Asianet Suvarna News Asianet Suvarna News

Sleep Disorder: ನಿದ್ರೆ ಬರುತ್ತಿಲ್ಲವೇ? ನಿರ್ಲಕ್ಷಿಸಬೇಡಿ

ದೀರ್ಘ ಸಮಯದಿಂದ ನಿದ್ರೆ ಸರಿಯಾಗಿ ಬರುತ್ತಿಲ್ಲವೆಂದಾದರೆ ನಿರ್ಲಕ್ಷಿಸಬೇಡಿ. ಇದು ಯಾವುದಾದರೂ ಗಂಭೀರ ಸಮಸ್ಯೆಯನ್ನು ತೋರುತ್ತಿರಬಹುದು. ನಿದ್ರೆ ಸರಿಯಾಗಿಲ್ಲವೆಂದರೆ, ಆರಂಭದಲ್ಲೇ ಅದರ ಕುರಿತು ಕಾಳಜಿ ವಹಿಸಿ.
 

dont ignore sleep disorder types and symptoms
Author
Bangalore, First Published Feb 19, 2022, 5:12 PM IST

ನಿದ್ರೆಗೆ (Sleep) ಸಂಬಂಧಿಸಿದ ಸಮಸ್ಯೆ (Disorder) ಇಂದಿನ ದಿನಗಳಲ್ಲಿ ಅತ್ಯಂತ ಸಾಮಾನ್ಯ. ನಿದ್ರಿಸಲು ಸಮಯವೂ ಇಲ್ಲ. ದಿನಕ್ಕೆ ಐದಾರು ಗಂಟೆಗಳ ಕಾಲ ನಿದ್ರೆ ಮಾಡಿದರೆ ಅದೇ ಹೆಚ್ಚು. ಆದರೆ, ಮನುಷ್ಯನ ದೇಹಕ್ಕೆ ಸಾಮಾನ್ಯವಾಗಿ 7-8 ಗಂಟೆಗಳ ನಿದ್ರೆ ಬೇಕಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.

ಕೆಲವರಿಗೆ ಮಲಗಲು ಸಮಯ ಸಿಕ್ಕರೂ ನಿದ್ರೆ ಬರುವುದಿಲ್ಲ. ಏಳೆಂಟು ಗಂಟೆಗಳ ಕಾಲ ಮಲಗಿದಂತೆ ಕಂಡರೂ ಮಧ್ಯೆ ಮಧ್ಯೆ ತೀವ್ರ ಅಡೆತಡೆಗಳಿರುತ್ತವೆ. ಚೆನ್ನಾಗಿ ನಿದ್ರೆ ಬರುವುದಿಲ್ಲ. ನಿದ್ರೆಯಿಂದ ಎದ್ದ ಬಳಿಕವೂ ನಿದ್ರೆ ಮಾಡದಿರುವಂತೆ ಸುಸ್ತು ಕಂಡುಬರುತ್ತದೆ. ಯಾವಾಗಲೋ ಒಮ್ಮೆ ನಿದ್ರೆಗೆ ತೊಂದರೆಯಾಗುವುದು ಎಲ್ಲರಿಗೂ ಇದ್ದಿದ್ದೇ. ಆದರೆ, ಪದೇ ಪದೆ ಹೀಗಾಗುತ್ತಿದ್ದರೆ ನಿದ್ರಾಹೀನತೆಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದನ್ನು ಇನ್‌ ಸೋಮ್ನಿಯಾ ಅಥವಾ ಸ್ಲೀಪ್‌ ಡಿಸಾರ್ಡರ್‌ ಎನ್ನಲಾಗುತ್ತದೆ.

ನಿಮಗೆ ಗೊತ್ತೇ? ಇತ್ತೀಚೆಗೆ ನಿಧನರಾದ ಸಂಗೀತಕಾರ ಬಪ್ಪಿ ಲಾಹಿರಿ (Bappi Lahiri) ಅವರೂ ಸಹ ಅಬ್‌ ಸ್ಟ್ರಾಕ್ಟಿವ್‌ ಸ್ಲೀಪ್‌ ಅಪ್ನಿಯಾ (Abstractive Sleep Apnea) ಎನ್ನುವ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ಸಾವಿಗೆ ಈ ಸಮಸ್ಯೆಯೂ ಕಾರಣ ಎನ್ನಲಾಗಿದೆ. 

dont ignore sleep disorder types and symptoms

ಭಾರತದಲ್ಲಿ ನಿದ್ರಾಹೀನತೆಯ ಸಮಸ್ಯೆ ಇತ್ತೀಚೆಗೆ ಅಧಿಕವಾಗುತ್ತಿದೆ. ಗ್ರಾಹಕ ವಸ್ತುಗಳ ಕಂಪನಿಯೊಂದು ಕೈಗೊಂಡಿದ್ದ ಅಧ್ಯಯನವೊಂದರ ಪ್ರಕಾರ, ಶೇ.93ರಷ್ಟು ಭಾರತೀಯರು ಸೂಕ್ತ ನಿದ್ರೆಯಿಂದ ವಂಚಿತರಾಗಿದ್ದಾರೆ. ಬದಲಾಗುತ್ತಿರುವ ಆಧುನಿಕ ಜೀವನಶೈಲಿ (Life Style), ಗ್ಯಾಜೆಟ್‌ ಗಳ ಸಹವಾಸದಿಂದ ಈ ಸಮಸ್ಯೆ ತೀವ್ರವಾಗಿದೆ. ಕಿಂಗ್‌ ಜಾರ್ಜ್‌ ವಿಶ್ವವಿದ್ಯಾಲಯದ (University) ವೈದ್ಯರ ಪ್ರಕಾರ, ಉತ್ತರ ಪ್ರದೇಶದ ಲಖನೌದಲ್ಲೊಂದೇ ಸರಿಸುಮಾರು 40 ಲಕ್ಷಕ್ಕೂ ಅಧಿಕ ಜನ ನಿದ್ರಾಹೀನತೆಯ ಸಮಸ್ಯೆ ಎದುರಿಸುತ್ತಿದ್ದಾರೆ.

ಅಧ್ಯಯನಗಳು ಹೇಳುವಂತೆ, ಶೇ.72ರಷ್ಟು ಭಾರತೀಯರು 1-3 ಮೂರು ಬಾರಿ ಏಳುವುದು ಸಾಮಾನ್ಯ. ಈ ಅಭ್ಯಾಸದಿಂದ ಶೇ.87ರಷ್ಟು ಜನರ ಆರೋಗ್ಯದ ಮೇಲೆ ಪರಿಣಾಮಗಳು ಉಂಟಾಗುತ್ತವೆ. ಅಷ್ಟೇ ಅಲ್ಲ, ಅರ್ಧಂಬರ್ಧ ನಿದ್ರೆಯ ಪರಿಣಾಮ ಶೇ.58ರಷ್ಟು ಜನರ ಕೆಲಸ ಕಾರ್ಯದ ಮೇಲೆ ಪ್ರಭಾವ ಬೀರುತ್ತದೆ. ಅತ್ಯಂತ ಕುತೂಹಲಕಾರಿ ಅಂಶವೂ ಇಲ್ಲಿದೆ. ಅದೇನೆಂದರೆ, ಶೇ.11ರಷ್ಟು ಜನ ನಿದ್ರೆ ಸರಿಯಾಗಿ ಆಗದ ಹಿನ್ನೆಲೆಯಲ್ಲೇ ಕಚೇರಿ ಕೆಲಸಕ್ಕೆ ರಜೆ ತೆಗೆದುಕೊಳ್ಳುತ್ತಾರೆ. ಇನ್ನೂ ದುರಂತವೆಂದರೆ, ಸೂಕ್ತ ನಿದ್ರೆ ಇಲ್ಲದೆ ಶೇ.19ರಷ್ಟು ಜನರ ಸಂಸಾರ (Family), ಸಂಬಂಧದ ಮೇಲೂ ಕೆಟ್ಟ ಪರಿಣಾಮವಾಗುತ್ತದೆ.

ಕಾರ್ಯದ ಒತ್ತಡ (Stress) ಸಾಕಷ್ಟು ಜನರ ನಿದ್ರೆಯನ್ನು ಕಸಿದುಕೊಳ್ಳುತ್ತದೆ. ಶೇ.15ರಷ್ಟು ಜನರಿಗೆ ನಿದ್ರಾಹೀನತೆಯುಂಟಾಗಲು ಕಚೇರಿಯ ಕಾರ್ಯದೊತ್ತಡವೇ ಕಾರಣವಾಗಿದೆ. ಶೇ.33ರಷ್ಟು ಭಾರತೀಯರು ಗೊರಕೆಯ ಕಾರಣದಿಂದ ಸರಿಯಾಗಿ ನಿದ್ರೆ ಮಾಡುವುದಿಲ್ಲ. ಆದರೆ, ಇವರಲ್ಲಿ ಶೇ.2ರಷ್ಟು ಜನ ಮಾತ್ರವೇ ನಿದ್ರಾಹೀನತೆಯ ಸಮಸ್ಯೆಗಾಗಿ ವೈದ್ಯರನ್ನು ಭೇಟಿಯಾಗುತ್ತಾರೆ.
 
ಲಕ್ಷಣಗಳನ್ನು ತಿಳಿದುಕೊಂಡಿರಿ
•      ನಿರಂತರವಾಗಿ 30 ನಿಮಿಷಗಳ ಕಾಲ ನಿದ್ರೆ ಮಾಡಲು ಸಾಧ್ಯವಾಗದಿರುವುದು.
•      ರಾತ್ರಿ 7-8 ತಾಸುಗಳ ಕಾಲ ನಿದ್ರೆ ಮಾಡಿದ ಬಳಿಕವೂ ಸುಸ್ತೆನಿಸುವುದು.
•      ನಿದ್ರೆ ಮಾಡಿದ ಬಳಿಕ ಸಿಡಿಮಿಡಿಯಲ್ಲಿರುವುದು.
•      ರಾತ್ರಿ ಹಲವು ಬಾರಿ ಏಳುವುದು, ಒಮ್ಮೆ ಎದ್ದ ಬಳಿಕ ತುಂಬ ಸಮಯ ನಿದ್ರೆ ಬಾರದಿರುವುದು.
•      ಒಮ್ಮೆಯೂ ನಿದ್ರೆಯೇ ಬಾರದಿರುವುದು, ಹಗಲು ಸಮಯದಲ್ಲಿ ನಿದ್ರೆ ಎಳೆಯುವುದು.
•      ಕಚೇರಿ (Office) ಕೆಲಸದ ಕಡೆಗೆ ಗಮನ ನೀಡಲು ಸಾಧ್ಯವಾಗದಿರುವುದು.
•      ನಿದ್ರೆ ಮಾಡುವಾಗ ಕಾಲುಗಳಲ್ಲಿ ಜೋಮು ಬರುವುದು.
•      ಜೋರಾದ ಉಸಿರಾಟ ಹಾಗೂ ಅತಿಯಾದ ಗೊರಕೆ (Snoring)

ಸಾಮಾನ್ಯ ಕಾರಣಗಳು, ಪರಿಹಾರ
ಒತ್ತಡ, ಔಷಧ, ಸೈನಸ್‌ ತೊಂದರೆ, ಮಧುಮೇಹ, ಅಧಿಕ ರಕ್ತದೊತ್ತಡ, ಕೆಟ್ಟ ಜೀವನಶೈಲಿ, ಮದ್ಯಪಾನ, ಧೂಮಪಾನ, ಕಡಿಮೆ ದೈಹಿಕ ಚಟುವಟಿಕೆ ಇತ್ಯಾದಿ.
ನಿದ್ರಾಹೀನತೆಯ ತೊಂದರೆ ಸರಿಪಡಿಸಿಕೊಳ್ಳಲು ಯೋಗಾಸನಗಳು, ಪ್ರಾಣಾಯಾಮಗಳು (Yoga, Pranayama) ಸಹಕಾರಿ. ಸೂಕ್ತ ತಜ್ಞರ ನೆರವು ಪಡೆದು ಇವುಗಳನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮ. ಸಮಸ್ಯೆ ತೀವ್ರವಾಗಿದ್ದರೆ ವೈದ್ಯರನ್ನು ಕಾಣಬೇಕು.

 

Follow Us:
Download App:
  • android
  • ios