2018ರ ಬಳಿಕ ಕೇರಳದಲ್ಲಿ ಕಾಣಿಸಿಕೊಂಡಿರುವ ನಿಫಾ ವೈರಸ್‌ ಬಾಂಗ್ಲಾದೇಶ ರೂಪಾಂತರವಾಗಿದ್ದು, ಬಹಳ ಅಪಾಯಕಾರಿಯಾಗಿದೆ. ಈ ವೈರಸ್‌ ಸೋಂಕಿತರಲ್ಲಿ ಮರಣ ಪ್ರಮಾಣ ತೀರಾ ಹೆಚ್ಚಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ತಿಳಿಸಿದ್ದಾರೆ. 

ಕೊಚ್ಚಿ (ಸೆ.13): ದಕ್ಷಿಣದ ರಾಜ್ಯದಲ್ಲಿ ದೊಡ್ಡ ಮಟ್ಟದ ಆತಂಕ ಸೃಷ್ಟಿಸಿರುವ ನಿಫಾ ವೈರಸ್‌ ಬಗ್ಗೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಮಾಹಿತಿ ನೀಡಿದ್ದಾರೆ. ಈ ಬಾರಿ ಕೋಜಿಕ್ಕೋಡ್‌ನಲ್ಲಿ ಕಾಣಿಸಿಕೊಂಡಿರುವ ನಿಫಾ ವೈರಸ್‌ ಬಾಂಗ್ಲಾದೇಶದ ರೂಪಾಂತರ ಎಂದು ತಿಳಿಸಿದ್ದಾರೆ. ಅದಲ್ಲದೆ, ಈಗ ಕಾಣಿಸಿಕೊಂಡಿರುವ ನಿಫಾ ವೈರಸ್‌ ಬಹಳ ಅಪಾಯಕಾರಿಯಾಗಿದೆ. ಈ ವೈರಸ್‌ ಸೋಂಕಿತರಲ್ಲಿ ಮರಣ ಪ್ರಮಾಣ ತೀರಾ ಹೆಚ್ಚಾಗಿದೆ ಎಂದಿದ್ದಾರೆ. ಮಾನವನಿಂದ ಮಾನವನಿಗೆ ನಿಫಾ ವೈರಸ್‌ ಹರಡಿದ್ದಲ್ಲಿ ಅದು ಹೆಚ್ಚು ಮಾರಣಾಂತಿಕವಾಗಿರಲಿದೆ. ಹಾಗಿದ್ದರೂ, ನಿಫಾ ರೂಪಾಂತರವು ಕಡಿಮೆ ಸಾಂಕ್ರಾಮಿಕವಾಗಿದೆ ಎಂದು ಅವರು ಹೇಳಿದರು. ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) ತಂಡಗಳು ನಿಫಾ ಪರೀಕ್ಷೆ ಮತ್ತು ಬಾವಲಿಗಳ ಪರೀಕ್ಷೆಯನ್ನು ಕೈಗೊಳ್ಳಲು ಕೋಝಿಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಮೊಬೈಲ್ ಲ್ಯಾಬ್ ಅನ್ನು ಸ್ಥಾಪಿಸಲು ಕೇರಳಕ್ಕೆ ಆಗಮಿಸಲಿವೆ ಎಂದು ರಾಜ್ಯ ಸರ್ಕಾರ ಬುಧವಾರ ವಿಧಾನಸಭೆಯಲ್ಲಿ ತಿಳಿಸಿದೆ.

ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಅವರು ನಿಫಾದಿಂದಲೇ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಅಲ್ಲದೆ, ಪರಿಸ್ಥಿತಿಯ ಅವಲೋಕನ ಮತ್ತು ಸಹಕಾರ ನೀಡಲು ಕೇಂದ್ರ ತಂಡವನ್ನು ರಾಜ್ಯಕ್ಕೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಮತ್ತೆ ನಿಪಾ ವೈರಸ್‌ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕಲ್ಲಿಕೋಟೆ ಜಿಲ್ಲೆಯಲ್ಲಿ ಆರೋಗ್ಯ ಎಚ್ಚರಿಕೆ ನೀಡಲಾಗಿದೆ. ಕಲ್ಲಿಕೋಟೆ ಜಿಲ್ಲೆಯಲ್ಲಿ ಆ.30 ಹಾಗೂ ಕಳೆದ ಸೋಮವಾರ ಇಬ್ಬರು ಮೃತಪಟ್ಟಿದ್ದರು. ರಕ್ತದ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿತ್ತು. ಇದೀಗ ಇಬ್ಬರು ಈ ಸೋಂಕಿನಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ಹೀಗಾಗಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ. ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಆರೋಗ್ಯ ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.

ಆದರೆ ರೋಗದ ಬಗ್ಗೆ ಭಯ ಬೇಡ. ಸಂಪರ್ಕಿತರನ್ನು ಕ್ವಾರಂಟೈನ್‌ ಮಾಡಿ ಪರೀಕ್ಷೆ ಮಾಡಲಾಗುತ್ತಿದೆ ಎಂದು ಕೇರಳ ಸರ್ಕಾರ ಸ್ಪಷ್ಟಪಡಿಸಿದೆ. ಪಿಪಿಇ ಕಿಟ್‌ ಬಳಸುವಂತೆ ವೈದ್ಯರು ಹಾಗೂ ಶುಶ್ರೂಶಕರಿಗೆ ತಿಳಿಸಲಾಗಿದೆ.
ಕೇರಳದಲ್ಲಿ ಇದು 2ನೇ ಬಾರಿ: ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕೇರಳದಲ್ಲಿ 2018ರ ಮೇ 19ರಂದು ನಿಫಾ ವೈರಸ್‌ ಸೋಂಕು ಕಾಣಿಸಿಕೊಂಡಿತ್ತು. 2018ರಲ್ಲಿ ನಿಫಾ ವೈರಸ್‌ಗೆ ಕೇರಳದಲ್ಲಿ 17 ಮಂದಿ ಮೃತಪಟ್ಟಿದ್ದರು.

ನಿಫಾ ವೈರಸ್‌ಗೆ ತುತ್ತಾದವರ ರೋಗ ಲಕ್ಷಣಗಳು

-ನಿಪಾಹ್ ವೈರಸ್ ಹಣ್ಣಿನ ಬಾವಲಿಗಳಿಂದ ಉಂಟಾಗುತ್ತದೆ

- ಇದು ಮನುಷ್ಯರಿಗೆ ಮತ್ತು ಪ್ರಾಣಿಗಳಿಗೆ ಮಾರಕವಾಗಿದೆ

- ಕಲುಷಿತ ಆಹಾರದಿಂದ ಹರಡುತ್ತದೆ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ.

- ಸೋಂಕು ಕಾಣಿಸಿಕೊಂಡವರಲ್ಲಿ ಉಸಿರಾಟ ಸಮಸ್ಯೆ

- ಜ್ವರ, ಸ್ನಾಯು ನೋವು, ತಲೆನೋವು, ಜ್ವರ, ತಲೆತಿರುಗುವಿಕೆ ಮತ್ತು ವಾಕರಿಕೆ

ರೋಗ ತಡೆಗೆ ಏನು ಮಾಡಬೇಕು?

- ಮಾಸ್ಕ್‌ ಧರಿಸಬೇಕು

- ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳುತ್ತಿರಬೇಕು ಹಾಗೂ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು

- ಬಾವಲಿಗಳ ವಾಸಸ್ಥಾನ ಮತ್ತು ಹಂದಿಗಳಿಂದ ದೂರವಿರಬೇಕು

- ವೈರಸ್‌ ಹೊಂದಿರುವ ವ್ಯಕ್ತಿಯ ಲಾಲಾರಸ ಅಥವಾ ಯಾವುದೇ ದೈಹಿಕ ದ್ರವ ಹರಡದಂತೆ ನಿಗಾ


ಕೇರಳಕ್ಕೆ ಮತ್ತೆ ಕಾಲಿಟ್ಟ ನಿಫಾ ವೈರಸ್‌, ಇಬ್ಬರು ಸಾವು ಕಂಡ ಬೆನ್ನಲ್ಲಿಯೇ ಆರೋಗ್ಯ ಇಲಾಖೆ ಅಲರ್ಟ್‌!

ಹಣ್ಣುಗಳನ್ನು ತಿನ್ನೋ ಮುನ್ನ ಹುಷಾರ್‌, ಮತ್ತೆ ಹರಡುತ್ತಿದೆ ಮಾರಣಾಂತಿಕ ನಿಫಾ !