Asianet Suvarna News Asianet Suvarna News

ಸಿಕ್ಕಾಪಟ್ಟೆ ಕೋಪ ಬರುತ್ತಾ? ಮೈಮೇಲೆ ನಿಯಂತ್ರಣ ಇಲ್ಲದಂಗಾಗುತ್ತಾ?

ಮನುಷ್ಯನ ವೈರಿಗಳಲ್ಲಿ ಕೋಪಕ್ಕೆ ಎರಡನೇ ಸ್ಥಾನವಿದೆ. ಕೋಪದಿಂದ ಸಂಬಂಧ ಹಾಳಾಗುತ್ತದೆ, ಸ್ವಂತ ಗೌರವವೂ ನಾಶವಾಗುತ್ತದೆ. ಕೆಲವರು ಒಮ್ಮೊಮ್ಮೆ ಅತಿಯಾಗಿ ಕೋಪಿಸಿಕೊಂಡು ಇಲ್ಲಸಲ್ಲದ ಕೃತ್ಯಗಳನ್ನು ಮಾಡಿಬಿಡುತ್ತಾರೆ. ತೀವ್ರ ಕೋಪವೂ ಸಹ ಮಾನಸಿಕ ಸಮಸ್ಯೆಯಾಗಿದ್ದು, ಆರಂಭದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಬೇಕು.
 

Know about explosive anger management disorder sum
Author
First Published Sep 1, 2023, 5:00 PM IST

ಕೆಲವರಿಗೆ ಕೋಪ ಎನ್ನುವುದು ಮೂಗಿನ ತುದಿಯಲ್ಲಿರುತ್ತದೆ. ಅವರ ಬಳಿ ಏನಾದರೂ ಮುಕ್ತವಾಗಿ ಮಾತನಾಡಲು ಕಷ್ಟವಾಗುತ್ತದೆ, ಭಯವೂ ಉಂಟಾಗಬಹುದು. ಕೋಪವನ್ನು ಕಡಿಮೆ ಮಾಡಿಕೊಳ್ಳುವುದು ಅವರಿಂದ ಸಾಧ್ಯವೇ ಆಗುವುದಿಲ್ಲ. ಆದರೆ, ಕೆಲವರು ಸದಾಕಾಲ ಕೋಪಿಸಿಕೊಳ್ಳುವುದಿಲ್ಲ. ಅವರ ಕೋಪ ಕೆಲವೊಮ್ಮೆ ಮಾತ್ರ ಸ್ಫೋಟವಾಗುತ್ತದೆ. ಇದೂ ಸಹ ಒಂದು ರೀತಿಯ ಮನಸ್ಸಿಗೆ ಸಂಬಂಧಿಸಿದ ಸಮಸ್ಯೆಯಾಗಿದ್ದು, ಎಕ್ಸ್ ಪ್ಲೋಸಿವ್ ಇಂಟರ್ ಮಿಟೆಂಟ್ ಡಿಸಾರ್ಟರ್ (ಇಐಡಿ) ಅಥವಾ ಆಂಗರ್ ಮ್ಯಾನೇಜ್ ಮೆಂಟ್ ಡಿಸಾರ್ಡರ್ ಎಂದು ಕರೆಯಲಾಗುತ್ತದೆ. ಅಂದರೆ, ಇವರಿಗೆ ಒಂದು ಹಂತದಲ್ಲಿ ಕೋಪ ಹೇಗೆ ಬರುತ್ತದೆಯೆಂದರೆ, ಮೈಮೇಲೆ ಎಚ್ಚರಿಕೆ ಇಲ್ಲದವರಂತೆ ವರ್ತಿಸಬಹುದು. ಅತಿಯಾದ ಕೋಪವೂ ಸಹ ಮಾನಸಿಕ ಸಮಸ್ಯೆ ಎನ್ನುವ ಅರಿವು ಹಲವರಿಗಿಲ್ಲ. ಹೀಗಾಗಿ, ಇಂತಹ ಬಹಳಷ್ಟು ಪ್ರಕರಣಗಳು ಆಗೀಗ ಸಂಭವಿಸುವ ಸ್ಫೋಟಕದಂತಹ ಕೋಪದ ಸನ್ನಿವೇಶಗಳಲ್ಲಿ ಮುಳುಗಿಹೋಗುತ್ತವೆ. ಆದರೆ, ಅಂಥವರಿಂದ ಸಮಸ್ಯೆ ಸೃಷ್ಟಿಯಾಗುತ್ತಲೇ ಇರುತ್ತದೆ. ಹೀಗಾಗಿ, ಈ ಬಗ್ಗೆ ಎಚ್ಚರಿಕೆ, ಅರಿವು ಹೊಂದುವುದು ಅಗತ್ಯ. ಆರಂಭದಲ್ಲೇ ಸಮಸ್ಯೆಯನ್ನು ಗುರುತಿಸಿದರೆ ಸೂಕ್ತ ಚಿಕಿತ್ಸೆ ಮೂಲಕ ನಿಭಾಯಿಸಬಹುದು. ಇಐಡಿ ಸಮಸ್ಯೆ ಹೊಂದಿರುವವರು ಸಾಮಾನ್ಯವಾಗಿ ಕೆಲವು ಲಕ್ಷಣಗಳನ್ನು ಆಗಾಗ ತೋರ್ಪಡಿಸುತ್ತಾರೆ.

•    ಇದ್ದಕ್ಕಿದ್ದ ಹಾಗೆ ಸ್ಫೋಟ (Explosive)
ಅತಿ ಪ್ರಾಥಮಿಕ ಲಕ್ಷಣವೆಂದರೆ, ಇದ್ದಕ್ಕಿದ್ದ ಹಾಗೆ ಕೋಪ (Angry) ಬರುವುದು. ದುಡುಕು (Impulsive), ಹಠಮಾರಿತನದಿಂದ (Aggressive) ವರ್ತಿಸುತ್ತಾರೆ. ಕೋಪದಲ್ಲಿರುವಾಗ ನಿಯಂತ್ರಣವೇ (Control) ಇರುವುದಿಲ್ಲ. ಆಳವಾದ ಭಾವನೆಗಳಲ್ಲಿ ಮುಳುಗಿರುತ್ತಾರೆ. ಅಳುವುದು, ಕಿರಿಚುವುದು, ಬೈಯ್ಯುವುದು. ವಸ್ತುಗಳನ್ನು ಕುಟ್ಟುವುದು, ಸುತ್ತಮುತ್ತ ಹಾನಿ (Damage) ಮಾಡುವುದು ಮುಂತಾದ ಹಲವು ವರ್ತನೆಗಳನ್ನು ತೋರಬಹುದು. 

ಭಾವನಾತ್ಮಕ ಪ್ರಬುದ್ಧತೆ ಹೆಚ್ಬೇಕಾ? ಕೊರಿಯನ್ ಪದ್ಧತಿ ನುಂಚಿ ಟಿಪ್ಸ್ ಫಾಲೋ ಮಾಡಿ

•    ಸಣ್ಣ ವಿಚಾರಕ್ಕೂ ವಿವೇಚನೆರಹಿತವಾಗಿ ವರ್ತಿಸುವುದು
ಕೆಲವರು ಅತಿ ಚಿಕ್ಕ ವಿಚಾರಕ್ಕೂ ಭಾರೀ ಸಿಟ್ಟು ಮಾಡಿಕೊಳ್ಳುತ್ತಾರೆ. ಕೋಪಕ್ಕೆ ಕಾರಣವಾಗುವ ಅಂಶಗಳನ್ನು ನಿಭಾಯಿಸಲು ಇವರಿಗೆ ಸಾಧ್ಯವಾಗುವುದಿಲ್ಲ. ಯಾರಾದರೂ ಸಣ್ಣದಾಗಿ ಕೆರಳಿಸಿದರೂ (Provoke) ಸಾಕು, ಕೋಪದಿಂದ ಹಾರಾಡುತ್ತಾರೆ. ಸಣ್ಣದೊಂದು ಕಿರಿಕಿರಿ (Irritation), ಟೀಕೆ ಸಹಿಸಿಕೊಳ್ಳಲು ಕಷ್ಟಪಡುತ್ತಾರೆ. ವಿವಿಧ ಸನ್ನಿವೇಶಗಳಲ್ಲಿ ಅವರು ಹೇಗೆ ವರ್ತಿಸಬಲ್ಲರು ಎನ್ನುವುದನ್ನು ಅಂದಾಜಿಸಲು ಸಾಧ್ಯವಾಗುವುದಿಲ್ಲ. 

•    ಮಧ್ಯಂತರ ಕಾಲಾವಧಿ
ಕೋಪದ ಅವಧಿ ಅವರವರ ಮಾನಸಿಕ ಸ್ಥಿತಿಗೆ (Mental Status) ತಕ್ಕಂತೆ ವ್ಯತ್ಯಾಸವಾಗುತ್ತದೆ. ಕೆಲವರಿಗೆ ಕೆಲವೇ ನಿಮಿಷಗಳ ಕಾಲ ಕೋಪ ಬಂದರೆ, ಕೆಲವರಿಗೆ ಗಂಟೆಗಟ್ಟಲೆ ಇರಬಹುದು. ಈ ಸಮಯದಲ್ಲಿ ಮಾತ್ರ ಅವರು ತೀವ್ರ ಕೋಪ (Outburst) ಪ್ರದರ್ಶಿಸುತ್ತಾರೆ. ಮಾತಿನಲ್ಲಿ, ದೈಹಿಕವಾಗಿ ಅಗ್ರೆಸ್ಸಿವ್ ಆಗಿ ವರ್ತಿಸಬಹುದು. ತಾನೇನು ಮಾಡುತ್ತಿದ್ದೇನೆ ಎನ್ನುವ ವಿವೇಚನೆ, ನಿಯಂತ್ರಣ ಕಳೆದುಕೊಳ್ಳಬಹುದು. ಈ ಸಮಯ ಕಳೆದ ಬಳಿಕ ಅವರು ಇದ್ದಕ್ಕಿದ್ದ ಹಾಗೆ ಶಾಂತರಾಗಿಬಿಡುತ್ತಾರೆ. ಹೀಗಾಗಿ, ಇತರರಿಗೆ ಅವರು ಉದ್ದೇಶಪೂರ್ವಕವಾಗಿ ಹಾಗೆ ವರ್ತಿಸುತ್ತಾರೆ ಎಂದೆನಿಸಬಹುದು. ಆದರೆ, ಅದು ಹಾಗಲ್ಲ.

•    ಕೋಪದ ಬಳಿಕ ಪಶ್ಚಾತ್ತಾಪ (Regret), ಪರಿತಾಪ (Remorse)
ವಿಪರೀತ ಕೋಪಿಸಿಕೊಂಡು ತಣ್ಣಗಾದ ಬಳಿಕ ಅವರು ಸಾಕಷ್ಟು ಪಶ್ಚಾತ್ತಾಪ ಪಡುತ್ತಾರೆ. ತಮ್ಮಿಂದಾದ ಹಾನಿಗೆ ಪರಿತಪಿಸುತ್ತಾರೆ. ಆಗಿ ಹೋದ ಕೃತ್ಯದ ಬಗ್ಗೆ ನಿಜವಾಗಿಯೂ ದುಃಖಿಸುತ್ತಾರೆ. ಕೋಪದ ವರ್ತನೆ ಅವರ ಮೂಲ ಮೌಲ್ಯಗಳಿಗೆ ಎಂದಿಗೂ ಸಂಬಂಧಿಸಿರುವುದಿಲ್ಲ ಎನ್ನುವುದು ವಿಶೇಷ. ವಿಪರೀತ ಪಶ್ಚಾತ್ತಾಪದಿಂದ ಅವರು ತಮಗೂ ಹಾನಿ ಮಾಡಿಕೊಳ್ಳಬಲ್ಲರು. ಅಪರಾಧಿ ಪ್ರಜ್ಞೆಯಿಂದ (Guilt) ಬಳಲುತ್ತಾರೆ ಹಾಗೂ ತಮ್ಮನ್ನು ತಾವು ನಿಂದಿಸಿಕೊಳ್ಳುತ್ತಾರೆ.

ಯಾಕೋ ಬೇಜಾರು ಅಂತಾರಲ್ಲ.. ಆ ತರಾ ಆಗ್ತಿದೆ, ಏನಪ್ಪಾ ಮಾಡೋದು?

•    ಸಹಜ ವರ್ತನೆಯ ಅವಧಿ
ಈ ಅವಧಿಯಲ್ಲಿ ಇವರು ಶಾಂತವಾಗಿದ್ದು, ಹಠಮಾರಿ ವರ್ತನೆ ತೋರುವುದಿಲ್ಲ. ತಮ್ಮ ಎಂದಿನ ಜೀವನದಲ್ಲಿ ನಿರತರಾಗಿರುತ್ತಾರೆ. ಹೀಗಾಗಿ, ಈ ಸಮಸ್ಯೆಯನ್ನು (Problem) ನಿಖರವಾಗಿ ಗುರುತಿಸಲು ಮತ್ತು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಇವರಿಗೆ ಕೋಪ ನಿರ್ವಹಣೆ ಮಾಡುವ ಕುರಿತು ನಿರಂತರ ಮಾರ್ಗದರ್ಶನ ಬೇಕಾಗುತ್ತದೆ. ಇಲ್ಲವಾದರೆ ಇವರಲ್ಲಿ ಹತಾಶೆ (Frustration) ಮಡುಗಟ್ಟುತ್ತದೆ. ಸಂಬಂಧ (Relationship) ಮತ್ತು ಗೌರವ ಹಾಳಾಗುವುದರಿಂದ ಗುಣಮಟ್ಟದ ಜೀವನ ಇಲ್ಲವಾಗುತ್ತದೆ. 
 

Follow Us:
Download App:
  • android
  • ios