ಥೈರಾಯ್ಡ್ ಮಟ್ಟ ದೇಹದಲ್ಲಿ ಸಾಕಷ್ಟಿಲ್ಲವಾದರೆ ಬೆಳಗ್ಗೆ ಎದ್ದಾಕ್ಷಣ ಹೀಗೆಲ್ಲ ಆಗುತ್ತೆ, ಗಮನಿಸಿ
ದೇಹದಲ್ಲಿ ಥೈರಾಯ್ಡ್ ಮಟ್ಟ ಕಡಿಮೆಯಾದಾಗ ಅನೇಕ ಸಮಸ್ಯೆಗಳು ತಲೆದೋರುತ್ತವೆ. ರೋಗವಲ್ಲದ ಸಮಸ್ಯೆಗಳಿಂದ ಜೀವನ ಹೈರಾಣಾಗುತ್ತದೆ. ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು. ಅದರಲ್ಲೂ ಬೆಳಗ್ಗೆ ಎದ್ದಾಕ್ಷಣ ಕೆಲವು ತೊಂದರೆಗಳು ಉಂಟಾಗುತ್ತಿದ್ದರೆ ಥೈರಾಯ್ಡ್ ಮಟ್ಟ ಕುಸಿದಿರುವ ಲಕ್ಷಣವಾಗಿರಬಹುದು.
ಹೈಪೋಥೈರಾಯ್ಡಿಸಂ ಇಂದು ಅತ್ಯಂತ ಸಾಮಾನ್ಯ ಸಮಸ್ಯೆಯಾಗಿದೆ. ನೀವು ಯಾವುದೇ ತೊಂದರೆಗೆಂದು ವೈದ್ಯರ ಬಳಿ ಹೋದರೂ ಥೈರಾಯ್ಡ್ ಟೆಸ್ಟ್ ಮಾಡಿಸುವುದು ಕಂಡುಬರುತ್ತದೆ. ಥೈರಾಯ್ಡ್ ಗ್ರಂಥಿಗಳು ದೇಹದ ಅಗತ್ಯ ಪೂರೈಸುವಷ್ಟು ಹಾರ್ಮೋನ್ ಅನ್ನು ಸ್ರವಿಸದಿದ್ದರೆ ಉಂಟಾಗುವ ಈ ಸಮಸ್ಯೆಯಿಂದ ಇತರ ಅನೇಕ ಅನಾರೋಗ್ಯಗಳೂ ಕಾಡುವುದರಿಂದ ಒಂದಿಲ್ಲೊಮ್ಮೆ ಪರೀಕ್ಷೆ ಮಾಡಿಸಬೇಕಾಗುತ್ತದೆ. ಒಂದು ಅಧ್ಯಯನದ ಪ್ರಕಾರ, ನಮ್ಮ ದೇಶದ ಶೇಕಡ 12ರಷ್ಟು ಜನರಲ್ಲಿ ಹೈಪೋಥೈರಾಯ್ಡಿಸಂ ಇದೆ. ಅದರಲ್ಲೂ ಮಹಿಳೆಯರಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ. ಪುರುಷರಿಗಿಂತ ಎಂಟು ಪಟ್ಟು ಹೆಚ್ಚು ಅವರು ಥೈರಾಯ್ಡ್ ಸಮಸ್ಯೆಗೆ ತುತ್ತಾಗುವ ಸಾಧ್ಯತೆಯಿದೆ. ಥೈರಾಯ್ಡ್ ಹಾರ್ಮೋನ್ ದೇಹದ ಅಗತ್ಯಕ್ಕಿಂತ ಕಡಿಮೆಯಾದಾಗ ಮೆಟಬಾಲಿಸಂ ಕ್ರಿಯೆ ನಿಧಾನವಾಗುತ್ತದೆ. ಇದರಿಂದ ದೇಹದ ಹಲವು ಭಾಗಗಳ ಬೆಳವಣಿಗೆ ಅಥವಾ ರಿಪೇರಿ ಕಾರ್ಯವೂ ನಿಧಾನವಾಗುತ್ತದೆ. ಥೈರಾಯ್ಡ್ ಗ್ರಂಥಿ ಸಕ್ರಿಯವಾಗಿಲ್ಲದೆ ಇರುವಾಗ ಈ ಸ್ಥಿತಿ ಉಂಟಾಗುತ್ತಿದ್ದು, ಸುಸ್ತು, ತೂಕ ಹೆಚ್ಚಳದಂತಹ ಅನೇಕ ಲಕ್ಷಣಗಳು ಗೋಚರಿಸುತ್ತವೆ. ಅದರಲ್ಲೂ ಮಹಿಳೆಯರಿಗೆ ಬೆಳಗಿನ ಸಮಯದಲ್ಲಿ ಕೆಲವು ವಿಶಿಷ್ಟ ಸಮಸ್ಯೆಗಳು ಕಾಡುವುದುಂಟು. ಇವು ಹೈಪೋಥೈರಾಯ್ಡಿಸಂ ಲಕ್ಷಣವಾಗಿರಬಹುದು. ಹೀಗಾಗಿ, ಅವುಗಳನ್ನು ಸೂಕ್ಷ್ಮವಾಗಿ ಗಮನಿಸಿ ಎಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ.
• ಸುಸ್ತು (Tiredness)
ತಜ್ಞರ ಪ್ರಕಾರ, ಹೈಪೋಥೈರಾಯ್ಡಿಸಂ (Hypothyroidism) ಅನೇಕ ಲಕ್ಷಣಗಳನ್ನು (Signs) ಹೊಂದಿದೆ. ಅವುಗಳಲ್ಲಿ ಬೆಳಗ್ಗಿನ (Morning) ವೇಳೆಯಲ್ಲಿ ಕಂಡುಬರುವ ಪ್ರಮುಖ ಅಂಶವೆಂದರೆ ಸುಸ್ತು. ನೀವು ಬೆಳಗ್ಗೆ ಎದ್ದಾಗಲಿನಿಂದಲೂ ಒಂದು ರೀತಿಯ ಸುಸ್ತು, ಏನೂ ಮಾಡಲಾಗದ ಜಡತ್ವ ಅನುಭವಿಸುತ್ತಿದ್ದರೆ ಗಮನ ಹರಿಸಿ. ಥೈರಾಯ್ಡ್ ಹಾರ್ಮೋನ್ ಎನರ್ಜಿಯ (Energy) ಸಮತೋಲನದ ಮೇಲೆ ಪರಿಣಾಮ ಬೀರುವುದರಿಂದ ನಿಮ್ಮ ವಿಶ್ರಾಂತಿಯ ವಿಧಾನದ ಮೇಲೆ ಪ್ರಭಾವ ಉಂಟಾಗುತ್ತದೆ. ಒಂದೊಮ್ಮೆ ಈ ಹಾರ್ಮೋನ್ ದೇಹದಲ್ಲಿ ಹೆಚ್ಚಾದರೆ ಹಿಂಜರಿಕೆ, ಭಯ, ಜಿಗುಪ್ಸೆ ಉಂಟಾಗುತ್ತದೆ. ಕಡಿಮೆಯಾದರೆ ತೀವ್ರ ಸುಸ್ತನ್ನು ಉಂಟುಮಾಡುತ್ತದೆ.
200ಕ್ಕೂ ಹೆಚ್ಚು ಕೋವಿಡ್ ಲಸಿಕೆ ಹಾಕಿಸಿಕೊಂಡ ಜರ್ಮನ್ ವ್ಯಕ್ತಿ, ಅಡ್ಡಪರಿಣಾಮಗಳಿಲ್ಲ ಎಂದ ಅಧ್ಯಯನ
• ಚಳಿಯ (Cold) ಅನುಭವ
ಬೆಳಗ್ಗೆ ಎದ್ದಾಕ್ಷಣ ನಿಮಗೆ ಚಳಿಯ ಅನುಭವವಾಗುತ್ತಿದ್ದರೆ ಎಚ್ಚರಿಕೆ ತೆಗೆದುಕೊಳ್ಳಿ. ದೇಹದಲ್ಲಿ ಉಷ್ಣಾಂಶ (Heat) ಕಡಿಮೆ ಪ್ರಮಾಣದಲ್ಲಿ ಉತ್ಪಾದನೆಯಾಗುವುದರಿಂದ ಹೆಚ್ಚು ಚಳಿ ಎನಿಸುತ್ತದೆ. ಅಧ್ಯಯನಗಳ ಪ್ರಕಾರ, ಈ ಸಮಸ್ಯೆಯುಳ್ಳ ಶೇಕಡ 40ರಷ್ಟು ಜನ ಚಳಿಯ ವಾತಾವರಣಕ್ಕೆ ಸಾಮಾನ್ಯರಿಗಿಂತ ಹೆಚ್ಚು ಸೂಕ್ಷ್ಮವಾಗಿ ಸ್ಪಂದಿಸುತ್ತಾರೆ.
• ದೇಹದಲ್ಲಿ ನೋವು (Pain)
ಹಾರ್ಮೋನ್ (Hormone) ಕಡಿಮೆ ಮಟ್ಟದಲ್ಲಿರುವಾಗ ದೇಹದಲ್ಲಿ ನೋವು ಹೆಚ್ಚಾಗುತ್ತದೆ. ಮಾಂಸಖಂಡಗಳಲ್ಲಿ ನೋವು, ಮಂಡಿ, ಸಂದುಗಳಲ್ಲಿ ನೋವು ಹೆಚ್ಚಾಗುತ್ತದೆ. ಈ ಸಮಯದಲ್ಲಿ ಮಾಂಸಖಂಡಗಳ (Muscles) ಶಕ್ತಿ ಕಡಿಮೆಯಾಗಿರುತ್ತದೆ. ಪರಿಣಾಮವಾಗಿ, ದೇಹದ ಕೀಲುನೋವು ಸಹ ಅಧಿಕವಾಗುತ್ತದೆ.
• ತೂಕ ಹೆಚ್ಚುವುದು (Weight Gain)
ಮಹಿಳೆಯರು ಏಕಾಏಕಿ ತೂಕ ಹೆಚ್ಚುವುದು ಹೈಪೋಥೈರಾಯ್ಡಿಸಂನ ಪ್ರಮುಖ ಲಕ್ಷಣವಾಗಿದೆ. ಥೈರಾಯ್ಡ್ ಮಟ್ಟ (Level) ಕಡಿಮೆ ಇರುವಾಗ ಮೆಟಬಾಲಿಸಂ ನಿಧಾನಗೊಳ್ಳುವುದರಿಂದ ಕ್ಯಾಲರಿಯನ್ನು (Calorie) ಕರಗಿಸುವ ಪ್ರಕ್ರಿಯೆಯೂ ಕುಂಠಿತಗೊಳ್ಳುತ್ತದೆ. ಅಧ್ಯಯನಗಳ ಪ್ರಕಾರ, ಈ ಸಮಸ್ಯೆ ಆರಂಭವಾದ ಒಂದು ವರ್ಷದಲ್ಲಿ ಬಹಳಷ್ಟು ಮಂದಿ 7-14 ಕೆಜಿ ತೂಕ ಹೆಚ್ಚುತ್ತಾರೆ.
ಬೆಳಗ್ಗೆದ್ದ ಕೂಡ್ಲೇ ನೆನೆಸಿದ ಒಣದ್ರಾಕ್ಷಿ ಸೇವಿಸೋ 10 ಪ್ರಯೋಜನಗಳು..
• ಖಿನ್ನತೆ (Depression)
ಯಾವುದರಲ್ಲೂ ಆಸಕ್ತಿ (Interest) ಇಲ್ಲದಂತಾಗುತ್ತದೆ. ಮುಖ್ಯವಾಗಿ, ಬೆಳಗ್ಗೆ ಎದ್ದ ಬಳಿಕ ಯಾವ ಕೆಲಸ ಮಾಡಲೂ ಉತ್ಸಾಹವಿಲ್ಲದಂತಾಗುತ್ತದೆ. ಇದಕ್ಕೆ ನಿಖರ ಅಂಶ ಸಾಬೀತಾಗಿಲ್ಲವಾದರೂ ಕುಗ್ಗಿರುವ ಎನರ್ಜಿ ಮತ್ತು ಆರೋಗ್ಯದ (Health) ಮಟ್ಟವೇ ಸಾಮಾನ್ಯ ಕಾರಣವೆಂದು ಹೇಳಲಾಗುತ್ತದೆ. ಅಧ್ಯಯನಗಳ ಪ್ರಕಾರ, ಹೆರಿಗೆ ಬಳಿಕ ಹಾರ್ಮೋನ್ ಮಟ್ಟದಲ್ಲಿ ತೀವ್ರ ವ್ಯತ್ಯಾಸವಾಗುತ್ತದೆ. ಹೀಗಾಗಿಯೇ ಈ ಸಮಯದಲ್ಲಿ ಸನ್ನಿ ಅಥವಾ ಖಿನ್ನತೆ ಉಂಟಾಗುವುದು ಹೆಚ್ಚು.
• ಕೂದಲು (Hair) ಉದುರುವುದು
ವಿಪರೀತವಾಗಿ ಕೂದಲು ಉದುರುತ್ತಿದ್ದರೆ ಅಲಕ್ಷ್ಯ ಬೇಡ. ಮೆಟಬಾಲಿಸಂ ಕ್ರಿಯೆ ನಿಧಾನವಾಗುವುದರಿಂದ ಕೂದಲಿನ ಕೋಶಗಳು ನವೀಕರಣಗೊಳ್ಳುವುದು ಸ್ಥಗಿತವಾಗುತ್ತದೆ. ಜತೆಗೆ, ಕೆಲವರಲ್ಲಿ ಒರಟಾದ, ನಯವಿಲ್ಲದ ಕೂದಲು ಸಹ ಹುಟ್ಟುತ್ತದೆ.