ಅಂದಕ್ಕಾಗಿ ಹೆಣ್ಣಿನ ತಳಮಳ: ಬಾಡಿ ಶೇಮಿಂಗ್ ಅಲ್ಲ ಅಷ್ಟು ಸರಳ
ಬಾಡಿಯ ಬಡಬಡಿಕೆಗೆ ಬಗ್ಗದೆ ಮನಸ್ಸು ಬುಡುಬುಡಿಕೆ ಆಡಿಸಿ ಮಜಾ ನೋಡಿದೆ... ಯೋಗಕ್ಕೆ ಸೇರಿದ ತನ್ನ ಮಾಲೀಕಳ ಮೇಲೆ ಈ ದೇಹಕ್ಕೆ ಎಷ್ಟೊಂದು ಮುನಿಸು ಬಂದಿದೆ ಓದಿ...
ದೇಹದ ವರಾತ
ಈ ಹೊಸ ವರ್ಷ ಆರಂಭ ಆದ್ರೆ ಸಾಕು ಹೆದರಿಕೆ ಶುರುವಾಗುತ್ತೆ. ಇವ್ಳು ರೆಸಲ್ಯೂಶನ್ ಅಂತ ಅದೇನೋ ಜಿಮ್ಮು, ಯೋಗ, ಜುಂಬಾ ಅಂತೆಲ್ಲ ಇದ್ದಕ್ಕಿದ್ದಂತೆ ನನ್ನ ಎತ್ತಿ ಎಸೆದು, ಕೆಡವಿ, ತಿರುವಿ, ಮುರುವಿ, ಹಿಂಡಿ ಒಗೆದು ಬಿಡಲು ಆರಂಭಿಸುತ್ತಾಳೆ. ನಂಗೆ ಗೊತ್ತು ಇದೆಲ್ಲ ಸ್ವಲ್ಪ ದಿನ. ಇವಳಿಗೇರಿದ ಮತ್ತು ಇಳಿವವರೆಗೆ ಅಂತ. ಕಳೆದ ವರ್ಷ ನೋಡಿಲ್ವಾ, ಅದೇನೋ ಜಿಮ್‌ಗೆ ಹೋಗಿ ಕಡೆದು ಕಟ್ಟೆ ಹಾಕ್ತೀನಿ ಅಂತ ಹೋದ್ಲು. ನಾಲ್ಕು ದಿನ ನನ್ನ ಅಯ್ಯೋ ಅಮ್ಮಾ ಅನ್ನುವಂತೆ ಮಾಡಿದ್ಲು. ವೇಟ್ ಎತ್ತುತ್ತೀನಿ ಅಂತ ಹೊರಲಾರದೆ ಹೊತ್ತು ಇಳಿಸಿ, ಕಾಲಿಗೆ ಈಗ ಜಜ್ಜುತ್ತಾಳೋ, ಆಗ ಜಜ್ಜುತ್ತಾಳೋ ಎಂದು ಕಾದು ಕಳವಳಿಸುವಂತೆ ಮಾಡಿದ್ಲು. ನಯಾ ಪೈಸೆ ಮುಂದೋಡದ ಸೈಕಲ್ ಹೊಡ್ದಿದ್ದೇ ಹೊಡ್ದಿದ್ದು, ಟ್ರೆಡ್‌ಮಿಲ್ ಸ್ಪೀಡ್ ಜಾಸ್ತಿ ಮಾಡಿದ್ದೇ ಮಾಡಿದ್ದು- ಮೂರೇ ದಿನಕ್ಕೆ ಮೂವತ್ತು ಕಿಲೋಮೀಟರ್ ಓಡ್ತೀನಂತ. ಆಮೇಲೇನಾಯ್ತು- ಬರ್ತಾ ಬರ್ತಾ ಉತ್ಸಾಹ ಎಲ್ಲ ಟುಸ್ ಅಂತು.
ಅದಕ್ಕೂ ಮುನ್ನ ವಾಕಿಂಗ್ ಹೋಗ್ತೀನಂಥ ಪಾರ್ಕ್‌ಗೆ ಹೋಗಿ, ಹುಕಿ ಬಂದು ಜಾಗಿಂಗ್ ಮಾಡಿ- ಪ್ರತಿದಿನ ಹೀಗೇ ಮಾಡ್ತೀನಂತ ಅಂದ್ಲು. ಅಮೇಲೇನಾಯ್ತು- ಜಾಗರ್ಸ್, ಸ್ಪೋರ್ಟ್ಸ್ ಪ್ಯಾಂಟ್, ಟಾಪ್ ತಗೊಳ್ಳೋದ್ರಲ್ಲಿ ತೋರಿದ ಆಸಕ್ತಿ ನಡೆಯೋದ್ರಲ್ಲಿ ಉಳೀಲಿಲ್ಲ.
ಈ ವರ್ಷ ಹಟ ಯೋಗ ಮಾಡ್ತೀನಂಥ ಹಟ ಹೊತ್ತಿದಾಳೆ. ನನಗ್ಗೊತ್ತು ಇದು ಜಾಸ್ತಿ ದಿನ ನಡೆಯಲ್ಲಾಂತ. ಆದರೆ, ಅಲ್ಲೀವರೆಗೆ ಅನುಭವಿಸಬೇಕಲ್ಲ ಸ್ವಾಮೀ...
ಬೆಳಗ್ಗೆ, ಸಂಜೆಯಾದ್ರೆ ಸಾಕು, ಈಗ ಶುರು ಹಚ್ಕೋತಾಳಂತ ಭಯ ಆವರಿಸುತ್ತೆ. ನೆಟ್ಟಗಿದ್ದವಳು ಇದ್ದಕ್ಕಿದ್ದಂತೆ ನನ್ನ ಪೂರ್ತಿ ಉಲ್ಟಾ ಎತ್ತಿ ಹಾಕ್ತಾಳೆ. ರಕ್ತ ಎಲ್ಲ ಆ ಕಡೆ ಹರಿಸಿ ಅಜ್ಡಸ್ಟ್ ಆಗ್ತೀದೀನಿ ಅನ್ನೋಸ್ಟ್ರಲ್ಲಿ ಮತ್ತೆ ಅದೆಂಗೋ ಕಾಲಿರುವಲ್ಲಿ ಕೈ ಇಟ್ಟು, ಕೈ ಇರುವಲ್ಲಿ ಕಾಲಿಟ್ಟು ವಾಷಿಂಗ್ ಮೆಶಿನ್‌ನಲ್ಲಿ ಬಟ್ಟೆ ಒಗೆಯುವಂತೆ ಒಗೆಯುತ್ತಾಳೆ. ಜೀವಮಾನದಲ್ಲಿ ಅಗಲಿಸದ ಕೈಕಾಲನ್ನು ಇದ್ದಕ್ಕಿದ್ದಂತೆ ನೆಟ್ಟಗೆ 90 ಡಿಗ್ರಿಯಲ್ಲಿ ನಿಲ್ಲು, 180 ಡಿಗ್ರಿಲಿ ನಿಲ್ಲು ಎಂದರೆ ಸುಲಭವಾ? ಆಗಲ್ಲ ಎಂದಷ್ಟೂ ಅದ್ಯಾಕಾಗಲ್ಲ ಎಂದು ಸವಾಲೊಡ್ಡುತ್ತಿದ್ದಾಳೆ.
ಉಪ್ಪಿನ ಮೇಲಿನ ವ್ಯಾಮೋಹ ತಗ್ಗಿಸೋದು ಹೇಗೆ?...
ಹೊಟ್ಟೆ ಮೇಲೆ ದೇಹದ ಭಾರ ಹಾಕೋದು, ಕೈ ಮೇಲೆ ಹೊಟ್ಟೆ ಭಾರ ಹಾಕೋದು, ಭುಜದಲ್ಲಿ ನಿಲ್ಲೋದು, ಕಾಲಲ್ಲಿ ಕೂರೋದು... ಎಲ್ಲ ಉಲ್ಟ ಪಲ್ಟಾ.
ಇದ್ರ ಮಧ್ಯೆ ಆಮ್ಲಜನಕನ್ನ ತುಂಬಿ ಬಲೂನಿನಂತೆ ಊದಿಸಿ, ಸೂಜಿ ಚುಚ್ಚಿದಂತೆ ಪೂರ್ತಿ ಹೊರಹಾಕಿಸಿ ಒಳಗಿಣುಕಿ ನೋಡೋದು ಬೇರೆ... ಏನೇನಾಗ್ತಿದೆ ಅಂತ. ಇನ್ನೇನಾಗತ್ತೆ, ಮೂಳೆಗಳಿಗೆ ಮುನಿಸು, ಸ್ನಾಯುಗಳಿಗೆ ಗೊಂದಲ, ರಕ್ತಕ್ಕೆ ಹೋಗೋ ದಿಕ್ಕೇ ತೋಚದಂತಾಗಿದೆ, ಅಂಗಾಂಗಗಳಿಗೆಲ್ಲ ಅರಚಿ ಹಾಕಿದಂತಾಗಿ ಅರಚಿಕೊಳ್ಳುತ್ತಿವೆ. ಇಷ್ಟೆಲ್ಲ ಕೋಪ ತೋರ್ಸಿದ್ರೂ ಯಾಕೋ ಈ ಬಾರಿ ಬಾಳ ಸೀರಿಯಸ್ಸಾಗಿ ಇರುವಂತಿದೆ. ಇಡೀ ರಾತ್ರಿ ಮೈಕೈ ನೋವು ಮಾಡಿ ಹೇಳಿದ್ರೂ ಹಟ ಹಿಡಿದು ಹೋಗ್ತಾ ಇದಾಳೆ. ಇದಿಷ್ಟೇ ದೈಹಿಕ ನೋವಾದ್ರೆ ಸಹಿಸಿಕೊಳ್ಳಬಹುದು. ಆದರೆ, ಈ ಬಾಡಿ ಶೇಮಿಂಗ್ ಇದ್ಯಲ್ಲ- ಅದು ಮಾನಸಿಕವಾಗಿ ಭಾಳ ಆಘಾತ ನೀಡುತ್ತೆ.
ಚೀನಾ ಸರಕಾರವೇ ರಹಸ್ಯವಾಗಿ ಸೃಷ್ಟಿ ಮಾಡಿತಾ ಕೊರೊನಾ ವೈರಸ್?...
ಇವ್ಳ ಈ ರೋಗ ಶುರುವಾದರೆ ಸಾಕು, ನಾಲ್ಕೂ ದಿಕ್ಕಿನಲ್ಲಿ ಹಬ್ಬಿ ಹರಡಿದ ಆ ಕನ್ನಡಿಯಲ್ಲಿ ನೋಡೀ ನೋಡಿ ನನ್ನ ಅಣಕಿಸೋಕೆ ಶುರು ಮಾಡ್ತಾಳೆ. ಹೊಟ್ಟೆಯ ಆಕಾರಕ್ಕೆ ವಿಕಾರ ಎಂದು ಅರಚುತ್ತಾ, ಭುಜ ಸ್ಟಿಫ್ ಇಲ್ಲ, ಕೈ ಶೇಪಿಲ್ಲ, ಕಾಲಲ್ಲಿ ಕಾಲ್ ಕೆಜಿ ಮಾಂಸ ಇಲ್ಲ ಇತ್ಯಾದಿ ಶುರು ಹಚ್ಕೋತಾಳೆ. ಅಲ್ಲಾ ಸ್ವಾಮಿ, ಇವ್ಳನ್ನ ಹೊತ್ತು ತಿರುಗೋದಕ್ಕೆ ಇದೇನಾ ಮರ್ಯಾದಿ?
-ಐದು ತಿಂಗಳ ನಂತರ-
ಮನಸ್ಸಿನ ಸ್ವಗತ
ಅಬ್ಬಬ್ಬಬ್ಬಬ್ಬಾ... ಈ ದೇಹಕ್ಕೆ ಸಲುಗೆ ಕೊಟ್ಟಿದ್ದೇ ಹೆಚ್ಚಾಯ್ತು ನೋಡಿ. ಅದಕ್ಕೆ ಈ ಬಾರಿ ಅದೆಷ್ಟೇ ಕುಯ್ಯೋ ಮರ್ರ್ರೋ ಎಂದ್ರೂ ಕರುಣೆ ತೋರ್ಲಿಲ್ಲ. ಹೌದು, ಇಷ್ಟು ವರ್ಷ ಅದರ ಕಾಳಜಿ ಮಾಡದೆ ಬೇಕಾಬಿಟ್ಟಿ ಬಿಟ್ಟೆ ಅಂತ ಪೂರ್ತಿ ಸ್ವೇಚ್ಛೆಯ ಜೀವನ ಅಳವಡಿಸಿಕೊಂಡು ಬಿಟ್ಟಿತ್ತು. ಇದ್ನ ಪಳಗಿಸೋದು ಸಾಧ್ಯನೇ ಇಲ್ಲವೇನೋ ಅನ್ನೋಷ್ಟು ಜಡ್ಡುಗಟ್ಟಿತ್ತು. ಕೂತ್ರೆ ಕಾಲು ಮರಗಟ್ಟಿಸಿ ಸಿಟ್ಟು ಮಾಡೋದು, ನಡಿ ಅಂದ್ರೆ ನೋವು ಕೊಟ್ಟು ನೋಡೋದು, ಮಲಗಿದ್ರೆ ಬೆನ್ನು ನೋಯಿಸಿ ಮಜಾ ನೋಡೋದು. ಡ್ಯಾನ್ಸ್ ಮಾಡು ಅಂದ್ರೆ ಗೊಂಬೆ ತರ ತಿರುಗದೆ ನಿಂತು ಅವಮಾನಿಸೋದು. ಸಿಹಿ ಬೇಕು, ಮಸಾಲೆ ಬೇಕು, ಗರಿಗರಿಯಾಗಿರೋದು ಬೇಕು ಅಂತೆಲ್ಲ ಆರ್ಡರ್ ಬೇರೆ. ಒಟ್ನಲ್ಲಿ ನಾನು ಅದ್ರ ಮಾತು ಕೇಳ್ಬೇಕಿತ್ತು. ಈ ವರ್ಷ ಹಟಕ್ಕೆ ಬಿದ್ದೆ ನೋಡಿ- ಮೊದಮೊದಲು ಮೊಂಡು ಹಿಡೀತು. ನಂತರ ಗೋಗರೀತು. ನಿಧಾನವಾಗಿ ಅದಕ್ಕೂ ಅರ್ಥವಾಗ್ತಾ ಹೋಯ್ತು, ಇವ್ಳು ಬಗ್ಗಲ್ಲ... ಇವ್ಳು ಹೇಳಿದಂತೆ ಕೇಳೋದೊಂದೇ ದಾರಿ ಅಂತ. ಆಗ ತನ್ನಿಂತಾನೇ ಫ್ಲೆಕ್ಸಿಬಲಿಟಿ ಬಂತು. ಜಂಕ್ ಫುಡ್ ಬೇಕಂಥ ಆರ್ಡರ್ ಮಾಡ್ತಿತ್ತು. ಹೀಗೆ ಪೋಲಿ ಬಿದ್ದಿದ್ದನ್ನು ಕಟ್ಟಿ ಹಾಕ್ಬೇಕಂದ್ರೆ ಹೊಟ್ಟೆಗೆ ಕೇಳಿದ್ದು ಕೊಡದೆ ಸೊಪ್ಪು, ತರಕಾರಿ, ಕಾಳುಗಳು, ಹಣ್ಣು, ಮನೆಆಹಾರ ಇತ್ಯಾದಿಯನ್ನೇ ಕೊಡಬೇಕೆಂದು ಅಲ್ಲಿಯೂ ಸ್ಟ್ರಿಕ್ಟ್ ಆದೆ. ಎಂಥ ಹದಕ್ಕೆ ಬಂತು ಅಂತೀರಾ? ಆರೋಗ್ಯನೂ ಬಂತು, ಆಕಾರನೂ ಬಂತು. ಈಗ ತನ್ನ ಫ್ಲೆಕ್ಸಿಬಲಿಟಿ, ಆರೋಗ್ಯ ನೋಡಿ ಅದಕ್ಕೂ ಖುಷಿಯಾಗಿದೆ. ಹಾಗಾಗಿ, ಅದು ಈಗೀಗ ನನ್ನ ಗೆಳೆಯನಾಗಿಬಿಟ್ಟಿದೆ. ಹೀಗೆ ಮನಸ್ಸು ದೇಹ ಎರಡೂ ಒಂದಾದ ಮೇಲೆ ಕೇಳಬೇಕೇ?
ಜೀವ ಹೂವಾಗಿದೆ.. ಭಾವ ಜೇನಾಗಿದೆ, ಬಾಳು ಹಾಯಾಗಿದೆ....
- ರೇಶ್ಮಾ ರಾವ್