ನಮ್ಮ ದೇಹದ ಬಹುಪಾಲು ನೀರಿನಿಂದ ಕೂಡಿದ್ದು, ಇದರ ಕೊರತೆಯು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನೀರು ಕುಡಿಯುವುದನ್ನು ನಿರ್ಲಕ್ಷಿಸುವುದರಿಂದ ಬಾಯಿಯ ದುರ್ವಾಸನೆ, ಕೂದಲು ಉದುರುವಿಕೆ, ರಕ್ತಹೀನತೆ, ಮಾನಸಿಕ ಒತ್ತಡ ಮತ್ತು ತ್ವಚೆಯ ಸಮಸ್ಯೆಗಳು ಉಂಟಾಗಬಹುದು.
ನಮ್ಮ ದೇಹದ ಸುಮಾರು 70 ಪ್ರತಿಶತ ಭಾಗ ನೀರಿನಿಂದ ಕೂಡಿದೆ. ನೀರು ಕೇವಲ ಬಾಯಾರಿಕೆ ನೀಗಿಸುವ ದ್ರವವಲ್ಲ, ಅದು ನಮ್ಮ ದೇಹದ ಪ್ರತಿಯೊಂದು ಅಂಗಾಂಗಗಳ ಚಾಲನಾ ಶಕ್ತಿ. ಆದರೆ ಇಂದಿನ ವೇಗದ ಬದುಕಿನಲ್ಲಿ ನಮಗೆ ನೀರು ಕುಡಿಯುವುದೇ ಮರೆತುಹೋಗುತ್ತಿದೆ. ಈ ಸಣ್ಣ ನಿರ್ಲಕ್ಷ್ಯ ಮುಂದೆ ಹೇಗೆ ಗಂಭೀರ ಕಾಯಿಲೆಗಳಿಗೆ ದಾರಿಯಾಗುತ್ತದೆ ಎಂಬುದು ಇಲ್ಲಿದೆ.
ಬಾಯಿಯ ದುರ್ವಾಸನೆ: ಇದು ಬರಿ ಬ್ರಷ್ ಮಾಡದ ಸಮಸ್ಯೆಯಲ್ಲ!
ನಿಮ್ಮ ಬಾಯಿಯಿಂದ ಆಗಾಗ್ಗೆ ದುರ್ವಾಸನೆ ಬರುತ್ತಿದೆಯೇ? ಹಾಗಿದ್ದರೆ ಮೊದಲು ಒಂದು ಗ್ಲಾಸ್ ನೀರು ಕುಡಿಯಿರಿ. ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ಬಾಯಿ ಒಣಗುತ್ತದೆ, ಇದರಿಂದ ಹಾನಿಕಾರಕ ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆದು ದುರ್ವಾಸನೆಗೆ ಕಾರಣವಾಗುತ್ತವೆ. ಬಾಯಿಯನ್ನು ತಾಜಾವಾಗಿಡಲು ನೀರು ಅತ್ಯುತ್ತಮ ನೈಸರ್ಗಿಕ ಕ್ಲೀನರ್.
ಕೂದಲು ಉದುರುವಿಕೆಗೆ ನೀರೇ ಮದ್ದು
ದುಬಾರಿ ಶಾಂಪೂ ಹಚ್ಚಿದರೂ ಕೂದಲು ಉದುರುವುದು ನಿಲ್ಲುತ್ತಿಲ್ಲವೇ? ಹಾಗಿದ್ದಲ್ಲಿ ನಿಮ್ಮ ನೆತ್ತಿ (Scalp) ನಿರ್ಜಲೀಕರಣಗೊಂಡಿರಬಹುದು. ನೀರಿನ ಕೊರತೆಯು ಕೂದಲಿನ ಬೇರುಗಳನ್ನು ದುರ್ಬಲಗೊಳಿಸುತ್ತದೆ. ನೆತ್ತಿಗೆ ಸರಿಯಾದ ಪೋಷಣೆ ಸಿಗದಿದ್ದರೆ ಕೂದಲು ಹೊಳಪು ಕಳೆದುಕೊಂಡು ಉದುರಲು ಪ್ರಾರಂಭಿಸುತ್ತದೆ.
ರಕ್ತಹೀನತೆ ಮತ್ತು ಆಯಾಸದ ಹಿಂದಿರುವ ಗುಟ್ಟು
ಕಡಿಮೆ ನೀರು ಕುಡಿಯುವುದು ನಿಮ್ಮ ರಕ್ತ ಪರಿಚಲನೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಇದು ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣವನ್ನು ಕುಗ್ಗಿಸಿ, ರಕ್ತಹೀನತೆಗೆ (Anemia) ಕಾರಣವಾಗಬಹುದು. ಸದಾ ದೌರ್ಬಲ್ಯ, ಆಯಾಸ ಮತ್ತು ತಲೆತಿರುಗುವಿಕೆ ಅನುಭವಿಸುತ್ತಿದ್ದರೆ ನಿಮ್ಮ ದೇಹ 'ನೀರು ಬೇಕು' ಎಂದು ಕಿರುಚುತ್ತಿದೆ ಎಂದರ್ಥ.
ಮೆದುಳಿನ ಆರೋಗ್ಯ ಮತ್ತು ಮೂಡ್ ಸ್ವಿಂಗ್ಸ್
ನೀರಿನ ಕೊರತೆಯು ಕೇವಲ ದೈಹಿಕವಲ್ಲ, ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ತಲೆನೋವು, ವಿನಾಕಾರಣ ಕಿರಿಕಿರಿ, ಒತ್ತಡ ಮತ್ತು ಆತಂಕಕ್ಕೆ ನಿರ್ಜಲೀಕರಣವೇ ಮುಖ್ಯ ಕಾರಣ. ನಿಮ್ಮ ಮೆದುಳನ್ನು ಸಕ್ರಿಯವಾಗಿ ಮತ್ತು ಶಾಂತವಾಗಿ ಇಡಲು ದಿನವಿಡೀ ಸಾಕಷ್ಟು ನೀರು ಕುಡಿಯುವುದು ಅನಿವಾರ್ಯ.
ತ್ವಚೆಯ ಹೊಳಪು, ಯೌವನದ ರಕ್ಷಣೆ ನೀರು ಬೇಕು
ನೀವು ಸದಾ ಕಾಲ ಯುವಕರಂತೆ ಕಾಣಬೇಕೇ? ಹಾಗಿದ್ದರೆ ನಿಮ್ಮ ಚರ್ಮದ ಜೀವಕೋಶಗಳನ್ನು ಹೈಡ್ರೇಟ್ ಆಗಿಡಿ. ನೀರಿನ ಸೇವನೆ ಕಡಿಮೆಯಾದಲ್ಲಿ ಚರ್ಮ ಒಣಗಿ, ಕಾಂತಿಹೀನವಾಗುತ್ತದೆ. ಅಕಾಲಿಕ ಸುಕ್ಕುಗಳು ಮತ್ತು ಮುಖದ ಮೇಲಿನ ಕಳೆಗುಂದಿದಂತೆ ಕಾಣದಿರಲು ಆಗಾಗ ನೀರು ಕುಡಿಯುದು ಅತ್ಯಗತ್ಯ. ನೀರು ಅಮೃತವಿದ್ದಂತೆ.


