Asianet Suvarna News Asianet Suvarna News

ಡೆಲ್ಟಾ, ಓಮಿಕ್ರಾನ್ ವೈರಸ್ ವಿರುದ್ಧ ಕೋವಾಕ್ಸಿನ್ ಬೂಸ್ಟರ್ ಡೋಸ್ ಪರಿಣಾಮಕಾರಿ, ICMR!

  • ದೇಶದಲ್ಲಿ ಕೊರೋನಾ ಪ್ರಕರಣಗಳ ಹೆಚ್ಚಳದ ಬೆನ್ನಲ್ಲೇ ICMR ಪ್ರಕಟಣೆ
  • ರೂಪಾಂತರಿ ವೈರಸ್ ವಿರುದ್ಧ ಹೋರಾಡಲು ಬೂಸ್ಟರ್ ಡೋಸ್ ಅಗತ್ಯ
  • ಡೆಲ್ಟಾ, ಓಮಿಕ್ರಾನ್ ರೂಪಾಂತರಿ ವಿರುದ್ದ ಪರಿಣಾಮಕಾರಿ ಅಸ್ತ್ರ
Covaxin booster Dose protective efficacy against COVID 19 delta Omicron variants study by ICMR Bharat Biotech ckm
Author
Bengaluru, First Published Jun 15, 2022, 7:02 PM IST

ನವದೆಹಲಿ(ಜೂ.15): ಕೊರೋನಾ ಪ್ರಕರಣ ಸಂಖ್ಯೆ ಭಾರತೀಯರ ಆತಂಕ ಹೆಚ್ಚಿಸುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್ ನಿಯಂತ್ರಿಸಲು ಕಠಿಣ ನಿಯಮಗಳನ್ನು ಜಾರಿಗೆ ಮಾಡುತ್ತಿದೆ. ಇದೀಗ ಐಸಿಎಂಆರ್ ಸಿಹಿ ಸುದ್ದಿಯೊಂದನ್ನು ನೀಡಿದೆ. ಕೋವಾಕ್ಸಿನ್ ಬೂಸ್ಟರ್ ಡೋಸ್ ಕೊರೋನಾ ರೂಪಾಂತರಿ ವೈರಸ್‌ಗಳಾದ ಡೆಲ್ಟಾ, ಓಮಿಕ್ರಾನ್ ವಿರುದ್ಧ ಪರಿಣಾಮಕಾರಿ ಎಂದಿದೆ.

ಐಸಿಎಂಆರ್ ಹಾಗೂ ಭಾರತ್ ಬಯೋಟೆಕ್ ನಡೆಸಿದ ಅಧ್ಯಯನದಲ್ಲಿ ಕೋವಾಕ್ಸಿನ್ ಬೂಸ್ಟರ್ ಡೋಸ್ ಲಸಿಕೆಯು ಕೋವಿಡ್ 19 ಡೆಲ್ಟಾ ವೇರಿಯೆಂಟ್ ಹಾಗೂ ಓಮಿಕ್ರಾನ್ ರೂಪಾಂತರಿ ವೈರಸ್‌ಗಳಾದ BA.1.1 ಹಾಗೂ BA.2 ವಿರುದ್ಧವೂ ಪರಿಣಾಮಕಾರಿಯಾಗಿದೆ ಎಂದಿದೆ.

ಕರ್ನಾಟಕ ಸೇರಿ 5 ರಾಜ್ಯದಲ್ಲಿ ಕೋವಿಡ್ ಸ್ಫೋಟ, ಒಂದೇ ದಿನ 8,822 ಕೇಸ್ !

ಎರಡು ಡೋಸ್ ಬಳಿಕ 3ನೇ ಡೋಸ್ ಅಂದರೆ ಬೂಸ್ಟರ್ ಡೋಸ್ ಪಡೆಯುವುದು ಅಗತ್ಯವಾಗಿದೆ. ಸದ್ಯ ದೇಶದಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಬೂಸ್ಟರ್ ಡೋಸ್ ಲಸಿಕೆ ವೈರಸ್‌ಗಳಿಂದ ಸುರಕ್ಷತೆ ಪ್ರಮಾಣವನ್ನು ಹೆಚ್ಚಿಸಲಿದೆ ಎಂದು ಅಧ್ಯಯನ ವರದಿ ಹೇಳಿದೆ.

ಮಿಶ್ರ ಬೂಸ್ಟರ್‌ ಡೋಸ್‌ನಿಂದ ಸಕಾರಾತ್ಮಕ ಫಲಿತಾಂಶ
ಮಿಶ್ರ ಬೂಸ್ಟರ್‌ ಡೋಸ್‌ ಪರಿಣಾಮಕಾರಿಯೇ ಎಂದು ಸಂಶೋಧನೆ ನಡೆಸಿದ್ದ ವೆಲ್ಲೂರಿನ ಕ್ರಿಶ್ಚಿಯನ್‌ ಮೆಡಿಕಲ್‌ ಕಾಲೇಜು, ಇದರ ಫಲಿತಾಂಶ ಸಕಾರಾತ್ಮಕವಾಗಿದೆ ಮತ್ತು ಈ ಕುರಿತು ಕೇಂದ್ರೀಯ ಸಂಸ್ಥೆಗಳಿಂದ ಮೌಲ್ಯಮಾಪನ ನಡೆಯುತ್ತಿದೆ ಎಂದು ಹೇಳಿದೆ.

‘ನಾವು ಈ ಸಂಶೋಧನೆಯ ಫಲಿತಾಂಶವನ್ನು ಲಸಿಕಾಕರಣ ಸಂಬಂಧಿಸಿದ ರಾಷ್ಟ್ರೀಯ ತಂತ್ರಜ್ಞಾನ ಸಲಹಾ ಸಮಿತಿ ಮತ್ತು ನಮ್ಮ ಮಧ್ಯಂತರ ವಿಶ್ಲೇಷಣೆಯನ್ನು ಭಾರತ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಸಲ್ಲಿಸಿದ್ದೇವೆ. ಎನ್‌ಟಿಎಜಿಐ ನಮ್ಮ ಸಂಶೋಧನೆಗಳನ್ನು ಆಲಿಸಿದೆ. ಇನ್ನೂ ನಿರ್ಧಾರ ತೆಗೆದುಕೊಳ್ಳುವುದು ಬಾಕಿ ಇದೆ ಎಂದು ಅಧ್ಯಯನದ ಪ್ರಧಾನ ತನಿಖಾಧಿಕಾರಿ ಡಾ.ವಿನ್ಸಿ ರೋಸ್‌ ಹೇಳಿದ್ದಾರೆ.

ಕೋವಿಡ್‌ನಿಂದ ಆಸ್ಪತ್ರೆ ದಾಖಲಾಗುವ ಸಂಖ್ಯೆ ಏರಿಕೆ ಬೆನ್ನಲ್ಲೇ ಕೇಂದ್ರದಿಂದ ಮಹತ್ವದ ಸೂಚನೆ!

ಕೋರ್ಬೆವ್ಯಾಕ್ಸ್‌ ಲಸಿಕೆ ಮಿಕ್ಸ್‌ ಬೂಸ್ಟರ್‌ಗೆ ಕೇಂದ್ರ ಒಪ್ಪಿಗೆ
ದೇಶದಲ್ಲಿ 5ರಿಂದ 18 ವರ್ಷದ ಮಕ್ಕಳಿಗೆ ಮಾತ್ರ ನೀಡಲಾಗುತ್ತಿದ್ದ ಕೋರ್ಬೆವ್ಯಾಕ್ಸ್‌ ಲಸಿಕೆಯನ್ನು ಇನ್ನುಮುಂದೆ ಯಾವುದೇ ಲಸಿಕೆ ಪಡೆದ ವಯಸ್ಕರಿಗೂ ಬೂಸ್ಟರ್‌ ಡೋಸ್‌ ಆಗಿ ನೀಡಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಒಪ್ಪಿಗೆ ನೀಡಿದೆ. ಮೊದಲೆರಡು ಡೋಸ್‌ಗಳನ್ನು ಕೋವಿಶೀಲ್ಡ್‌ ಅಥವಾ ಕೋವ್ಯಾಕ್ಸಿನ್‌ ಪಡೆದಿದ್ದರೂ 3ನೇ ಡೋಸ್‌ ಕೋರ್ಬೆವ್ಯಾಕ್ಸ್‌ ನೀಡಬಹುದು ಎಂದು ಅನುಮತಿ ನೀಡಲಾಗಿದೆ.

ಇದರೊಂದಿಗೆ ದೇಶದಲ್ಲಿ ಇದೇ ಮೊದಲ ಬಾರಿ ಕೊರೋನಾ ಲಸಿಕೆಯನ್ನು ಮಿಶ್ರಣ ಮಾಡಲು ಅನುಮತಿ ನೀಡಿದಂತಾಗಿದೆ. ಈವರೆಗೆ ಬೂಸ್ಟರ್‌ ಡೋಸ್‌ (3ನೇ ಡೋಸ್‌) ಆಗಿ ಮೊದಲೆರಡು ಡೋಸ್‌ ಪಡೆದ ಲಸಿಕೆಯನ್ನೇ ಪಡೆಯಬೇಕಿತ್ತು. ಈಗ ಭಿನ್ನ ಲಸಿಕೆಗೆ ಅನುಮತಿ ನೀಡಲಾಗಿದೆ. ಕೋರ್ಬೆವ್ಯಾಕ್ಸ್‌ ಲಸಿಕೆಯ ಬೂಸ್ಟರ್‌ ಡೋಸ್‌ ನೀಡಲು ಮೊದಲೆರಡು ಡೋಸ್‌ ಪಡೆದು ಆರು ತಿಂಗಳು ಆಗಿರಬೇಕು ಎಂದು ಡಿಸಿಜಿಐ ಹೇಳಿದೆ.

ಹೈದರಾಬಾದ್‌ ಮೂಲದ ಬಯೋಲಾಜಿಕಲ್‌ ಇ ಕಂಪನಿ ಕೋರ್ಬೆವ್ಯಾಕ್ಸ್‌ ಕೊರೋನಾ ಲಸಿಕೆ ಅಭಿವೃದ್ಧಿಪಡಿಸಿದೆ. ಇತ್ತೀಚೆಗೆ ಅದು ಬೂಸ್ಟರ್‌ ಡೋಸ್‌ ಟ್ರಯಲ್‌ ಪೂರ್ಣಗೊಳಿಸಿ ವರದಿಯನ್ನು ಡಿಸಿಜಿಐಗೆ ಸಲ್ಲಿಸಿತ್ತು. ಕಂಪನಿ ಈಗಾಗಲೇ 10 ಕೋಟಿ ಡೋಸ್‌ ಲಸಿಕೆ ಉತ್ಪಾದಿಸಿ ಕೇಂದ್ರ ಸರ್ಕಾರಕ್ಕೆ ನೀಡಿದೆ. 
 

Follow Us:
Download App:
  • android
  • ios