18 ರಿಂದ 59 ವರ್ಷದ ವಯೋಮಾನದವರಿಗೆ 75 ದಿನಗಳ ಕಾಲ ಉಚಿತವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಬೂಸ್ಟರ್‌ ಡೋಸು ನೀಡುವ ವಿಶೇಷ ಅಭಿಯಾನಕ್ಕೆ ಕೇಂದ್ರ ಸರ್ಕಾರ ಶುಕ್ರವಾರ (ಜು.15) ಚಾಲನೆ ನೀಡಿದೆ.

ನವದೆಹಲಿ: 18 ರಿಂದ 59 ವರ್ಷದ ವಯೋಮಾನದವರಿಗೆ 75 ದಿನಗಳ ಕಾಲ ಉಚಿತವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಬೂಸ್ಟರ್‌ ಡೋಸು ನೀಡುವ ವಿಶೇಷ ಅಭಿಯಾನಕ್ಕೆ ಕೇಂದ್ರ ಸರ್ಕಾರ ಶುಕ್ರವಾರ (ಜು.15) ಚಾಲನೆ ನೀಡಿದೆ. ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ 'ಕೋವಿಡ್‌ ಲಸಿಕಾಕರಣ ಅಮೃತ ಮಹೋತ್ಸವ' ಅಭಿಯಾನಕ್ಕೆ ಚಾಲನೆ ನೀಡಿದ್ದು, ಶುಕ್ರವಾರ 18 ರಿಂದ 59 ವರ್ಷದ 13.18 ಲಕ್ಷ ಜನರು ಬೂಸ್ಟರ್‌ ಡೋಸು ಪಡೆದುಕೊಂಡಿದ್ದಾರೆ. ಸೆಪ್ಟೆಂಬರ್‌ 30ರವರೆಗೂ ಈ ಅಭಿಯಾನ ಮುಂದುವರೆಯಲಿದೆ.

ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ ಕಾಲೇಜು, ರೇಲ್ವೆ ನಿಲ್ದಾಣ, ಕಚೇರಿಗಳಲ್ಲಿ ಬೂಸ್ಟರ್‌ ಡೋಸು ಲಸಿಕೆ ಒದಗಿಸಬೇಕು. ಇದರೊಂದಿಗೆ ಅಮರ್‌ನಾಥ್‌ ಯಾತ್ರೆ, ಚಾರ್‌ಧಾಮ್‌ ಯಾತ್ರಾರ್ಥಿಗಳಿಗಾಗಿಯೂ ಮಾರ್ಗದಲ್ಲಿ ವಿಶೇಷ ಲಸಿಕಾ ಕೇಂದ್ರ ತೆರೆದು ಬೂಸ್ಟರ್‌ ಡೋಸು ನೀಡಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಡೆಲ್ಟಾ, ಓಮಿಕ್ರಾನ್ ವೈರಸ್ ವಿರುದ್ಧ ಕೋವಾಕ್ಸಿನ್ ಬೂಸ್ಟರ್ ಡೋಸ್ ಪರಿಣಾಮಕಾರಿ, ICMR!

ಬೂಸ್ಟರ್‌ ಡೋಸ್‌ನ್ನು ಉಚಿತವಾಗಿ ನೀಡುವ ಮೂಲಕ ಸ್ವಾತಂತ್ರ್ಯದ ಅಮೃತ ಮಹೋತ್ಸದ ಅಂಗವಾಗಿ ದೇಶದ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಭರ್ಜರಿ ಕೊಡುಗೆ ಘೋಷಿಸಿದೆ. ಈವರೆಗೆ 18-59ರ ವಯೋಮಿತಿಯವರು ಶುಲ್ಕ ಕೊಟ್ಟು ಖಾಸಗಿ ಆಸ್ಪತ್ರೆಗಳ ಮೂಲಕ ಪಡೆಯಬೇಕಿದ್ದ ಕೋವಿಡ್‌ ಬೂಸ್ಟರ್‌ ಡೋಸ್‌ ಇನ್ನು ಸರ್ಕಾರಿ ಆಸ್ಪತ್ರೆಗಳ ಮೂಲಕ ಉಚಿತವಾಗಿ ಪಡೆಯಬಹುದಾಗಿದೆ. 75 ದಿನಗಳ ಕಾಲ ದೇಶಾದ್ಯಂತ ಬೂಸ್ಟರ್‌ ಡೋಸ್ ಲಭ್ಯವಿದ್ದು, ಎರಡನೇ ಡೋಸ್‌ ಪಡೆದ 6 ತಿಂಗಳಾದವರು ಇದೀಗ ಮೂರನೇ ಡೋಸ್‌ ಕೂಡಾ ಉಚಿತವಾಗಿ ಪಡೆದುಕೊಳ್ಳಬಹುದು.

ಈ ಕುರಿತು ಟ್ವೀಟ್‌ ಮಾಡಿರುವ ಕೇಂದ್ರ ಆರೋಗ್ಯ ಖಾತೆ ಸಚಿವ ಮನ್ಸುಖ್‌ ಮಾಂಡವೀಯ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಭಾಗವಾಗಿ 18 ವರ್ಷ ಮೇಲ್ಪಟ್ಟಎಲ್ಲರಿಗೂ ಉಚಿತವಾಗಿ ಕೋವಿಡ್‌ ಬೂಸ್ಟರ್‌ ಡೋಸ್‌ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಜು.15ರಿಂದ 75 ದಿನಗಳ ಕಾಲ ಈ ವಿಶೇಷ ಸೌಲಭ್ಯ ಲಭ್ಯವಿರಲಿದೆ. ಈ ನಿರ್ಧಾರ ಕೈಗೊಂಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ನಿರ್ಧಾರವು ಕೋವಿಡ್‌ ವಿರುದ್ಧ ದೇಶದ ಅಭಿಯಾನವನ್ನು ಇನ್ನಷ್ಟು ಬಲಯುತಗೊಳಿಸಲಿದೆ ಮತ್ತು ರಕ್ಷಣೆಯ ಇನ್ನೊಂದು ಪದರವನ್ನು ಒದಗಿಸಲಿದೆ. ಹೀಗಾಗಿ ಎಲ್ಲಾ ಅರ್ಹರೂ ಲಸಿಕೆ ಪಡೆಯುವಂತೆ ಕೋರುತ್ತೇನೆ ಎಂದು ಹೇಳಿದ್ದರು.

ಹೈದರಾಬಾದ್ ಮೂಲದ ಬೂಸ್ಟರ್ ಡೋಸ್‌ ಕಾರ್ಬೆವಾಕ್ಸ್ ಗೆ ಅನುಮತಿ ನೀಡಿದ ಡಿಸಿಜಿಐ

ದೇಶದಲ್ಲಿ 18-59ರ ವಯೋಮಾನದ 77 ಕೋಟಿ ಜನರು ಕೋವಿಡ್‌ ಬೂಸ್ಟರ್‌ ಡೋಸ್‌ ಪಡೆಯುವ ಅರ್ಹತೆ ಹೊಂದಿದ್ದಾರೆ. ಆದರೆ ಇದನ್ನು ಸರ್ಕಾರ ಉಚಿತವಾಗಿ ನೀಡದ ಕಾರಣ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರವೇ ಶುಲ್ಕ ಕೊಟ್ಟು ಖರೀದಿಸಬೇಕೆಂಬ ನಿಯಮ ವಿಧಿಸಿದ್ದ ಕಾರಣ 77 ಕೋಟಿ ಜನರಲ್ಲಿ ಕೇವಲ ಶೇ.1ರಷ್ಟುಜನರು ಮಾತ್ರವೇ ಬೂಸ್ಟರ್‌ ಡೋಸ್‌ ಪಡೆದುಕೊಂಡಿದ್ದರು.

ಇನ್ನು 60 ವರ್ಷ ಮೇಲ್ಪಟ್ಟವರು, ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಉಚಿತವಾಗಿ ಬೂಸ್ಟರ್‌ ಡೋಸ್‌ ನೀಡಲಾಗುತ್ತಿದ್ದರೂ, ಅರ್ಹ 16.80 ಕೋಟಿ ಜನರ ಪೈಕಿ ಶೇ.25.84ರಷ್ಟು ಜನರು ಮಾತ್ರವೆ ಲಸಿಕೆ ಪಡೆದುಕೊಂಡಿದ್ದಾರೆ. ದೇಶದಲ್ಲಿ ಇದುವರೆಗೂ ಶೇ.96ರಷ್ಟುಅರ್ಹ ಜನರು ಮೊದಲ ಡೋಸ್‌ ಮತ್ತು ಶೇ.87ರಷ್ಟುಜನರು ಎರಡೂ ಡೋಸ್‌ ಪಡೆದುಕೊಂಡಿದ್ದಾರೆ.