ಪೇರೆಂಟಿಂಗ್ ಎಂಬುದು ಬಹಳ ಟಫ್ ಜಾಬ್. ಇದು ನಿವೃತ್ತಿಯಿಲ್ಲದ ಕೆಲಸ ಕೂಡಾ. ಪೋಷಕರಿಗೆ ರಜೆ ಎಂಬುದೂ ಇಲ್ಲ. ಅವರು ಸದಾ ಮಕ್ಕಳಿಗೆ ಒಂದಿಲ್ಲೊಂದು ಕಲಿಸುತ್ತಲೇ ಇರಬೇಕು. ಮಗು ಹುಟ್ಟಿದಾಗ ಹೇಗೆ ಮಾತನಾಡುವುದು, ಹೇಗೆ ನಡೆಯುವುದು, ಸ್ಟ್ರಾಂಗ್ ಆಗುವುದು ಹೇಗೆ ಎಂಬೆಲ್ಲವನ್ನೂ ಪೋಷಕರು ಕಲಿಸುತ್ತಾರೆ. ಮಕ್ಕಳು ಸ್ವಲ್ಪ ದೊಡ್ಡವರಾಗುತ್ತಿದ್ದಂತೆಯೇ ಹೇಗೆ ಓದಿ ಬರೆಯುವುದೆಂದು ಹೇಳಿಕೊಡುತ್ತಾರೆ. ಅಂತೆಯೇ ಮಕ್ಕಳು ತಮ್ಮ ಸುತ್ತಲಿನ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಲು ಆರಂಭಿಸಿದಾಗ ಅವರಿಗೆ ಕ್ಲೀನ್ಲಿನೆಸ್ ಹಾಗೂ ನೀಟ್‌ನೆಸ್ ಬಗ್ಗೆ ಹೇಳಿಕೊಡುವುದು ಕೂಡಾ ಅಗತ್ಯ. 

ಇಲ್ಲದಿದ್ದಲ್ಲಿ ನೀವೇ ನೋಡಿರಬಹುದು, ಮಕ್ಕಳ ಕೋಣೆ ಎಷ್ಟೊಂದು ಮೆಸ್ಸಿಯಾಗಿರುತ್ತದೆ ಎಂದು. ಬಟ್ಟೆಯ ಸ್ವಚ್ಛತೆಯಾಗಲೀ, ಕೋಣೆಯ ಜೋಡಣೆಯಾಗಲೀ, ಬಟ್ಟೆ ಜೋಡಿಸಿಟ್ಟುಕೊಳ್ಳುವುದು, ಧೂಳಿ ಹೊಡೆದುಕೊಳ್ಳುವುದು, ಸಮಯಕ್ಕೆ ಸರಿಯಾಗಿ ಸ್ನಾನ ಮಾಡುವುದು ಸೇರಿದಂತೆ ಯಾವುದೂ ಅವರಿಗೆ ಒಗ್ಗದು. ಅದಕ್ಕೇ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿಯೇ ಇವನ್ನು ಹೇಳಿಕೊಡಿ.

ವಿಡಿಯೋ ಗೇಮ್ ಆಡಿದರೂ ಸರಿ, ಮನೆಯ ಹೊರಗೆ ಬರಬೇಡಿ!

ಬಾಯಿಯ ಸ್ವಚ್ಛತೆ
ಹಲ್ಲುಜ್ಜುವುದು ಕೇವಲ ಬಾಯಿಯ ಸ್ವಚ್ಛತೆಗಾಗಿಯಷ್ಟೇ ಅಲ್ಲ, ಇದು ಆರೋಗ್ಯದ ದೃಷ್ಟಿಯಿಂದಲೂ ಸಹಾಯಕ. ಹಲ್ಲುಜ್ಜುವುದು ವಾಸನೆಯ ಉಸಿರನ್ನು ಹೋಗಲಾಡಿಸುವ ಜೊತೆಗೆ ಹಲ್ಲು ಹುಳ ಹಿಡಿಯದಂತೆ ನೋಡಿಕೊಂಡು ವಸಡುಗಳ ಆರೋಗ್ಯವನ್ನೂ ಕಾಪಾಡುತ್ತದೆ. ಆದರೆ, ಮಕ್ಕಳು ಹಲ್ಲುಜ್ಜುವುದನ್ನು ತಪ್ಪಿಸಿಕೊಂಡು ಓಡುವುದು ಸಾಮಾನ್ಯ. ಆದ್ದರಿಂದ ಅವರಿಗೆ ಏಳೆಂಟು ಹಲ್ಲು ಬಂದ ಸಮಯದಿಂದಲೇ ದಿನಕ್ಕೆರಡು ಬಾರಿ ಬ್ರಶ್ ಮಾಡಿಸಿ ಅಭ್ಯಾಸ ಮಾಡಿಸಿ. ಆಗಿನಿಂದಲೇ ಹಲ್ಲನ್ನು ಏಕೆ ಉಜ್ಜಬೇಕೆಂದು ವಿವರಿಸುತ್ತಾ ಬನ್ನಿ. ಈ ಕೆಲಸವನ್ನು ಫನ್ ಆಗಿಸಲು ಆಕರ್ಷಕ ಬ್ರಶ್ ಕೊಡಿಸುವುದು, ಯಾವುದಾದರೂ ಸ್ಟೆಪ್ ಇಲ್ಲವೇ ಹಾಡಿನ ಜೊತೆ ಲಿಂಕ್ ಮಾಡುವುದು ಮುಂತಾದುದನ್ನು ಮಾಡಬಹುದು. 

ಕೈ ಕಾಲು ತೊಳೆಯುವುದು
ಮಕ್ಕಳಿಗೆ ಆಟವೇ ಪ್ರಪಂಚ. ಅದರಲ್ಲೂ ಹೊರಗೆ ಮೈದಾನದಲ್ಲಿ ಆಡುತ್ತಿದ್ದರೆ ಸಮಯ ಎಷ್ಟಿದ್ದರೂ ಅವರಿಗೆ ಸಮಾಧಾನವಾಗದು. ಆದರೆ, ಈ ಆಟದ ಲೋಕದಲ್ಲಿ ಮುಳುಗುವ ಮಕ್ಕಳು ಆಟ ಮುಗಿಸಿ ಮನೆಗೆ ಬಂದ ಕೂಡಲೇ ಹಸಿವು ಎಂದು ಯಾವುದೋ ತಿನ್ನುವ ಪದಾರ್ಥಕ್ಕೆ ಕೈ ಹಾಕುವುದು ಸಾಮಾನ್ಯ. ಈ ಗಡಿಬಿಡಿಯಲ್ಲಿ ಅವರಿಗೆ ಕೈ ತೊಳೆಯುವುದು ನೆನಪೂ ಇರುವುದಿಲ್ಲ, ಅಗತ್ಯವೂ ತೋರುವುದಿಲ್ಲ. ಆದರೆ, ಎಲ್ಲಿಯೇ ಹೊರ ಹೋಗಿ ಬಂದರೂ ಕೈಕಾಲು ಮುಖ ತೊಳೆಯುವ ಅಭ್ಯಾಸವನ್ನು ಅವರಿಗೆ ಆರಂಭದಿಂದಲೇ ಮಾಡಿಸಿ. ಏಕೆಂದರೆ ಹೊರಗೆ ಮಣ್ಣಿನಲ್ಲಿ ಆಡಿ ಬೆವರಿ ಬರುವ ಮಕ್ಕಳ ಕೈಗಳಲ್ಲಿ ಸಾಕಷ್ಟು ಕೀಟಾಣುಗಳಿರುತ್ತವೆ. ಸ್ವಚ್ಛ ಕೈಕಾಲಿನ ಪ್ರಾಮುಖ್ಯತೆಯನ್ನು ಅವರಿಗೆ ತಿಳಿಹೇಳಿ. ಸಣ್ಣವರಿದ್ದಾಗ ಒತ್ತಾಯಪೂರ್ವಕವಾಗಿ ಕಲಿಸಿದರೆ ದೊಡ್ಡವರಾದಂತೆ ಅದೇ ಅಭ್ಯಾಸವಾಗುತ್ತದೆ. 

ಮನ, ಮನೆ ಸ್ವಚ್ಛತೆಯೇ ಸುಖದ ಸೋಪಾನ

ದೇಹದ ದುರ್ಗಂಧ ತಡೆವುದು
ಟೀನೇಜ್ ಆರಂಭದಿಂದಲೇ ಮಗುವಿನಲ್ಲಿ ಹಲವಾರು ಹಾರ್ಮೋನ್ ಬದಲಾವಣೆಗಳಾಗುತ್ತವೆ. ಈ ಸಂದರ್ಭದಲ್ಲಿ ಅವರು ತಮ್ಮ ದೇಹ ದುರ್ಗಂಧವನ್ನು ಕೂಡಾ ನಿಭಾಯಿಸಬೇಕು. ಇದಕ್ಕೆ ಎಲ್ಲಕ್ಕಿಂತ ಮೊದಲು ಮಾಡಬೇಕಾಗಿರುವುದು ಪ್ರತಿ ದಿನ ಸ್ನಾನ. ಶಾಲೆಗೆ ಹೋಗುವ ಮೊದಲು ಹಾಗೂ ಆಟವಾಡಿ ಬಂದ ನಂತರ ಸ್ನಾನ ಮಾಡುವ ಅಭ್ಯಾಸವನ್ನು ಮಾಡಿಸಿ. ಜೊತೆಗೆ ಡಿಯೋಡರೈಸರ್ ಬಳಸಲು ಕಲಿಸಿ. 

ಕೋಣೆಯ ಸ್ವಚ್ಛತೆ
ಮಗುವಿಗೆ ಕೋಣೆ ಸ್ವಚ್ಛವಾಗಿಡುವಂತೆ ಹೇಳುವುದು, ಅವರನ್ನು ಅದಕ್ಕಾಗಿ ಒಪ್ಪಿಸುವುದು ಕಷ್ಟದ ಕೆಲಸ. ಅವರ ವರ್ತನೆ ವಯಸ್ಸಿಗೆ ತಕ್ಕಂತೆ ಇದು, ಕ್ಷಮಿಸಲರ್ಹ ಎಂದು ಈಗ ಅನಿಸಿದರೂ, ದೊಡ್ಡವರಾದ ಬಳಿಕವೂ ಇದೇ ಮುಂದುವರಿಯುವ ಅಪಾಯವಿದೆ. ಅವರ ಕೋಣೆ ಗುಡಿಸಿ ಒರೆಸುವ ಕೆಲಸವನ್ನು ಸಣ್ಣವರಿರುವಾಗಿನಿಂದಲೇ ಅವರ ಜವಾಬ್ದಾರಿಯಾಗಿ ಬಿಡಿ. ಕೋಣೆ ಜೋಡಿಸಲು ನೆರವಾಗಿ. ವಸ್ತುಗಳನ್ನು ಜೋಡಿಸುವುದು ಹೇಗೆ, ಬಟ್ಟೆ ಮಡಿಚುವುದು ಹೇಗೆ ಎಂಬುದನ್ನು ಕಲಿಸಿ. ಸ್ವಚ್ಛ ಪರಿಸರದಲ್ಲಿ ಬದುಕುವ ಪ್ರಾಮುಖ್ಯತೆ ತಿಳಿಸಿಕೊಡಿ. 

ಮಕ್ಕಳಿಗೆ ಅಡಿಗೆ ಕಲಿಸೋದ್ರಿಂದ ಎಷ್ಟೆಲ್ಲ ಲಾಭಗಳಿವೆ ಗೊತ್ತಾ....

ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಸಿ
ಸಂಶೋಧನೆಗಳ ಪ್ರಕಾರ, ಸಣ್ಣ ಪುಟ್ಟ ಮನೆಗೆಲಸಗಳನ್ನು ಮಾಡುತ್ತಾ ಬೆಳೆಯುವ ಮಕ್ಕಳು ಹೆಚ್ಚು ಜವಾಬ್ದಾರಿಯುತರಾಗಿ ಬೆಳೆಯುತ್ತಾರಂತೆ. ಹಾಗಂಥ ಸಣ್ಣ ಮಕ್ಕಳ ಬಳಿ ಪಾತ್ರೆ ತೊಳೆಸಿ, ಬಟ್ಟೆ ಒಗೆಸುವಂಥ ಕೆಲಸ ಮಾಡಿಸಬೇಕಿಲ್ಲ. ತಿಂದ ತಟ್ಟೆಯನ್ನು ಸಿಂಕ್‌ನಲ್ಲೇ ಇಡುವುದು, ಯಾವ ವಸ್ತುವನ್ನು ಎಲ್ಲಿಂದ ತೆಗೆದಿರುತ್ತಾರೋ ಅಲ್ಲಿಯೇ ಇಡುವುದು, ತೊಳೆದ ಪಾತ್ರೆಗಳನ್ನು ಜೋಡಿಸಿಡುವುದು ಇತ್ಯಾದಿಗಳಿಂದ ಶುರು ಮಾಡಿ.