ಡಾ. ರವಿ ಕುಮಾರ್ ಟಿ 

ಕೋವಿಡ್‌ 19 ಪಾಸಿಟಿವ್‌ ಬಂದ ಎಲ್ಲಾ ರೋಗಿಗಳನ್ನೂ ಮನೆಯಲ್ಲೇ ನೋಡಿಕೊಳ್ಳುವ ಹಾಗಿಲ್ಲ. ಕೆಲವು ರೋಗಿಗಳನ್ನು ಕಡ್ಡಾಯವಾಗಿ ಆಸ್ಪತ್ರೆಯಲ್ಲೇ ಟ್ರೀಟ್‌ ಮಾಡಬೇಕಾಗುತ್ತದೆ. ಆದರೆ ಕೆಲವು ಕೋವಿಡ್‌ ರೋಗಿಗಳನ್ನು ವೈದ್ಯಾಧಿಕಾರಿಗಳು ಅನುಮತಿ ನೀಡಿದರೆ ಮನೆಯಲ್ಲೇ ಆರೈಕೆ ಮಾಡಬಹುದು. ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಅಥವಾ ರಾಜ್ಯಸರ್ಕಾರದ ಸ್ಪಷ್ಟಗೈಡ್‌ಲೈನ್‌ಗಳಿವೆ.

ಇಂಥವರಿಗೆ ಹೋಮ್‌ ಐಸೋಲೇಶನ್‌ ಇರಲ್ಲ

1. 10 ವರ್ಷ ಕೆಳಗಿನ ಮಕ್ಕಳು

2. ವೃದ್ಧರು

3. ಅಧಿಕ ಜ್ವರ, ಉಸಿರಾಟದ ಸಮಸ್ಯೆ ಇರುವವರು,

4. ಗರ್ಭಿಣಿಯರು

5. ಹೈಪರ್‌ ಟೆನ್ಶನ್‌, ಡಯಾಬಿಟೀಸ್‌, ಕಿಡ್ನಿ ಸಮಸ್ಯೆ ಇತ್ಯಾದಿ ಹೈ ರಿಸ್ಕ್‌ ಇರುವವರಿಗೆ

ಇವರನ್ನು ಹೊರತುಪಡಿಸಿ ಹೈ ರಿಸ್ಕ್‌ ಇಲ್ಲದ ಸಾಮಾನ್ಯರನ್ನು, ಸರ್ಕಾರದ, ವೈದ್ಯಾಧಿಕಾರಿಗಳ ಅನುಮತಿ ಮೇರೆಗೆ ಹೋಮ್‌ ಐಸೋಲೇಶನ್‌ ಮಾಡಬಹುದು. ಈ ವ್ಯಕ್ತಿಗಳಿಗೆ ನೆಗಡಿ, ಜ್ವರ, ಕೆಮ್ಮುವಿನಂಥಾ ಗಂಭೀರವಲ್ಲದ ಲಕ್ಷಣಗಳಿದ್ದರೆ ಆತ ಮನೆಯಲ್ಲಿ ಇರಬಹುದು. ಈ ಎಲ್ಲ ಪರ್ಮಿಶನ್‌ ಸಿಕ್ಕಿ ಒಬ್ಬ ವ್ಯಕ್ತಿ ಹೋಮ್‌ ಕ್ವಾರೆಂಟೈನ್‌, ಸೆಲ್‌್ಫ ಐಸೋಲೇಶನ್‌ಗೆ ಒಳಗಾದ ಎಂದರೆ ಆತನನ್ನು ನೋಡಿಕೊಳ್ಳಬೇಕಾದ ವಿಧಾನ ಈ ರೀತಿ ಇದೆ.

1. ಕೋವಿಡ್‌ ಪೀಡಿತ ವ್ಯಕ್ತಿಗೆ ಪ್ರತ್ಯೇಕ ರೂಮ್‌, ಬಾತ್‌ರೂಮ್‌, ಟಾಯ್ಲೆಟ್‌ ವ್ಯವಸ್ಥೆ ಇರಬೇಕು. ರೂಮ್‌ನಲ್ಲಿ ಗಾಳಿ ಬೆಳಕಾಡುವಂತಿರಬೇಕು.

2. ನಿತ್ಯ ಈ ವ್ಯಕ್ತಿಯ ದೇಖರೇಖಿಯನ್ನು ಕುಟುಂಬದ ಒಬ್ಬ ಸದಸ್ಯ ಮಾತ್ರ ನೋಡಿಕೊಳ್ಳಬೇಕು. ಸೋಂಕಿತ ಇರುವ ಕೊಠಡಿಗೆ ಹೋಗುವಾಗ ಕೈಗೆ ಗ್ಲೌಸ್‌, ಮಾಸ್ಕ್‌ ಧರಿಸಬೇಕಾದ್ದು ಕಡ್ಡಾಯ. ಈ ರೂಮ್‌ಗೆ ಹೋಗಿ ಬಂದ ಕೂಡಲೇ ಆತ ಡೆಟಾಲ್‌ ಬಳಸಿ ಸ್ನಾನ ಮಾಡಿ ನಂತರವೇ ಆಚೆ ಬರಬೇಕು. ಈತ ಮನೆಯ ಸದಸ್ಯರಿಂದ, ಹೊರಗಿನ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ.

3. ಕೊರೋನಾ ಪೀಡಿತ ವ್ಯಕ್ತಿಯ ಆರೋಗ್ಯವನ್ನು ಆಗಾಗ ಚೆಕ್‌ ಮಾಡುತ್ತಲೇ ಇರಬೇಕು. ಜ್ವರ 99.5ಎಫ್‌ ಗಿಂತ ಹೆಚ್ಚಾದರೆ, ಉಸಿರಾಡಲು ಕಷ್ಟಪಡುತ್ತಿದ್ದರೆ, ಎದೆ ನೋವು, ಅಯೋಮಯತೆ(ಕನ್‌ಫä್ಯಶನ್‌ ಸ್ಟೇಟ್‌), ಆಕ್ಸಿಜನ್‌ ಲೆವೆಲ್‌ ಕಡಿಮೆ ಆಗುತ್ತಿದ್ದರೆ, ತುಟಿಗಳು ನೀಲಿ ಬಣ್ಣಕ್ಕೆ ತಿರುಗುತ್ತಿದ್ದರೆ, ಇವುಗಳಲ್ಲಿ ಯಾವುದೇ ಒಂದು ಲಕ್ಷಣ ಕಾಣಿಸಿಕೊಂಡರೂ ಕೂಡಲೇ ಕೊರೋನಾ ಹೆಲ್ಪ್‌ಲೈನ್‌ಗೆ ಕಾಲ್‌ ಮಾಡಲೇಬೇಕು. (ಹೆಲ್ಪ್‌ಲೈನ್‌ ನಂಬರ್‌ 104, ಆಪ್ತಮಿತ್ರ ಸಹಾಯವಾಣಿ 1441) ಕೂಡಲೇ ಹತ್ತಿರದ ಕೋವಿಡ್‌ ಆಸ್ಪತ್ರೆಗೆ ದಾಖಲಿಸಬೇಕು.

4. ಕೊರೋನಾ ಪೀಡಿತ ವ್ಯಕ್ತಿ ಬಳಸಿದ ಬೆಡ್‌ ಶೀಟ್‌, ಬಟ್ಟೆಇತ್ಯಾದಿಗಳನ್ನು ನಿತ್ಯವೂ ಡೆಟಾಲ್‌ ಬಳಸಿ ಕ್ಲೀನ್‌ ಮಾಡಬೇಕು.

5. ಕೋವಿಡ್‌ ರೋಗಿ ತನ್ನ ಬಾತ್‌ರೂಮ್‌, ಟಾಯ್ಲೆಟ್‌ಗಳನ್ನು ತಾನೇ ಸ್ವಚ್ಛಪಡಿಸಿದರೆ ಒಳ್ಳೆಯದು. ಆದರೆ ಆತನಿಗೆ ಅದು ಸಾಧ್ಯವಾಗದಿದ್ದರೆ ಮೆಡಿಕಲ್‌ ಮಾಸ್ಕ್‌ ಅನ್ನೇ ಕಡ್ಡಾಯವಾಗಿ ಬಳಸಿ ಫ್ಯಾಮಿಲಿಯ ಒಬ್ಬ ವ್ಯಕ್ತಿ ಕ್ಲೀನ್‌ ಮಾಡಬೇಕು. ಬಳಿಕ ಕೂಡಲೇ ಸ್ನಾನ ಮಾಡಬೇಕು.

6. ಮನೆಯಲ್ಲೊಬ್ಬ ಸೋಂಕಿತ ವ್ಯಕ್ತಿ ಇದ್ದಾರೆ ಅಂದರೆ ಮನೆಯವರಿಗೆಲ್ಲ ಹೋಮ್‌ ಕ್ವಾರಂಟೈನ್‌ ಕಡ್ಡಾಯ.

ಒಂದು ವೇಳೆ ವ್ಯಕ್ತಿ ಆಸ್ಪತ್ರೆಯಲ್ಲಿದ್ದು ಹೈ ರಿಸ್ಕ್‌ನಲ್ಲಿ ಇಲ್ಲದಿದ್ದರೆ ಫ್ಯಾಮಿಲಿಯ ಒಬ್ಬ ವ್ಯಕ್ತಿಗೆ ಆತನನ್ನು ನೋಡಲು ಬಿಡುತ್ತಾರೆ. ಪಿಪಿಇ ಕಿಟ್‌ ಧರಿಸಿ ಸಂಪೂರ್ಣ ಕವರ್‌ ಮಾಡಿಕೊಂಡೇ ಆತ ವಾರ್ಡ್‌ ಒಳಗೆ ಹೋಗಿ ರೋಗಿಯನ್ನು ಮಾತಾಡಿಸಿಕೊಂಡು ಬರಬಹುದು.

ಉಳಿದಂತೆ ಕೋವಿಡ್‌ ಪೀಡಿತ ವ್ಯಕ್ತಿಯನ್ನು ಅಕ್ಕರೆಯಲ್ಲಿ, ಕಾಳಜಿಯಿಂದ ಕಂಡಷ್ಟೂಆತ ಬೇಗ ಸುಧಾರಿಸುತ್ತಾನೆ. ಬದಲಾಗಿ ಆತನಲ್ಲಿ ಭೀತಿ ಹೆಚ್ಚಿಸಿ, ಇನ್ನಷ್ಟುಟೆನ್ಶನ್‌ ಆಗುವಂತೆ ಮಾಡಿದರೆ ಅಥವಾ ಈತನಿಂದಾಗಿ ತಮಗೆಲ್ಲ ಸಮಸ್ಯೆಯಾಗುತ್ತಿದೆ ಎಂಬಂತೆ ಮಾತನಾಡಿದರೆ ಆತ ಒಳಗೊಳಗೇ ಖಿನ್ನನಾಗಿ ಖಾಯಿಲೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ.