ಮನೆಗೆಲಸಗಳನ್ನು ಮಾಡೋದ್ರಿಂದ ಹೆರಿಗೆ ಸುಲಭವಾಗುತ್ತದೆ ಎಂಬ ಮಾತನ್ನು ಗರ್ಭಿಣಿಯರಿಗೆ ಹಿರಿಯರು ಆಗಾಗ ಹೇಳೋದನ್ನು ನೀವು ಕೇಳಿರಬಹುದು. ಹೌದು, ಮನೆಗೆಲಸ ಕೂಡ ದೇಹಕ್ಕೆ ಉತ್ತಮ ವ್ಯಾಯಾಮ ಒದಗಿಸಬಲ್ಲದು.ಅದ್ರಲ್ಲೂ ಭಾರತದಲ್ಲಿ ಮನೆ ಹಾಗೂ ಅಡುಗೆ ಕೆಲಸಗಳನ್ನು ಮಾಡೋದು ಸಾಮಾನ್ಯದ ಸಂಗತಿಯಂತೂ ಅಲ್ಲವೇ ಅಲ್ಲ. ಏಕೆಂದ್ರೆ ಬೆಳಗ್ಗೆಯಿಂದ ರಾತ್ರಿ ಮಲಗೋ ತನಕ ಕೈ ತುಂಬಾ ಕೆಲಸಗಳಿರುತ್ತವೆ. ಹೀಗಾಗಿ ಗ್ರೇಟ್ ಇಂಡಿಯನ್ ಕಿಚನ್ ಗೃಹಿಣಿಯರ ಪಾಲಿಗೆ ವರ್ಕ್ಔಟ್ ಮಾಡೋ ತಾಣ ಕೂಡ ಹೌದು. ಈಗಂತೂ ಕೊರೋನಾ ಬೇರೆ. ಜಿಮ್, ವಾಕ್ ಎಂದು ಎಲ್ಲೂ ಹೋಗೋವಂತಿಲ್ಲ.ಇಂಥ ಸಮಯದಲ್ಲಿ ಕೆಲವು ಮನೆಗೆಲಸಗಳ ಮೂಲಕ ದೇಹಕ್ಕೆ ವ್ಯಾಯಾಮ ಒದಗಿಸಬಹುದು. ಇದ್ರಿಂದ ಮನೆಯೊಳಗೇ ಕೂತು ತಿಂದು ದೇಹದಲ್ಲಿ ಕೊಬ್ಬು ಹೆಚ್ಚಿಸಿಕೊಳ್ಳೋದನ್ನು ತಪ್ಪಿಸಬಹುದು. ಹಾಗಾದ್ರೆ ದೇಹಕ್ಕೆ ಉತ್ತಮ ವ್ಯಾಯಾಮ ಒದಗಿಸೋ ಮೂಲಕ ಕ್ಯಾಲೋರಿ ಕರಗಿಸೋ ಮನೆಗೆಲಸಗಳು ಯಾವುವು?

ಅಡುಗೆ ಎಣ್ಣೆ ಎರಡನೇ ಸಲ ಕುದಿಸಿದರೆ ಅದು ವಿಷವೇ!

ನೆಲ ಒರೆಸೋದು
ಬಿಡುವಿಲ್ಲದ ಜೀವನಶೈಲಿ, ಆಧುನಿಕ ಪರಿಕರಗಳ ಕಾರಣಕ್ಕೆ ಮನೆಗೆಲಸಗಳು ಇಂದು ಹಿಂದಿಗಿಂತ ಸುಲಭವಾಗಿವೆ. ಹಿಂದೆಲ್ಲ ಕೂತು, ಬಗ್ಗಿ ಇಡೀ ಮನೆ ನೆಲ ಒರೆಸುತ್ತಿದ್ದರು. ಆದ್ರೆ ಇಂದು ಉದ್ದದ ಕೋಲು ಹಿಡಿದು ಬೆನ್ನು ಬಗ್ಗಿಸದೆ ಕಡಿಮೆ ಸಮಯದಲ್ಲಿ ಇಡೀ ಮನೆ ಒರೆಸಿ ಬಿಡುತ್ತೇವೆ. ಆದ್ರೆ ಇದ್ರಿಂದ ದೇಹಕ್ಕೆ ಕೂತು ಒರೆಸಿದಷ್ಟು ವ್ಯಾಯಾಮ ಸಿಗೋದಿಲ್ಲ. ಹೀಗಾಗಿ ಆದಷ್ಟು ಬೆನ್ನುಬಗ್ಗಿಸಿ ಬಟ್ಟೆಯಲ್ಲಿ ನೆಲ ಒರೆಸಲು ಪ್ರಯತ್ನಿಸಿ. ಈ ರೀತಿ ಬೆನ್ನು ಬಗ್ಗಿಸಿ, ಕೂತು ಮೇಲೇಳೋದ್ರಿಂದ ಬೆನ್ನು ಹಾಗೂ ಕಾಲಿನ ಸ್ನಾಯುಗಳಿಗೆ ಉತ್ತಮ ವ್ಯಾಯಾಮ ಸಿಗುತ್ತದೆ. ಜೊತೆಗೆ ಕೈಗಳಿಗೂ ಒಳ್ಳೆಯ ವ್ಯಾಯಾಮ. ಈ ಚಟುವಟಿಕೆಯಿಂದ 230 ಕ್ಯಾಲೋರಿ ಬರ್ನ್ ಮಾಡಬಹುದು.

ಬಟ್ಟೆ ಒಗೆಯೋದು
ನೀವು ಬಟ್ಟೆಗಳನ್ನು ವಾಷಿಂಗ್ ಮಷಿನ್ಗೆ ಹಾಕುತ್ತಿದ್ರೆ ಇಂದೇ ನಿಲ್ಲಿಸಿ. ಬಟ್ಟೆಗಳನ್ನು ಕೈಗಳಿಂದ ತೊಳೆಯೋದು ಇಡೀ ದೇಹಕ್ಕೆ ವ್ಯಾಯಾಮ ಒದಗಿಸುತ್ತದೆ. ಬಟ್ಟೆ ಅಥವಾ ನೀರು ತುಂಬಿದ ಬಕೆಟ್ ಎತ್ತೋದು, ಬಟ್ಟೆಯನ್ನು ನೀರಿನಲ್ಲಿ ಅದ್ದಿ ಕೈಗಳಿಂದ ತೊಳೆಯೋದು, ನೀರು ಹಿಂಡಿ ತೆಗೆಯೋದು, ಒಣ ಹಾಕೋದು ಇವೆಲ್ಲದಕ್ಕೂ ಸಾಕಷ್ಟು ಶ್ರಮ ಬೇಕಾಗುತ್ತದೆ. ತಜ್ಞರ ಪ್ರಕಾರ ಒಂದು ಗಂಟೆ ಬಟ್ಟೆ ಒಗೆದರೆ ಸುಮಾರು 116 ಕ್ಯಾಲೋರಿ ಬರ್ನ್ ಆಗುತ್ತದಂತೆ. 

ಅಡುಗೆ ಮಾಡೋದು
ಅಡುಗೆ ಮಾಡೋದು ಒಂದು ರೀತಿಯಲ್ಲಿ ಮಲ್ಟಿ ಟಾಸ್ಕಿಂಗ್ ಅಂತಾನೇ ಹೇಳ್ಬಹುದು. ತರಕಾರಿ ತೊಳೆಯೋದು, ಕತ್ತರಿಸೋದು, ಕಾಯಿ ತುರಿಯೋದು ಹೀಗೆ ನೀವೇನು ಖಾದ್ಯ ತಯಾರಿಸುತ್ತೀರಿ ಎಂಬುದರ ಆಧಾರದ ಮೇಲೆ ಒಂದಿಷ್ಟು ಕೆಲಸಗಳನ್ನು ಮಾಡಬೇಕಾಗುತ್ತದೆ. ಈ ಎಲ್ಲ ಕೆಲಸಗಳಿಗಾಗಿ ನೀವು ವಸ್ತುಗಳನ್ನು ಎತ್ತೋದು, ಆ ಕಡೆ ಈ ಕಡೆ ಓಡಾಡೋದು, ಕೂರುವುದು, ನಿಲ್ಲೋದು ಮುಂತಾದ ಚಟುವಟಿಕೆಗಳನ್ನು ಮಾಡುತ್ತೀರಿ. ಇವೆಲ್ಲವೂ ದೇಹಕ್ಕೆ ವ್ಯಾಯಾಮವೇ. 

ತುಳಸಿ ಹಾಲು ಸೇವಿಸೋ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿ

ಪಾತ್ರೆ ತೊಳೆಯೋದು
ಪಾತ್ರೆ ತೊಳಯೋದು ಕೂಡ ಒಂದು ರೀತಿಯಲ್ಲಿ ವ್ಯಾಯಾಮವೇ. ಕೈಗಳು ಹಾಗೂ ಬೆರಳುಗಳ ಸ್ನಾಯುಗಳಿಗೆ ಇದು ಒಳ್ಳೆಯ ವ್ಯಾಯಾಮ. 

ಬಾತ್ ರೂಮ್  ಕ್ಲೀನಿಂಗ್
ಬಾತ್ ರೂಮ್  ಹಾಗೂ ಟಾಯ್ಲೆಟ್ ಕ್ಲೀನಿಂಗ್ ನಿಜಕ್ಕೂ ಚಿಕ್ಕ ಕೆಲಸವೇನಲ್ಲ. ಕಮೋಡ್, ನೆಲದ ಜೊತೆ ಗೋಡೆಯ ಟೈಲ್ಸ್ಗಳನ್ನು ಕೂಡ ತಿಕ್ಕಿ ತೊಳೆಯಬೇಕಾಗುತ್ತದೆ. ಕೈ,ಬೆನ್ನುಹಾಗೂ ಕಾಲುಗಳಿಗೆ ಉತ್ತಮ ವ್ಯಾಯಾಮ ಒದಗಿಸುತ್ತದೆ.  

ಫರ್ನಿಚರ್ ಸ್ಥಾನಪಲ್ಲಟ
ಮನೆಯಲ್ಲಿರೋ ಫರ್ನಿಚರ್ಗಳ ಸ್ಥಾನಪಲ್ಲಟಕ್ಕೆ ಇದು ಸಕಾಲ. ಮನೆಯಲ್ಲಿ ಅನೇಕ ಸಮಯದಿಂದ ಒಂದೇ ಸ್ಥಳದಲ್ಲಿರೋ ಕುರ್ಚಿ, ಸೋಫಾ, ಮಂಚಗಳನ್ನು ಅವುಗಳ ಸ್ಥಾನದಿಂದ ಬೇರೆಡೆ ಇಡಲು ಪ್ರಯತ್ನಿಸಿ. ಫರ್ನಿಚರ್ಗಳನ್ನು ಆ ಕಡೆ ಈ ಕಡೆ ನೂಕುವುದು, ಬಗ್ಗುವುದು, ಎತ್ತುವುದು, ಮಾಡಬೇಕಾಗುತ್ತದೆ. ಇದು 2o ನಿಮಿಷಗಳಲ್ಲಿ 100-200 ಕ್ಯಾಲೋರಿ ಬರ್ನ್ ಮಾಡಲು ನೆರವು ನೀಡುತ್ತದೆ. 

ಬೆಳಗ್ಗೆ ಬೇಗನೆ ಏಳುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ತೂಕ ಇಳಿಕೆಗೆ ನೆರವು
ಲಾಕ್ಡೌನ್ ಪರಿಣಾಮ ಮನೆಯಲ್ಲೇ ಕುಳಿತು ತೂಕ ಹೆಚ್ಚಿಸಿಕೊಂಡವರಿಗೆ ತೂಕ ಇಳಿಕೆ ಮಾಡೋದು ಹೇಗಪ್ಪ ಎಂಬ ಟೆನ್ಷನ್ ಕಾಡುತ್ತಿರಬಹುದು. ಡೋಂಟ್ ವರಿ, ಮನೆಗೆಲಸಗಳಲ್ಲಿ ತೊಡಗಿಸಿಕೊಳ್ಳಿ. ಒಂದು ವರದಿ ಪ್ರಕಾರ 11-12 ಗಂಟೆಗಳ ಕಾಲ ಮನೆಗೆಲಸಗಳಲ್ಲಿ ತೊಡಗೋದ್ರಿಂದ ವಾರಕ್ಕೆ 2,300 ಕ್ಯಾಲೋರಿ ಬರ್ನ್ ಮಾಡಲು ನೆರವು ನೀಡುತ್ತದೆ. ಅಲ್ಲದೆ, ನಿಮ್ಮ ಡ್ರೆಸ್ ಸೈಜ್ ಕೂಡ ಚಿಕ್ಕದಾಗುತ್ತದೆ. ಅಂದ್ರೆ ತಿಂಗಳಿಗೆ ನೀವು ಒಂದು ಕೆ.ಜಿ. ತೂಕ ಕಳೆದುಕೊಳ್ಳುತ್ತೀರಿ. ನೆಲ ಒರೆಸೋದು, ಮನೆ ಕ್ಲೀನಿಂಗ್, ಫರ್ನಿಚರ್ಗಳನ್ನು ಜೋಡಿಸೋದು ಮುಂತಾದ ಕೆಲಸಗಳು 15 ನಿಮಿಷ ಓಟಕ್ಕೆ ಸಮನಾಗಿದೆ ಅನ್ನೋದು ತಜ್ಞರ ಅಭಿಪ್ರಾಯ.