2020 ನಮ್ಮೆಲ್ಲರ ಪಾಲಿಗೆ ಅಂಥದ್ದೇ ಒಂದು ಹುಳಬಿದ್ದ ವರ್ಷದ ಹಾಗೆಯೇ ಇತ್ತು. ಮೊದಲ ಎರಡೂವರೆ ತಿಂಗಳು ನಿರಾಯಾಸ. ನಂತರದ ದಿನಗಳಲ್ಲಿ ಬರೀ ಗೊಂದಲ, ಆತಂಕ, ಮೌನ ಮತ್ತು ಏಕಾಂತ. ಮನುಷ್ಯರು ಮನುಷ್ಯರ ಮುಖವನ್ನು ಸರಿಯಾಗಿ ನೋಡದಂತೆ, ಪರಸ್ಪರರನ್ನು ಅನುಮಾನದಿಂದ ನೋಡುವಂತೆ ಮಾಡಿದ ವರ್ಷ ಇದು.

ಮಕ್ಕಳಿಗೆ ಶಾಲೆಯಿಲ್ಲ, ಉದ್ಯೋಗಿಗಳಿಗೆ ಆಫೀಸಿಲ್ಲ, ಅನೇಕರಿಗೆ ಕೆಲಸವಿಲ್ಲ, ಅಸಂಖ್ಯರಿಗೆ ಆದಾಯವಿಲ್ಲ, ಮದುವೆಯ ಸಂಭ್ರಮ ಇಲ್ಲ, ಮರಣದ ಮಹಾನವಮಿಯೂ ಇಲ್ಲ ಎಂಬಂತೆ ಬದುಕಬೇಕಾಗಿ ಬಂದ 2020 ನಮಗೆ ಹೊಸ ಸಾಮಾನ್ಯ ದಿನಚರಿಯನ್ನು ಕಲಿಸಿತೆಂದೇ ಹೇಳಬೇಕು. ದಿನಾ ಬೆಳಗ್ಗೆ ಆಫೀಸಿಗೆ ಹೋಗಿ ಮಾಡುವ ಕೆಲಸವನ್ನು ಮನೆಯಲ್ಲಿದ್ದೇ ಮಾಡಬಹುದು ಎಂಬುದು ಮೊದಲ ಪಾಠ. ಮನೆಯಲ್ಲಿದ್ದು ಕೆಲಸ ಮಾಡುವುದಕ್ಕಿಂತ ಎಷ್ಟೇ ಕಷ್ಟವಾದರೂ ಏನೇ ಟ್ರಾಫಿಕ್ಕಿದ್ದರೂ ಆಫೀಸಿಗೆ ಹೋಗಿ ದುಡಿಯುವುದೇ ಹಿತಕರ ಅನ್ನುವುದು ಕೊನೆಯ ಅತ್ಯುತ್ತಮ ಪಾಠ. ಮನೇಲಿದ್ದರೆ ಆರಾಮಾಗಿರಬಹುದು ಎಂಬುದು ಗಂಡಸರ ಪಾಲಿಗೆ ನಿಜವಾದರೂ, ಮಹಿಳೆಯರ ಪಾಲಿಗಂತೂ ಕೆಲಸ ತಪ್ಪಲಿಲ್ಲ. ಅವರಿಗೆ ಅಡುಗೆ ಮನೆಯ ಕೆಲಸ ದ್ವಿಗುಣಗೊಂಡದ್ದೇ ಲಾಭ.

ಮಾಸ್ಕ್‌ನಲ್ಲೂ ಸ್ಟೈಲ್; ನಿವೇದಿತಾ ಗೌಡಾಗೆ ಟ್ರೋಲಿಗರ ಕಾಟ, ಕಾಲೆಳೆದ ನೆಟ್ಟಿಗರಿಂದ? 

ಈ ಮಧ್ಯೆ ಅನೇಕರಿಗೆ ನಿವೃತ್ತಿ ಅಂದರೆ ಹೇಗಿರುತ್ತದೆ ಅನ್ನುವುದು ನಿವೃತ್ತಿಯ ಮೊದಲೇ ಅನುಭವಕ್ಕೆ ಬಂತು.ಮತ್ತೂ ಹಲವರಿಗೆ ಕೆಲಸ ಕಳೆದುಕೊಳ್ಳುವ ಭೀಕರ ಅನುಭವವೂ ದಕ್ಕಿತು. ಪಾಳುಬಿದ್ದ ನಗರ ಹೇಗಿರುತ್ತದೆ ಅನ್ನುವುದನ್ನೂ ಕೋವಿಡ್‌ ತೋರಿಸಿಕೊಟ್ಟಿತು. ದೇಶದ ಆರ್ಥಿಕತೆ ಕುಸಿಯಿತು. ಕೃಷಿಗೆ ಮರಳುತ್ತೇವೆ ಅಂತ ಅನೇಕರು ಹಳ್ಳಿದಾರಿ ಹಿಡಿದರು. ಹಿಮ್ಮುಖ ಚಲನೆ ಶುರುವಾಯಿತು.

ಈ ಬಾರಿ ಮಾಸ್ಕ್‌ ಧರಿಸಿ ಪ್ರತ್ಯಕ್ಷನಾದ ಸ್ಪೈಡರ್ ಮ್ಯಾನ್..! 

ವರ್ಷಾಂತ್ಯದ ಹೊತ್ತಿಗೆ ಎಲ್ಲವೂ ತಿಳಿಯಾಗುತ್ತದೆ ಎಂಬ ನಂಬಿಕೆಗೆ ಇಂಬು ಸಿಕ್ಕಿಲ್ಲ. ನಾಳೆಯ ಕುರಿತು ಅನಿಶ್ಚಯ, ನಿನ್ನೆಯ ಕುರಿತ ಭಯ ಎರಡೂ ವರ್ತಮಾನವನ್ನು ಆಳುತ್ತಿವೆ. ಇಂಥ ಹೊತ್ತಲ್ಲಿ ಅನೇಕರು 2020ರ ದಿನಗಳ ಕುರಿತು ಮಾತಾಡಿದ್ದನ್ನು ಭಾನುಪ್ರಭ ನಿಮ್ಮ ಮುಂದಿಡುತ್ತಿದೆ.