ಕೊರೋನಾ (Corona) ಹಾವಳಿ ಕಡಿಮೆಯಾಯ್ತು ಎಂದು ಅಂದುಕೊಳ್ಳುತ್ತಿರುವಾಗಲೇ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಕರ್ನಾಟಕ ಸೇರಿದಂತೆ ದೇಶದ 14 ರಾಜ್ಯಗಳಲ್ಲಿ ಕೊರೋನಾ ಹೆಚ್ಚಳಗೊಂಡಿದೆ. ಈ ಮಧ್ಯೆ ರಾಜ್ಯದಲ್ಲಿ ಆರೋಗ್ಯ ಇಲಾಖೆ (Health Department) ಹೊಸ ಮಾರ್ಗಸೂಚಿ (Guidelines) ಪ್ರಕಟಿಸಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. 

ದೆಹಲಿ, ಮಹಾರಾಷ್ಟ್ರ, ಕೇರಳ, ಕರ್ನಾಟಕ ಮತ್ತು ತೆಲಂಗಾಣ ಸೇರಿದಂತೆ ದೇಶದ 14 ರಾಜ್ಯಗಳಲ್ಲಿ ಕೋವಿಡ್ -19 ಪಾಸಿಟಿವ್ (Covid positive) ಪ್ರಕರಣಗಳು ಹೆಚ್ಚು ವರದಿಯಾಗುತ್ತಿದೆ. ಪಾಸಿಟಿವ್ ಪ್ರಮಾಣ ಸಹ ಹೆಚ್ಚಾಗಿದೆ. ಈ ರಾಜ್ಯಗಳಲ್ಲಿ ಕಡಿಮೆ ಕೋವಿಡ್ ಪರೀಕ್ಷೆ ಮತ್ತು ಸರಾಸರಿಗಿಂತ ಕಡಿಮೆ ಲಸಿಕೆ ಹಾಕಲಾಗುತ್ತಿದೆ ಎಂದಿರುವ ಕೇಂದ್ರ ಆರೋಗ್ಯ ಸಚಿವಾಲಯ, ಕೋವಿಡ್ ಜಾಗರೂಕತೆಯನ್ನು ಹೆಚ್ಚಿಸುವಂತೆ ಸೂಚಿಸಲಾಗಿದೆ. ಪರಿಶೀಲನಾ ಸಭೆಯಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ, ರಾಜೇಶ್ ಭೂಷಣ್ ಅವರು, ದಾಖಲಾದ ಕೋವಿಡ್ -19 ರೋಗಿಗಳ ಆರೋಗ್ಯ (Health) ಹಿನ್ನಲೆಯನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡುವಂತೆ ಮತ್ತು ಆ ಬಗ್ಗೆ ಕೇಂದ್ರ ಸಚಿವಾಲಯಕ್ಕೆ ವರದಿ ಮಾಡುವಂತೆ ಸಲಹೆ ನೀಡಿದರು. ಇದು ರೋಗಿಗಳ ಯಾವುದೇ ಸಾಮಾನ್ಯ ಅಥವಾ ವಿಭಿನ್ನ ಕ್ಲಿನಿಕಲ್ ಪ್ರಸ್ತುತಿಯನ್ನು ಆರಂಭಿಕ ಹಂತದಲ್ಲಿ ಗುರುತಿಸಲು ಸಹಾಯ ಮಾಡುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಪ್ರಸ್ತುತ ಕೊರೋನಾ ಹೆಚ್ಚು ವರದಿಯಾಗುತ್ತಿರುವ ರಾಜ್ಯಗಳಲ್ಲಿ ಕೋವಿಡ್ ಲಸಿಕೆಯೆ (Vaccine) ಎರಡನೇ ಮತ್ತು ಮುನ್ನೆಚ್ಚರಿಕೆ ಡೋಸ್ ಪಡೆಯುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಗಮನಿಸಿ, ವಿಶೇಷವಾಗಿ ವಯಸ್ಸಾದ ಜನಸಂಖ್ಯೆಗೆ ಮತ್ತು 12 ರಿಂದ 17 ವಯೋಮಾನದವರಿಗೆ ಎರಡನೇ ಡೋಸ್ ಅನ್ನು ತ್ವರಿತವಾಗಿ ನೀಡಬೇಕು ಎಂದು ಕೇಂದ್ರ ಸಲಹೆ ನೀಡಿದೆ.

ಕೋವಿಡ್ ಎದುರಿಸಿದವರಲ್ಲಿ ಪುರುಷರಿಗಿಂತ ಮಹಿಳಾ ಲೀಡರ್ಸೇ ಸ್ಟ್ರಾಂಗ್!

ರಾಜ್ಯದಲ್ಲಿ ಆರೋಗ್ಯ ಇಲಾಖೆಯಿಂದ ಹೊಸ ಮಾರ್ಗಸೂಚಿ ಪ್ರಕಟ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನ ಕಳೆಯುತ್ತಿದ್ದಂತೆ ಮಹಾಮಾರಿ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಲಕ್ಷಣಗಳಿರುವವರನ್ನು ಶಾಲೆ, ಕಾಲೇಜು ಮತ್ತು ಕಚೇರಿಗೆ ಹಾಜರಾಗದಂತೆ ಸೂಚಿಸಬೇಕು ಎಂಬುದು ಸೇರಿದಂತೆ ಹಲವು ಅಂಶಗಳನ್ನೊಳಗೊಂಡ ಮಾರ್ಗಸೂಚಿಯನ್ನು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿನ್ನೆ ಹೊರಡಿಸಿದೆ. 

ನಗರ ವ್ಯಾಪ್ತಿಗೆ ಅನ್ವಯಿಸಿ ಶಿಕ್ಷಣ ಸಂಸ್ಥೆ, ಕಾಲೇಜು ಹಾಗೂ ಅಪಾರ್ಟ್'ಮೆಂಟ್ ಗಲಲ್ಲಿ ಕೋವಿಡ್ ಪರೀಕ್ಷೆ, ಚಿಕಿತ್ಸೆ, ಕ್ವಾರಂಟೈನ್, ಪ್ರವೇಶ ಕುರಿತ ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಸೋಂಕು ಕಂಡು ಬಂದರೆ ಶಾಲೆಗಳನ್ನು ಮುಚ್ಚುವ ಅಥವಾ ಅಪಾರ್ಟ್'ಮೆಂಟ್ ಗಳನ್ನು ಸೀಲ್ ಡೌನ್ ಮಾಡುವ ಅಗತ್ಯವಿಲ್ಲ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. 

ಶಾಲೆಗಳಲ್ಲಿ ಸೋಂಕು ಲಕ್ಷಣ ಹೊಂದಿರುವ ಮಕ್ಕಳನ್ನು ಶಾಲೆಗೆ ಹಾಜರಾಗದಂತೆ ಸೂಚಿಸಬೇಕು. ಲಕ್ಷಣ ಹೊಂದಿರುವವರನ್ನು ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗೆ ಒಳಪಡಿಸಿ ಸೋಂಕು ದೃಢಪಟ್ಟಲ್ಲಿ ಅವರ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಹೋಂ ಐಸೋಲೇಷನ್, ಕೋವಿಡ್ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗೆ ದಾಖಲಿಸಬೇಕು. ವರದಿ ನೆಗೆಟಿವ್ ಬಂದರಲ್ಲಿ ಆರ್'ಟಿಪಿಸಿಆರ್ ಮಾದರಿ ಪರೀಕ್ಷೆ ವರದಿ ಬರುವವರೆಗೂ ನಿಗಾದಲ್ಲಿ ಇರಿಸಿ ನಂತರ ಕ್ರಮ ಕೈಗೊಳ್ಳಬೇಕು. ಆರ್'ಟಿಪಿಸಿಆರ್ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟು ಸಿಟಿ ವ್ಯಾಲ್ಯೂ 25 ಇದ್ದಲ್ಲಿ ಮಾದರಿಯನ್ನು ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಬೇಕೆಂದು ತಿಳಿಸಲಾಗಿದೆ. 

ದೀರ್ಘಾವದಿಯ ಕೋವಿಡ್ ಅಪಾಯ ಪುರುಷರಿಗಿಂತ ಮಹಿಳೆಯರಿಗೆ ಶೇ.22ರಷ್ಟು ಹೆಚ್ಚು !

ಕಾಲೇಜು ಮತ್ತು ಕಚೇರಿಗಳಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕಿತರಲ್ಲಿ ಸೋಂಕು ಲಕ್ಷಣಗಳು ಕಂಡು ಬಂದರಲ್ಲಿ ರ್ಯಾಪಿಡ್ ಆ್ಯಂಡಿಜೆನ್ ಪರೀಕ್ಷೆಗೆ ಒಳಪಡಿಸಿ ಸೋಂಕು ದೃಢಪಟ್ಟರೆ ಕೋವಿಡ್ ನಿಯಮ ಪಾಲಿಸಬೇಕು. ಶಾಲಾ-ಕಾಲೇಜುಗಳಲ್ಲಿ ಪ್ರಕರಣ ವರದಿಯಾದ ಕೊಠಡಿಗಳನ್ನು ಸೋಡಿಯಂ ಹೈಪೋಕ್ಲೋರೈಟ್ ದ್ರಾವಣದಿಂದ ಸ್ವಚ್ಛಗೊಳಿಸಬೇಕು. ಮರುದಿನ ಕೊಠಡಿ ಬಳಕೆ ಮಾಡಬೇಕು. ಅಪಾರ್ಟ್'ಮೆಂಟ್ ಗಳಲ್ಲಿ 3-5 ಪ್ರಕರಣಗಳು ವರದಿಯಾದಲ್ಲಿ ಸಣ್ಣ ಕ್ಲಸ್ಟರ್ ಎಂದು ಪರಿಗಣಿಸಿ ಹಾಗೂ 5ಕ್ಕಿಂತ ಹೆಚ್ಚು ಕೇಸ್ ವರದಿಯಾದಲ್ಲಿ ದೊಡ್ಡ ಕ್ಲಸ್ಟರ್ ಎಂದು ಪರಿಗಣಿಸಿ ನಿರ್ದಿಷ್ಟ ಬ್ಲಾಕ್'ನ ಫ್ಲೋರ್ ನಲ್ಲಿ ಸೋಂಕು ಲಕ್ಷಣ ಹೊಂದಿರುವ ಎಲ್ಲರನ್ನೂ ಪರೀಕ್ಷೆಗೊಳಪಡಿಸಬೇಕು ಎಂದು ಸೂಚಿಸಲಾಗಿದೆ. . 

15ಕ್ಕಿಂತ ಹೆಚ್ಚು ಕೇಸ್ ವರದಿಯಾದಲ್ಲಿ ಸ್ಥಳೀಯ ಆರೋಗ್ಯ ಪ್ರಾಧಿಕಾರದ ನಿರ್ಧಾರದಂತೆ ಇಡೀ ಅಪಾರ್ಟ್'ಮೆಂಟ್ ಕಾಂಪ್ಲೆಕ್ಸ್ ನಲ್ಲಿ ಸೋಂಕು ಲಕ್ಷಣ ಹೊಂದಿರುವ ಎಲ್ಲರನ್ನೂ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗೆ ಒಳಪಡಿಸಬೇಕು. ಸೋಂಕು ದೃಢಪಟ್ಟರೆ ಕೋವಿಡ್ ನಿಯಮದ ಅನ್ವಯ ಚಿಕಿತ್ಸೆ ಒದಗಿಸಬೇಕು ಎನ್ನಲಾಗಿದೆ.