ಅತಿ ಹೆಚ್ಚು ಬೆವರುತ್ತಿದ್ದರೆ ದೇಹದ ಈ ಅಂಗದ ಸ್ವಚ್ಛತೆ ಮರೀಬೇಡಿ
ಕೆಲವರು ಹತ್ತಿರ ಬರ್ತಿದ್ದಂತೆ ಗಬ್ಬು ವಾಸನೆ ಬರುತ್ತೆ. ಮತ್ತೆ ಕೆಲವರ ಮೈಮೇಲೆಲ್ಲ ಕೆಂಪು ಗುಳ್ಳೆಗಳಾಗ್ತವೆ. ಬೇಸಿಗೆ ಯಾಕಪ್ಪ ಬಂತು ಎನ್ನುವವರಿದ್ದಾರೆ. ಬೇಸಿಗೆಯಲ್ಲೂ ವಾಸನೆ ಇಲ್ಲದೆ ಕೂಲ್ ಆಗಿರ್ಬೇಕೆಂದ್ರೆ ಏನು ಮಾಡ್ಬೇಕು ಗೊತ್ತಾ?
ಬೇಸಿಗೆ (Summer) ಶುರುವಾಗಿದೆ. ಯಾವುದೇ ದೈಹಿಕ ವ್ಯಾಯಾಮ (Physical Exercise) ವಿಲ್ಲದೆ ಮೈನಿಂದ ಬೆವರು (Sweat) ಹರಿಯುತ್ತಿದೆ. ಬಾಯಾರಿಕೆ ಜಾಸ್ತಿಯಾಗ್ತಿದೆ. ಅನೇಕರು ಇಡೀ ದಿನ ಬಿಸಿಲಿನಲ್ಲಿ ಕೆಲಸ (Work) ಮಾಡ್ತಾರೆ. ಇದ್ರಿಂದ ಚರ್ಮದ ಮೇಲೆ ಬ್ಯಾಕ್ಟೀರಿಯಾ ಬೆಳೆಯಲು ಶುರುವಾಗುತ್ತದೆ. ಬೇಸಿಗೆಯಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಬೇಸಿಗೆಯಲ್ಲಿ ದೇಹ ಬೆವರುವುದ್ರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವನೆ ಮಾಡ್ಬೇಕು. ಇಲ್ಲವಾದ್ರೆ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಇದಲ್ಲದೆ ದೇಹದ ಸ್ವಚ್ಛತೆ ಬಗ್ಗೆಯೂ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಬೇಸಿಗೆಯಲ್ಲಿ ಚರ್ಮದ ಸೋಂಕು,ತುರಿಕೆ, ದುರ್ವಾಸನೆ ಸಮಸ್ಯೆ ಕಾಡುತ್ತದೆ. ಬೇಸಿಗೆಯಲ್ಲಿ ಪ್ರತಿ ದಿನ ಸ್ನಾನ ಮಾಡುವುದು ಬಹಳ ಮುಖ್ಯ. ಹಾಗೆಯೇ ಬಟ್ಟೆಯನ್ನು ಬದಲಿಸಬೇಕು. ಸಾಕ್ಸ್ ಸ್ವಚ್ಚಗೊಳಿಸಬೇಕು. ಪ್ರತಿ ದಿನ ಮೂರ್ನಾಲ್ಕು ಬಾರಿ ಸ್ನಾನ ಮಾಡ್ಬೇಕಾಗಿಲ್ಲ. ಹೆಚ್ಚು ಸ್ನಾನ ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಅತಿಯಾದ ಸ್ನಾನ ಚರ್ಮವನ್ನು ಒಣಗಿಸುತ್ತದೆ. ದೈಹಿಕ ಸ್ವಚ್ಛತೆ ಕಾಯ್ದುಕೊಂಡರೆ ನೀವು ಅನೇಕ ರೀತಿಯ ಕಾಯಿಲೆಗಳಿಂದ ದೂರವಿರಬಹುದು. ಪ್ರತಿ ದಿನ ನಿಮ್ಮ ದೇಹದ ಕೆಲ ಭಾಗಗಳ ಸ್ವಚ್ಛತೆಗೆ ನೀವು ಹೆಚ್ಚಿನ ಗಮನ ನೀಡಬೇಕು. ಆ ಅಂಗಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ರೆ ಬೇಸಿಗೆಯಲ್ಲಿ ಆರೋಗ್ಯವಾಗಿರಬಹುದು.
ಬೇಸಿಗೆಯಲ್ಲಿರಲಿ ಈ ಅಂಗಗಳ ಸ್ವಚ್ಛತೆ ಬಗ್ಗೆ ವಿಶೇಷ ಕಾಳಜಿ
ಕಂಕುಳಿನ ಸ್ವಚ್ಛತೆ : ಬೆವರು ಸಂಗ್ರಹವಾಗುವ ದೇಹದ ಮುಖ್ಯ ಭಾಗಗಳಲ್ಲಿ ಕಂಕುಳು ಕೂಡ ಒಂದು. ಅನೇಕರಿಗೆ ಕಂಕುಳಿನಿಂದ ಕೆಟ್ಟ ವಾಸನೆ ಬರ್ತಿರುತ್ತದೆ. ಕಪ್ಪಾದ ಕೊಳಕು ಅಲ್ಲಿ ಸಂಗ್ರಹವಾಗಿ ತುರಿಕೆ ಶುರುವಾಗುತ್ತದೆ. ವಾಸನೆ, ಉರಿ, ಕಿರಿಕಿರಿ ಸೇರಿದಂತೆ ಕೆಲ ಸಮಸ್ಯೆ ಕಾಡುತ್ತದೆ. ಹಾಗಾಗಿ ಸ್ನಾನ ಮಾಡುವಾಗ ಕಂಕುಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಅತಿಯಾಗಿ ಬೆವರು ಬರುತ್ತಿದ್ದರೆ ಕಂಕುಳಿನ ಸ್ವಚ್ಛತೆಗೆ ವಿಶೇಷ ಗಮನ ನೀಡಬೇಕಾಗುತ್ತದೆ. ಬೇಸಿಗೆಯಲ್ಲಿ ಸಾಧ್ಯವಾದರೆ ಕಂಕುಳಿನ ಕೂದಲನ್ನು ಸ್ವಚ್ಛವಾಗಿಡಿ. ಅತಿಯಾಗಿ ಬೆವರು ಬಂದಾಗೆಲ್ಲ ಕಂಕುಳನ್ನು ಸಾಬೂನಿನಿಂದ ಸ್ವಚ್ಛಗೊಳಿಸಿ. ಇದು ಸಾಧ್ಯವಿಲ್ಲವೆಂದ್ರೆ ಒದ್ದೆ ಬಟ್ಟೆಯಿಂದ ಕಂಕುಳನ್ನು ಒರೆಸಬಹುದು. ಇದ್ರಿಂದ ಚರ್ಮದ ಆರೋಗ್ಯ ಕಾಪಾಡಿಕೊಳ್ಳಬಹುದು.
ಸಿಕ್ಕಾಪಟ್ಟೆ ಬಿಸಿಲಪ್ಪಾ, ಚಿಲ್ ಆಗೋಕೆ ಐಸ್ ನೀರು ಕುಡಿಯುವುದು ಸುರಕ್ಷಿತವೇ ?
ಪಾದದ ನೈರ್ಮಲ್ಯ : ಬೇಸಿಗೆಯಲ್ಲಿ ಪಾದಗಳ ಶುಚಿತ್ವವೂ ಬಹಳ ಮುಖ್ಯ. ಕಚೇರಿಯಲ್ಲಿ ಕೆಲಸ ಮಾಡುವವರು ದಿನದ ಬಹಳ ಸಮಯ ಸಾಕ್ಸ್, ಶೂ ಧರಿಸಿರುತ್ತಾರೆ. ಸಾಕ್ಸ್ ಗಳ ಒಳಗೆ ತೇವಾಂಶ ಸಂಗ್ರಹವಾಗುವುದರಿಂದ ಬ್ಯಾಕ್ಟೀರಿಯಾಗಳು ಬೆಳೆಯುತ್ತಲೇ ಇರುತ್ತವೆ. ಇದ್ರಿಂದ ಚರ್ಮ ರೋಗ ಕಾಡಲು ಶುರುವಾಗುತ್ತದೆ. ಪಾದದಲ್ಲಿ ತುರಿಕೆ,ಉರಿ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಎರಡರಿಂದ ಮೂರು ದಿನಗಳವರೆಗೆ ಒಂದೇ ಸಾಕ್ಸ್ ಧರಿಸಬೇಡಿ. ಪ್ರತಿ ದಿನ ತೊಳೆದು ಒಣಗಿದ ಸ್ವಚ್ಛವಾದ ಸಾಕ್ಸ್ ಬಳಸಿ. ಹಾಗೆಯೇ ಪಾದಗಳ ಸ್ವಚ್ಛತೆಗೂ ಗಮನ ನೀಡಿ. ಉಗುರುಬೆಚ್ಚಗಿನ ಉಪ್ಪು ನೀರಿನಲ್ಲಿ ಪಾದಗಳನ್ನು ಐದಾರು ನಿಮಿಷ ಇಟ್ಟು ನಂತರ ತೊಳೆಯಿರಿ. ಇದು ಕಾಲು ನೋವು, ಅಡಿಭಾಗ ಮತ್ತು ಪಾದಗಳಲ್ಲಿನ ಊತವನ್ನು ಹೋಗಲಾಡಿಸುತ್ತದೆ. ಜೊತೆಗೆ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ.
ಬೂಸ್ಟರ್ ವ್ಯಾಕ್ಸಿನ್ ಹಾಕಿದ್ರೆ Omicron ಭಯದ ಅಗತ್ಯವಿಲ್ಲ
ಖಾಸಗಿ ಭಾಗಗಳ ಸ್ವಚ್ಛತೆ : ಪುರುಷರಾಗಿರಲಿ ಇಲ್ಲ ಮಹಿಳೆಯಾಗಿರಲಿ ಖಾಸಗಿ ಅಂಗದ ಸ್ವಚ್ಛತೆ ಮರೆಯಬಾರದು. ಪ್ರತಿ ದಿನ ಸ್ನಾನ ಮಾಡುವಾಗ ಖಾಸಗಿ ಭಾಗವನ್ನು ಸರಿಯಾಗಿ ಸ್ವಚ್ಛಗೊಳಿಸಿಕೊಳ್ಳಬೇಕು. ಹಾಗೆಯೇ ಒಣಗಿದ, ಕಾಟನ್ ಪ್ಯಾಂಟಿ ಬಳಸಿ. ಮೂರ್ನಾಲ್ಕು ದಿನಗಳ ಕಾಲ ಒಂದೇ ಒಣ ಉಡುಪನ್ನು ಧರಿಸಬೇಡಿ. ಇದ್ರಿಂದ ಕೆಟ್ಟ ಬ್ಯಾಕ್ಟೀರಿಯಾಗಳು ಬೆಳೆಯುವ ಸಾಧ್ಯತೆ ಇರುತ್ತದೆ. ಜನನಾಂಗದ ಭಾಗಗಳಲ್ಲಿ ಕೂದಲಿದ್ದು, ಅದು ಸ್ವಚ್ಛವಾಗಿಲ್ಲವೆಂದಾದ್ರೆ ಬ್ಯಾಕ್ಟೀರಿಯಾ ಬೆಳೆದು ಸೋಂಕು ಕಾಡುತ್ತದೆ. ಇದ್ರಿಂದ ಉರಿ,ತುರಿಕೆ,ಊತ,ವಾಸನೆ ಕಾಣಿಸಿಕೊಳ್ಳುತ್ತದೆ. ಖಾಸಗಿ ಭಾಗಗಳನ್ನು ಉಗುರು ಬೆಚ್ಚಗಿನ ನೀರಿನಿಂದ ಎರಡು ಮೂರು ಬಾರಿ ಸ್ವಚ್ಛಗೊಳಿಸಬೇಕು. ಪ್ರತಿ ಬಾರಿ ಶೌಚಾಲಯಕ್ಕೆ ಹೋಗಿ ಬಂದ ನಂತರವೂ ಖಾಸಗಿ ಭಾಗವನ್ನು ನೀರಿನಲ್ಲಿ ತೊಳೆದು ಶುದ್ಧ ಬಟ್ಟೆಯಲ್ಲಿ ಒರೆಸಿಕೊಳ್ಳಿ.