ನೀತಿ ಪರೀಕ್ಷೆಗೆ ಚೆನ್ನಾಗಿಯೇ ಸಿದ್ಧತೆ ಮಾಡಿಕೊಂಡಿದ್ದಳು.ಆತ್ಮವಿಶ್ವಾಸ ಹಾಗೂ ಧೈರ್ಯದಿಂದಲೇ ಪರೀಕ್ಷಾ ಕೊಠಡಿ ಪ್ರವೇಶಿಸಿದಳು. ಪ್ರಶ್ನೆಪತ್ರಿಕೆ ನೋಡಿದ ತಕ್ಷಣ ಅವಳ ಮನಸ್ಸು ಖುಷಿಯಿಂದ ಹಿರಿ ಹಿರಿ ಹಿಗ್ಗಿತ್ತು. ಏಕೆಂದರೆ ಪ್ರಶ್ನೆಪತ್ರಿಕೆಯಲ್ಲಿರುವ ಎಲ್ಲ ಪ್ರಶ್ನೆಗಳಿಗೂ ಆಕೆಗೆ ಚೆನ್ನಾಗಿಯೇ ಉತ್ತರ ಗೊತ್ತಿತ್ತು. ಆದರೆ,ಪರೀಕ್ಷೆ ಮುಗಿಯಲು ಅರ್ಧ ಗಂಟೆಯಿದೆ ಎನ್ನುವಾಗ ನೀತಿಗೆ ಆತಂಕ ಕಾಡಲಾರಂಭಿಸಿತ್ತು. ಒಟ್ಟು 20 ಅಂಕದ ಪ್ರಶ್ನೆಗಳಿಗೆ ಆಕೆ ಅರ್ಧಗಂಟೆಯೊಳಗೆ ಉತ್ತರಿಸಬೇಕಿತ್ತು. ಕೊನೆಗೂ ಐದು ಅಂಕದ ಒಂದು ಪ್ರಶ್ನೆಗೆ ಉತ್ತರಿಸಲು ಆಕೆಗೆ ಸಮಯ ಸಾಲಲಿಲ್ಲ.ನೀತಿಯಂತೆ ಅನೇಕ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಇಂಥ ಸಮಸ್ಯೆ ಎದುರಿಸುತ್ತಾರೆ. 

ನಿಗದಿತ ಸಮಯ ಮಿತಿಯಲ್ಲಿ ನಿಗದಿತ ಪ್ರಶ್ನೆಗಳಿಗೆ ಉತ್ತರಿಸುವ ಸವಾಲೇ ಪರೀಕ್ಷೆ. ಹೀಗಾಗಿ ಪರೀಕ್ಷೆಯಲ್ಲಿ ಸಮಯ ನಿರ್ವಹಣೆ ಪರೀಕ್ಷಾ ಸಿದ್ಧತೆಯಷ್ಟೇ ಮಹತ್ವದ ವಿಷಯ.“ನಾನು ಪರೀಕ್ಷೆಗೆ ಚೆನ್ನಾಗಿ ಓದಿದ್ದೆ. ನನಗೆ ಉತ್ತರ ಗೊತ್ತಿರುವ ಪ್ರಶ್ನೆಗಳೇ ಬಂದಿದ್ದವು.ಆದರೆ, ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಸಮಯ ಸಾಲಲಿಲ್ಲ”ಎಂದು ಅನೇಕ ವಿದ್ಯಾರ್ಥಿಗಳು ಪರೀಕ್ಷೆ ಮುಗಿದ ಬಳಿಕ ಅಳಲು ತೋಡಿಕೊಳ್ಳುವುದನ್ನು ನೀವು ನೋಡಿರಬಹುದು. ನಿಜ,ಪರೀಕ್ಷೆಯಲ್ಲಿ ಸಮಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವುದು ಒಂದು ಕಲೆ. ಸೂಕ್ತ ಯೋಜನೆ ಜೊತೆಗೆ ಬರವಣಿಗೆಯಲ್ಲಿ ವೇಗ ರೂಢಿಸಿಕೊಂಡರೆ ಪರೀಕ್ಷೆಯಲ್ಲಿ ನಿಗದಿತ ಸಮಯ ಮಿತಿಯೊಳಗೆ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಸಾಧ್ಯವಾಗುತ್ತದೆ.

ExamFear ಬಿಟ್ಹಾಕಿ, ಹೀಗ್ ಮಾಡಿ ನೋಡಿ

ಬರವಣಿಗೆ ವೇಗ ಹೆಚ್ಚಿಸಿಕೊಳ್ಳಿ: ಕೆಲವರ ಬರವಣಿಗೆ ವೇಗ ಅಗತ್ಯಕ್ಕಿಂತ ಕಡಿಮೆಯಿರುತ್ತದೆ. ನಿಮ್ಮ ಬರವಣಿಗೆ ವೇಗ ಎಷ್ಟಿದೆ ಎಂಬುದು ತರಗತಿಯಲ್ಲಿ ಈಗಾಗಲೇ ನಡೆಸಿರುವ ಕಿರುಪರೀಕ್ಷೆಗಳಲ್ಲಿ ಮನದಟ್ಟಾಗಿರುತ್ತದೆ. ಒಂದು ವೇಳೆ ನಿಮ್ಮ ಬರವಣಿಗೆ ವೇಗ ಕಡಿಮೆಯಿದೆ ಎಂದಾದರೆ ವೇಗವಾಗಿ ಬರೆಯುವುದನ್ನು ರೂಢಿಸಿಕೊಳ್ಳಿ. ರಿವಿಷನ್ ಮಾಡುವಾಗ ಉತ್ತರಗಳನ್ನು ಬರೆದು ಕಲಿಯುವುದರಿಂದ ಬರವಣಿಗೆ ವೇಗವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿದೆ.ಜೊತೆಗೆ ಬರೆದು ಕಲಿಯುವುದರಿಂದ ವಿಷಯಗಳು ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತವೆ. 

ಪ್ರತಿ ಪ್ರಶ್ನೆಗೆ ಸಮಯ ನಿಗದಿಪಡಿಸಿ: ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಲು ಪ್ರಾರಂಭಿಸುವ ಮುನ್ನ ಪ್ರತಿ ಪ್ರಶ್ನೆಗೆ ಸಮಯ ಮಿತಿ ನಿಗದಿಪಡಿಸಿಕೊಳ್ಳಿ.ಉದಾಹರಣೆಗೆ ಎರಡು ಅಂಕಗಳ ಪ್ರಶ್ನೆಗಳಿಗೆ ಎಷ್ಟು ಸಮಯದಲ್ಲಿ ಉತ್ತರಿಸಬೇಕು,5 ಅಂಕಗಳ ಪ್ರಶ್ನೆಗಳಿಗೆ ಎಷ್ಟು ಸಮಯ ಮೀಸಲಿಡಬೇಕು.ಹೀಗೆ ಅಂಕಗಳ ಆಧಾರದಲ್ಲಿ ಸಮಯ ನಿಗದಿಪಡಿಸಬೇಕು.ಜೊತೆಗೆ ನಿಗದಿಪಡಿಸಿರುವ ಸಮಯ ಮಿತಿಯೊಳಗೆ ಉತ್ತರಿಸಲು ಪ್ರಯತ್ನಿಸಬೇಕು.ಈ ರೀತಿ ಮೊದಲೇ ಸೂಕ್ತವಾದ ಯೋಜನೆ ರೂಪಿಸಿಕೊಂಡು ಪ್ರಶ್ನೆಗಳಿಗೆ ಉತ್ತರಿಸಲು ಮುಂದಾದರೆ ಸಮಯದ ಕೊರತೆ ಎದುರಾಗುವುದಿಲ್ಲ.

ಖುಷ್ ಖುಷಿಯಾಗಿ ಪರೀಕ್ಷೆ ಅಟೆಂಡ್ ಮಾಡೋದು ಹೇಗೆ? ಇಲ್ಲಿವೆ ಟಿಪ್ಸ್

ಅಗತ್ಯಕ್ಕಿಂತ ಹೆಚ್ಚು ಬರೆಯಬೇಡಿ: ಬಹುತೇಕ ವಿದ್ಯಾರ್ಥಿಗಳು ಮಾಡುವ ತಪ್ಪೆಂದರೆ ಉತ್ತರ ಗೊತ್ತಿರುವ ಪ್ರಶ್ನೆಗೆ ಅಗತ್ಯಕ್ಕಿಂತ ಹೆಚ್ಚು ವಿವರಣೆ ನೀಡಲು ಹೋಗುವುದು.ಉದಾಹರಣೆಗೆ ಎರಡು ಅಂಕಗಳಿಗೆ ಕೇಳಿರುವ ಪ್ರಶ್ನೆಗೆ 3-4 ವಾಕ್ಯಗಳಲ್ಲಿ ಉತ್ತರಿಸಿದರೆ ಸಾಕು.ಆದರೆ, ಕೆಲವರು ಇದಕ್ಕೆ ಅರ್ಧಪುಟ ಅಂದರೆ 5 ಅಂಕಗಳ ಪ್ರಶ್ನೆಗೆ ಅಗತ್ಯವಿರುವಷ್ಟು ದೊಡ್ಡ ಉತ್ತರ ಬರೆಯುತ್ತಾರೆ.ಈ ರೀತಿ ಅಗತ್ಯಕ್ಕಿಂತ ದೊಡ್ಡ ಉತ್ತರ ಬರೆಯುವುದರಿಂದ ಶ್ರಮ ಹಾಗೂ ಸಮಯ ಎರಡೂ ವ್ಯರ್ಥವಾಗುತ್ತದೆ.ಜೊತೆಗೆ ನೀವು ಎಷ್ಟೇ ದೊಡ್ಡ ಉತ್ತರ ಬರೆದರೂ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಅಂಕಗಳು ಸಿಗಲು ಸಾಧ್ಯವಿಲ್ಲ.ಆದಕಾರಣ ಅಂಕಗಳನ್ನು ಆಧರಿಸಿ ಎಷ್ಟು ಅಗತ್ಯವೋ ಅಷ್ಟೇ ಉತ್ತರಿಸಿ. 

ಉತ್ತರ ಚೆನ್ನಾಗಿ ತಿಳಿದಿರುವ ಪ್ರಶ್ನೆಗೆ ಮೊದಲ ಆದ್ಯತೆ: ಉತ್ತರ ಗೊತ್ತಿರುವ ಪ್ರಶ್ನೆಗಳಿಗೆ ಮೊದಲ ಆದ್ಯತೆ ನೀಡುವುದರಿಂದ ಅವುಗಳನ್ನು ಬೇಗ ಬರೆದು ಮುಗಿಸಲು ಸಾಧ್ಯವಾಗುತ್ತದೆ.ಆ ಬಳಿಕ ನಿಮಗೆ ಸ್ವಲ್ಪ ಮಟ್ಟಿಗೆ ಗೊತ್ತಿರುವ ಅಥವಾ ಉತ್ತರ ನೆನಪಿಗೆ ಬಾರದ ಪ್ರಶ್ನೆಗಳಿಗೆ ಸಮಯ ಮೀಸಲಿಡಿ. ಹೀಗೆ ಮಾಡುವುದರಿಂದ ನಿಮಗೆ ಚೆನ್ನಾಗಿ ಉತ್ತರ ತಿಳಿದಿರುವ ಪ್ರಶ್ನೆಗಳಿಗೆ ಪೂರ್ಣ ಅಂಕಗಳನ್ನು ಪಡೆಯಬಹುದು.ಗೊತ್ತಿರದ ಪ್ರಶ್ನೆಗೆ ಮೊದಲು ಉತ್ತರಿಸಲು ಹೋದರೆ ಸಮಯ ವ್ಯರ್ಥವಾಗುತ್ತದೆ.ಇದರಿಂದ ಉತ್ತರ ಚೆನ್ನಾಗಿ ತಿಳಿದಿರುವ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಲು ಸಾಧ್ಯವಾಗುವುದಿಲ್ಲ.ಜೊತೆಗೆ ಆತ್ಮವಿಶ್ವಾಸವೂ ಕುಗ್ಗುತ್ತದೆ.ಪರಿಣಾಮ ಕಡಿಮೆ ಅಂಕಗಳು ದೊರಕುವ ಸಾಧ್ಯತೆಯಿರುತ್ತದೆ. 

ಒಂದೇ ಪ್ರಶ್ನೆಗೆ ಹೆಚ್ಚು ಸಮಯ ವ್ಯಯಿಸಬೇಡಿ: ಕೆಲವರು ಒಂದೇ ಪ್ರಶ್ನೆಗೆ ಹೆಚ್ಚು ಸಮಯ ವ್ಯಯಿಸುತ್ತಾರೆ.ಇದರಿಂದ ಉಳಿದ ಪ್ರಶ್ನೆಗಳಿಗೆ ಅಗತ್ಯ ಸಮಯ ಮೀಸಲಿಡಲು ಸಾಧ್ಯವಾಗುವುದಿಲ್ಲ.ಪ್ರತಿ ಪ್ರಶ್ನೆಗೆ ನೀವು ಮನಸ್ಸಿನಲ್ಲೇ ಎಷ್ಟು ಸಮಯ ಅಂದಾಜಿಸಿದ್ದೀರೋ ಅಷ್ಟರಲ್ಲೇ ಉತ್ತರ ಬರೆದು ಮುಗಿಸಲು ಪ್ರಯತ್ನಿಸಿ.

ಎಕ್ಸಾಂ ಟೈಮ್‌ನಲ್ಲಿ ವೈರಲ್‌ ಆಗ್ತಿರೋ ಪ್ರಿನ್ಸಿಪಾಲ್‌ ಪತ್ರದಲ್ಲೇನಿದೆ!

ಉಳಿದವರ ಚಿಂತೆ ಬಿಡಿ: ಕೆಲವು ವಿದ್ಯಾರ್ಥಿಗಳು ತಮ್ಮ ಪಕ್ಕದಲ್ಲಿ ಕುಳಿತಿರುವವರು ಏನು ಮಾಡುತ್ತಿದ್ದಾರೆ? ಅವರು ಎಷ್ಟು ಹೆಚ್ಚುವರಿ ಹಾಳೆಗಳನ್ನು ತೆಗೆದುಕೊಂಡಿದ್ದಾರೆ? ಪರೀಕ್ಷಾ ಪರಿವೀಕ್ಷಕರು ಏನು ಮಾಡುತ್ತಿದ್ದಾರೆ? ಪರೀಕ್ಷಾ ಕೊಠಡಿ ಹೊರಭಾಗದಲ್ಲಿ ಏನು ನಡೆಯತ್ತಿದೆ? ಹೀಗೆ ಅನಗತ್ಯ ವಿಚಾರಗಳ ಬಗ್ಗೆ ಗಮನ ಹರಿಸುತ್ತಾರೆ.ಇದರಿಂದ ಸಮಯ ವ್ಯರ್ಥವಾಗುತ್ತದೆ.ಆದಕಾರಣ ಪರೀಕ್ಷಾ ಕೊಠಡಿಯಲ್ಲಿ ನಿಮ್ಮ ಗಮನ ಸಂಪೂರ್ಣವಾಗಿ ಪ್ರಶ್ನೆಗಳಿಗೆ ಸಮರ್ಪಕ ಉತ್ತರಿಸುವ ಕಡೆಗೇ ಇರಲಿ.ಪರೀಕ್ಷೆಯಲ್ಲಿ ಪ್ರತಿ ನಿಮಿಷವೂ ಅತ್ಯಮೂಲ್ಯ.ನಿಗದಿತ ಸಮಯಾವಧಿ ಮುಗಿದ ಬಳಿಕ ಬೇಕು ಎಂದರೂ ಯಾರೂ ಹೆಚ್ಚುವರಿ ಸಮಯ ನೀಡುವುದಿಲ್ಲ. 

ಸಮಯದ ಕಡೆಗೆ ಗಮನ ಇರಲಿ: ಪ್ರತಿ ಪ್ರಶ್ನೆಗೂ ಉತ್ತರಿಸಿದ ಬಳಿಕ ಸಮಯ ನೋಡಿ. ಹೀಗೆ ಮಾಡುವುದರಿಂದ ನೀವು ಆ ಪ್ರಶ್ನೆಗೆ ಉತ್ತರಿಸಲು ನಿಗದಿಗಿಂತ ಹೆಚ್ಚಿನ ಸಮಯ ವ್ಯಯಿಸಿದ್ದೀರೋ ಇಲ್ಲವೋ ಎಂಬುದು ತಿಳಿಯುತ್ತದೆ. ಒಂದು ವೇಳೆ ಅಗತ್ಯಕ್ಕಿಂತ ಹೆಚ್ಚಿನ ಸಮಯ ವ್ಯಯಿಸಿದ್ದರೆ ಉಳಿದ ಪ್ರಶ್ನೆಗಳಿಗೆ ಉತ್ತರಿಸಲು ನೀವು ನಿಗದಿಪಡಿಸಿರುವ ಸಮಯಾವಧಿಯಲ್ಲಿ ಅಗತ್ಯ ಬದಲಾವಣೆ ಮಾಡಿಕೊಳ್ಳಿ.ಈ ರೀತಿ ಮಾಡುವುದರಿಂದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಸಾಧ್ಯವಾಗುತ್ತದೆ.ಸಮಯವನ್ನು ಗಮನಿಸದಿದ್ದರೆ ಕೊನೆಯಲ್ಲಿ ಸಂಕಷ್ಟ ಎದುರಾಗಬಹುದು. 5 ನಿಮಿಷದಲ್ಲಿ 3-4 ಪ್ರಶ್ನೆಗಳಿಗೆ ಉತ್ತರಿಸಬೇಕಾದ ಪರಿಸ್ಥಿತಿ ಏರ್ಪಡಬಹುದು.ಆದಕಾರಣ ಪರೀಕ್ಷೆ ಬರೆಯುವಾಗ ಆಗಾಗ ಸಮಯ ನೋಡಲು ಮರೆಯಬೇಡಿ.