ಅತಿ ಸುಲಭದಲ್ಲಿ ಕೊತ್ತಂಬರಿ ಸೊಪ್ಪನ್ನು ಮನೆಯಲ್ಲಿಯೇ ಅದರಲ್ಲಿಯೂ ಕುಂಡದಲ್ಲಿಯೇ ಬೆಳೆಯಬಹುದಾಗಿದೆ. ಅದು ಹೇಗೆ? ವಿಡಿಯೋ ಸಹಿತ ಅದರ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.
ಬಹುತೇಕ ಅಡುಗೆಗಳಿಗೆ ಕೊತ್ತಂಬರಿ ಸೊಪ್ಪು ಹಾಕಿದರೆ ಅದರ ರುಚಿಯೇ ಬೇರೆಯದ್ದಾಗಿರುತ್ತದೆ. ಇಷ್ಟೇ ಅಲ್ಲದೇ ಕೊತ್ತಂಬರಿ ಸೊಪ್ಪು ಔಷಧವಾಗಿಯೂ ಕೆಲಸ ಮಾಡುತ್ತದೆ. ಆದರೆ ಇಂದು ಮಾರುಕಟ್ಟೆಯಲ್ಲಿ ಸಿಗುವ ಕೊತ್ತಂಬರಿ ಸೊಪ್ಪುಗಳಿಗೆ ರಾಸಾಯನಿಕ ಸಿಂಪಡಣೆ ಮಾಡುವುದೇ ಹೆಚ್ಚು. ಹಚ್ಚ ಹಸಿರಾಗಿ ಇದ್ದರೆ ಅದನ್ನು ಕೊಳ್ಳುವವರು ಜಾಸ್ತಿ ಎನ್ನುವ ಕಾರಣಕ್ಕೆ ಇಂದು ಎಲ್ಲಾ ಸೊಪ್ಪುಗಳಿಗೂ ಹಸಿರಿನ ಬಣ್ಣ ಸ್ಪ್ರೇ ಮಾಡಲಾಗುತ್ತದೆ. ಆದ್ದರಿಂದ ಇಂದು ಸೊಪ್ಪುಗಳು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಆಗುವುದು ಬಿಟ್ಟು, ಮಾರಣಾಂತಿಕ ಕಾಯಿಲೆಗಳನ್ನೂ ತಂದೊಡ್ಡುತ್ತಿವೆ.
ಈ ಕಾರಣದಿಂದ ಮನೆಯಲ್ಲಿಯೇ ಆದಷ್ಟು ಸೊಪ್ಪುಗಳನ್ನಾದರೂ ಬೆಳೆದುಕೊಂಡರೆ ಒಳ್ಳೆಯದು ಹೌದಾದರೂ, ನಗರ ಪ್ರದೇಶಗಳಲ್ಲಿ ಇದು ತುಂಬಾ ಕಷ್ಟದ ಕೆಲಸವೇ. ಆದರೆ ಕುಂಡದಲ್ಲಿಯೇ ಕೊತ್ತಂಬರಿ ಸೊಪ್ಪನ್ನು ಅತ್ಯಂತ ಸುಲಭದಲ್ಲಿ ಬೆಳೆಯಬಹುದಾಗಿದೆ. ಅದನ್ನು ವಿಡಿಯೋ ಸಹಿತ ಈ ಕೆಳಗೆ ವಿವರಿಸಲಾಗಿದೆ.
ಮೊದಲಿಗೆ ಕೊತ್ತಂಬರಿ ಬೀಜವನ್ನು 24 ಗಂಟೆ ನೀರಿನಲ್ಲಿ ನೆನೆಸಿ ಇಡಬೇಕು. ಮಾರನೆಯ ದಿನ ನೀರನ್ನು ಸೋಸಿ ಬೀಜವನ್ನು ಪ್ರತ್ಯೇಕಗೊಳಿಸಬೇಕು. 5-6 ಅಡಿ ಆಳವಿರುವ ಕುಂಡವನ್ನು ತೆಗೆದುಕೊಳ್ಳಬೇಕು. ಅದಕ್ಕೆ ಗೊಬ್ಬರ ಇರುವ ಮಣ್ಣು ಹಾಕಬೇಕು. ಅದರಲ್ಲಿ ಈ ಕೊತ್ತಂಬರಿ ಬೀಜವನ್ನು ಹರಡಬೇಕು. ಅದನ್ನು ಮಣ್ಣಿನಿಂದ ಮುಚ್ಚಿ ಆಮೇಲೆ ನೀರು ಹಾಕಬೇಕು. 18ನೇ ಸಸಿ ಬೆಳೆಯಲು ಆರಂಭಿಸುತ್ತದೆ. ನಂತರ ಅದರ ಮೇಲೆ ಮತ್ತೊಂದಿಷ್ಟು ಮಣ್ಣನ್ನು ಹಾಕಿ ಮತ್ತೆ ನಿಧಾನವಾಗಿ ನೀರು ಹಾಕಬೇಕು. ಒಂದೇ ಕಡೆ ನೀರು ಹಾಕಿ ಕೈಯಿಂದ ಕುಂಡವನ್ನು ಎತ್ತಿ ಅತ್ತಿತ್ತ ಹರಡುವಂತೆ ಮಾಡಿದರೆ ಒಳ್ಳೆಯದು.
28ನೇ ದಿನ ಅದು ಚೆನ್ನಾಗಿ ಬೆಳೆಯುತ್ತದೆ. ಒಂದು ಮಾತು ನೆನಪಿಡಿ. ಚಳಿಗಾಲದ ಸಮಯದಲ್ಲಿ ಇದನ್ನು ಬೆಳೆದರೆ ಚೆನ್ನಾಗಿ ಸೂರ್ಯನ ಬಿಸಿಲು ಬೀಳುವಲ್ಲಿ ಇಡಬೇಕು. ಮಾರುಕಟ್ಟೆಯಲ್ಲಿ ಸಿಗುವ ಸಾವಯವ ಗೊಬ್ಬರ ಹಾಕಿದರೆ ರಾಸಾಯನಿಕ ಮುಕ್ತ ಒಳ್ಳೆಯ ಕೊತ್ತಂಬರಿ ಸೊಪ್ಪನ್ನು ಸುಲಭದಲ್ಲಿ ಮನೆಯಲ್ಲಿಯೇ ಬೆಳೆದುಕೊಳ್ಳಬಹುದು. 6-7 ಇಂಚು ಬಂದರೆ, ಅದನ್ನು ಕಟ್ ಮಾಡಿ ತಿನ್ನಬಹುದು. ಈ ಸಮಯದಲ್ಲಿ ಮೇಲಿನ ಎಲೆಗಳನ್ನು ಮಾತ್ರ ಕಟ್ ಮಾಡಿ. ಹೀಗೆ ಮಾಡಿದರೆ ಅದು ಮತ್ತೆ ಬೆಳೆಯುತ್ತದೆ. Garden Ideas youtube ಚಾನೆಲ್ನಲ್ಲಿ ಇದನ್ನು ಶೇರ್ ಮಾಡಲಾಗಿದೆ. ವಿಡಿಯೋ ಈ ಕೆಳಗಿದೆ…

