ಕಾಲು ನೀಳವಾಗಿರುವಂತೆ ಕಾಣೋಕೆ ಬಂತು ಬಾರ್ಬಿ ಫೀಟ್ ಚಾಲೆಂಜ್: ಪಾಲ್ಗೊಳ್ಳೋ ಮುನ್ನ ಇಲ್ ಕೇಳಿ
ಟಿಕ್ ಟಾಕ್ ನಲ್ಲಿ ಬಾರ್ಬಿ ಫೀಟ್ ಚಾಲೆಂಜ್ ಈಗ ಸದ್ದು ಮಾಡುತ್ತಿದೆ. ಇದರಲ್ಲಿ ಪಾಲ್ಗೊಳ್ಳುವ ಮುನ್ನ ನಿಮ್ಮ ದೇಹದ ಆರೋಗ್ಯದ ಬಗ್ಗೆ ಗಮನವಿರಲಿ. ಕಾಲುಗಳು, ಮೂಳೆ, ಮಾಂಸಖಂಡ, ಮೊಣಕಾಲುಗಳು ಇದರಿಂದ ಸಮಸ್ಯೆಗೆ ತುತ್ತಾಗಬಹುದು. ಪಾಲ್ಗೊಳ್ಳಲೇಬೇಕು ಎಂದಾದರೆ ಕೆಲವು ಎಚ್ಚರಿಕೆ ತೆಗೆದುಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಏನಾದರೊಂದು ಚಾಲೆಂಜ್ ಸೃಷ್ಟಿಯಾಗುತ್ತಿರುತ್ತದೆ. ಬಳಕೆದಾರರು ಅದನ್ನು ಸ್ವೀಕರಿಸಿ ಹೆಮ್ಮೆ ಪಡುವುದು ಸಾಮಾನ್ಯ ಸಂಗತಿ. ಅನೇಕ ಬಾರಿ ಇವುಗಳಲ್ಲಿ ದೊಡ್ಡ ಸೆಲೆಬ್ರಿಟಿಗಳೇ ಭಾಗಿಯಾಗುವುದುಂಟು. ಫಿಟ್ ನೆಸ್ ಚಾಲೆಂಜ್ ನಲ್ಲಿ ಬಹಳಷ್ಟು ಖ್ಯಾತನಾಮರು ಪಾಲ್ಗೊಂಡಿದ್ದರು. ಇದೀಗ, ಟಿಕ್ ಟಾಕ್ ನಲ್ಲಿ ಬಾರ್ಬಿ ಫೀಟ್ ಚಾಲೆಂಜ್ ಎನ್ನುವ ಹೊಸ ಟ್ರೆಂಡ್ ಸೃಷ್ಟಿಯಾಗಿದೆ. ಬಳಕೆದಾರರಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆಯನ್ನೂ ಇದು ಗಳಿಸಿದೆ. ಈ ಚಾಲೆಂಜ್ ನಿರ್ಮಾಣವಾಗಿರುವುದರ ಹಿಂದೆ ಗ್ರೇಟಾ ಗೆರ್ವಿಗ್ ರ ಚಲನಚಿತ್ರ “ಬಾರ್ಬಿʼಯ ಪ್ರೇರಣೆ ಇದೆ. ಈ ಚಿತ್ರ ಜಾಗತಿಕವಾಗಿ ಸಾಕಷ್ಟು ಗಮನ ಸೆಳೆದಿತ್ತು. ಇದರಿಂದಾಗಿ ಪಿಂಕ್ ಬಣ್ಣವನ್ನು ಹೆಚ್ಚು ಬಳಕೆ ಮಾಡುವ ಟ್ರೆಂಡ್ ಕೂಡ ಆರಂಭವಾಗಿತ್ತು. ಇದೀಗ, ಇದೇ ಬಾರ್ಬಿಯ ಮೇಲೆ ಮತ್ತೊಂದು ಚಾಲೆಂಜ್ ಆರಂಭವಾಗಿದೆ. ಅದೆಂದರೆ, ಬಾರ್ಬಿ ಫೀಟ್ ಚಾಲೆಂಜ್. ಬಾರ್ಬಿಯಂತೆ ನೀಳವಾದ ಉದ್ದನೆಯ ಪಾದಗಳನ್ನು ಹೊಂದಿರುವಂತೆ ಕಾಣಲು ಕಾಲುಗಳ ಬೆರಳುಗಳ ಮೇಲೆ ಓಡಾಡುವುದು. ಚಿತ್ರದಲ್ಲಿ ಮಾರ್ಗೋತ್ ರಾಬಿ ಕಾಲುಗಳು ನೀಳವಾಗಿ ಕಾಣಲು ಬೆರಳುಗಳ ಮೇಲೆ ಓಡಾಡುವ ಸೀನ್ ಒಂದು ಈ ಚಾಲೆಂಜ್ ಗೆ ಕಾರಣವಾಗಿದೆ. ಆದರೆ, ಈ ಬಗ್ಗೆ ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ.
ನೋಟಕ್ಕೆ ಅಂದವಾಗಿ ಕಾಣುವ ಬಾರ್ಬಿ ಫೀಟ್ (Barbie Feet) ಟ್ರೆಂಡ್ (Trend) ಸೋಷಿಯಲ್ ಮೀಡಿಯಾದಲ್ಲಿ (Social Media) ಸಾಕಷ್ಟು ಸದ್ದು ಮಾಡುತ್ತಿದೆ. ಆದರೆ, ಬಾರ್ಬಿ ಫೀಟ್ ಮಾದರಿಯಲ್ಲಿ ಕಾಲುಗಳನ್ನು (Legs) ನೆಲಕ್ಕೂರಿದರೆ ಮಾಂಸಖಂಡಗಳು (Muscles), ಸ್ನಾಯುರಜ್ಜುಗಳ ಮೇಲೆ ಒತ್ತಡ ಉಂಟಾಗಿ ನೋವು ಮತ್ತು ಗಾಯ (Injury) ಉಂಟಾಗಬಹುದು. ದೇಹದ ವಿವಿಧ ಅಂಗಗಳಿಗೂ ನೋವಾಗಬಹುದು ಎಂಬ ಎಚ್ಚರಿಕೆ ಆರೋಗ್ಯ ವಲಯದಿಂದ ಬಂದಿದೆ.
Love and Health: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪ್ರೀತಿಯೇ ಸಾಕು
ಕಾಲುಗಳ ಮಾಂಸಖಂಡಗಳಿಗೆ ಹಾನಿ
ಬಾರ್ಬಿ ಮಾದರಿಯಲ್ಲಿ ನೀಳವಾದ ಕಾಲುಗಳಂತೆ ಕಾಣಲು ಬೆರಳುಗಳ ಮೇಲೆ (Tiptoe) ಓಡಾಡಲು ಆರಂಭಿಸಿದರೆ ಕಾಲುಗಳ ಮಾಂಸಖಂಡಗಳ ಮೇಲೆ ಭಾರೀ ಒತ್ತಡ (Stress) ನಿರ್ಮಾಣವಾಗುತ್ತದೆ. ಪರಿಣಾಮವಾಗಿ ಈ ಮಾಂಸಖಂಡಗಳಿಗೆ ಸುಸ್ತಾಗುತ್ತದೆ (Fatigue) ಹಾಗೂ ಅಸೌಖ್ಯ ಉಂಟಾಗುತ್ತದೆ. ದೀರ್ಘಕಾಲ ಹೀಗಾದರೆ ಸಮಸ್ಯೆಯಾಗಬಹುದು. ಆದರೆ, ಯಾವಾಗಲೋ ಒಮ್ಮೆ ಸಾಂದರ್ಭಿಕವಾಗಿ ಹೀಗೆ ಮಾಡಿದರೆ ಹೆಚ್ಚಿನ ಸಮಸ್ಯೆ ಆಗಲಿಕ್ಕಿಲ್ಲ. ಆದರೂ ಕೆಲವರಿಗೆ ಅಪಾಯಕಾರಿಯೇ.
ಮೂಳೆಗಳ (Bones) ಮೇಲೆ ಪ್ರಭಾವ
ಬಾರ್ಬಿ ಫೀಟ್ ನಂತೆ ಕಾಲೂರಲು ಆರಂಭಿಸಿದರೆ ಪಾದಗಳ ಮೂಳೆಗಳು, ಸಂದುಗಳು (Joint) ತೀವ್ರ ಪ್ರಭಾವಕ್ಕೆ ಒಳಗಾಗುತ್ತವೆ. ಪದೇ ಪದೆ ಮೂಳೆಗಳನ್ನು ಹೀಗೆ ವಿಸ್ತರಿಸಿದರೆ ಈ ಒತ್ತಡ ಕಿರುದಾದ ಫ್ರಾಕ್ಚರ್ ಗೂ ಕಾರಣವಾಗಬಹುದು. ಹಾಗೂ ಗಾಯವಾಗಬಹುದು. ಅಪರೂಪದ ಪ್ರಕರಣಗಳಲ್ಲಿ ಸ್ಟ್ರೆಸ್ ಫ್ರಾಕ್ಚರ್ (Stress Fracture) ಉಂಟಾಗಬಹುದು. ಇದರಿಂದ ಕಾಲುಗಳ ಸಂಪರ್ಕಿಸುವ ಕೋಶಗಳಲ್ಲಿ ಉರಿಯೂತ ಮತ್ತು ನೋವು ಕಂಡುಬರುತ್ತದೆ.
ಮೊಣಕಾಲು (Knee) ಸಮಸ್ಯೆ
ಮೊಣಕಾಲು ಗಂಟು ಸಹ ಇದರಿಂದ ಸಮಸ್ಯೆಗೆ ತುತ್ತಾಗಬಹುದು. ಹಾಗೂ ತೊಳೆಗಳ ಮೂಳೆಗಳೂ ಸಹ ಸ್ಟ್ರೆಚ್ (Streach) ಆಗುವುದರಿಂದ ನೋವಾಗಬಹುದು. ಕಾಲುಗಳ ಬೆರಳುಗಳ ತುದಿಯಲ್ಲಿ ನಿಲ್ಲುವುದರಿಂದ ಮೊಣಕಾಲು ಗಂಟಿನ ಹೊಂದಾಣಿಕೆ (Alignment) ವ್ಯತ್ಯಾಸವಾಗುತ್ತದೆ. ಇದರಿಂದ ಕಾರ್ಟಿಲೇಜ್ ಮೇಲೆ ಅನಗತ್ಯ ಒತ್ತಡ ನಿರ್ಮಾಣವಾಗುತ್ತದೆ. ಹೆಚ್ಚು ಸಮಯ ಈ ಭಂಗಿಯಲ್ಲಿದ್ದರೆ ಮೊಣಕಾಲಿನ ವಿವಿಧ ತೊಂದರೆ ಕಾಣಿಸಬಹುದು.
ಲೋಕಲ್ ಕಾಸ್ಮೆಟಿಕ್ಸ್ ಬಳಸ್ತಿದ್ದೀರಾ, ಅಲರ್ಜಿ ಸಮಸ್ಯೆ ಕಾಡ್ಬೋದು ಎಚ್ಚರ
ಅಪರೂಪಕ್ಕೆ ಬಾರ್ಬಿ ಫೀಟ್ ಚಾಲೆಂಜ್ ನಲ್ಲಿ ಪಾಲ್ಗೊಳ್ಳುವುದರಿಂದ ಹೆಚ್ಚಿನ ಸಮಸ್ಯೆ ಆಗದೇ ಇರಬಹುದು. ಆದರೆ, ಹೆಚ್ಚು ಸಮಯ ಇದನ್ನು ಪ್ರಾಕ್ಟೀಸ್ ಮಾಡುತ್ತಿದ್ದರೆ ಸಮಸ್ಯೆ ಖಂಡಿತ. ಒಂದೊಮ್ಮೆ ನೀವು ಪಾಲ್ಗೊಳ್ಳುತ್ತೀರಿ ಎಂದಾದರೆ ಕೆಲವು ಎಚ್ಚರಿಕೆ ತೆಗೆದುಕೊಳ್ಳಲೇಬೇಕು. ಪದೇ ಪದೆ ಮಾಡುವುದನ್ನು ತಪ್ಪಿಸಿ. ಸ್ಟ್ರೆಚಿಂಗ್ ವ್ಯಾಯಾಮ ಮಾಡುವುದರಿಂದ ಮಾಂಸಖಂಡಗಳು ಹೆಚ್ಚು ಫ್ಲೆಕ್ಸಿಬಲ್ ಆಗುತ್ತವೆ.