Asianet Suvarna News Asianet Suvarna News

ಬದುಕೇ ಕೆಲವೊಮ್ಮೆ ಸ್ಪೆಷಲ್‌ ಕ್ಲಾಸ್‌ ತಗೊಳುತ್ತೆ! ಆ ಕ್ಲಾಸ್‌ ಬಂಕ್‌ ಮಾಡಿದ್ರೆ ನಿಮಗೇ ನಷ್ಟ

ಮನುಷ್ಯ ತೀರಾ ಅಸಹಾಯಕನಾದಾಗ, ಬಹಳಷ್ಟುಸಂಕಷ್ಟಕ್ಕೆ ಸಿಲುಕಿದಾಗಲೇ ಬದುಕಿನ ಬಹುತೇಕ ಸತ್ಯಗಳು ಗೋಚರವಾಗುವುದು. ಭ್ರಮೆಗಳಿಂದ ಹೊರ ಬರುವುದು. ಆ ಹೊತ್ತಿಗೆ ಪಾಠ ಕಲಿಯಲು ದೇವರು ಒಂದು ಅವಕಾಶ ಕಲ್ಪಿಸಿದ್ದಾನೆ ಅಂದುಕೊಳ್ಳುವುದು ಜಾಣತನ. ಬೆಂಕಿಯನ್ನು ಮುಟ್ಟಿದರೆ ಮಾತ್ರ ಬಿಸಿ ಎಂದು ತಿಳಿದುಕೊಳ್ಳಬೇಕಾಗಿಲ್ಲ, ಬೆಂಕಿಯ ಸಮೀಪದ ಶಾಖದಿಂದಲೇ ಅರ್ಥ ಮಾಡಿಕೊಳ್ಳಬಹುದು.

How to be positive when we face challenges in life lesson
Author
Bangalore, First Published Mar 2, 2020, 3:39 PM IST

-ಕೃಷ್ಣಮೋಹನ ತಲೆಂಗಳ

ಸಾವು ವ್ಯಕ್ತಿಯನ್ನು ಸ್ವರ್ಗ, ನರಕಕ್ಕೆ ಕರೆದೊಯ್ಯುತ್ತದೋ, ಮತ್ತೊಂದು ಜನ್ಮದತ್ತ ಎಳೆದೊಯ್ಯುತ್ತದೋ, ಅಥವಾ ಎಲ್ಲ ತೊಳಲಾಟಗಳಿಂದ ಮೃತ ವ್ಯಕ್ತಿ ಮುಕ್ತಿ ಪಡೆಯುತ್ತಾನೋ ಎನ್ನಲು ‘ಸತ್ತವನನ್ನು ಸಂದರ್ಶನ ಮಾಡಿ’ ಮತ್ತೆ ಬರೆದಿಟ್ಟವರಿಲ್ಲ. ಭೌತಿಕ ಚಟುವಟಿಕೆಯಿಂದ ಕೂಡಿದ ಶರೀರದ ಪ್ರಾಣವಾಯು ಸ್ತಬ್ಧವಾದಾಗ, ಅಂಗಾಗಗಳು ನಿಷ್ಕಿ್ರಯವಾದಾಗ ಆ ವ್ಯಕ್ತಿ ‘ಇನ್ನಿಲ್ಲ’ದಾಗುತ್ತಾನೆ. ಭೌತಿಕ ಕಾಯಕ್ಕೆ ಸಂಸ್ಕಾರ ಸಿಗುತ್ತದೆ, ಶರೀರ ಚಟುವಟಿಕೆ ನಿಲ್ಲಿಸಿದ ಬಳಿಕ ಚಿಂತನೆಗಳು ಬೆಳೆಯಲು, ಕ್ರಿಯಾಶೀಲವಾಗಿರಲು ಸಾಧ್ಯವೇ ಇಲ್ಲ. ಹಾಗಾಗಿ ಹಾಗೊಬ್ಬ ವ್ಯಕ್ತಿ ಇದ್ದನೆಂಬ ಅಸ್ತಿತ್ವವೇ ‘ಸತ್ತು’ಹೋಗುತ್ತದೆ. ನೆನಪುಗಳಲ್ಲಿ ಉಳಿಯುವುದು, ಆದರ್ಶಗಳು ಪಾಲನೆಯಾಗುವುದೆಲ್ಲ ಭಾವನಾತ್ಮಕ ವಿಚಾರಗಳು.

ತಾನು ಸಾಯುತ್ತೇನೆಂದು ತನಗೇ ಗೊತ್ತಿದ್ದು ಕಾಯಿಲೆಪೀಡಿತ ವ್ಯಕ್ತಿ ಹಂತಹಂತವಾಗಿ ಪ್ರಾಣ ಕಳೆದುಕೊಳ್ಳುವುದು, ಯಾರಿಗೂ ತಿಳಿಸದೆ ಎದ್ದು ಹೋದಂತೆ ನಿಧನರಾಗುವುದು, ತುಸು ಮುನ್ಸೂಚನೆ ಸಿಕ್ಕಿ ದಿನಗಣನೆ ಮಾಡಿ ಪ್ರಜ್ಞೆಯೇ ಇಲ್ಲದೆ, ಒಂದು ಹಂತದಲ್ಲಿ ಇಲ್ಲವಾಗುವುದು ಎಲ್ಲದರಲ್ಲೂ ಪಾಠವಿದೆ. ಸಾವನ್ನು ತಡೆಯಲು ಸಾಧ್ಯವಿಲ್ಲ ಎಂಬುದು. ಶೀಘ್ರವೋ, ವಿಳಂಬವೋ ಸಾವನ್ನು ತುಸು ಮುಂದೂಡಲು ಪ್ರಯತ್ನಿಸಬಹುದೇ ವಿನಃ ಶಾಶ್ವತವಾಗಿ ಬಾರದಂತೆ ಮಾಡಲು ಸಾಧ್ಯವಿಲ್ಲ ಎಂಬುದು. ಅನೇಕ ತತ್ವಜ್ಞಾನಿಗಳು, ಮಹಾಮಹಿಮರು ಲೌಕಕದಿಂದ ವಿಮುಖರಾಗಲು ಇದೇ ತತ್ವ ಕಾರಣವಾದರೂ ಸಾಮಾನ್ಯರಲ್ಲಿ ಸಾಮಾನ್ಯರ ಪಾಲಿಗೆ ಸಾವು ಒಂದು ‘ಸ್ಮಶಾನ ವೈರಾಗ್ಯ’ವಷ್ಟೇ...

ಮಗಳು 13 ದಾಟುವ ಮುನ್ನ ಈ ಜೀವನಪಾಠಗಳನ್ನು ಕಲಿಸಿ

ಕಾಲಕ್ಕೆ ನೋವುಗಳನ್ನು ಮರೆಸುವ ತಾಕತ್ತಿದೆ, ನಿಜ. ಆದರೆ, ಸಾವಿನೆದುರು ಅಹಂ, ಪಣ, ಲೋಭ, ದ್ವೇಷ ಯಾವುದೂ ದೊಡ್ಡದಲ್ಲ, ಬದುಕಿನುದ್ದಕ್ಕೂ ಕಟ್ಟಿಕೊಂಡ ಯಾವುದನ್ನೂ ಸತ್ತ ಮೇಲೆ ವ್ಯಕ್ತಿ ಹೊತ್ತುಕೊಂಡು ಹೋಗುವುದಿಲ್ಲ ಎಂಬುದು ಅಂತ್ಯಕಾಲದಲ್ಲಿ ಆತನ ಸುತ್ತಮುತ್ತಲಿರುವವರಿಗೆ, ಸಂಸ್ಕಾರದಲ್ಲಿ ಸೇರಿದವರಿಗೆಲ್ಲ ಅರ್ಥವಾಗುತ್ತದೆ. ಆ ವೈರಾಗ್ಯ ಪ್ರತಿಯೊಬ್ಬರನ್ನೂ ಚುಚ್ಚುತ್ತದೆ.

ಎಷ್ಟುಹೊತ್ತು?

ಅಲ್ಲಿಂದ ಹೊರ ಬರುವ ತನಕ ಮಾತ್ರ. ಕೆಟ್ಟಹಠಗಳು, ಅನಗತ್ಯ ದ್ವೇಷಗಳು, ಕೆಲಸಕ್ಕೇ ಬಾರದ ಹೊಲಸು ರಾಜಕೀಯ, ಸಮಯ ಸಾಧಕತನ ಯಾವುದೂ ಬಿಟ್ಟು ಹೋಗುವುದಿಲ್ಲ. ಸತ್ತ ಮನುಷ್ಯನಿಗೊಂದು ಶ್ರದ್ಧಾಂಜಲಿ, ‘ನಷ್ಟ’ದ ಮಾತುಗಳು. ನಿಜವಾಗಿ ಕಷ್ಟಪಡುವವರು ಕಳೆದು ಹೋದಾತನ ಮನೆಯವರು ಎನ್ನುವುದು ಕಟು ಸತ್ಯ. ಆದರೂ ಸಾವಿನಲ್ಲೂ ಪ್ರಚಾರಕ್ಕೆ ಬರಲು ಹಪಿಹಪಿಸುವ ಮನಸ್ಸುಗಳಲ್ಲಿ ಸ್ಮಶಾನ ವೈರಾಗ್ಯವನ್ನೂ ಮೀರಿದ ‘ಅಸ್ತಿತ್ವದ ಅಹಂ’ ತುಂಬಿರುತ್ತದೆ ಅನಿಸುತ್ತದೆ.

ಭಗವದ್ಗೀತೆಯ 18 ಅಧ್ಯಾಯಗಳಲ್ಲಿ ಕೃಷ್ಣ ಹೇಳಿದ್ದೇನು?

ವೈರಾಗ್ಯ ಯಾವುದೇ ಇರಲಿ... ಬದುಕಿನ ಭ್ರಮೆಗಳನ್ನೇ ಅಲ್ಲಾಡಿಸಿಬಿಡುವ ಹಂತಗಳೆಂಬುದು ಲೋಕಕ್ಕೇ ಗೊತ್ತಿರುವ ವಿಷಯ. ಆದರೆ, ತನ್ನದೇ ಶಾಶ್ವತ, ತಾನು, ತನ್ನಿಂದಲೇ ಎಂಬಿತ್ಯಾದಿ ಹುಚ್ಚು ಹುಚ್ಚಾದ ಭ್ರಮೆಗಳಲ್ಲಿ ತೇಲುವಷ್ಟೂದಿವಸ ಇಂತಹ ಸತ್ಯಗಳನ್ನು ನಂಬಬೇಕು ಅನ್ನಿಸುವುದಿಲ್ಲ. ಮನುಷ್ಯ ತೀರಾ ಅಸಹಾಯಕನಾದಾಗ, ಬಹಳಷ್ಟುಸಂಕಷ್ಟಕ್ಕೆ ಸಿಲುಕಿದಾಗಲೇ ಬದುಕಿನ ಬಹುತೇಕ ಸತ್ಯಗಳು ಗೋಚರವಾಗುವುದು. ಭ್ರಮೆಗಳಿಂದ ಹೊರ ಬರುವುದು. ಆ ಹೊತ್ತಿಗೆ ಪಾಠ ಕಲಿಯಲು ದೇವರು ಒಂದು ಅವಕಾಶ ಕಲ್ಪಿಸಿದ್ದಾನೆ ಅಂದುಕೊಳ್ಳುವುದು ಜಾಣತನ. ಬೆಂಕಿಯನ್ನು ಮುಟ್ಟಿದರೆ ಮಾತ್ರ ಬಿಸಿ ಎಂದು ತಿಳಿದುಕೊಳ್ಳಬೇಕಾಗಿಲ್ಲ, ಬೆಂಕಿಯ ಸಮೀಪದ ಶಾಖದಿಂದಲೇ ಅರ್ಥ ಮಾಡಿಕೊಳ್ಳಬಹುದು, ಕಿಚ್ಚು ಸುಡುತ್ತದೆ ಎಂಬುದಾಗಿ... ಹಾಗಾಗಿ, ದೇವರು, ಧರ್ಮ, ಯತಿ, ಸಂತ, ಫಕೀರರೇ ಬಂದು ಬೋಧಿಸಬೇಕಾಗಿಲ್ಲ ಬದುಕಿನ ಸತ್ಯಗಳನ್ನು. ಅವರವರ ಬದುಕೇ ಒಮ್ಮೊಮ್ಮೆ ನಾವಿದ್ದಲ್ಲಿಗೇ ಬಂದು ‘ಸ್ಪೆಶಲ್‌ ಕ್ಲಾಸ್‌’ಗಳನ್ನು ನೀಡಿ ಹೋಗುತ್ತದೆ. ಅಂತಹ ಕ್ಲಾಸ್‌ಗೆ ಬಂಕ್‌ ಹಾಕಿದ್ದರೆ ಮತ್ತೊಮ್ಮೆ ಕಲಿಯುವ ಅವಕಾಶವೇ ತಪ್ಪಿ ಹೋದೀತು!

Follow Us:
Download App:
  • android
  • ios