Itchy Bum: ಗುದದ್ವಾರದಲ್ಲಿ ಕಾಡೋ ತುರಿಕೆಗೆ ಕಾರಣಗಳಿರಬಹುದು ನೂರಾರು
ಕೆಲವೊಮ್ಮೆ ಗುದದ್ವಾರದಲ್ಲಿ ಅಪಾರ ತುರಿಕೆಯಾಗುತ್ತದೆ. ಎಲ್ಲರೆದುರು ತುರಿಸಿಕೊಳ್ಳಲು ಮುಜುಗರವಾಗಿ ಹಿಂಸೆಯಾಗುತ್ತದೆ. ತುರಿಸಿಕೊಂಡರೂ ಗಾಯವಾಗಿ ಸಮಸ್ಯೆಯಾಗುತ್ತದೆ. ಗುದದ್ವಾರದಲ್ಲಿ ಸುಖಾಸುಮ್ಮನೆ ತುರಿಕೆ ಆಗುವುದಿಲ್ಲ. ಕೆಲವು ಸಮಸ್ಯೆಗಳ ಲಕ್ಷಣವಿರಬಹುದು, ಎಚ್ಚರಿಕೆ ವಹಿಸಿ.
ದೇಹದಲ್ಲಿ ಯಾವುದೇ ಕಿರಿಕಿರಿಯೂ ಸುಖಾಸುಮ್ಮನೆ ಆಗುವುದಿಲ್ಲ. ಅದಕ್ಕೊಂದು ಕಾರಣವಿದ್ದೇ ಇರುತ್ತದೆ. ಕೆಲವೊಮ್ಮೆ ಚಿಕ್ಕಪುಟ್ಟ ಕಿರಿಕಿರಿಗಳು ದೊಡ್ಡ ಸಮಸ್ಯೆಯ ಲಕ್ಷಣವಾಗಿರಬಹುದು. ಹಾಗೆಯೇ, ದೊಡ್ಡ ಕಿರಿಕಿರಿ ಚಿಕ್ಕದೊಂದು ಸಮಸ್ಯೆಯಾಗಿರಬಹುದು. ಗುದದ್ವಾರದ (Bum) ಬಳಿ ತುರಿಕೆ ಉಂಟಾಗುವುದು ಸಹ ಇಂಥದ್ದೇ ಒಂದು ಮುಜುಗರ ಹಾಗೂ ಕಿರಿಕಿರಿ. ಈ ಜಾಗದಲ್ಲಿ ಸಾರ್ವಜನಿಕವಾಗಿ ತುರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನಿಮಗೂ ಪದೇ ಪದೆ ಗುದದ್ವಾರದ ಬಳಿಕ ತುರಿಕೆಯಾಗುವ ಸಮಸ್ಯೆ ಕಾಡುತ್ತಿದೆಯೇ? ಹಾಗಿದ್ದರೆ ಅದು ಕೆಲವು ಸಮಸ್ಯೆಗಳ ಲಕ್ಷಣ (Symptoms) ಇರಬಹುದು.
ವಿಟಮಿನ್ ಎ (Vitamin A) ಕೊರತೆಯೂ ಕಾರಣ!
ಗುದದ್ವಾರದ ಬಳಿ ತುರಿಕೆಯಾಗುವುದು ಭಾರೀ ಗಂಭೀರ ರೋಗದ ಲಕ್ಷಣವಲ್ಲ. ಆದರೆ, ಖಂಡಿತವಾಗಿ ಆರಂಭದಲ್ಲೇ ಎಚ್ಚರಿಕೆ ನೀಡಬೇಕು. ನಿಮಗೆ ಗೊತ್ತೇ? ವಿಟಮಿನ್ ಎ ಕೊರತೆಯಿಂದ;ಲೂ ಗುದದ್ವಾರದ ಬಳಿ ಕಸಿವಿಸಿಯಾಗಬಹುದು. ವಿಟಮಿನ್ ಎ ದೇಹಕ್ಕೆ ಅತ್ಯಗತ್ಯ. ಇದು ದೇಹಕ್ಕೆ ರೋಗ ಹಾಗೂ ಸೋಂಕಿನ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ನೀಡುತ್ತದೆ. ಮೊಟ್ಟೆ (Egg), ಹಾಲು (Milk), ಮೀನು (Fish) ಹಾಗೂ ಬೆಣ್ಣೆ (Cheese)ಯಲ್ಲಿ ವಿಟಮಿನ್ ಎ ಸಮೃದ್ಧವಾಗಿರುತ್ತದೆ.
ಹೊಟ್ಟೆಯ ಆಸಿಡ್ ಕೊರತೆ (Low Stomach Acid)
ಇದನ್ನು ವೈದ್ಯಕೀಯವಾಗಿ ಹೈಪೋಕ್ಲೋರೈಡ್ರಿಯಾ ಎಂದು ಕರೆಯಲಾಗುತ್ತದೆ. ದೇಹಕ್ಕೆ ಸೂಕ್ತ ಪ್ರಮಾಣದಲ್ಲಿ ಪೌಷ್ಟಿಕಾಂಶ ಲಭ್ಯವಾಗದಿದ್ದಾಗ ವಿಟಮಿನ್ ಅಥವಾ ಮಿನರಲ್ ಕೊರತೆಯುಂಟಾಗುತ್ತದೆ. ಆ ಸಮಯದಲ್ಲಿ ಹೊಟ್ಟೆಯಲ್ಲಿ ಸಹಜವಾಗಿ ಉತ್ಪಾದನೆಯಾಗುವ ಆಸಿಡ್ ಪ್ರಮಾಣದಲ್ಲಿ ಏರುಪೇರಾಗುತ್ತದೆ. ಈ ಆಸಿಡ್ ಸಮಪ್ರಮಾಣದಲ್ಲಿ ಉತ್ಪಾದನೆಯಾಗುವುದು ಅತಿ ಅಗತ್ಯ. ಏಕೆಂದರೆ, ಇದು, ಆಹಾರದಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ ಹಾಗೂ ಕೆಲವು ಜಾತಿಯ ಎಂಜೈಮುಗಳ ಕ್ರಿಯೆಯನ್ನು ಸ್ಥಗಿತಗೊಳಿಸುತ್ತದೆ. ಹೀಗಾಗದೇ ಇದ್ದಾಗ ಮಲಬದ್ಧತೆ (Constipation) ಉಂಟಾಗಬಹುದು. ಹೊಟ್ಟೆಯಲ್ಲಿ ಏನೋ ಹಿಂಸೆ ಎನಿಸಬಹುದು. ಎದೆಯಲ್ಲಿ ಉರಿಯಾಗಬಹುದು ಹಾಗೂ ಕೂದಲು ಉದುರಬಹುದು. ಇಂತಹ ಸಮಯದಲ್ಲಿ ಗುದದ್ವಾರದ ಬಳಿ ತುರಿಕೆ ಆಗಬಹುದು.
ಏನೂ ಮಾಡಿದರೂ ವಾಸಿಯಾಗದ ಪೈಲ್ಸ್‌ಗೆ ಇಲ್ಲಿವೆ ಮದ್ದು
ಮೂಲವ್ಯಾಧಿಯ (Piles) ಲಕ್ಷಣ
ತಜ್ಞರ ಪ್ರಕಾರ, ಗುದದ್ವಾರದ ಬಳಿ ಇನ್ನೂ ಹಲವಾರು ಸಮಸ್ಯೆಗಳ ಕಾರಣದಿಂದ ತುರಿಕೆಯಾಗುತ್ತದೆ. ಅದರಲ್ಲಿ ಮೊದಲನೆಯದಾಗಿ ಮೂಲವ್ಯಾಧಿಯೂ ಒಂದು. ದೊಡ್ಡ ಕರುಳಿನ ಅಭಿದಮನಿ ಅಥವಾ ಮಲಿನ ರಕ್ತನಾಳದ ಮೇಲೆ ಅತಿಯಾಗಿ ಒತ್ತಡ ಬಿದ್ದಾಗ ಈ ಸಮಸ್ಯೆ ಉಂಟಾಗುತ್ತದೆ. ಬೊಜ್ಜುದೇಹಿಗಳಲ್ಲಿ ಇದು ಸಾಮಾನ್ಯ. ಹೆಚ್ಚು ಸಮಯ ನಿಂತು ಅಥವಾ ಕುಳಿತುಕೊಂಡೇ ಕೆಲಸ ಮಾಡುವವರಿಗೆ, ಅಧಿಕ ಭಾರ ಎತ್ತುವವರಿಗೆ, ನಾರಿನಂಶ ಇರುವ ಆಹಾರ ಸೇವನೆ ಮಾಡದೆ ಇರುವವರಿಗೆ, ಬೇಕರಿ ತಿಂಡಿ ಹೆಚ್ಚು ಸೇವಿಸುವವರಿಗೆ, ಹೆಚ್ಚು ನೀರು ಕುಡಿಯದೇ ಇರುವವರಿಗೆ ಮೂಲವ್ಯಾಧಿಯ ಸಮಸ್ಯೆ ಹೆಚ್ಚು.
ಇನ್ನೂ ಹಲವು ಕಾರಣ
ಭೇದಿ ಸಮಸ್ಯೆ ಉಂಟಾದಾಗ ಗುದದ್ವಾರದಲ್ಲಿ ತುರಿಕೆ ಆಗುವುದು ಸಹಜ. ದೇಹದಲ್ಲಿ ಹುಳುಗಳ (Worms) ಸಮಸ್ಯೆ ಹೆಚ್ಚಾದಾಗ ಗುದದ್ವಾರದಲ್ಲಿ ರಾತ್ರಿ ಸಮಯದಲ್ಲಿ ತುರಿಕೆ ಆಗುತ್ತದೆ. ನೀವು ಗಮನಿಸಿದರೆ ಸಣ್ಣ ಸಣ್ಣ ಹುಳುಗಳು ಅಲ್ಲಿಂದ ಹೊರಬರುತ್ತವೆ. ಆಗ ಅತಿಯಾದ ತುರಿಕೆ ಉಂಟಾಗುತ್ತದೆ. ಬಹಳಷ್ಟು ಮಕ್ಕಳು ರಾತ್ರಿ ಸರಿಯಾಗಿ ನಿದ್ರೆ ಮಾಡದಿರುವುದೂ ಇದೇ ಕಾರಣಕ್ಕೆ.
ಇನ್ನು, ಹಾನಿಕಾರಕವಲ್ಲದ ಸಣ್ಣ ಗಡ್ಡೆ (Warts), ರಿಂಗ್ ವರ್ಮ್, ಎಸ್ಜಿಮಾ (Eczema) ತೊಂದರೆಗಳಿಂದಲೂ ಗುದದ್ವಾರದಲ್ಲಿ ತುರಿಕೆ ಆಗಬಹುದು. ಸ್ಟಿರಾಯ್ಡ್ ಕ್ರೀಮ್ (Steroid Cream) ಗಳ ಅಡ್ಡ ಪರಿಣಾಮಗಳಿಂದಲೂ ತುರಿಕೆ ಕಂಡುಬರಬಹುದು.
ಆಪರೇಷನ್ ಮಾಡದೇ ಪೈಲ್ಸ್‌ನಿಂದ ಮುಕ್ತರಾಗಲು ಇಲ್ಲಿವೆ ಟಿಪ್ಸ್
ಮೊದಲೇ ಹೇಳಿದಂತೆ, ಗುದದ್ವಾರದ ತುರಿಕೆ ಹೆಚ್ಚು ಗಂಭೀರವಲ್ಲದ ರೋಗ ಲಕ್ಷಣವಾಗಿದ್ದರೂ ಮೊದಲೇ ಎಚ್ಚರಿಕೆ ವಹಿಸುವುದು ಸೂಕ್ತ. ಏಕೆಂದರೆ, ಇದರಿಂದ ಮೂಲವ್ಯಾಧಿಯಂತಹ ನೋವನ್ನು ಅನುಭವಿಸಬೇಕಾಗಿ ಬರಬಹುದು. ಅಲ್ಲದೆ, ದೇಹದಲ್ಲಿ ಹುಳುಗಳ ಸಮಸ್ಯೆ ಹೆಚ್ಚಾಗಿ ಬೇರೆ ಬೇರೆ ರೀತಿಯ ಅಪಾಯ ಉಂಟಾಗಬಹುದು. ಹೀಗಾಗಿ, ನಿರ್ಲಕ್ಷಿಸದೆ ವೈದ್ಯರನ್ನು ಕಾಣಬೇಕು.