಅಥವಾ ರೋಬಾಟಿಕ್ ಸರ್ಜರಿ)ಗೆ ಅತ್ಯಾಧುನಿಕ ವ್ಯವಸ್ಥೆ ಬೇಕಾಗುತ್ತದೆ. ಇವು ಕಡಿಮೆ ಸಂಖ್ಯೆಯಲ್ಲಿವೆ. ಹೀಗಾಗಿ, ದೇಶದಲ್ಲೆಡೆ ಶ್ವಾಸಕೋಶದ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ (Treatment) ಇವುಗಳ ಅಗತ್ಯವೂ ಹೆಚ್ಚಿದೆ ಎಂದು ಅಧ್ಯಯನ ಗುರುತಿಸಿದೆ.