ಚಾಕೋಲೇಟ್ ಇಷ್ಟಪಡದವರು ಯಾರಿದ್ದಾರೆ ಹೇಳಿ? ಮನೆಯಲ್ಲಿ ಪುಟ್ಟ ಮಗುವಿನಿಂದ ಹಿಡಿದು ಅಜ್ಜಿ ತನಕ ಎಲ್ಲರೂ ಚಾಕೋಲೇಟ್ ಅಂದ ತಕ್ಷಣ ಕೈ ಮುಂದೆ ಮಾಡುತ್ತಾರೆ. ಯಾವುದೋ ಕಾರಣಕ್ಕೆ ಮುನಿಸಿಕೊಂಡು ಮಾತು ಬಿಟ್ಟ ಸ್ನೇಹಿತೆಯ ಕೈಗೆ ದೊಡ್ಡ ಬಾರ್ ಚಾಕೋಲೇಟ್‍ವೊಂದನ್ನು ನೀಡಿ ನಸುನಕ್ಕರೆ ಸಾಕು, ಬಾಯಿಯಲ್ಲಿ ಚಾಕೋಲೇಟ್ ಕರಗಿದಷ್ಟೇ ವೇಗವಾಗಿ ಆಕೆಯ ಕೋಪ ತಣ್ಣಗಾಗುತ್ತದೆ. ಇನ್ನು ಪ್ರೇಮಿಗಳಿಗೆ ಪ್ರೀತಿ ಹೆಚ್ಚಿಸುವ, ಕೋಪ ಕರಗಿಸುವ ಸಾಧನವೇ ಚಾಕೋಲೇಟ್.ಹೀಗಿರುವಾಗ ವ್ಯಾಲೆಂಟೆನ್ಸ್ ಡೇಗೂ ಮುನ್ನ ಚಾಕೋಲೇಟ್ ಡೇ ಆಚರಿಸದಿದ್ರೆ ಹೇಗೆ ಅಲ್ವಾ?ಇದೇ ಕಾರಣಕ್ಕೆ ವ್ಯಾಲೆಂಟೆನ್ಸ್ ವೀಕ್ ಸೆಲೆಬ್ರೇಷನ್‍ನಲ್ಲಿ ಚಾಕೋಲೇಟ್ ಡೇ ಕೂಡ ಸೇರಿದೆ.ಫೆಬ್ರವರಿ 9ರಂದು ಚಾಕೋಲೇಟ್ ಡೇ ಆಚರಿಸಲಾಗುತ್ತದೆ.ಚಾಕೋಲೇಟ್ ಪರಸ್ಪರ ಪ್ರೀತಿ ಹಾಗೂ ಬದ್ಧತೆಯ ಸಂಕೇತವಾಗಿದ್ದು,ಇದೇ ಕಾರಣಕ್ಕೆ ವ್ಯಾಲೆಂಟೆನ್ಸ್ ವೀಕ್‍ನಲ್ಲಿ ಚಾಕೋಲೇಟ್ ಡೇ ಆಚರಿಸಲಾಗುತ್ತದೆ.ಈ ದಿನ ಬಾಯ್‍ಫ್ರೆಂಡ್, ಗರ್ಲ್‍ಫ್ರೆಂಡ್‍ಗೆ ಮಾತ್ರ ಚಾಕೋಲೇಟ್ ಬಾಕ್ಸ್ಗಳನ್ನು ಗಿಫ್ಟ್ ಮಾಡಬೇಕು ಎಂದೇನಿಲ್ಲ.ನಿಮ್ಮ ಆತ್ಮೀಯರು, ಪ್ರೀತಿಪಾತ್ರರಿಗೂ ಚಾಕೋಲೇಟ್ ಬಾಕ್ಸ್ ನೀಡಿ ಹ್ಯಾಪಿ ಚಾಕೋಲೇಟ್ ಡೇ ಅನ್ನಬಹುದು. ಅಂದಹಾಗೇ ನಾನಾ ವಿಧದ, ವಿನ್ಯಾಸದ ಚಾಕೋಲೇಟ್‍ಗಳ ರುಚಿಯಂತೂ ಎಲ್ಲರಿಗೂ ಗೊತ್ತೇ ಇದೆ. ಆದರೆ, ಚಾಕೋಲೇಟ್‍ನಿಂದ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜನಗಳಿವೆ ಎಂಬುದು ಗೊತ್ತಾ?

ಖುಷ್ ಖುಷಿಯಾಗಿ ಪರೀಕ್ಷೆ ಅಟೆಂಡ್ ಮಾಡೋದು ಹೇಗೆ?

-ಒತ್ತಡ ತಗ್ಗಿಸುತ್ತದೆ: ಇಂದಿನ ಬ್ಯುಸಿ ಜೀವನಶೈಲಿಯಲ್ಲಿ ಒತ್ತಡ ಎಲ್ಲರನ್ನು ಕಾಡೇ ಕಾಡುತ್ತದೆ.ಕೆಲವೊಮ್ಮೆಯಂತೂ ಈ ಒತ್ತಡದಿಂದ ತಪ್ಪಿಸಿಕೊಳ್ಳುವುದು ಹೇಗಪ್ಪ ಎಂದೆನಿಸಿಬಿಡುತ್ತದೆ.ಅತಿಯಾದ ಒತ್ತಡ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.ಪ್ರತಿದಿನ ಒತ್ತಡ ಎದುರಿಸುವವರು ಅದರಿಂದ ಮುಕ್ತಿ ಪಡೆಯಲು ಡಾರ್ಕ್ ಚಾಕೋಲೇಟ್ ಮೊರೆ ಹೋಗಬಹುದು. ಹೌದು, ಪ್ರತಿದಿನ ಡಾರ್ಕ್ ಚಾಕೋಲೇಟ್ ತಿನ್ನುವುದರಿಂದ ಒತ್ತಡ ಕಡಿಮೆಯಾಗುತ್ತದೆ ಎಂಬುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.ಡಾರ್ಕ್ ಚಾಕೋಲೇಟ್‍ನಲ್ಲಿ ಒತ್ತಡವನ್ನು ತಗ್ಗಿಸುವ ಗುಣಗಳಿವೆ.

 -ಚರ್ಮದ ಕಾಂತಿ ಹೆಚ್ಚಿಸುತ್ತದೆ: ಚಾಕೋಲೇಟ್ ರಕ್ತದ ಪರಿಚಲನೆಯನ್ನು ಉತ್ತಮಗೊಳಿಸುವ ಜೊತೆಗೆ ಚರ್ಮದಲ್ಲಿ ತೇವಾಂಶ ಉಳಿಯುವಂತೆ ಮಾಡುತ್ತದೆ.ಈ ಮೂಲಕ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.

-ಮೂಡ್‍ಗೆ ಬೂಸ್ಟ್: ಮನಸ್ಸಿಗೆ ಬೇಸರವಾದಾಗ ಚಾಕೋಲೇಟ್ ತಿನ್ನುವುದರಿಂದ ಮೂಡ್‍ಗೆ ಬೂಸ್ಟ್ ಸಿಗುತ್ತದೆ. ಬಾಯಿ ಸಿಹಿಯಾಗುತ್ತಿದ್ದಂತೆ ಮನಸ್ಸಿನ ಕಹಿ ದೂರವಾಗುತ್ತದೆ.ಹೀಗಾಗಿ ಮನಸ್ಸಿಗೆ ಬೇಸರವಾದಾಗಲೆಲ್ಲ ಚಾಕೋಲೇಟ್ ತಿಂದರೆ ನೋವು ಮರೆಯಾಗಿ ಖುಷಿ ಹೆಚ್ಚುತ್ತದೆ. 

ಅಂದಕ್ಕಾಗಿ ಹೆಣ್ಣಿನ ತಳಮಳ

-ಸ್ಮರಣಶಕ್ತಿ ಹೆಚ್ಚಳ: ವೈಜ್ಞಾನಿಕ ಅಧ್ಯಯನಗಳ ಪ್ರಕಾರ ಡಾರ್ಕ್ ಚಾಕೋಲೇಟ್ ತಿನ್ನುವುದರಿಂದ ಮಿದುಳಿನ ಕಾರ್ಯನಿರ್ವಹಣೆ ಉತ್ತಮಗೊಳ್ಳುವ ಮೂಲಕ ಸ್ಮರಣಶಕ್ತಿ ಹೆಚ್ಚುತ್ತದಂತೆ.ಹೀಗಾಗಿ ಚಾಕೋಲೇಟ್ ತಿಂದು ನಿಮ್ಮ ನೆನಪಿನಶಕ್ತಿಯನ್ನು ಹೆಚ್ಚಿಸಿಕೊಳ್ಳಿ.

-ತೂಕ ಇಳಿಸಿಕೊಳ್ಳಲು ನೆರವು: ಡಾರ್ಕ್ ಚಾಕೋಲೇಟ್‍ನ ಚಿಕ್ಕ ತುಂಡನ್ನು ನಿಮ್ಮ ನಿತ್ಯದ ಡಯಟ್‍ನಲ್ಲಿ ಸೇರಿಸಿಕೊಳ್ಳುವುದರಿಂದ ತೂಕ ಇಳಿಸಿಕೊಳ್ಳಲು ಸಾಧ್ಯವಿದೆ.ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸ್ಥಿರಗೊಳಿಸುವ ಮೂಲಕ ಹಸಿವನ್ನು ನಿಯಂತ್ರಿಸುತ್ತದೆ ಹಾಗೂ ಏನಾದರೂ ತಿನ್ನಬೇಕೆಂಬ ಬಾಯಿ ಚಪಲವನ್ನು ಕೂಡ ಕಡಿಮೆ ಮಾಡುತ್ತದೆ. 

-ಮಧುಮೇಹವನ್ನು ದೂರವಿರಿಸುತ್ತದೆ: ನೀವು ಸಿಹಿಯನ್ನು ಇಷ್ಟಪಡುವವರಾಗಿದ್ದರೆ ಸಕ್ಕರೆ ಕಾಯಿಲೆ ಕಾಡಬಹುದು ಎಂಬ ಭಯದಿಂದ ಚಾಕೋಲೇಟ್‍ನಿಂದ ದೂರವಿರಬೇಡಿ.ಡಾರ್ಕ್ ಚಾಕೋಲೇಟ್‍ನಲ್ಲಿರುವ ಫ್ಲೇವೊನೊಯ್ಡ್ಸ್ ಸಕ್ಕರೆಕಾಯಿಲೆಯ ಅಪಾಯವನ್ನು ತಗ್ಗಿಸುತ್ತದೆ. 

ಉಪ್ಪಿನ ಮೇಲಿನ ವ್ಯಾಮೋಹ ತಗ್ಗಿಸೋದು ಹೇಗೆ?

ನಿಮಗಿದು ಗೊತ್ತಾ?:

-ಚಾಕೋಲೇಟ್ ಕೋಕೋ ಎಂಬ ಹಣ್ಣಿನ ಬೀಜದಿಂದ ತಯಾರಿಸಲ್ಪಡುತ್ತದೆ.

-ಸುಮಾರು ಅರ್ಧ ಕೆ.ಜಿ. ಚಾಕೋಲೇಟ್ ಸಿದ್ಧಪಡಿಸಲು 400 ಕೋಕೋ ಬೀನ್ಸ್ ಬೇಕು.

- ಪ್ರತಿ ಕೋಕೋ ಗಿಡದಲ್ಲಿ ಸರಿಸುಮಾರು 2,500 ಬೀನ್ಸ್ಗಳು ಬೆಳೆಯುತ್ತವೆ.

-ಒಂದು ಕಾಫಿ ಕಪ್‍ನಲ್ಲಿರುವಷ್ಟೇ ಪ್ರಮಾಣದ ಕೆಫಿನ್ ಒಂದು ಮಿಲ್ಕ್ ಚಾಕಲೇಟ್ ನಲ್ಲಿರುತ್ತದೆ.

-ಜಗತ್ತಿನ ಒಟ್ಟು ಕೋಕೋ ಉತ್ಪಾದನೆಯಲ್ಲಿ ಶೇ.70ರಷ್ಟು ಪಶ್ಚಿಮ ಆಫ್ರಿಕಾ ಭಾಗದಲ್ಲಿ ಬೆಳೆಯುತ್ತದೆ.

-ಪಶ್ಚಿಮ ಆಫ್ರಿಕಾದಲ್ಲಿ ಸುಮಾರು 1.5 ಮಿಲಿಯನ್ ಕೋಕೋ ತೋಟಗಳಿವೆ.