Asianet Suvarna News Asianet Suvarna News

AC Effect: ಮೈ ಕೂಲಾಗಿಸುವ ಎಸಿಯಿಂದ ತಲೆನೋವು!

ಬೇಸಿಗೆಯಲ್ಲಿ ಏರ್‌ ಕಂಡಿಷನರ್‌ ಎಷ್ಟು ಅಗತ್ಯವೆನಿಸುತ್ತದೆ ಎಂದರೆ ಅದಿಲ್ಲದೆ ಉಸಿರಾಡಿಸಲೂ ಕಷ್ಟವೆನಿಸುತ್ತದೆ. ಮೈ ಉರಿಯಾದಾಗ ಎಸಿ ಬೇಕೇ ಬೇಕು ಎನಿಸುತ್ತದೆ. ಆದರೆ, ಅದರಿಂದಲೂ ಸಾಕಷ್ಟು ಅಡ್ಡಪರಿಣಾಮಗಳು ಕಂಡುಬರುತ್ತವೆ. ತಲೆನೋವು, ಮೈಗ್ರೇನ್‌ ನಂತಹ ಸಮಸ್ಯೆಗಳೂ ಉಂಟಾಗಬಹುದು.
 

Headache migraine health issues caused by air conditioner
Author
Bangalore, First Published Apr 5, 2022, 6:49 PM IST

ಎಷ್ಟೇ ಸೆಖೆಯಾದರೂ ಕೆಲವರು ಏರ್‌ ಕಂಡಿಷನರ್‌ (Air Conditioner) ಬಳಕೆ ಮಾಡುವುದಿಲ್ಲ. ಏಕೆಂದರೆ, ಅವರಿಗೆ ಅದರಿಂದ ಅವರಿಗೆ ಭಾರೀ ಸಮಸ್ಯೆಯಾಗುತ್ತದೆ. ಮುಖ್ಯವಾಗಿ ತಲೆನೋವು ಕಾಡಬಹುದು. ದೇಹಕ್ಕೆ ಹಿತವೆನಿಸಿದರೂ ತಲೆಭಾರವಾಗಿ ಹಿಂಸೆಯಾಗಬಹುದು. ಅನೇಕ ಬಾರಿ ಇದು ನಮ್ಮೆಲ್ಲರ ಅನುಭವಕ್ಕೂ ಬಂದಿರುತ್ತದೆ. ಈ ಬಿರುಬೇಸಿಗೆಯಲ್ಲಿ ಎಸಿ ಬೇಕೇ ಬೇಕು ಎನಿಸುತ್ತದೆ. ಆದರೆ, ಅದರಿಂದಲೂ ಹಲವಾರು ಅಡ್ಡ ತೊಂದರೆಗಳು (Side Effects) ಉಂಟಾಗುತ್ತವೆ. ಎಲ್ಲರಿಗೂ ಸಮಸ್ಯೆ ಆಗಲಿಕ್ಕಿಲ್ಲ. ಆದರೆ, ಬಹಳಷ್ಟು ಜನರಿಗೆ ಏರ್‌ ಕಂಡಿಷನರ್‌ ನಿಂದ ಹಲವು ಸಮಸ್ಯೆಗಳು ಕಂಡುಬರುತ್ತವೆ. ಅವುಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು.

•    ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆ (Respiratory Problem)
ದೀರ್ಘ ಸಮಯ ಎಸಿಯಲ್ಲಿ ಇರುವುದರಿಂದ ರೆಸ್ಪಿರೇಟರಿ ವ್ಯವಸ್ಥೆ ಅಂದರೆ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಗಂಟಲು ಒಣಗುವುದು, ರೈನೈಟಿಸ್‌ ಅಥವಾ ಮೂಗು ಕಟ್ಟುವ ಸಮಸ್ಯೆ ಕಾಡಬಹುದು. ರೈನೈಟಿಸ್‌ ಎಂದರೆ, ಮೂಗಿನಲ್ಲಿರುವ ಮ್ಯೂಕಸ್‌ ಮೆಂಬ್ರೇನ್‌ ನಲ್ಲಿ ಸೋಂಕು ಉಂಟಾಗಬಹುದು. ಅಥವಾ ಅಲ್ಲಿ ಮೊದಲೇ ಸೋಂಕಿದ್ದರೆ ಅದನ್ನು ಹೆಚ್ಚಿಸಬಲ್ಲದು. ಇದು ವೈರಲ್‌ ಸೋಂಕು ಅಥವಾ ಅಲರ್ಜಿಕ್‌ ರಿಯಾಕ್ಷನ್‌ ಗೂ ಕಾರಣವಾಗಬಲ್ಲದು.

•    ಅಸ್ತಮಾ ಹಾಗೂ ಅಲರ್ಜಿ (Asthma and Allergy)
ಅಸ್ತಮಾ ಅಥವಾ ಅಲರ್ಜಿಯ ಸಮಸ್ಯೆ ಪದೇ ಪದೆ ನಿಮಗೆ ಬಾಧಿಸುತ್ತಿದ್ದರೆ ಎಸಿ ಬಳಕೆ ಉಚಿತವಲ್ಲ. ಅಂಥವರಿಗೆ ಎಸಿಯಿಂದ ಇನ್ನಷ್ಟು ಸಮಸ್ಯೆಯಾಗುತ್ತದೆ. ಸೂಕ್ಷ್ಮ ಜನರು ಮಾಲಿನ್ಯದಿಂದ ಬಚಾವಾಗಲು ಮನೆಯಲ್ಲೇ ಇರಲು ಯತ್ನಿಸುತ್ತಾರೆ. ಆದರೆ, ಮನೆಯಲ್ಲಿ ಸೆಖೆ ಎಂದು ಎಸಿ ಬಳಸುವುದು ಅವರ ಆರೋಗ್ಯಕ್ಕೆ ಹಾನಿಕರವಾಗುತ್ತದೆ. ಇನ್ನು ಕಚೇರಿಗಳಲ್ಲಿನ ಎಸಿಯಿಂದಲೂ ಅನೇಕರು ಆರೋಗ್ಯ ಹಾಳುಮಾಡಿಕೊಳ್ಳುತ್ತಾರೆ. ಎಸಿ ಸ್ವಚ್ಛವಾಗಿಲ್ಲದಿದ್ದರೆ ಒಬ್ಬರಿಗೆ ಬಂದಿರುವ ವೈರಲ್‌ ರೋಗ ಇನ್ನೊಬ್ಬರಿಗೆ ಹರಡುವುದು ಅಧಿಕ. ಅಸ್ತಮಾ ಹಾಗೂ ಅಲರ್ಜಿ ಸಮಸ್ಯೆ ಉಳ್ಳವರು ಎಸಿಯಿಂದ ದೂರವೇ ಇರಬೇಕು.

•    ಸೋಂಕುಕಾರಕ ರೋಗ (Infectious Disease)
ಹೆಚ್ಚು ಸಮಯ ಎಸಿಯಲ್ಲಿ ಇದ್ದಾಗ ನಮ್ಮ ಮೂಗಿನಲ್ಲಿರುವ ಪ್ಯಾಸೇಜ್‌ ಗಳು ಶುಷ್ಕವಾಗುತ್ತವೆ. ಇದರಿಂದ ಮ್ಯೂಕಸ್‌ ಮೆಂಬ್ರೇನ್‌ ಗೆ ಹಾನಿಯಾಗುವುದಲ್ಲದೆ, ಸೋಂಕುಕಾರಕ ರೋಗಗಳ ಅಪಾಯವೂ ಹೆಚ್ಚಾಗುತ್ತದೆ. ವೈರಲ್‌ ಸೋಂಕಿನ ಅಪಾಯವೂ ಅಧಿಕ.

ಎಸಿಯಿಂದ ಕೊರೋನಾ ಹರಡದಂತೆ ತಡೆಯಲು ಇಲ್ಲಿದೆ ಮಾರ್ಗ

•    ಡಿಹೈಡ್ರೇಷನ್‌ (Dehydration)
ಸಾಮಾನ್ಯ ವಾತಾವರಣದಲ್ಲಿರುವವರಿಗಿಂತ ಎಸಿಯಲ್ಲಿ ಇರುವವರಿಗೆ ಡಿಹೈಡ್ರೇಷನ್‌ ಸಮಸ್ಯೆ ಹೆಚ್ಚು. ಹೀಗಾಗಿ, ಎಸಿಯಲ್ಲಿರುವವರು ಹೆಚ್ಚು ನೀರನ್ನು ಕುಡಿಯಬೇಕು. ತಣ್ಣನೆಯ ವಾತಾವರಣ ಮಾಡಿಕೊಂಡಷ್ಟೂ ದೇಹ ಡಿಹೈಡ್ರೇಟ್‌ ಆಗುವುದು ಹೆಚ್ಚು.

•    ತಲೆನೋವು (Headache)
ಎಸಿಯಿಂದ ತಲೆನೋವು ಸಾಮಾನ್ಯವಾಗಿ ಬರುತ್ತದೆ. ಇದು ಮೈಗ್ರೇನ್‌ ಗೂ ಕಾರಣವಾಗಬಲ್ಲದು. ಡಿಹೈಡ್ರೇಷನ್‌ ನಿಂದಲೂ ಮೈಗ್ರೇನ್‌ (Migraine) ಉಂಟಾಗಬಹುದು. ಎಸಿ ಇರುವ ವಾತಾವರಣದಿಂದ ಹೊರಬಿದ್ದು ತಕ್ಷಣ ಬಿಸಿಲಿಗೆ ಬಂದರೆ ತಲೆನೋವಿನ ಸಮಸ್ಯೆ ಹೆಚ್ಚಾಗುತ್ತದೆ. ಒಂದೊಮ್ಮೆ ತಾವು ಎಸಿಯನ್ನು ಸರಿಯಾಗಿ ಮೆಂಟೇನ್‌ ಮಾಡಿಲ್ಲವಾದರೆ ಆಗಲೂ ತಲೆನೋವು ಕಾಣಿಸಿಕೊಳ್ಳುತ್ತದೆ. ಎಸಿಯಿಂದ ಮೂಗಿನ ಅಕ್ಕಪಕ್ಕ, ಹಣೆಯ ಭಾಗದಲ್ಲಿರುವ ಸೈನಸ್ ಕುಳಿಗಳು ಶುಷ್ಕವಾಗುತ್ತವೆ. ಇದರಿಂದಲೂ ತಲೆನೋವು ಬರುತ್ತದೆ. ಸೈನಸ್‌ (Sinus) ಕುಳಿಗಳು ಕಟ್ಟಿಕೊಳ್ಳಬಹುದು, ಅಲ್ಲಿ ಸೋಂಕೂ ಆಗಬಹುದು. ಆಗ ಮುಖದ ಒಂದು ಭಾಗ ಅಥವಾ ಇಡೀ ಮುಖ ನೋವಾದಂತೆ ಭಾಸವಾಗಬಹುದು.

•    ಕಣ್ಣುಗಳು ಶುಷ್ಕವಾಗುವುದು (Dry Eye)
ನಿಮಗೆ ಡ್ರೈ ಐ ಸಮಸ್ಯೆ ಇದ್ದರೆ ಹೆಚ್ಚು ಸಮಯ ಎಸಿಯಲ್ಲಿ ಇರುವುದು ಉತ್ತಮವಲ್ಲ. ಏಕೆಂದರೆ, ಅದರಿಂದ ಕಣ್ಣುಗಳು ತೀವ್ರವಾಗಿ ಶುಷ್ಕವಾಗುತ್ತವೆ. ಕಣ್ಣುಗಳಲ್ಲಿ ಒಂದು ರೀತಿಯ ಹಿಂಸೆಯಾಗುತ್ತದೆ.

ಎಸಿ ಮಾಡೋ ಅನಾಹುತ ಒಂದೆರಡಲ್ಲ

•    ಚರ್ಮ ಶುಷ್ಕವಾಗುವುದು (Dry Skin)
ಬರೀ ಕಣ್ಣುಗಳಷ್ಟೇ ಅಲ್ಲ, ಚರ್ಮವೂ ಎಸಿಯಿಂದ ಶುಷ್ಕವಾಗುತ್ತದೆ. ಕೆಲವರಿಗೆ ಚರ್ಮದ ಅಲರ್ಜಿಯೂ ಉಂಟಾಬಹುದು. ಚರ್ಮ ಬಿರುಕು ಬಿಡುತ್ತದೆ. ಸೆನ್ಸಿಟಿವ್‌ ಚರ್ಮ ಹೊಂದಿರುವವರು ಈ ಕುರಿತು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. 

Follow Us:
Download App:
  • android
  • ios