200 ಕೋಟಿ ಕೋವಿಡ್ ಲಸಿಕೆ ಮೈಲಿಗಲ್ಲು ಸಾಧಿಸಿದ ಭಾರತ!
ಕೋವಿಡ್ ಸಾಂಕ್ರಾಮಿಕಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ಕೋವಿಡ್ ಲಸಿಕೆಯ ಪ್ರಮಾಣ ಶನಿವಾರ 200 ಕೋಟಿಯ ಮೈಲಿಗಲ್ಲು ಸಾಧಿಸಿದೆ. ಇಡೀ ಯುರೋಪ್ ಖಂಡ ಮಾಡಲಾಗದ ಸಾಧನೆಯನ್ನು ಭಾರತವು ಮಾಡಿರುವುದು ಹೆಮ್ಮೆಯ ವಿಚಾರ ಎನಿಸಿದೆ.
ನವದೆಹಲಿ (ಜುಲೈ 16): ಕೊರೋನಾ ವೈರಸ್ ಸಾಂಕ್ರಾಮಿಕ ರೋಗಕ್ಕೆ ನೀಡಲಾಗುತ್ತಿದ್ದ ಕೋವಿಡ್ ಲಸಿಕೆ ಪ್ರಮಾಣ ಶನಿವಾರ ದಾಖಲೆಯ 200 ಕೋಟಿಯ ವಿಕ್ರಮ ಸಾಧಿಸಿದೆ. ಭಾರತದಲ್ಲಿ ಈವರೆಗೂ 200 ಕೋಟಿ ಕೋವಿಡ್-19 ಡೋಸ್ ದಾಖಲಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಅಧಿಕೃತವಾಗಿ ತಿಳಿಸಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಟ್ವಿಟರ್‌ನಲ್ಲಿ ಈ ಕುರಿತಾದ ಪೋಸ್ಟ್ ಹಾಕುವ ಮೂಲಕ ಭಾರತ ಈ ಮೈಲಿಗಲ್ಲು ಸಾಧಿಸಿದನ್ನು ಖಚಿತಪಡಿಸಿದ್ದಾರೆ. ದೇಶದಲ್ಲಿ ಇದುವರೆಗೆ 200 ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಮೇಡ್ ಇನ್ ಇಂಡಿಯಾ - ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ಭಾರತದ ನಾಗರಿಕರಿಗೆ ನೀಡುವ ಪ್ರಯಾಣವು ಕಳೆದ ವರ್ಷ ಜನವರಿ 16 ರಂದು ಪ್ರಾರಂಭವಾಯಿತು. ಶುಕ್ರವಾರ 22 ಲಕ್ಷ 93 ಸಾವಿರ ಡೋಸ್‌ಗಳನ್ನು ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಚೇತರಿಕೆಯ ಪ್ರಮಾಣವು ಪ್ರಸ್ತುತ ಶೇಕಡಾ 98.48 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 18 ಸಾವಿರಕ್ಕೂ ಹೆಚ್ಚು ಜನರು ಚೇತರಿಸಿಕೊಂಡಿದ್ದಾರೆ. ಒಟ್ಟು ಚೇತರಿಸಿಕೊಂಡವರ ಸಂಖ್ಯೆ ನಾಲ್ಕು ಕೋಟಿ 30 ಲಕ್ಷ 63 ಸಾವಿರದ 651 ತಲುಪಿದೆ.
ಕಳೆದ 24 ಗಂಟೆಗಳಲ್ಲಿ 20 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿವೆ. ಭಾರತದ ಸಕ್ರಿಯ ಕೇಸ್‌ಲೋಡ್ ಪ್ರಸ್ತುತ ಒಂದು ಲಕ್ಷದ 1.40 ಲಕ್ಷ ಆಗಿದೆ. ಸಕ್ರಿಯ ಪ್ರಕರಣಗಳು ಶೇಕಡಾ 0.32 ರಷ್ಟಿದೆ. ದೈನಂದಿನ ಧನಾತ್ಮಕತೆಯ ದರವು 4.80 ಪ್ರತಿಶತ ಮತ್ತು ಸಾಪ್ತಾಹಿಕ ಧನಾತ್ಮಕತೆಯ ದರವು 4.40 ಪ್ರತಿಶತದಲ್ಲಿದೆ. ಕಳೆದ 24 ಗಂಟೆಗಳಲ್ಲಿ 56 ಸಾವುಗಳು ವರದಿಯಾಗಿವೆ. ಇದುವರೆಗೆ 86 ಕೋಟಿ 90 ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದೆ. ಕಳೆದ 24 ಗಂಟೆಗಳಲ್ಲಿ ನಾಲ್ಕು ಲಕ್ಷದ 17 ಸಾವಿರ ಪರೀಕ್ಷೆಗಳನ್ನು ನಡೆಸಲಾಗಿದೆ.
ಭಾರತದಲ್ಲಿ, ಲಸಿಕೆಯ ಮೊದಲ ಎರಡು ಡೋಸ್‌ಗಳನ್ನು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತವಾಗಿ ನೀಡಲಾಗುತ್ತಿದೆ. ಬೂಸ್ಟರ್ ಡೋಸ್ ಲಸಿಕೆಯನ್ನು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಕೋವಿಡ್-19 ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಸಿಬ್ಬಂದಿಗೆ ಉಚಿತವಾಗಿ ನೀಡಲಾಗುತ್ತದೆ. ದೇಶದ 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದ ವಿಶೇಷ ಅಭಿಯಾನವಾಗಿ ಜುಲೈ 15ರಿಂದ 75 ದಿನಗಳ ಕಾಲ 18 ವರ್ಷ ಮೇಲ್ಪಟ್ಟವರಿಗೂ ಉಚಿತ ಬೂಸ್ಟರ್ ಡೋಸ್ ನೀಡಲಾಗುತ್ತಿದ್ದು, ನಂತರ ಖಾಸಗಿ ಕೇಂದ್ರಗಳಲ್ಲಿ ಶುಲ್ಕ ಪಾವತಿಸಿ ಲಸಿಕೆ ಹಾಕಿಸಬೇಕು.
102 ಕೋಟಿ ಜನರಿಗೆ ಡೋಸ್-1: ಈವರೆಗೂ ದೇಶದಲ್ಲಿ 102 ಕೋಟಿ ಜನರಿಗೆ ಮೊದಲ ಡೋಸ್ ನೀಡಲಾಗಿದ್ದರೆ, ಅಂದಾಜು 93 ಕೋಟಿ ಮಂದಿಗೆ 2ನೇ ಡೋಸ್ ನೀಡಲಾಗಿದೆ. ಮುನ್ನಚ್ಚರಿಕೆ ಡೋಸ್ ಅಥವಾ ಬೂಸ್ಟರ್ ಡೋಸ್ ಅನ್ನು ಈವರೆಗೂ 5.45 ಕೋಟಿ ಜನರಿಗೆ ನೀಡಲಾಗಿದೆ. ಇನ್ನು ಕೋವಿನ್ ವೆಬ್‌ಸೈಟ್‌ನಿಂದ ಹೊರತಾಗಿ 52.68 ಲಕ್ಷ ಕೋವಿಡ್-19 ಲಸಿಕೆ ಹಾಕಲಾಗಿದೆ.
ಕೋವಿಶೀಲ್ಡ್ ಲಸಿಕೆಗೆ ಹೆಚ್ಚಿನ ಬೇಡಿಕೆ: ಭಾರತ ಈವರೆಗೂ ದಾಖಲು ಮಾಡಿರುವ ಲಸಿಕೆಗಳಲ್ಲಿ ಹೆಚ್ಚಿನವು ಕೋವಿಶೀಲ್ಡ್ ಲಸಿಕೆ ಆಗಿವೆ. ಈವರೆಗೂ 160 ಕೋಟಿ ಕೋವಿಶೀಲ್ಡ್ ಲಸಿಕೆಗಳನ್ನು ಹಾಕಲಾಗಿದ್ದರೆ, 33.47 ಕೋಟಿ ಕೊವಾಕ್ಸಿನ್ ಲಸಿಕೆಗಳನ್ನು ಹಾಕಲಾಗಿದೆ. 6.41 ಕೋಟಿ ಕೊರ್ಬೋವ್ಯಾಕ್ಸ್ ಲಸಿಕೆಗಳನ್ನು ಹಾಕಲಾಗಿದೆ. ಉಳಿದಂತೆ ಸ್ಪುಟ್ನಿಕ್ ವಿ, ಕೋವೋವ್ಯಾಕ್ಸ್ ಲಸಿಕೆಗಳೂ ಕೂಡ ಇವೆ.
ಇದನ್ನೂ ಓದಿ: Free Booster Dose: ಇಂದಿನಿಂದ ರಾಜ್ಯದಲ್ಲಿ ಉಚಿತ 3ನೇ ಡೋಸ್ ಕೋವಿಡ್ ಲಸಿಕೆ
ಕರ್ನಾಟಕದಲ್ಲಿ ಎಷ್ಟು: ಕರ್ನಾಟಕದಲ್ಲಿ ಈವರೆಗೂ 11.36 ಕೋಟಿ ಕೋವಿಡ್-19 ಲಸಿಕೆಗಳನ್ನು ಹಾಕಲಾಗಿದೆ. ಇದರಲ್ಲಿ 5.49 ಕೋಟಿ ಮಂದಿಗೆ ಮೊದಲ ಡೋಸ್ ನೀಡಲಾಗಿದ್ದರೆ, 5.43 ಕೋಟಿ ಮಂದಿಗೆ ಡಬಲ್ ಡೋಸ್ ನೀಡಲಾಗಿದೆ. 43.60 ಲಕ್ಷ ಮಂದಿ ಈವರೆಗೂ ಬೂಸ್ಟರ್ ಡೋಸ್‌ಅನ್ನೂ ಕೂಡ ಪಡೆದುಕೊಂಡಿದ್ದಾರೆ. ಇಡೀ ದೇಶದ ಪೈಕಿ ಉತ್ತರ ಪ್ರದೇಶದಲ್ಲಿ ಈವರೆಗೂ 34.42 ಕೋಟಿ ಕೋವಿಡ್ ಲಸಿಕೆಯನ್ನು ಹಾಕಲಾಗಿದೆ. ಇದರಲ್ಲಿ 17.59 ಕೋಟಿ ಮಂದಿಗೆ ಮೊದಲ ಡೋಸ್ ನೀಡಲಾಗಿದ್ದರೆ, 16.43 ಕೋಟಿ ಮಂದಿಗೆ ಎರಡೂ ಡೋಸ್‌ಗಳನ್ನು ನೀಡಲಾಗಿದೆ. ಇನ್ನು ಬೂಸ್ಟರ್ ಡೋಸ್‌ಗಳನ್ನು38.87 ಲಕ್ಷ ಜನರು ಉತ್ತರ ಪ್ರದೇಶದಲ್ಲಿ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಕೋವಿಡ್ ಲಸಿಕೆ ಪಡೆಯುವಂತೆ ಬಲವಂತ ಮಾಡುವಂತಿಲ್ಲ: ಸುಪ್ರೀಂ
ಇನ್ನು ವಯೋಮಾನದ ಲೆಕ್ಕಾಚಾರದಲ್ಲಿ (ಕೋವಿನ್ ಅಪ್‌ಡೇಟ್ ಆಗುವ ಮುನ್ನ) ಹೇಳುವುದಾದರೆ, 12-14 ವರ್ಷದ 6.41 ಕೋಟಿ ಮಕ್ಕಳಿಗೆ ಡೋಸ್ ನೀಡಲಾಗಿದ್ದರೆ, 15-17 ವರ್ಷದ11.09 ಕೋಟಿ ಮಕ್ಕಳಿಗೆ ಲಸಿಕೆ ನೀಡಲಾಗಿದೆ.18-44 ವಯೋಮಾನದ 111 ಕೋಟಿ ಜನರಿಗೆ ಲಸಿಕೆಯನ್ನು ನೀಡಲಾಗಿದೆ. 45-60 ವಯೋಮಾನದ 41.57 ಕೋಟಿ ಲಸಿಕೆಯನ್ನು ಹಾಕಲಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟ 27.90 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ.