Interview | HMPV ಕೊರೊನಾ ರೀತಿ ಅಪಾಯಕಾರಿ ವೈ ರಸ್ ಅಲ್ಲ, ಆತಂಕ ಬೇಡ: ಡಾ ಸುದರ್ಶನ್ ಬಲ್ಲಾಳ್
HMPV outbreak: ರಾಜ್ಯದಲ್ಲಿ ಹೊಸದಾಗಿ ಪತ್ತೆಯಾಗಿರುವ ಎಚ್‌ಎಂಪಿವಿ ವೈರಸ್‌ನ ಬಗ್ಗೆ ಆತಂಕ ಹೆಚ್ಚುತ್ತಿದೆ. ಈ ವೈರಸ್‌ನ ಲಕ್ಷಣಗಳು, ಮುನ್ನೆಚ್ಚರಿಕೆ ಕ್ರಮಗಳು ಮತ್ತು ಸರ್ಕಾರದ ಪಾತ್ರದ ಕುರಿತು ತಜ್ಞರೊಂದಿಗೆ ವಿಶೇಷ ಸಂದರ್ಶನ.
ಡಾ.ಸುದರ್ಶನ್ ಬಲ್ಲಾಳ್
ಅಧ್ಯಕ್ಷರು, ಮಣಿಪಾಲ್ ಹಾಸ್ಪಿಟಲ್ಸ್ ಮತ್ತು ಮಾಜಿ ಸದಸ್ಯರು, ಕೊರೋನಾ ತಜ್ಞರ ಸಮಿತಿ
- ಶ್ರೀಕಾಂತ ಎನ್. ಗೌಡಸಂದ್ರ
ರಾಜ್ಯ ಸೇರಿ ವಿಶ್ವವನ್ನೇ ನಲುಗಿಸಿದ ಕೊರೋನಾ ಪ್ರಭಾವ ಕಡಿಮೆಯಾದ 3-4 ವರ್ಷಗಳಲ್ಲೇ ಮತ್ತೆ ಎಚ್‌ಎಂಪಿವಿ ರೂಪದಲ್ಲಿ ಹೊಸ ವೈರಾಣು ಆತಂಕ ಶುರುವಾಗಿದೆ. ಚೀನಾ ಸೇರಿ ಕೆಲ ಏಷ್ಯಾ ದೇಶಗಳಲ್ಲಿ ತೀವ್ರ ಸ್ವರೂಪ ತಾಳಿರುವ ಹೊಸ ವೈರಾಣು ರಾಜ್ಯದಲ್ಲೂ ಪತ್ತೆಯಾಗಿ ಶಾಕ್ ನೀಡಿದೆ. ಮುಖ್ಯವಾಗಿ ಸಣ್ಣ ಮಕ್ಕಳಲ್ಲೇ ಹೆಚ್ಚಾಗಿ ಕಂಡು ಬರುತ್ತಿರುವ ಸೋಂಕು ಸಹಜವಾಗಿಯೇ ಆತಂಕ ಸೃಷ್ಟಿಸಿದೆ. ಹೀಗಿದ್ದರೂ ಇದು ಅಪಾಯಕಾರಿ ವೈರಸ್ ಅಲ್ಲ, ಯಾವುದೇ ಕ್ರಮದ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇದು ಸಾರ್ವಜನಿಕರಲ್ಲಿ ಮತ್ತಷ್ಟು ಗೊಂದಲಗಳನ್ನು ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಏನಿದು ಎಚ್‌ಎಂಪಿವಿ? ಇದರ ವರ್ತನೆ ಹೇಗಿರಲಿದೆ? ರಾಜ್ಯಕ್ಕೆ ಎಚ್ಚರಿಕೆ ಗಂಟೆ ಆಗಬಲ್ಲದೇ? ಜನ ಹಾಗೂ ಸರ್ಕಾರದ ಮುಂದಿರುವ ಆಯ್ಕೆಗಳೇನು? ಎಂಬಿತ್ಯಾದಿ ವಿಷಯಗಳ ಬಗ್ಗೆ ರಾಜ್ಯ ಸರ್ಕಾರದ ಕೊರೋನಾ ತಜ್ಞರ ಸಲಹಾ ಸಮಿತಿಯ ಸದಸ್ಯರೂ ಆಗಿದ್ದ ಮಣಿಪಾಲ್ ಆಸ್ಪತ್ರೆಗಳ ಅಧ್ಯಕ್ಷ ಡಾ.ಎಚ್.ಸುದರ್ಶನ್ ಬಲ್ಲಾಳ್ ಅವರು ಕನ್ನಡಪ್ರಭ ಜತೆ ಮುಖಾಮುಖಿ ಮಾತನಾಡಿದ್ದಾರೆ.
ಎಚ್ಎಂಪಿ ವೈರಸ್ ಸೋಂಕು ರಾಜ್ಯದಲ್ಲೂ ಪತ್ತೆಯಾಗಿ ಆತಂಕ ಸೃಷ್ಟಿಸಿದೆ. ಏನಿದು ಎಚ್‌ಎಂಪಿವಿ?
ಹ್ಯೂಮನ್ ಮೆಟನ್ಯುಮೋ ವೈರಸ್. ಇದು ನೆಗಡಿ, ಕೆಮ್ಮು ಸಮಸ್ಯೆ ಉಂಟು ಮಾಡಬಲ್ಲ ಸಾಮಾನ್ಯ ವೈರಸ್. ಈ ವೈರಸ್ ಹೊಸದಲ್ಲ. 2001ರಲ್ಲಿ ಮೊದಲ ಬಾರಿಗೆ ಇದರ ಇರುವಿಕೆ ದೃಢಪಡಿಸಲಾಗಿದೆ. ತುಂಬಾ ವರ್ಷಗಳಿಂದಲೂ ಇದೆ.
ಇದನ್ನೂ ಓದಿ: ಚೀನಾದಲ್ಲಿ HMPV ವೈರಸ್ ಹೆಚ್ಚಳ ಬೆನ್ನಲ್ಲೇ ಅಮೆರಿಕಕ್ಕೆ ತಲೆನೋವಾದ ವಿಚಿತ್ರ ಕಾಯಿಲೆ!
ಈ ವೈರಸ್‌ನ ಲಕ್ಷಣಗಳೇನು? ವರ್ತನೆ ಹೇಗಿರುತ್ತದೆ?
ನೆಗಡಿ, ಕೆಮ್ಮು, ಉಸಿರಾಟ ಸಮಸ್ಯೆ ಇದರ ಸಹಜ ಲಕ್ಷಣಗಳು. ಕೆಲವೊಮ್ಮೆ ನ್ಯುಮೋನಿಯಾ ಸಂಬಂಧಿತ ಸಮಸ್ಯೆಗಳು ಉಂಟಾಗಬಹುದು. ಆಗ ಮಾತ್ರ ಆಕ್ಸಿಜನ್, ಐಸಿಯು ಬೇಕಾಗುತ್ತದೆ. ಉಳಿದಂತೆ ತೀವ್ರ ಸಮಸ್ಯೆ ಮಾಡುವುದಿಲ್ಲ. ಆದರೂ ಹೃದಯ, ಕಿಡ್ನಿ ಸಮಸ್ಯೆ ಇರುವವರು ಎಚ್ಚರವಹಿಸಬೇಕು.
ವೈರಸ್‌ಗೆ ಸುಲಭವಾಗಿ ತುತ್ತಾಗುವ ಹೈರಿಸ್ಕ್ ಸಮೂಹ ಯಾವುದು?
ಯಾವುದೇ ವೈರಸ್ ಪುಟ್ಟ ಮಕ್ಕಳು, ವಯೋವೃದ್ಧರು, ರೋಗ ನಿರೋಧಕ ಶಕ್ತಿ ಕಡಿಮೆಯುಳ್ಳ ಅನಾರೋಗ್ಯ ಪೀಡಿತರು, ಗರ್ಭಿಣಿಯರಲ್ಲಿ ಬೇಗ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಈ ಸಮೂಹ ಎಚ್ಚರವಹಿಸಬೇಕು. ಮುಖ್ಯವಾಗಿ ಗರ್ಭಿಣಿಯರು ತುಂಬಾ ಎಚ್ಚರವಹಿಸಬೇಕು. ಯಾಕೆಂದರೆ ಅಲ್ಲಿ ಎರಡು ಜೀವ ಇರುತ್ತದೆ. ಇವರ ವಿಚಾರದಲ್ಲಿ ಎಚ್‌ಎಂಪಿವಿ ಮಾತ್ರ ಅಲ್ಲ, ಯಾವುದೇ ಸೋಂಕಾದರೂ ಎಚ್ಚರ ಅಗತ್ಯ.
ಸೋಂಕು ಹರಡದಿರಲು ಯಾವೆಲ್ಲಾ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು?
ಕೆಮ್ಮುವಾಗ ಅಥವಾ ಸೀನುವಾಗ ಮೂಗು ಮತ್ತು ಬಾಯಿಯನ್ನು ಕರವಸ್ತ್ರದಲ್ಲಿ ಮುಚ್ಚಿಕೊಳ್ಳಬೇಕು. ಆಗಾಗ್ಗೆ ಸೋಪು ಅಥವಾ ಸ್ಯಾನಿಟೈಸರ್‌ನಿಂದ ಕೈ ತೊಳೆದುಕೊಳ್ಳಬೇಕು. ಅನಗತ್ಯವಾಗಿ ಜನದಟ್ಟಣೆಯ ಪ್ರದೇಶಗಳಲ್ಲಿ ಸಂಚರಿಸುವುದನ್ನು ತಪ್ಪಿಸಬೇಕು. ಜ್ವರ, ನೆಗಡಿ ಇದ್ದರೆ ಜನದಟ್ಟಣೆ ಜಾಗಗಳಿಗೆ ಹೋಗಬಾರದು. ಸೋಂಕಿತರು, ಅನಾರೋಗ್ಯ ಪೀಡಿತದೊಂದಿಗೆ ಸಂಪರ್ಕ ಮಾಡಬಾರದು.
ಸೋಂಕು ತಗುಲಿದರೆ ಏನು ಮಾಡಬೇಕು?
ಮೊದಲು ಈ ಸೋಂಕಿನ ಬಗ್ಗೆ ಭಯ ಬಿಡಬೇಕು. ಇದು ಕೊರೋನಾ ರೀತಿಯ ಅಪಾಯಕಾರಿ ವೈರಸ್ ಅಲ್ಲ. ಇದು ಸಾಮಾನ್ಯ ವೈರಸ್ ಆಗಿರುವುದರಿಂದ ಸೋಂಕು ಉಂಟಾದರೆ ಸಾಮಾನ್ಯ ಔಷಧೋಪಚಾರ ಮಾಡಿಕೊಂಡು ಮನೆಯಲ್ಲೇ ಇರಬೇಕು. ಪೌಷ್ಟಿಕ ಆಹಾರ ಸೇವಿಸಿ, ಹೆಚ್ಚು ನೀರು ಕುಡಿಯಬೇಕು.
ಈ ವೈರಸ್ ಚೀನಾ, ಮಲೇಷ್ಯಾದಲ್ಲಿ ಈ ವರ್ಷವೇ ಯಾಕೆ ಸ್ಫೋಟಗೊಂಡಿದೆ? ಇದು ಪ್ಯಾಂಡೆಮಿಕ್ ಲಕ್ಷಣವಲ್ಲವೇ?ಯಾವುದೇ ವೈರಸ್ ಕೆಲವು ಸೀಸನ್‌ಗಳಲ್ಲಿ ಉಲ್ಬಣವಾಗುತ್ತದೆ. ಅದೇ ರೀತಿ ಈಗ ಎಚ್‌ಎಂಪಿವಿಯ ಹೆಚ್ಚು ಪ್ರಕರಣಗಳು ಚೀನಾದಲ್ಲಿ ವರದಿಯಾಗಿವೆ. ಚೀನಾದಲ್ಲಿನ ಜನದಟ್ಟಣೆಯ ಜಾಗಗಳಿಂದ ಯಾವುದೇ ವೈರಲ್ ಸೋಂಕು ಸುಲಭವಾಗಿ ಹರಡುತ್ತದೆ. ಹೀಗಾಗಿ ಯಾವುದೇ ವೈರಸ್ ಆದರೂ ಅಲ್ಲಿ ಪರಿಣಾಮ ಸ್ವಲ್ಪ ತೀವ್ರವಾಗಿರುತ್ತದೆ. ಹೀಗಾಗಿ ಇದನ್ನು ಈಗಲೇ ಪ್ಯಾಂಡೆಮಿಕ್ ಅಥವಾ ಎಂಡೆಮಿಕ್ ಎಂದೆಲ್ಲಾ ವ್ಯಾಖ್ಯಾನಿಸಲಾಗದು.
ಚೀನಾದಲ್ಲಿ ಲಕ್ಷಾಂತರ ಮಂದಿಗೆ ಎಚ್ಎಂಪಿವಿ ಹರಡಿದೆ. ಆದರೂ ಯಾಕೆ ಪ್ಯಾಂಡೆಮಿಕ್ (ಸಾಂಕ್ರಾಮಿಕ) ಅಲ್ಲ?
ಚೀನಾದಲ್ಲಿ ಎಚ್‌ಎಂಪಿವಿ ಪತ್ತೆಯಾದ ತಕ್ಷಣ ಸಂಬಂಧಿಸಿದ ರೋಗ ಲಕ್ಷಣಗಳು (ನೆಗಡಿ, ಕೆಮ್ಮು, ಜ್ವರ, ಉಸಿರಾಟ ಸಮಸ್ಯೆ) ಉಳ್ಳವರನ್ನೆಲ್ಲ ಪರೀಕ್ಷೆ ನಡೆಸಿದ್ದಾರೆ. ಎಲ್ಲರಿಗೂ ಪರೀಕ್ಷೆ ನಡೆಸಿದ್ದರಿಂದ ವೈರಸ್ ದೃಢಪಟ್ಟ ಪ್ರಕರಣಗಳು ಹೆಚ್ಚಾಗಿವೆ. ನಮ್ಮಲ್ಲೂ ಯಾವುದೇ ನೆಗಡಿ ಪರೀಕ್ಷಿಸಿದರೂ ಅಲ್ಲಿ ಒಂದಲ್ಲಾ ಒಂದು ವೈರಸ್ ಪಾಸಿಟಿವ್ ಬರುತ್ತದೆ.
ರೂಪಾಂತರಗೊಂಡ ಹೊಸ ಎಚ್‌ಎಂಪಿವಿ ತಳಿಯಿಂದ ಪ್ರಕರಣಗಳು ಹೆಚ್ಚಾಗುತ್ತಿವೆ ಎನ್ನುತ್ತಿದ್ದಾರಲ್ಲ?
ಅದು ಚೀನಾ ಸರ್ಕಾರವೇ ದೃಢಪಡಿಸಬೇಕು. ಈವರೆಗೆ ಚೀನಾ ನಮ್ಮಲ್ಲಿ ಅಂತಹ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿಲ್ಲ. ಇದು ಸಾಮಾನ್ಯ ಸೋಂಕು ಎಂದೇ ಹೇಳಿದೆ. ಜತೆಗೆ ಅಲ್ಲಿನ ಜನಜೀವನದಲ್ಲೂ ಯಾವುದೇ ಸಮಸ್ಯೆಯಾಗಿಲ್ಲ ಎಂದು ಜನರು ಪ್ರತಿಕ್ರಿಯಿಸುತ್ತಿದ್ದಾರೆ.
ಈವರೆಗೆ ನಮ್ಮಲ್ಲಿ ಈ ಸೋಂಕಿನ ಹೆಸರೇ ಇರಲಿಲ್ಲ. ಈಗ ಒಮ್ಮೆಲೆ ವರದಿಯಾಗಿವೆಯಲ್ಲಾ?
ಆರೋಗ್ಯ ಇಲಾಖೆ ಪ್ರಕಾರ ಪ್ರತಿ ವರ್ಷ ಇನ್‌ಫ್ಲ್ಯೂಯೆಂಜಾ ಸಂಬಂಧಿತ ಅನಾರೋಗ್ಯ ಪ್ರಕರಣ ವರದಿಯಾಗಲೂ ಅದರಲ್ಲಿ ಶೇ.0.75 ರಿಂದ ಶೇ.1 ರಷ್ಟು ಎಚ್‌ಎಂಪಿವಿ ವರದಿಯಾಗುತ್ತಿತ್ತು. ಹೀಗಾಗಿ ಇದು ಹೊಸದಲ್ಲ, ಒಮ್ಮೆಲೆ ಇದು ವರದಿಯಾಗಿಲ್ಲ. ಶಿವಮೊಗ್ಗದಲ್ಲಿ ವರದಿಯಾದ ಪ್ರಕರಣ ಒಂದು ತಿಂಗಳ ಹಿಂದೆಯದ್ದು ಎಂದು ಇಲಾಖೆಯೇ ಹೇಳಿದೆ.
ರಾಜ್ಯದಲ್ಲಿ ಐಎಲ್‌ಐ, ಸಾರಿ, ಬ್ರಾಂಕೊನ್ಯುಮೋನಿಯಾ ಪ್ರಕರಣಗಳು ಜಾಸ್ತಿಯಾಗಿವೆ. ಇದು ಎಚ್ಚರಿಕೆ ಗಂಟೆಯಲ್ಲವೇ?
ಈ ಪ್ರಕರಣ ಹೆಚ್ಚಾಗಿವೆ ಎಂಬುದನ್ನು ಕಳೆದ ವರ್ಷದ ಚಳಿಗಾಲಕ್ಕೆ ಹೋಲಿಕೆ ಮಾಡಿ ಹೇಳಬೇಕು. ಕಳೆದ ಎರಡು ತಿಂಗಳಿಗೆ ಹೋಲಿಕೆ ಮಾಡಿದರೆ ಹೆಚ್ಚಾಗಿದೆ. ಆದರೆ ಕಳೆದ ವರ್ಷದ ಈ ಸಮಯಕ್ಕೆ ಹೋಲಿಸಿದರೆ ಹೆಚ್ಚಳವಾಗಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಹೀಗಾಗಿ ಇದೇನು ಎಚ್ಚರಿಕೆ ಗಂಟೆ ಎನಿಸಲ್ಲ.
ಇದನ್ನೂ ಓದಿ: HMPV-ಕೋವಿಡ್-19 ವೈರಸ್ ನಡುವಿನ ವ್ಯತ್ಯಾಸವೇನು? ಯಾವುದು ಡೇಂಜರ್?
ರಾಜ್ಯದಲ್ಲಿ ರೂಪಾಂತರಿ ಎನ್‌ಎಚ್‌ಪಿವಿ ತಳಿ ಹರಡುತ್ತಿರಬಹುದಲ್ಲವೇ?
ಇದನ್ನು ತಿಳಿಯಬೇಕಾದರೆ ಜಿನೊಮ್ ಸೀಕ್ವೆನ್ಸ್ ಪರೀಕ್ಷೆ ಮಾಡಬೇಕಾಗುತ್ತದೆ. ಸರ್ಕಾರ ಅದನ್ನು ಮಾಡಲಿದೆ ಎಂದು ಅಂದುಕೊಂಡಿದ್ದೇವೆ. ನಮ್ಮ ಪ್ರಕಾರ ವಿಜ್ಞಾನಿಗಳು ಈಗಾಗಲೇ ಈ ಕೆಲಸದಲ್ಲಿ ಇರುತ್ತಾರೆ.
ರಾಜ್ಯದಲ್ಲಿ ಈ ವೈರಸ್‌ನಿಂದ ಮುಂದೆ ಆತಂಕ ದಿನಗಳು ಇಲ್ಲವೇ?
1940ರಿಂದಲೂ ಫ್ಲ್ಯೂ ಇದೆ. ಕೆಲ ವರ್ಷ ಹೆಚ್ಚಾಗುತ್ತದೆ. ಉದಾ: ಡೆಂಘೀ ಎರಡು ವರ್ಷದ ಹಿಂದೆ ಹೆಚ್ಚಾಗಿ ವರದಿಯಾಗಿತ್ತು. ಈ ವರ್ಷವೂ ಹೆಚ್ಚಾಗಿದೆ. ಇವೆಲ್ಲವೂ ನಮ್ಮಲ್ಲೇ ಇರುವ ಕಾಯಿಲೆಗಳು. ವೈರಸ್ ಹರಡಿದಾಗ ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿ (ಹರ್ಡ್ ಇಮ್ಯುನಿಟಿ) ಉಂಟಾಗುತ್ತದೆ. ಇದಾದ ಮೇಲೆ ಇಳಿಮುಖವಾಗುತ್ತದೆ. ಇದು ಈಗಾಗಲೇ ಆಗಿರಲೂ ಬಹುದು.
ತಕ್ಷಣಕ್ಕೆ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳೇನು?
ಜಾಗೃತಿ, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸೂಚನೆ ನೀಡಬೇಕು. ಈ ವೈರಸ್‌ಗೆ ಲಸಿಕೆ ಇಲ್ಲ. ಇನ್ನು ಐಸಿಯು, ಆಕ್ಸಿಜನ್ ಬೆಡ್, ಔಷಧಗಳನ್ನು ಈಗಾಗಲೇ ಸಿದ್ಧಪಡಿಸಿಕೊಂಡಿದೆ. ಸದ್ಯಕ್ಕೆ ಈ ಕ್ರಮ ಸಾಕು.
ಇದು ಕೊರೋನಾದಂತೆ ಮಾರಕವೇ ? ಮಾಸ್ಕ್ ಕಡ್ಡಾಯ, ಐಸೊಲೇಷನ್, ಕ್ವಾರಂಟೈನ್, ಶಾಲಾ ಮಕ್ಕಳಿಗೆ ಪರೀಕ್ಷೆಯಂತಹ ಕ್ರಮಗಳು ಬೇಕಾಗುತ್ತವೆಯೇ?
ಇದು ಕೊರೋನಾ ಮಾದರಿ ಅಪಾಯಕಾರಿಯಲ್ಲ. ಹೀಗಾಗಿ ಅಂತಹ ಯಾವುದೇ ಕ್ರಮಗಳ ಅಗತ್ಯವಿಲ್ಲ. ಹಾಗಂತ ಸಾರ್ವಜನಿಕರು ತಮ್ಮ ಪಾತ್ರ ಮರೆಯಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ಮೊದಲು ನಿಲ್ಲಿಸಬೇಕು. ಉಳಿದಂತೆ ಶುಚಿತ್ವ ಕಾಪಾಡಿಕೊಳ್ಳುವುದು ಸೇರಿದಂತೆ ಕೊರೋನಾ ಹರಡದಂತೆ ಅನುಸರಿಸಿದ ಮುನ್ನೆಚ್ಚರಿಕಾ ಕ್ರಮ ಪಾಲಿಸಬೇಕು.
ಅಪಾಯಕಾರಿ ಸ್ಟ್ರೈನ್ ಪ್ರವೇಶ ತಡೆಯಲು ವಿಮಾನ ನಿಲ್ದಾಣದಲ್ಲಾದರೂ ಸ್ಕ್ರೀನಿಂಗ್ ಮಾಡಬೇಕಲ್ಲವೇ?
ಈ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ ಪ್ರಕಾರ ಕ್ರಮ ಕೈಗೊಳ್ಳಲಿದೆ.
ರಾಜ್ಯದಲ್ಲಿ ವರದಿಯಾಗಿರುವ ಬಹುತೇಕ ಪ್ರಕರಣ ಪುಟ್ಟ ಮಕ್ಕಳಲ್ಲೇ ವರದಿಯಾಗಿದೆ. ಶಾಲೆಗಳು ಈ ಸಂಖ್ಯೆಯನ್ನು ಹೆಚ್ಚು ಮಾಡಲ್ಲವೇ?
ಸೋಂಕು ಅಥವಾ ಯಾವುದೇ ಅನಾರೋಗ್ಯ ಇರುವ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು. ಪೋಷಕರು ಈ ಬಗ್ಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಹಾಗಂತ ಸರ್ಕಾರ ಇದನ್ನು ಕಡ್ಡಾಯ ಮಾಡಬೇಕಿಲ್ಲ. ಎಲ್ಲವೂ ಮನವರಿಕೆ ರೂಪದಲ್ಲೇ ಆಗಬೇಕು.
ಯಾವುದೇ ಸೋಂಕಿಗೆ ಮೊದಲು ಒಳಗಾಗುವುದು ಆರೋಗ್ಯ ಸಿಬ್ಬಂದಿ. ಅವರಿಗಾದರೂ ಮುನ್ನೆಚ್ಚರಿಕಾ ಕ್ರಮ ಬೇಕಲ್ಲವೇ?
ಯಾವುದೇ ಸೋಂಕು ಸಂಬಂಧಿಸಿದ ಕಾಯಿಲೆಗೆ ಚಿಕಿತ್ಸೆ ನೀಡುವಾಗ, ವೈರಲ್ ಲೋಡ್ ಹೆಚ್ಚಿರುವ ಕಡೆ ವೈದ್ಯರು ಮಾಸ್ಕ್ ಧರಿಸಿರುತ್ತಾರೆ. ಸ್ಯಾನಿಟೈಸ್, ಕೈ ತೊಳೆಯುವಂತಹ ಕ್ರಮ ಅನುಸರಿಸುತ್ತಾರೆ. ಇದನ್ನು ಕ್ರಮಬದ್ಧವಾಗಿ ಮಾಡಬೇಕು. ಇದನ್ನು ಹೊರತುಪಡಿಸಿ ಬೇರೆ ಕ್ರಮ ಬೇಕಾಗಿಲ್ಲ.