ರಾಜ್ಯದಲ್ಲೇ ಮೊದಲು, ಮಾಗಡಿ ಆಸ್ಪತ್ರೆಗೆ ಮಾಡ್ಯೂಲರ್ ಐಸಿಯು
* ರಾಜ್ಯದಲ್ಲೇ ಪ್ರಥಮ ಮಾಗಡಿ ಆಸ್ಪತ್ರೆಯಲ್ಲಿ ಮಾಡ್ಯೂಲರ್ ಐಸಿಯು
* ತಾಲೂಕಿನ ಎಲ್ಲ ಆರೋಗ್ಯ ಕೇಂದ್ರಗಳಲ್ಲೂ ಆಕ್ಸಿಜನ್ ಘಟಕ/
* ಐಸಿಯು ಲೋಕಾಪರ್ಣೆ ಮಾಡಿದ ಡಿಸಿಎಂ ಡಾ. ಅಶ್ವತ್ಥ ನಾರಾಯಣ
ಮಾಗಡಿ(ಮೇ 27) ರಾಜ್ಯದಲ್ಲಿಯೇ ಮೊತ್ತ ಮೊದಲ ಬಾರಿಗೆ ತಾಲೂಕು ಆಸ್ಪತ್ರೆಯೊಂದರ ಆವರಣದಲ್ಲಿ ಸ್ಥಾಪನೆ ಮಾಡಲಾಗಿರುವ ಅತ್ಯಾಧುನಿಕ ಮಾಡ್ಯೂಲರ್ ಐಸಿಯುವನ್ನು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಗುರುವಾರ ಲೋಕಾರ್ಪಣೆ ಮಾಡಿದರು.
ಕೋವಿಡ್ ಸೋಂಕಿತರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ಅನುಕೂಲವಾಗುವ ಈ ಮಾಡ್ಯೂಲರ್ ಐಸಿಯು ಅನ್ನು ಆ್ಯಕ್ಟ್ ಗ್ರಾಂಟ್ ಮತ್ತು ʼರೆನಾಕ್ʼ ಸಂಸ್ಥೆ ಅಭಿವೃದ್ಧಿಪಡಿಸಿದ್ದು, ಈ ರೀತಿಯ ಐಸಿಯುಗಳನ್ನು ಈಗಾಗಲೇ ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಬಳಕೆ ಮಾಡಲಾಗುತ್ತಿದೆ.
ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಡಾ.ಅಶ್ವತ್ಥನಾರಾಯಣ, ಎಸಿಟಿ (ಆಕ್ಷನ್ ಕೋವಿಡ್ ಟೀಂ) ಗ್ರಾಂಟ್ಸ್ ಈ ಮಾಡ್ಯೂಲರ್ ಐಸಿಯು ಅನ್ನು ಮಾಗಡಿ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದೆ. ಅದಕ್ಕೆ ಅಗತ್ಯವಾದ ಮಾನಿಟರ್‌ಗಳನ್ನು ಬಿಡದಿಯ ಟೊಯೋಟ ಕಿರ್ಲೋಸ್ಕರ್ ಕಂಪನಿ ನೀಡಿದ್ದು, ವೆಂಟಿಲೇಟರ್‌ಗಳು ಪಿ.ಎಂ ಕೇರ್‌ನಿಂದ ಬಂದಿವೆ. ಈ ಐಸಿಯುನಿಂದ ಹೊರಗಿನಿಂದ ಒಳ ಬರುವ ಅಥವಾ ಒಳಗಿನಿಂದ ಹೊರ ಬರುವ ಗಾಳಿಯು ಸಂಪೂರ್ಣವಾಗಿ ಶುದ್ಧೀಕರಣಗೊಳ್ಳುತ್ತದೆ. ಜತೆಗೆ, ಪ್ರತ್ಯೇಕ ಆಕ್ಸಿಜನ್ ಸಂಪರ್ಕದ ಜತೆಗೆ, ನೀರು ಹಾಗೂ ಒಳಚರಂಡಿ ಪ್ರತ್ಯೇಕ ಸಂಪರ್ಕ ಇರುತ್ತದೆ. ಇಡೀ ರಾಜ್ಯದಲ್ಲೇ ಇಂಥ ಆಧುನಿಕ ಐಸಿಯು ಅನ್ನು ಮಾಗಡಿ ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ ಎಂದರು.
ಮೂರನೇ ಅಲೆ ಎದುರಿಸಲು ರಾಜ್ಯ ಸರ್ಕಾರ ಸಜ್ಜು; ತಜ್ಞರ ಸಮಿತಿ
ಇಲ್ಲಿಗೆ ಅಗತ್ಯವಾದ ಎಲ್ಲ ಔಷಧಿ, ಆಮ್ಲಜನಕ, ವೈದ್ಯಕೀಯ ಸರಂಜಾಮುಗಳು, ಸಿಬ್ಬಂದಿ ಕೊರತೆ ಇಲ್ಲದಂತೆ ಎಚ್ಚರಿಕೆ ವಹಿಸಲಾಗಿದೆ. ನಾಲ್ವರಿಗೆ ಈ ಐಸಿಯುವನಲ್ಲಿ ಅತ್ಯುತ್ತಮ ಚಿಕಿತ್ಸೆ ಸಿಗುತ್ತದೆ ಎಂದು ಡಾ.ಅಶ್ವತ್ಥನಾರಾಯಣ ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.
ಎರಡು ತಿಂಗಳಲ್ಲಿ ಆಕ್ಸಿಜನ್ ಘಟಕ: ಮಾಗಡಿ ಆಸ್ಪತ್ರೆಯಲ್ಲಿ ಈಗಾಗಲೇ 100 ಹಾಸಿಗೆಗಳಿದ್ದು, ಈ ಪೈಕಿ 50 ಬೆಡ್‌ಗಳಿಗೆ ಆಕ್ಸಿಜನ್ ಸೌಲಭ್ಯವಿದೆ. ಇನ್ನು ಕೆಲ ದಿನಗಳಲ್ಲಿಯೇ ಉಳಿದ 50 ಹಾಸಿಗೆಗಳನ್ನೂ ಆಕ್ಸಿಜನ್ ಬೆಡ್‌ಗಳನ್ನಾಗಿ ಪರಿವರ್ತನೆ ಮಾಡಲಾಗುವುದು. ಅಲ್ಲದೆ, ನಿಮಿಷಕ್ಕೆ 600 ಕೆಎಲ್ ಪೂರೈಕೆ ಸಾಮರ್ಥ್ಯದ ಆಮ್ಲಜನಕ ಉತ್ಪಾದಕ ಘಟಕವನ್ನೂ ಎರಡು ತಿಂಗಳಲ್ಲಿ ಸ್ಥಾಪನೆ ಮಾಡಲಾಗುವುದು. ಜತೆಗೆ, ಒಟ್ಟು ಬೆಡ್‌ಗಳಲ್ಲಿ ಶೇ. 25 ಐಸಿಯು ಬೆಡ್‌ಗಳ ವ್ಯವಸ್ಥೆ ಮಾಡುವ ಉದ್ದೇಶವೂ ಇದೆ. ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಆಕ್ಸಿಜನ್ ಘಟಕಗಳನ್ನು ಅಳವಡಿಸಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದರು.
ಇದಲ್ಲದೆ, ಪ್ರಾಥಮಿಕ & ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸುಸಜ್ಜಿತ ಲ್ಯಾಬ್ ಹಾಗೂ ತುರ್ತು ಸಂದರ್ಭವನ್ನು ದೃಷ್ಟಿಯಲ್ಲಿಟ್ಟುಕೊಂಡು ಆಮ್ಲಜನಕ ಸಾಂದ್ರಕಗಳನ್ನೂ ಒದಗಿಸಲಾಗುವುದು ಎಂದರು ಡಿಸಿಎಂ.
ತಕ್ಷಣವೇ ಸಿಬ್ಬಂದಿ ನೇಮಕ: ಎಲ್ಲ ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕೂಡಲೇ ಅಗತ್ಯ ಸಿಬ್ಬಂದಿ ನಿಯೋಜನೆ ಮಾಡಲಾಗುವುದು. ಮುಖ್ಯವಾಗಿ ಸೋಲೂರು ಮತ್ತು ತಿಪ್ಪಸಂದ್ರ ಸಮುದಾಯ ಆರೋಗ್ಯ ಕೇಂದ್ರಗಳಿಗೆ ತಕ್ಷಣವೇ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.
ಸಿದ್ಧಾರೂಢ ಮಠದ ಆಶ್ರಮದಲ್ಲಿ ಮುಂಚೂಣಿ ವಾರಿಯರ್ಸ್ ಹಾಗೂ ಆದ್ಯತಾ ಗುಂಪಿಗೆ ಲಸಿಕೆ ನೀಡುತ್ತಿರುವುದನ್ನು ವೀಕ್ಷಿಸಿದರು. ಬಳಿಕ ಹುಲಿಕೋಟೆಯ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಅಲ್ಲಿ ನೇರವಾಗಿ ಸೋಂಕಿತರ ಯೋಗ ಕ್ಷೇಮ ವಿಚಾರಿಸಿದರು. ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆ, ಔಷಧಿ, ಆಹಾರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು.
ಅಂತಿಮವಾಗಿ ವಿಜಿ ದೊಡ್ಡಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಟಿ ಪರಿಶೀಲನೆ ನಡೆಸಿದರಲ್ಲದೆ, ಕೊರತೆ ಇರುವ ಸಿಬ್ಬಂದಿ ನೇಮಕಕ್ಕೆ ಕೂಡಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದರು ಹಾಗೂ ಕೆಲ ದಿನಗಳಲ್ಲಿಯೇ ಇಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಅಳವಡಿಸಲಾಗುವುದು ಎಂದರು.
ಮಾಗಡಿ ಶಾಸಕ ಮಂಜುನಾಥ್, ಜಿಲ್ಲಾಧಿಕಾರಿ ರಾಕೇಶ ಕುಮಾರ, ಸಿಇಒ ಇಕ್ರಂ,ಡಿಎಚ್ ಒ ಡಾ.ನಿರಂಜನ್, ರೆನಾಕ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಸಾಜಿ ಅಬ್ರಹಾಂ, ಹಿರಿಯ ಪ್ರಧಾನ ವ್ಯವಸ್ಥಾಪಕ ಸುಧೀರ್ ಮೆನನ್, ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲುವಾಡಿ ದೇವರಾಜ್, ಬಿಜೆಪಿ ಮುಖಂಡ ಕೃಷ್ಣಮೂರ್ತಿ, ಮಂಡಲಾಧ್ಯಕ್ಷ ಧನಂಜಯ, ತಾಲೂಕು ವೈದ್ಯಾಧಿಕಾರಿ ಮತ್ತಿತರರು ಡಿಸಿಎಂ ಜತೆಯಲ್ಲಿದ್ದರು.