ವಿಜಯಪುರ ಜಿಲ್ಲಾಸ್ಪತ್ರೆಗೆ ಕೇಂದ್ರದ ಪ್ರತಿಷ್ಟಿತ ಪ್ರಶಸ್ತಿ!
- ವಿಜಯಪುರ ಜಿಲ್ಲಾಸ್ಪತ್ರೆಗೆ ಕೇಂದ್ರದ ಪ್ರತಿಷ್ಟಿತ ಪ್ರಶಸ್ತಿ.
- ಸತತ ಎರಡು ಬಾರಿ ಕಾಯಕಲ್ಪ ಪ್ರಶಸ್ತಿ ಪಡೆದ ಜಿಲ್ಲಾಸ್ಪತ್ರೆಗೆ ಮತ್ತೊಂದು ಗರಿ.
- ಚಿಕಿತ್ಸೆಗೆ ಹೊರ ರಾಜ್ಯಗಳಿಂದಲು ಬರ್ತಿದ್ದಾರೆ ರೋಗಿಗಳು.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಸೆ.21) : ವಿಜಯಪುರ ಜಿಲ್ಲಾಸ್ಪತ್ರೆ ಮತ್ತೊಂದು ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ತನ್ನ ಹಿರಿಮೆಯನ್ನ ಹೆಚ್ಚಿಸಿಕೊಂಡಿದೆ. ಇಲ್ಲಿಯ ಉತ್ತಮ ಚಿಕಿತ್ಸೆ ಲಭ್ಯವಾಗ್ತಿರೋ ಕಾರಣ ಅನ್ಯರಾಜ್ಯ ಸಹಿತ ರೋಗಿಗಳು ಇಲ್ಲಿಗೆ ಆಗಮಿಸಿ ಚಿಕಿತ್ಸೆ ಪಡೆಯುತ್ತಿರೋದು ವಿಶೇಷ. ಈ ಆಸ್ಪತ್ರೆಗೆ ಸತತವಾಗಿ ಎರಡು ವರ್ಷ "ಕಾಯಕಲ್ಪ ಪ್ರಶಸ್ತಿ"ಗೆ ಪಾತ್ರವಾಗಿದ್ದು, ಈಗ ಕೇಂದ್ರ ಸರಕಾರದಿಂದ ಮತ್ತೊಂದು ಗೌರವ ಪಾತ್ರವಾಗಿದೆ.
ಶಿರಸಿಯಲ್ಲಿ ಸಂಡೇ ವೈದ್ಯರೇ ಸಿಗಲ್ಲ; ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(Central Department of Health and Family Welfare) ರಾಷ್ಟ್ರೀಯ ಗುಣಮಟ್ಟ ಮತ್ತು ಸೇವೆ (NQAS) ಪ್ರಶಸ್ತಿ ಪ್ರಕಟಿಸಿದೆ. ಈ ವಿಭಾಗದಲ್ಲಿ ಗೌರವಕ್ಕೆ ಪಾತ್ರವಾದ ಏಕೈಕ ಆಸ್ಪತ್ರೆ ವಿಜಯಪುರ(Vijayapura) ಜಿಲ್ಲಾಸ್ಪತ್ರೆಯಾಗಿದೆ. ಕಳೆದ ಜೂ. 22 ಮತ್ತು 23 ರಂದು ವಿಜಯಪುರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ತಂಡ ಪ್ರಶಸ್ತಿಗೆ ವಿಜಯಪುರ ಜಿಲ್ಲಾಸ್ಪತ್ರೆಯನ್ನ ಆಯ್ಕೆ ಮಾಡಿದೆ. ಇದಕ್ಕು ಮೊದಲು ಕೂಲಂಕಷವಾಗಿ ಪರಿಶೀಲನೆಯನ್ನು ನಡೆಸಿದೆ.
ಪ್ರಶಸ್ತಿಗು ಮುನ್ನ ಕೂಲಂಕಷ ಪರಿಶೀಲನೆ:
ಕೇಂದ್ರದಿಂದ ಆಗಮಿಸಿದ ತಂಡ ಜಿಲ್ಲಾಸ್ಪತ್ರೆಯಲ್ಲಿ ಎಲ್ಲ ವಿಭಾಗಗಳಿಗೆ ಭೇಟಿ ನೀಡಿದೆ. ಪ್ರತಿ ವಿಭಾಗದಲ್ಲು ಇರುವ ವ್ಯವಸ್ಥೆಗಳನ್ನ ಪರಿಶೀಲನೆ ನಡೆಸಿದೆ. ಜಿಲ್ಲಾಸ್ಪತ್ರೆಯಲ್ಲಿರುವ ಸ್ವಚ್ಛತೆ, ರೋಗಿಗಳ ನೋಂದಣಿ ವ್ಯವಸ್ಥೆ, ರೋಗಿಗಳ ರೋಗಗಳ ಮಾಹಿತಿ ಪಡೆದುಕೊಂಡಿದೆ. ದತ್ತಾಂಶ ಮತ್ತು ಮಾಹಿತಿ ನಿರ್ವಹಣೆ ಬಗ್ಗೆಯೂ ಎಲ್ಲ ರೀತಿಯ ಮಾಹಿತಿಗಳನ್ನ ಸಂಗ್ರಹಿಸಿಕೊಂಡಿದೆ. ವೈದ್ಯರು ಮತ್ತು ದಾದಿಯರು ಹಾಗೂ ಇತರ ಸಿಬ್ಬಂದಿಯ ಸೇವೆ, ಪ್ರಯೋಗಾಲಯಗಳು, ಶೌಚಾಲಯ ವ್ಯವಸ್ಥೆ, ಚಿಕಿತ್ಸೆ ಕೊಠಡಿ, ವಾರ್ಡ್‌ಗಳ ಮಾಹಿತಿಯನ್ನು ಪಡೆದುಕೊಂಡಿದೆ.
ರೋಗಿ ಹಾಗೂ ಅಟೆಂಡರ್‌ಗಳಿಂದಲು ಮಾಹಿತಿ ಸಂಗ್ರಹಣೆ:
ಕೇಂದ್ರ ಸರ್ಕಾರದಿಂದ ಒಂದು ಪ್ರಶಸ್ತಿ ನೀಡಲಿದೆ ಎಂದಾಗ ಸುಮ್ಮನೆ ನೀಡಿ ಬಿಡೊದಿಲ್ಲ. ಪ್ರಶಸ್ತಿ ನೀಡುವ ಮುನ್ನ ತನಿಖೆ ಮಾದರಿಯಲ್ಲಿ ಪರಿಶೀಲನೆ ನಡೆಸುತ್ತೆ. ಈ ಪ್ರಶಸ್ತಿ ವಿಚಾರದಲ್ಲೂ ಅಷ್ಟೆ; ಕೂಲಂಕಷ ಪರಿಶೀಲನೆ ಜೊತೆಗೆ ರೋಗಿಗಳಿಂದಲೂ ಮಾಹಿತಿ ಪಡೆದುಕೊಂಡಿದೆ. ಚಿಕಿತ್ಸೆ ಪಡೆದ ರೋಗಿಗಳಿಂದ ಅಭಿಪ್ರಾಯವನ್ನು ಕೇಂದ್ರ ಅಧಿಕಾರಿಗಳ ತಂಡ ಸಂಗ್ರಹಿಸಿದೆ. ಜಿಲ್ಲಾಸ್ಪತ್ರೆಯಲ್ಲಿನ ಚಿಕಿತ್ಸೆ, ವ್ಯವಸ್ಥೆ, ವೈದ್ಯಕೀಯ ವ್ಯವಸ್ಥೆಗಳ ಲಭ್ಯತೆ, ವೈದ್ಯರು-ಸಿಬ್ಬಂದಿ ಸ್ಪಂದನೆ ಬಗ್ಗೆಯೂ ಪಕ್ಕಾ ಮಾಹಿತಿಯನ್ನ ಸಂಗ್ರಹಿಸಿದ ಬಳಿಕ ಪ್ರಶಸ್ತಿ ನೀಡಿದೆ.
ರಾಜ್ಯದ ಇತರೆ ಸರ್ಕಾರಿ ಆಸ್ಪತ್ರೆಗಳ ಮಾಹಿತಿ ಸಂಗ್ರಹ:
ಈ ತಂಡ ಬೆಂಗಳೂರು(Bengaluru) ಸೇರಿದಂತೆ ರಾಜ್ಯದ ಇತರ ಜಿಲ್ಲಾಸ್ಪತ್ರೆಗಳ ಮಾಹಿತಿ ಸಂಗ್ರಹಿಸಿದೆ. ಈ ಪ್ರಶಸ್ತಿಗೆ ಅಗತ್ಯವಾಗಿರುವ ಮಾನದಂಡಗಳನ್ನು ಪರಿಗಣಿಸಿ ವಿಜಯಪುರ ಜಿಲ್ಲಾಸ್ಪತ್ರೆಗೆ ರಾಷ್ಟ್ರೀಯ ಗುಣಮಟ್ಟ ಮತ್ತು ಸೇವೆ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ರಾಜ್ಯದ ಮೂರು ಆಸ್ಪತ್ರೆಗಳಿಗೆ ಸಿಕ್ಕಿದೆ ಪ್ರಶಸ್ತಿ;
ರಾಜ್ಯದಲ್ಲಿ ಜಿಲ್ಲಾಸ್ಪತ್ರೆಗಳ ವಿಭಾಗದಲ್ಲಿ ವಿಜಯಪುರ ಆಸ್ಪತ್ರೆ ಸೇರಿದಂತೆ ಮೂರು ಆಸ್ಪತ್ರೆಗಳಿಗೆ ಪ್ರಶಸ್ತಿ ಲಭಿಸಿದೆ. ಅದರಲ್ಲಿ ಹೆಚ್ಚಿಗೆ ಅಂಕ ಪಡೆದ ಅಂದರೆ ಕೇಂದ್ರ ನಿಗದಿಪಡಿಸಿದ ಒಟ್ಟು 100 ರಲ್ಲಿ ಶೇ. 97 ರಷ್ಟು ಅಂಕಗಳನ್ನು ಪಡೆಯುವ ಮೂಲಕ ವಿಜಯಪುರ ಜಿಲ್ಲಾಸ್ಪತ್ರೆ ಪ್ರಥಮ ಸ್ಥಾನದಲ್ಲಿದ್ದು ಸೇವೆ ಮತ್ತೊಮ್ಮೆ ಕರ್ನಾಟಕವಷ್ಟೇ ಅಲ್ಲ, ದೇಶಾದ್ಯಂತ ಗಮನ ಸೆಳೆದಿದೆ.
Chikkamagaluru; ವೃದ್ಧೆಯನ್ನ ಜೋಳಿಗೆಯಲ್ಲಿ ಆಸ್ಪತ್ರೆಗೆ ಹೊತ್ತೊಯ್ದ ಸಂಬಂಧಿಕರು!
ಈಗ ಡಾ. ಲಕ್ಕನ್ನವರ್ ಜಿಲ್ಲಾಸ್ಪತ್ರೆಯ ಸರ್ಜನ್:
ವಿಜಯಪುರ ಜಿಲ್ಲಾಸ್ಪತ್ರೆ ಹಲವು ವಿಭಾಗದಲ್ಲಿ ಉತ್ತಮ ಸೇವೆ ನೀಡುತ್ತಿರುವ ಕಾರಣ ಹಲವು ಪ್ರಶಸ್ತಿಗೆ ಭಾಜನವಾಗುತ್ತಿದೆ. ಸತತ ಎರಡು ವರ್ಷ ಕಾಯಕಲ್ಪ ಪ್ರಶಸ್ತಿ ಪಡೆದುಕೊಂಡಿದೆ. ಇದೆಲ್ಲದಕ್ಕೂ ಇಲ್ಲಿ ಹಲವು ಅಧಿಕಾರಿಗಳು ಕಾರಣಿಕರ್ತರಾಗಿದ್ದಾರೆ. ಹಿಂದೆ ಡಿಎಸ್‌ಓ ಆಗಿದ್ದ ಡಾ. ದೇಸಾಯಿ, ಡಾ ಶರಣಪ್ಪ ಕಟ್ಟಿ, ಡಾ ಕಾಫ್ಸೆ, ಈಗಿರುವ ಸರ್ಜನ್ ಡಾ. ಲಕ್ಕನ್ನವರ್ ಸೇರಿದಂತೆ ಹಲವರು ಜಿಲ್ಲಾಸ್ಪತ್ರೆ ಸತತ ಪ್ರಶಸ್ತಿಗಳು ಬರೋದಕ್ಕೆ ಕಾರಣಿಕರ್ತರಾಗಿದ್ದಾರೆ. ಈಗ ಮತ್ತೊಮ್ಮೆ ಪ್ರಶಸ್ತಿ ಬಂದಿದ್ದು ವಿಜಯಪುರ ಜಿಲ್ಲೆಗೆ ಹೆಮ್ಮೆಯ ವಿಚಾರವಾಗಿದೆ.